ಲೀಡ್ಸ್‌ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಟೆಸ್ಟ್ ಪಂದ್ಯದಲ್ಲಿ ಆಟಗಾರರು ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದಿದ್ದಾರೆ. ಇತ್ತೀಚೆಗೆ ನಡೆದ ವಿಮಾನ ದುರಂತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಸಾಯಿ ಸುದರ್ಶನ್ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ.
ಹೆಡಿಂಗ್ಲೆ: ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ಇಂದು ಇಲ್ಲಿನ ಲೀಡ್ಸ್ ಮೈದಾನದಲ್ಲಿ ಆರಂಭವಾಗಿದೆ. ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ರವಿಚಂದ್ರನ್ ಅಶ್ವಿನ್ ಅವರ ಅನುಪಸ್ದಿತಿಯಲ್ಲಿ ಯುವ ಆಟಗಾರರನ್ನೊಳಗೊಂಡ ಭಾರತ ತಂಡವು, ಸಾಕಷ್ಟು ನಿರೀಕ್ಷೆಗಳನ್ನು ಇಟ್ಟು ಈ ಸರಣಿಯನ್ನಾಡುತ್ತಿದೆ. ಇನ್ನು ಮೊದಲ ಟೆಸ್ಟ್‌ನ ಮೊದಲ ದಿನದಾಟದ ವೇಳೆಯಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡದ ಆಟಗಾರರು ತಮ್ಮ ತೋಳಿಗೆ ಕಪ್ಪು ಪಟ್ಟಿ ತೊಟ್ಟು ಕಣಕ್ಕಿಳಿದಿದ್ದಾರೆ. ಅಷ್ಟಕ್ಕೂ ಹೀಗೆ ಮಾಡಲು ಕಾರಣ ಏನು ಎನ್ನುವುದನ್ನು ನೋಡೋಣ ಬನ್ನಿ.
ಕಪ್ಪು ಪಟ್ಟಿ ತೊಟ್ಟು ಕಣಕ್ಕಿಳಿದ ಉಭಯ ಆಟಗಾರರು:
ಭಾರತ ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡದ ಆಟಗಾರರು ಲೀಡ್ಸ್ ಟೆಸ್ಟ್ ಪಂದ್ಯದ ವೇಳೆ ಕೈ ತೋಳಿಗೆ ಕಪ್ಪು ಪಟ್ಟಿ ತೊಟ್ಟು ಕಣಕ್ಕಿಳಿಯುವ ಮೂಲಕ ಗಮನ ಸೆಳೆದಿದ್ದಾರೆ. ಅಂದಹಾಗೆ ಜೂನ್ 12ರಂದು ಅಹಮದಾಬಾದ್‌ನ ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಟೇಕಾಪ್ ಆಗಿ ಕೆಲವೇ ಸೆಕೆಂಡ್‌ಗಳಲ್ಲಿ ಪತನಗೊಂಡಿತ್ತು. ಈ ದುರಂತದಲ್ಲಿ ಸುಮಾರು 250ಕ್ಕೂ ಹೆಚ್ಚು ಮಂದಿ ಕೊನೆಯುಸಿರೆಳೆದಿದ್ದರು.ಈ ದುರಂತದಲ್ಲಿ ಭಾರತೀಯರು ಮಾತ್ರವಲ್ಲದೇ ಇಂಗ್ಲೆಂಡ್ ನಾಗರೀಕರು ಸೇರಿದ್ದರು. ಈ ಘಟನೆಗೆ ಜಗತ್ತಿನಾದ್ಯಂತ ಸಂತಾಪ ವ್ಯಕ್ತವಾಗಿತ್ತು. ಈ ಘಟನೆಯ ಬಳಿಕ ಇದೇ ಮೊದಲ ಸಲ ಉಭಯ ದೇಶಗಳ ಆಟಗಾರರು ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿದ್ದು, ದುರಂತದಲ್ಲಿ ಮಡಿದ ಜೀವಗಳಿಗೆ ಗೌರವ ಹಾಗೂ ಸಂತಾಪ ಸೂಚಿಸುವ ಸಲುವಾಗಿ ಆಟಗಾರರು ಕಪ್ಪುಪಟ್ಟಿ ತೊಟ್ಟು ಕಣಕ್ಕಿಳಿದಿದ್ದಾರೆ.
ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಸಾಯಿ ಸುದರ್ಶನ್:
ಪ್ರಮುಖ ಮೂವರು ಆಟಗಾರರ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿರುವ ಟೀಂ ಇಂಡಿಯಾ ಮೇಲೆ ಸಾಕಷ್ಟು ಕುತೂಹಲವಿದೆ. ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾಗೆ ಈ ಇಂಗ್ಲೆಂಡ್ ಪ್ರವಾಸ ಸಾಕಷ್ಟು ಸವಾಲು ಆಗಿ ಪರಿಣಮಿಸುವ ಸಾಧ್ಯತೆಯಿದೆ. ಇನ್ನು ಇದೇ ಪಂದ್ಯದಲ್ಲಿ ತಮಿಳುನಾಡು ಮೂಲದ ಎಡಗೈ ಬ್ಯಾಟರ್ ಸಾಯಿ ಸುದರ್ಶನ್, ಭಾರತ ಟೆಸ್ಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ದೇಶಿ ಹಾಗೂ ಐಪಿಎಲ್‌ನಲ್ಲಿ ಕಳೆದ ಕೆಲ ವರ್ಷಗಳಿಂದ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರುವ ಸಾಯಿ ಸುದರ್ಶನ್, ಕಳೆದ ವರ್ಷ ದಕ್ಷಿಣ ಆಫ್ರಿಕಾ ಎದುರು ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇನ್ನು 2025ರ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಪ್ರತಿನಿಧಿಸಿದ್ದ ಸಾಯಿ ಸುದರ್ಶನ್ 759 ರನ್ ಸಿಡಿಸುವ ಮೂಲಕ ಆರೆಂಜ್ ಕ್ಯಾಪ್ ಜಯಿಸುವಲ್ಲಿ ಯಶಸ್ವಿಯಾಗಿದ್ದರು.
ಇಂಗ್ಲೆಂಡ್ ಎದುರು ಟೀಂ ಇಂಡಿಯಾ ದಿಟ್ಟ ಆರಂಭ:
ಇನ್ನು ಇಂಗ್ಲೆಂಡ್ ಎದುರು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ, ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾಗಿದೆ. 20 ಓವರ್ ಅಂತ್ಯದ ವೇಳೆಗೆ ಟೀಂ ಇಂಡಿಯಾ ವಿಕೆಟ್ ನಷ್ಟವಿಲ್ಲದೇ 68 ರನ್ ಕಲೆಹಾಕಿದೆ. ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ 58 ಎಸೆತಗಳನ್ನು ಎದುರಿಸಿ 6 ಬೌಂಡರಿ ಸಹಿತ 31 ರನ್ ಗಳಿಸಿದ್ದಾರೆ. ಮತ್ತೊಂದು ತುದಿಯಲ್ಲಿ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಆರಂಭಿಕನಾಗಿ ಬಡ್ತಿ ಪಡೆದಿರುವ ಕೆ ಎಲ್ ರಾಹುಲ್ ಅಜೇಯ 34 ರನ್ ಸಿಡಿಸಿದ್ದಾರೆ.
