ಇಂಗ್ಲೆಂಡ್‌ನಲ್ಲಿ ಭಾರತದ ಗೆಲುವಿನ ಸಾಧ್ಯತೆಗಳ ಬಗ್ಗೆ ಹರ್ಭಜನ್ ಸಿಂಗ್ ಅವರ ಅಭಿಪ್ರಾಯ. ಗೆಲುವು ಸಾಧಿಸದಿದ್ದರೂ ಕಲಿಕೆಗೆ ಅವಕಾಶವಿದೆ ಎಂದು ಅವರು ಹೇಳಿದ್ದಾರೆ. 18 ವರ್ಷಗಳ ನಂತರ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಗುರಿಯೊಂದಿಗೆ ಭಾರತ ತಂಡ ಕಣಕ್ಕಿಳಿಯಲಿದೆ.

ಮುಂಬೈ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯು ಇದೇ ಜೂನ್ 20ರಿಂದ ಆರಂಭವಾಗಲಿದೆ. ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನಿಟ್ಟಿನಲ್ಲಿ ಈ ಸರಣಿಯು ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಿಕೊಂಡಿದೆ. ಕಳೆದ ಶನಿವಾರ ಇಂಗ್ಲೆಂಡ್‌ಗೆ ಬಂದಿಳಿದಿರುವ ಟೀಂ ಇಂಡಿಯಾ, ಮಹತ್ವದ ಸರಣಿಗೂ ಮುನ್ನ ಭರ್ಜರಿ ತಾಲೀಮು ನಡೆಸುತ್ತಿದೆ. ಇನ್ನು ಈ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಒಂದು ವೇಳೆ ಭಾರತ ತಂಡವು ಇಂಗ್ಲೆಂಡ್‌ನಲ್ಲಿ ಗೆಲ್ಲದಿದ್ದರೇ, ಕಲಿಯುವುದಕ್ಕಂತೂ ಸಾಕಷ್ಟು ಸಿಗಲಿದೆ ಎಂದು ಮಾಜಿ ಆಫ್‌ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಹರ್ಭಜನ್ ಸಿಂಗ್ ಅವರನ್ನು ಉದ್ದೇಶಿಸಿ, ಶುಭ್‌ಮನ್ ಗಿಲ್ ಅನನುಭವಿ ಆಟಗಾರನ್ನೊಳಗೊಂಡ ತಂಡ ಕಟ್ಟಿಕೊಂಡು ಇಂಗ್ಲೆಂಡ್ ಪ್ರವಾಸ ಮಾಡುತ್ತಿದೆ. ಭಾರತಕ್ಕೆ ಎಷ್ಟು ಸವಾಲು ಎನಿಸಲಿದೆ ಎಂದು ಪ್ರಶ್ನಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಭಜ್ಜಿ, 'ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಈ ಮೂರು ಪ್ರವಾಸ ಯಾವಗಲೂ ಕಠಿಣವಾಗಿಯೇ ಇರುತ್ತದೆ. ಈಗ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕೂಡಾ ತಂಡದಲ್ಲಿಲ್ಲ. ಇನ್ನಷ್ಟು ಅನುಭವಿ ಆಟಗಾರರಿದ್ದರೂ ಅವರು ಈಗ ತಂಡದಲ್ಲಿಲ್ಲ. ಅನುಭವದ ಕೊರತೆ ತಂಡವನ್ನು ಕಾಡುವ ಸಾಧ್ಯತೆಯಿದೆ. ಈ ಪ್ರವಾಸ ಸುಲಭವಂತೂ ಆಗಿರುವುದಿಲ್ಲ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

ಒಂದು ವೇಳೆ ಈ ಟೆಸ್ಟ್ ಸರಣಿಯನ್ನು ಗೆಲ್ಲದೇ ಹೋದರೂ, ಒಂದೇ ಸಲ ಒತ್ತಡವನ್ನು ಹೇರಬಾರದು. ಈಗಂತೂ ಇಲ್ಲಿ ಒಂದು ಸಂಪ್ರದಾಯ ಶುರುವಾಗಿದೆ. ಗೆದ್ದರೇ ಎಲ್ಲರೂ ವಾವ್ ವಾವ್ ಎಂದು ಹೊಗಳುತ್ತಾರೆ, ಸೋತರೇ ಆಟಗಾರರ ಮೇಲೆ ಮುಗಿಬೀಳುತ್ತಾರೆ ಎಂದು ಹೇಳಿದ್ದಾರೆ. ಒಂದು ವೇಳೆ ಟೆಸ್ಟ್ ಗೆದ್ದರೇ ಒಳ್ಳೆಯ ಸಾಧನೆ ಎನಿಸಿಕೊಳ್ಳಲಿದೆ, ಸೋತರೇ ಸಾಕಷ್ಟು ಕಲಿತಂತೆ ಆಗಲಿದೆ ಎಂದು ಭಜ್ಜಿ ಅಭಿಪ್ರಾಯಪಟ್ಟಿದ್ದಾರೆ.

ಇತಿಹಾಸ ನಿರ್ಮಿಸುತ್ತಾ ಶುಭ್‌ಮನ್ ಗಿಲ್ ಪಡೆ?

ಭಾರತ ಕ್ರಿಕೆಟ್ ತಂಡವು ಕಳೆದ 18 ವರ್ಷಗಳಿಂದ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿ ಗೆಲುವಿಗಾಗಿ ಪರಿತಪಿಸುತ್ತಿದೆ. 2007ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಟೀಂ ಇಂಡಿಯಾ, ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದಿತ್ತು. ಇದೀಗ ಶುಭ್‌ಮನ್ ಗಿಲ್ ನೇತೃತ್ವದ ಯಂಗಿಸ್ತಾನ್ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸುತ್ತಾ ಎನ್ನುವ ಕುತೂಹಲ ಜೋರಾಗಿದೆ. ಸದ್ಯ ಭಾರತ ಟೆಸ್ಟ್ ತಂಡದಲ್ಲಿ ಅನುಭವಿಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ರವಿಚಂದ್ರನ್ ಅಶ್ವಿನ್ ನಿವೃತ್ತಿ ಘೋಷಿಸಿದ್ದಾರೆ. ಇನ್ನು ಅಜಿಂಕ್ಯ ರಹಾನೆ ಹಾಗೂ ಚೇತೇಶ್ವರ್ ಪೂಜಾರ ಕೂಡಾ ಭಾರತ ತಂಡಕ್ಕೆ ಆಯ್ಕೆಯಾಗಿಲ್ಲ. ಹೀಗಾಗಿ ನಾಯಕ ಶುಭ್‌ಮನ್ ಗಿಲ್, ರವೀಂದ್ರ ಜಡೇಜಾ, ಕೆ ಎಲ್ ರಾಹುಲ್, ಕರುಣ್ ನಾಯರ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ ಹಾಗೂ ರಿಷಭ್ ಪಂತ್ ಅವರನ್ನೊಳಗೊಂಡ ತಂಡ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ

ಜೂನ್ 20-24; ಹೆಡಿಂಗ್ಲೆ ಟೆಸ್ಟ್

ಜುಲೈ 2-6; ಎಡ್ಜ್‌ಬಾಸ್ಟನ್‌ ಟೆಸ್ಟ್

ಜುಲೈ 10-14; ಲಾರ್ಡ್ಸ್ ಟೆಸ್ಟ್

ಜುಲೈ 23-27; ಓಲ್ಡ್ ಟ್ರಾಫರ್ಡ್ ಟೆಸ್ಟ್

ಜುಲೈ 31ರಿಂದ ಆಗಸ್ಟ್ 04; ದಿ ಓವಲ್

ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ ಭಾರತ ತಂಡ ಹೀಗಿದೆ:

ಶುಭ್‌ಮನ್ ಗಿಲ್(ನಾಯಕ), ರಿಷಭ್ ಪಂತ್(ಉಪನಾಯಕ& ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ಕೆ ಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ ಜುರೇಲ್(ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್‌ದೀಪ್ ಸಿಂಗ್, ಅರ್ಶದೀಪ್ ಸಿಂಗ್, ಕುಲ್ದೀಪ್ ಯಾದವ್.