ಚೆನ್ನೈ(ಫೆ.16): ರವಿಚಂದ್ರನ್ ಅಶ್ವಿನ್ ಹಾಗೂ ಅಕ್ಷರ್‌ ಪಟೇಲ್‌ ಸ್ಪಿನ್‌ ಜಾಲಕ್ಕೆ ಸಿಲುಕಿರುವ ಪ್ರವಾಸಿ ಇಂಗ್ಲೆಂಡ್‌ ತಂಡ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಸೋಲಿನತ್ತ ಮುಖಮಾಡಿದ್ದು, ನಾಲ್ಕನೇ ದಿನದಾಟದ ಲಂಚ್‌ ಬ್ರೇಕ್‌ ವೇಳೆಗೆ 7 ವಿಕೆಟ್‌ ಕಳೆದುಕೊಂಡು ಕೇವಲ 116 ರನ್‌ ಬಾರಿಸಿದ್ದು, ಇನ್ನೂ ಗೆಲ್ಲಲು ಇಂಗ್ಲೆಂಡ್‌ ತಂಡ 366 ರನ್‌ ಬಾರಿಸಬೇಕಿದೆ. ಕೇವಲ 3 ವಿಕೆಟ್‌ ಕಬಳಿಸಿದರೆ ಎರಡನೇ ಟೆಸ್ಟ್‌ ಭಾರತದ ಪಾಲಾಗಲಿದೆ.

ಹೌದು, ಮೂರನೇ ದಿನದಾಟದಂತ್ಯದ ವೇಳೆಗೆ  3 ವಿಕೆಟ್ ಕಳೆದುಕೊಂಡು 53 ರನ್‌ ಬಾರಿಸಿದ್ದ ಇಂಗ್ಲೆಂಡ್‌ ತಂಡಕ್ಕೆ ಭಾರತೀಯ ಸ್ಪಿನ್ನರ್‌ಗಳು ಮತ್ತೊಮ್ಮೆ ಪ್ರವಾಸಿ ತಂಡವನ್ನು ಮತ್ತೊಮ್ಮೆ ಕಾಡಿದರು. ನೆಲಕಚ್ಚಿ ಆಡುವ ಪ್ರಯತ್ನ ಮಾಡಿದ ಡೇನಿಯಲ್ ಲಾರೆನ್ಸ್‌ರನ್ನು ಪೆವಿಲಿಯನ್ನಿಗಟ್ಟುವಲ್ಲಿ ಅಶ್ವಿನ್ ಯಶಸ್ವಿಯಾದರು. ಬೆನ್‌ ಸ್ಟೋಕ್ಸ್‌ರನ್ನು ಮತ್ತೊಮ್ಮೆ ಪೆವಿಲಿಯನ್ನಿಗಟ್ಟುವಲ್ಲಿ ಅಶ್ವಿನ್‌ ಯಶಸ್ವಿಯಾದರು. ಇದರೊಂದಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 10ನೇ ಬಾರಿಗೆ ಸ್ಟೋಕ್ಸ್‌ ಬಲಿಪಡೆಯುವಲ್ಲಿ ಅಶ್ವಿನ್‌ ಯಶಸ್ವಿಯಾದರು. ಓಲಿ ಪೋಪ್‌ ಕೇವಲ 8 ರನ್‌ ಬಾರಿಸಿ ಅಕ್ಷರ್‌ ಪಟೇಲ್‌ಗೆ ಬಲಿಯಾದರೆ, ಕುಲ್ದೀಪ್‌ ಯಾದವ್‌ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಬೆನ್‌ ಫೋಕ್ಸ್‌ ವಿಕೆಟ್‌ ಕಬಳಿಸುವ ಮೂಲಕ ಈ ಪಂದ್ಯದಲ್ಲಿ ಮೊದಲ ವಿಕೆಟ್ ತಮ್ಮ ಖಾತೆಗೆ ಸೇರಿಸಿಕೊಂಡರು.

ಚೆನ್ನೈ ಟೆಸ್ಟ್‌: ಸೋಲಿನ ಸುಳಿಯಲ್ಲಿ ಇಂಗ್ಲೆಂಡ್‌

ನಾಯಕನ ಏಕಾಂಗಿ ಹೋರಾಟ: ಒಂದು ಕಡೆ ನಿರಂತರ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ಅವುಡುಗಚ್ಚಿ ಬ್ಯಾಟಿಂಗ್ ನಡೆಸುತ್ತಿರುವ ಇಂಗ್ಲೆಂಡ್ ನಾಯಕ ಜೋ ರೂಟ್‌ 90 ಎಸೆತಗಳನ್ನು ಎದುರಿಸಿ 3 ಬೌಂಡರಿ ಸಹಿತ 33 ರನ್‌ ಬಾರಿಸಿ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಸ್ಪಿನ್‌ ಪಿಚ್‌ನಲ್ಲಿ ಇನ್ನೆಷ್ಟು ಹೊತ್ತು ಭಾರತೀಯ ಬೌಲರ್‌ಗಳೆದುರು ಪ್ರತಿರೋಧ ತೋರುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.