ನ್ಯೂಜಿಲೆಂಡ್ ಎದುರು ಮೂರನೇ ದಿನದಾಟದಂತ್ಯಕ್ಕೆ ಟೀಂ ಇಂಡಿಯಾ 4 ವಿಕೆಟ್ ಕಳೆದುಕೊಂಡು 144 ರನ್ ಬಾರಿಸಿದೆ. ಅಜಿಂಕ್ಯ ರಹಾನೆ ಹಾಗೂ ಹನುಮ ವಿಹಾರಿ ಜತೆಯಾಟ ಪಂದ್ಯದ ಫಲಿತಾಂಶ ನಿರ್ಧರಿಸಲಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.

ವೆಲ್ಲಿಂಗ್ಟನ್(ಫೆ.23): ಮಯಾಂಕ್ ಅಗರ್‌ವಾಲ್(58) ಆಕರ್ಷಕ ಅರ್ಧಶತಕದ ಹೊರತಾಗಿಯೂ ಟೀಂ ಇಂಡಿಯಾ ಮೂರನೇ ದಿನದಾಟದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 144 ರನ್ ಬಾರಿಸಿದ್ದು, ಇನ್ನು 39 ರನ್‌ಗಳ ಹಿನ್ನಡೆಯಲ್ಲಿದೆ. ಇನ್ನು ಎರಡು ದಿನದ ಆಟ ಬಾಕಿಯಿದ್ದು ವಿರಾಟ್ ಪಡೆ ಸೋಲಿನ ಭೀತಿಗೆ ಸಿಲುಕಿದೆ. ಉಪನಾಯಕ ಅಜಿಂಕ್ಯ ರಹಾನೆ ಹಾಗೂ ಹನುಮ ವಿಹಾರಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

Scroll to load tweet…

ಒಟ್ಟು 183 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ ಮತ್ತೊಮ್ಮೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ 14 ರನ್ ಬಾರಿಸಿ ಬೌಲ್ಟ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಪೂಜಾರ ನೆಲಕಚ್ಚಿ ಆಡುವ ಯತ್ನ ನಡೆಸಿದರಾದರೂ, ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. ಪೂಜಾರ 81 ಎಸೆತಗಳನ್ನು ಎದುರಿಸಿ 11 ರನ್‌ಗಳಿಸಿ ಬೌಲ್ಟ್ ಬೌಲಿಂಗ್‌ನಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.

ಅರ್ಧಶತಕ ಬಾರಿಸಿದ ಮಯಾಂಕ್ ಅಗರ್‌ವಾಲ್

ಮಯಾಂಕ್ ಭರ್ಜರಿ ಅರ್ಧಶತಕ: ಟೀಂ ಇಂಡಿಯಾ ಮತ್ತೋರ್ವ ಆರಂಭಿಕ ಬ್ಯಾಟ್ಸ್‌ಮನ್ ಮಯಾಂಕ್ ಅಗರ್‌ವಾಲ್ ಕಿವೀಸ್ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದರು. ಮಯಾಂಕ್ ವೃತ್ತಿಜೀವನದ ನಾಲ್ಕನೇ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. ಒಟ್ಟು 99 ಎಸೆತಗಳನ್ನು ಎದುರಿಸಿದ ಮಯಾಂಕ್ 7 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 58 ರನ್‌ಗಳಿಗೆ ಸೌಥಿಗೆ ವಿಕೆಟ್ ಒಪ್ಪಿಸಿದರು.

ಕೊಹ್ಲಿ ಮತ್ತೆ ಫೇಲ್: ಮೊದಲ ಇನಿಂಗ್ಸ್‌ನಲ್ಲಿ ಬೃಹತ್ ಹಿನ್ನಡೆ ಅನುಭವಿಸಿರುವ ಟೀಂ ಇಂಡಿಯಾಗೆ, ನಾಯಕ ವಿರಾಟ್ ಕೊಹ್ಲಿ ಆಸರೆಯಾಗಲು ಮತ್ತೊಮ್ಮೆ ವಿಫಲವಾದರು. ಪೂಜಾರ ವಿಕೆಟ್ ಪತನದ ನಂತರ ಕೊಹ್ಲಿ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕಿತ್ತು. ಟೆಸ್ಟ್ ನಂ.1 ಬ್ಯಾಟ್ಸ್‌ಮನ್ ಕೊಹ್ಲಿ ಕೇವಲ 19 ರನ್‌ಗಳಿಗೆ ಬೌಲ್ಟ್‌ಗೆ ವಿಕೆಟ್ ಒಪ್ಪಿಸಿದರು. ಅಂದಹಾಗೆ ವಿರಾಟ್ ಕಳೆದ 20 ಇನಿಂಗ್ಸ್‌ಗಳಲ್ಲಿ ಕೊಹ್ಲಿ ಒಮ್ಮೆಯೂ ಶತಕ ಬಾರಿಸಿಲ್ಲ. 

ಕಿವೀಸ್‌ಗೆ 183 ರನ್‌ಗಳ ಮುನ್ನಡೆ;
2 ದಿನದಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 216 ರನ್ ಬಾರಿಸಿದ್ದ ಕಿವೀಸ್ ಪಡೆ ಮೂರನೇ ದಿನ ತನ್ನ ಖಾತೆಗೆ 9 ರನ್ ಸೇರಿಸುವಷ್ಟರಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವ್ಯಾಟ್ಲಿಂಗ್ ಹಾಗೂ ಟಿಮ್ ಸೌಥಿ ವಿಕೆಟ್ ಕಳೆದುಕೊಂಡಿತು. ಆ ಬಳಿಕ ಗ್ರಾಂಡ್‌ಹೋಮ್(43) ಹಾಗೂ ಕೈಲ್ ಜಾಮಿಸನ್(44) ಹಾಗೂ ಟ್ರೆಂಟ್ ಬೌಲ್ಟ್(38) ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ಕಿವೀಸ್ ತಂಡದ ಮೊತ್ತವನ್ನು 340ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಕೇನ್ ವಿಲಿಯಮ್ಸನ್ ಪಡೆ 183 ರನ್‌ಗಳ ಮೊದಲ ಇನಿಂಗ್ಸ್ ಮುನ್ನಡೆ ಪಡೆದಿದೆ.