ಕ್ರೈಸ್ಟ್‌ಚರ್ಚ್‌(ಫೆ.29): ಪೃಥ್ವಿ ಶಾ(54), ಚೇತೇಶ್ವರ್ ಪೂಜಾರ(54) ಹಾಗೂ ಹನುಮ ವಿಹಾರಿ(55) ಆಕರ್ಷಕ ಅರ್ಧಶತಕಗಳ ಹೊರತಾಗಿಯೂ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ  243 ರನ್ ಗಳಿಸಿ ಆಲೌಟ್ ಆಗಿದೆ. ಎರಡನೇ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳ ದಯಾನೀಯ ವೈಫಲ್ಯ ಮುಂದುವರೆದಿದೆ. ಕಿವೀಸ್ ಯುವ ವೇಗಿ ಕೈಲ್ ಜಾಮಿಸನ್ 5 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ ಆರಂಭದಲ್ಲೇ ಮಯಾಂಕ್ ಅಗರ್‌ವಾಲ್ ವಿಕೆಟ್ ಕಳೆದುಕೊಂಡಿತು. ಪೃಥ್ವಿ ಶಾ ಚುರುಕಿನ ಬ್ಯಾಟಿಂಗ್ ನಡೆಸುವ ಮೂಲಕ ಅರ್ಧಶತಕ ಬಾರಿಸಿದರು. ಪೃಥ್ವಿ 64 ಎಸೆತಗಳಲ್ಲಿ 8 ಬೌಂಡರಿ ಹಾಗೂ ಒಂದು ಮನಮೋಹಕ ಸಿಕ್ಸರ್ ನೆರವಿನಿಂದ 54 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಹನುಮ ವಿಹಾರಿ ಸಹಾ ಚುರುಕಿನ ಬ್ಯಾಟಿಂಗ್ ನಡೆಸಿದರು. 70 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ ವಿಹಾರಿ 55 ರನ್ ಸಿಡಿಸಿ ವ್ಯಾಗ್ನರ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ 140 ಎಸೆತಗಳನ್ನು ಎದುರಿಸಿ ಕಿವೀಸ್ ನೆಲದಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದರು. ಪೂಜಾರ ವಿಕೆಟ್ ಒಪ್ಪಿಸುವ ಮುನ್ನ 6 ಬೌಂಡರಿಗಳ ನೆರವಿನಿಂದ 54 ರನ್ ಗಳಿಸಿ ಜ್ಯಾಮಿಸನ್‌ಗೆ ವಿಕೆಟ್ ಒಪ್ಪಿಸಿದರು.

2ನೇ ಟೆಸ್ಟ್: ಕೊಹ್ಲಿ-ಅಗರ್‌ವಾಲ್ ಫೇಲ್, ಪೃಥ್ವಿ-ಪೂಜಾರ ಫಿಫ್ಟಿ

ಬ್ಯಾಟ್ಸ್‌ಮನ್‌ಗಳ ವೈಫಲ್ಯ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ಅಜಿಂಕ್ಯ ರಹಾನೆ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು. ಇನ್ನು ಪಂತ್(12) ಹಾಗೂ ರವೀಂದ್ರ ಜಡೇಜಾ ಕೂಡಾ ಹೊಣೆಯರಿತು ಬ್ಯಾಟಿಂಗ್ ಮಾಡುವಲ್ಲಿ ಎಡವಿದರು.

ನಾಟಕೀಯ ಕುಸಿತ: ಒಂದು ಹಂತದಲ್ಲಿ 113 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ಪೂಜಾರ ಹಾಗೂ ವಿಹಾರಿ ಜೋಡಿ ಆಸರೆಯಾಯಿತು. ಈ ಜೋಡಿ 81 ರನ್‌ಗಳ ಜತೆಯಾಟವಾಡುವ ತಂಡಕ್ಕೆ ಆಸರೆಯಾಯಿತು. 194 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಭಾರತ ವಿಹಾರಿ ವಿಕೆಟ್ ಪತನದ ಬಳಿಕ ನಾಟಕೀಯ ಕುಸಿತ ಕಂಡಿತು. ಕೇವಲ 23 ರನ್‌ಗಳ ಅಂತರದಲ್ಲಿ ಟೀಂ ಇಂಡಿಯಾ 5 ವಿಕೆಟ್ ಕಳೆದುಕೊಳ್ಳುವ ಮೂಲಕ ನಾಟಕೀಯ ಕುಸಿತ ಕಂಡಿತು. ವಿಹಾರಿ ವಿಕೆಟ್ ಪತನದ ಬೆನ್ನಲ್ಲೇ ಪೂಜಾರ ಕೂಡಾ ವಿಕೆಟ್ ಒಪ್ಪಿಸಿದರು. ಜಡೇಜಾ ಹಾಗೂ ಪಂತ್ ಸಹಾ ಪ್ರತಿರೋಧ ತೋರಲಿಲ್ಲ. ಕೊನೆಯಲ್ಲಿ ಶಮಿ(16) ಹಾಗೂ ಬುಮ್ರಾ(10) ಅಲ್ಪ ಕಾಣಿಕೆ ನೀಡುವ ಮೂಲಕ ತಂಡದ ಮೊತ್ತವನ್ನು 240ರ ಗಡಿ ದಾಟಿಸಿದರು.

ನ್ಯೂಜಿಲೆಂಡ್ ಪರ ಎರಡನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಕೈಲ್ ಜಾಮಿಸನ್ 45 ರನ್ ನೀಡಿ 5 ವಿಕೆಟ್ ಪಡೆದರೆ, ಟ್ರೆಂಟ್ ಬೌಲ್ಟ್ ಹಾಗೂ ಟಿಮ್ ಸೌಥಿ ತಲಾ 2 ವಿಕೆಟ್ ಪಡೆದರು. ಇನ್ನು ನೀಲ್ ವ್ಯಾಗ್ನರ್ ಒಂದು ವಿಕೆಟ್ ಪಡೆದರು.