ಚೆನ್ನೈ ಟೆಸ್ಟ್: ಸೋಲಿನ ಸುಳಿಯಲ್ಲಿ ಇಂಗ್ಲೆಂಡ್
ಭಾರತ ವಿರುದ್ದದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಸೋಲಿನ ಭೀತಿಗೆ ಸಿಲುಕಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಚೆನ್ನೈ(ಫೆ.15): ಎರಡನೇ ಟೆಸ್ಟ್ ಪಂದ್ಯ 482 ರನ್‌ಗಳ ಕಠಿಣ ಗುರಿ ಪಡೆದಿರುವ ಪ್ರವಾಸಿ ಇಂಗ್ಲೆಂಡ್ ತಂಡ ಮೂರನೇ ದಿನದಾಟದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು ಕೇವಲ 53 ರನ್ ಗಳಿಸಿದ್ದು, ಸೋಲಿನ ಭೀತಿಗೆ ಸಿಲುಕಿದೆ. ಇನ್ನೆರಡು ದಿನದಲ್ಲಿ ಇಂಗ್ಲೆಂಡ್ ಗೆಲ್ಲಲು ಬರೋಬ್ಬರಿ 429 ರನ್ ಗಳಿಸಬೇಕಿದೆ. ಇನ್ನು ವಿರಾಟ್ ಕೊಹ್ಲಿ ಪಡೆ 7 ವಿಕೆಟ್ ಕಬಳಿಸಿದರೆ ಎರಡನೇ ಟೆಸ್ಟ್ ಭಾರತದ ಪಾಲಾಗಲಿದೆ.
ಹೌದು, ಮೂರನೇ ದಿನದಾಟದಲ್ಲಿ ಲೋಕಲ್ ಬಾಯ್ ರವಿಚಂದ್ರನ್ ಅಶ್ವಿನ್ ಬಾರಿಸಿದ ವೃತ್ತಿಜೀವನದ 5ನೇ ಶತಕದ ನೆರವಿನಿಂದ ಭಾರತ ತಂಡ ಎರಡನೇ ಇನಿಂಗ್ಸ್‌ನಲ್ಲಿ 286 ರನ್ ಬಾರಿಸಿ ಸರ್ವಪತನ ಕಂಡಿತು. ಮಧ್ಯಮ ಕ್ರಮಾಂಕದಲ್ಲಿ ಟೀಂ ಇಂಡಿಯಾ ನಾಟಕೀಯ ಕುಸಿತ ಕಂಡರೂ ನಾಯಕ ವಿರಾಟ್ ಕೊಹ್ಲಿ ಹಾಗೂ ಅಶ್ವಿನ್ 7ನೇ ವಿಕೆಟ್‌ಗೆ 96 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಕೊಹ್ಲಿ 149 ಎಸೆತಗಳನ್ನು ಎದುರಿಸಿ 7 ಬೌಂಡರಿ ಸಹಿತ 62 ರನ್ ಬಾರಿಸಿ ಮೋಯಿನ್ ಅಲಿಗೆ ಎರಡನೇ ಬಲಿಯಾದರು. ಆ ಬಳಿಕ ಸ್ಫೋಟಕ ಬ್ಯಾಟಿಂಗ್ ನಡೆಸಿದ ರವಿಚಂದ್ರನ್ ಅಶ್ವಿನ್ ತವರಿನ ಪಿಚ್‌ನ ಲಾಭ ಪಡೆದು ಆಕರ್ಷಕ ಶತಕ ಬಾರಿಸುವ ಮೂಲಕ ತಂಡ ಬೃಹತ್ ಮೊತ್ತ ಕಲೆ ಹಾಕಲು ನೆರವಾದರು. ಅಶ್ವಿನ್ ಕೇವಲ 148 ಎಸೆತಗಳನ್ನು ಎದುರಿಸಿ 14 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 106 ರನ್ ಬಾರಿಸಿ ಓಲಿ ಸ್ಟೋನ್‌ಗೆ ವಿಕೆಟ್ ಒಪ್ಪಿಸಿದರು.
ಚೆನ್ನೈ ಟೆಸ್ಟ್: ಅಶ್ವಿನ್ ಆಕರ್ಷಕ ಶತಕ; ಇಂಗ್ಲೆಂಡ್ ಗೆಲ್ಲಲು 482 ರನ್ ಗುರಿ
ಇನ್ನು ಕಠಿಣ ಗುರಿ ಬೆನ್ನತ್ತಿರುವ ಇಂಗ್ಲೆಂಡ್ ತಂಡ ಎಚ್ಚರಿಕೆಯ ಆಟಕ್ಕೆ ಮೊರೆಹೋಯಿತು. ಡೋಮಿನಿಕ್ ಸಿಬ್ಲಿ ಕೇವಲ 3 ರನ್ ಬಾರಿಸಿ ಅಕ್ಷರ್ ಪಟೇಲ್ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು. ಮತ್ತೋರ್ವ ಅರಂಭಿಕ ಬ್ಯಾಟ್ಸ್‌ಮನ್ ರೋರಿ ಬರ್ನ್ಸ್(25) ನೆಲಕಚ್ಚಿ ಆಡುವ ಪ್ರಯತ್ನ ಮಾಡಿದರಾದರೂ ಬರ್ನ್ಸ್‌ಗೆ ಅಶ್ವಿನ್ ಪೆವಿಲಿಯನ್ ಹಾದಿ ತೋರಿಸಿದರು. ಇನ್ನು ನೈಟ್ ವಾಚ್‌ಮನ್ ಜಾಕ್ ಲೀಚ್ ಶೂನ್ಯ ಸುತ್ತಿ ಅಕ್ಷರ್ ಪಟೇಲ್‌ಗೆ ಎರಡನೇ ಬಲಿಯಾದರು. ಸದ್ಯ ಡೇನಿಯಲ್ ಲಾರೆನ್ಸ್(19) ಹಾಗೂ ಜೋ ರೂಟ್(2) ನಾಲ್ಕನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.