ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಅಂತ್ಯಕ್ಕೆ ಭಾರತ ಒಂದು ವಿಕೆಟ್ ನಷ್ಟಕ್ಕೆ 64 ರನ್ ಗಳಿಸಿ ಒಟ್ಟಾರೆ 244 ರನ್‌ಗಳ ಮುನ್ನಡೆ ಸಾಧಿಸಿದೆ. ಇಂಗ್ಲೆಂಡ್‌ಗೆ 400+ ರನ್ ಗುರಿ ನೀಡಿದರೆ ಮಾತ್ರ ಭಾರತ ಗೆಲುವು ಸಾಧಿಸುವ ಸಾಧ್ಯತೆ ಹೆಚ್ಚು.
ಬರ್ಮಿಂಗ್‌ಹ್ಯಾಮ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟ ಮುಕ್ತಾಯವಾಗಿದ್ದು, ಇದೀಗ ಎಲ್ಲರ ಚಿತ್ತ ನಾಲ್ಕನೇ ದಿನದಾಟದತ್ತ ನೆಟ್ಟಿದೆ. ಇಲ್ಲಿನ ಎಜ್‌ಬಾಸ್ಟನ್‌ನಲ್ಲಿ ಭಾರತ ತಂಡವು ಚೊಚ್ಚಲ ಟೆಸ್ಟ್ ಗೆಲುವಿನ ಕನವರಿಕೆಯಲ್ಲಿದೆ. ಮೂರನೇ ದಿನದಾಟದ ಅಂತ್ಯದ ವೇಳೆಗೆ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ ಒಂದು ವಿಕೆಟ್ ಕಳೆದುಕೊಂಡು 64 ರನ್ ಬಾರಿಸಿದ್ದು, ಒಟ್ಟಾರೆ 244 ರನ್‌ಗಳ ಮುನ್ನಡೆ ಸಾಧಿಸಿದೆ. ಈ ಮೂಲಕ ಪಂದ್ಯದಲ್ಲಿ ಗಿಲ್ ಪಡೆ ಬಿಗಿಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಸಾಮಾನ್ಯವಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ನಾಲ್ಕನೇ ಇನ್ನಿಂಗ್ಸ್‌ನಲ್ಲಿ 300+ ರನ್‌ಗಳಿದ್ದರೇ ಗೆಲುವು ಸಾಧಿಸಬಹುದು ಇಲ್ಲವೇ ಕನಿಷ್ಠ ಡ್ರಾನಾದರೂ ಮಾಡಿಕೊಳ್ಳಬಹುದು ಎನ್ನುವ ಮಾತು ಸಾಮಾನ್ಯವಾಗಿತ್ತು. ಆದರೆ ಇಂಗ್ಲೆಂಡ್ ತಂಡವು ಅದನ್ನು ಸುಳ್ಳಾಗಿಸುತ್ತಲೇ ಬಂದಿದೆ. ಲೀಡ್ಸ್‌ನಲ್ಲಿ ಟೀಂ ಇಂಡಿಯಾ ನೀಡಿದ್ದ 371 ರನ್‌ಗಳ ಗುರಿಯನ್ನು ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ತಂಡವು ಅನಾಯಾಸವಾಗಿ ಚೇಸ್ ಮಾಡಿ ಬೀಗಿತ್ತು. ಹೀಗಾಗಿ ಇಂಗ್ಲೆಂಡ್‌ಗೆ 350 ರನ್ ಗುರಿ ನೀಡಿದರೂ ಚೇಸ್ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಒಂದು ವೇಳೆ ಎಜ್‌ಬಾಸ್ಟನ್ ಟೆಸ್ಟ್ ಪಂದ್ಯವನ್ನು ಗೆಲ್ಲಬೇಕಿದ್ದರೇ, ಟೀಂ ಇಂಡಿಯಾ, ಇಂಗ್ಲೆಂಡ್‌ಗೆ ಕನಿಷ್ಠ 400+ ರನ್ ಗುರಿ ನೀಡಬೇಕಾಗಬಹುದು.
ಎಜ್‌ಬಾಸ್ಟನ್‌ನಲ್ಲಿ ಇಲ್ಲಿಯವರೆಗಿನ ಯಶಸ್ವಿ ರನ್ ಚೇಸ್ ಎಷ್ಟು?
ಎಜ್‌ಬಾಸ್ಟನ್‌ನಲ್ಲಿ ಈ ಹಿಂದೆ 378 ರನ್‌ಗಳ ಗುರಿಯನ್ನು ಅನಾಯಾಸವಾಗಿ ಇಂಗ್ಲೆಂಡ್ ಬೆನ್ನತ್ತುವಲ್ಲಿ ಯಶಸ್ವಿಯಾಗಿತ್ತು. ಹೌದು, 2022ರಲ್ಲಿ ಭಾರತ ತಂಡವು ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. ಎಜ್‌ಬಾಸ್ಟನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ, ಇಂಗ್ಲೆಂಡ್‌ಗೆ ಗೆಲ್ಲಲು ಬರೋಬ್ಬರಿ 378 ರನ್ ಗುರಿ ನೀಡಿತ್ತು. ಆ ಗುರಿ ಬೆನ್ನತ್ತುವಲ್ಲಿ ಇಂಗ್ಲೆಂಡ್ ತಂಡವು ಯಶಸ್ವಿಯಾಗಿತ್ತು. ಇನ್ನು 2023ರಲ್ಲಿ ಇಂಗ್ಲೆಂಡ್ ಎದುರು ಆಸ್ಟ್ರೇಲಿಯಾ ತಂಡವು ಇದೇ ಸ್ಟೇಡಿಯಂನಲ್ಲಿ ನಾಲ್ಕನೇ ಇನ್ನಿಂಗ್ಸ್‌ನಲ್ಲಿ 282 ರನ್‌ಗಳ ಗುರಿಯನ್ನು ಅನಾಯಾಸವಾಗಿ ತಲುಪಿತ್ತು.
ಇನ್ನು ಎಜ್‌ಬಾಸ್ಟನ್ ಟೆಸ್ಟ್ ಪಂದ್ಯದ ಬಗ್ಗೆ ಹೇಳುವುದಾದರೇ, ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ, ನಾಯಕ ಶುಭ್‌ಮನ್ ಗಿಲ್ ಬಾರಿಸಿದ ಆಕರ್ಷಕ ದ್ವಿಶತಕ ಹಾಗೂ ಜೈಸ್ವಾಲ್ ಮತ್ತು ಜಡೇಜಾ ಬಾರಿಸಿದ ಸಮಯೋಚಿತ ಅರ್ಧಶತಕದ ನೆರವಿನಿಂದ 587 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಇನ್ನು ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಆರಂಭಿಕ ಆಘಾತ ಅನುಭವಿಸಿತು. ಸಿರಾಜ್-ಆಕಾಶ್‌ದೀಪ್ ಮಾರಕ ದಾಳಿಗೆ ತತ್ತರಿಸಿದ ಇಂಗ್ಲೆಂಡ್ 84 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಐವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. ಫಾಲೋ ಆನ್ ಭೀತಿಗೆ ಸಿಲುಕಿದ್ದ ಇಂಗ್ಲೆಂಡ್ ತಂಡಕ್ಕೆ ಆರನೇ ವಿಕೆಟ್‌ಗೆ ಹ್ಯಾರಿ ಬ್ರೂಕ್ ಹಾಗೂ ಜೇಮಿ ಸ್ಮಿತ್ 303 ರನ್‌ಗಳ ಆಕರ್ಷಕ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಬ್ರೂಕ್ 158 ರನ್ ಸಿಡಿಸಿದರೆ, ಸ್ಮಿತ್ 184 ರನ್ ಗಳಿಸಿ ಪೆವಿಲಿಯಬನ್ ಹಾದಿ ಹಿಡಿದರು. ಟೀಂ ಇಂಡಿಯಾ ಪರ ವೇಗಿ ಮೊಹಮ್ಮದ್ ಸಿರಾಜ್ 6 ವಿಕೆಟ್ ಕಬಳಿಸಿ ಮಿಂಚಿದರು. ಇಂಗ್ಲೆಂಡ್ 407 ರನ್‌ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 180 ರನ್‌ಗಳ ಅಮೂಲ್ಯ ಮುನ್ನಡೆ ಪಡೆಯಿತು.
ಇದೀಗ ಎರಡನೇ ಇನ್ನಿಂಗ್ಸ್ ಅರಂಭಿಸಿರುವ ಟೀಂ ಇಂಡಿಯಾ, ಮೂರನೇ ದಿನದಾಟದಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 64 ರನ್ ಬಾರಿಸಿದೆ. ಜೈಸ್ವಾಲ್ 28 ರನ್ ಗಳಿಸಿ ಜೋಶ್ ಟಂಗ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೋರ್ವ ಆರಂಭಿಕ ಬ್ಯಾಟರ್ ಕೆ ಎಲ್ ರಾಹುಲ್ 28 ಹಾಗೂ ಕರುಣ್ ನಾಯರ್ 7 ರನ್ ಗಳಿಸಿ ನಾಲ್ಕನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಭಾರತ ಒಂದು ವೇಳೆ ಇಂದು ಸ್ಪೋಟಕ ಬ್ಯಾಟಿಂಗ್ ನಡೆಸಿ 400+ ರನ್ ಟಾರ್ಗೆಟ್ ಕೊಟ್ಟರೇ, ಎಜ್‌ಬಾಸ್ಟನ್‌ನಲ್ಲಿ ಭಾರತ ಮೊದಲ ಗೆಲುವಿನ ರುಚಿ ನೋಡಬಹುದು.