ಐರ್ಲೆಂಡ್‌ ವಿರುದ್ಧದ ಸೋಲಿನ ನಂತರ, ಶ್ರೇಯಸ್‌ ಅಯ್ಯರ್‌ ನಾಯಕತ್ವದ ಭಾರತ ತಂಡವು ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟಿ20 ಸರಣಿಗೆ ಸಜ್ಜಾಗಿದೆ. ಈ ಸರಣಿಯಲ್ಲಿ 15 ವರ್ಷದ ಯುವ ಆಟಗಾರ ವೈಭವ್‌ ಸೂರ್ಯವಂಶಿ ಪಾದಾರ್ಪಣೆ ಮಾಡುವ ನಿರೀಕ್ಷೆಯಿದ್ದು, ಹ್ಯಾರಿ ಬ್ರೂಕ್‌ ನೇತೃತ್ವದ ಇಂಗ್ಲೆಂಡ್ ತಂಡದಿಂದ ಕಠಿಣ ಸವಾಲು ಎದುರಾಗಲಿದೆ.

ಚೆಸ್ಟರ್‌-ಲೆ-ಸ್ಟ್ರೀಟ್‌(ಇಂಗ್ಲೆಂಡ್‌): ಇತ್ತೀಚೆಗಷ್ಟೇ ಐರ್ಲೆಂಡ್‌ ವಿರುದ್ಧ 2 ಪಂದ್ಯಗಳ ಟಿ20 ಸರಣಿಯಲ್ಲಿ ವೈಟ್‌ವಾಶ್‌ ಮುಖಭಂಗಕ್ಕೆ ಒಳಗಾಗಿದ್ದ ಹಾಲಿ ಟಿ20 ವಿಶ್ವ ಚಾಂಪಿಯನ್‌ ಭಾರತ ತಂಡ ಈಗ ಇಂಗ್ಲೆಂಡ್ ವಿರುದ್ಧ ಸರಣಿಗೆ ಸಜ್ಜಾಗಿದೆ. ಉಭಯ ತಂಡಗಳ ನಡುವಿನ 5 ಪಂದ್ಯಗಳ ಟಿ20 ಸರಣಿ ಬುಧವಾರ ಆರಂಭಗೊಳ್ಳಲಿದೆ.

ಐರ್ಲೆಂಡ್‌ನಲ್ಲಿ ಆಡಿದ ಅನುಭವವಿಲ್ಲದ ಭಾರತ ತಂಡ, ಸರಣಿಯಲ್ಲಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿತ್ತು. ಆದರೆ ಇಂಗ್ಲೆಂಡ್‌ನಲ್ಲಿ ಆಡಿದ ಅನುಭವವಿರುವ ಟೀಂ ಇಂಡಿಯಾ, ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ತಂಡವನ್ನು ಶ್ರೇಯಸ್‌ ಅಯ್ಯರ್‌ ಮುನ್ನಡೆಸಲಿದ್ದಾರೆ.

ವೈಭವ್‌ ಸೂರ್ಯವಂಶಿ ಪಾದಾರ್ಪಣೆ?:

ಐರ್ಲೆಂಡ್‌ ಸರಣಿಗೂ ಮುನ್ನ 15 ವರ್ಷದ ವೈಭವ್‌ ಸೂರ್ಯವಂಶಿ ಅಂತಾರಾಷ್ಟ್ರೀಯ ಪಾದಾರ್ಪಣೆ ಬಗ್ಗೆ ಭಾರೀ ಚರ್ಚೆಯಾಗಿತ್ತು. ಆದರೆ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಇಂಗ್ಲೆಂಡ್‌ ಸರಣಿಯಲ್ಲಿ 5 ಪಂದ್ಯಗಳಿರುವುದರಿಂದ ಅವರು ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಆದರೆ ಅವರಿಗೆ ಯಾರು ಜಾಗ ಬಿಟ್ಟುಕೊಡಬೇಕಾಗಬಹುದು ಎಂಬುದೇ ಸದ್ಯದ ಕುತೂಹಲ. 

ಅಭಿಷೇಕ್‌ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಆರಂಭಿಕರಾಗಿ ಆಡುತ್ತಿದ್ದು, ಇವರಿಬ್ಬರ ಪೈಕಿ ಒಬ್ಬರು ವೈಭವ್‌ಗೆ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ. ಇನ್ನು, ಇಶಾನ್‌ ಕಿಶನ್‌ ಐರ್ಲೆಂಡ್‌ ಸರಣಿಯಲ್ಲಿ ವಿಫಲರಾಗಿದ್ದರು. ವೈಭವ್‌ರನ್ನು ಆರಂಭಿಕನಾಗಿ ಆಡಿಸಿ, ಸ್ಯಾಮ್ಸನ್‌ರನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಸಿದರೂ ಅಚ್ಚರಿಯಿಲ್ಲ. ಉಳಿದಂತೆ ತಂಡದಲ್ಲಿ ತಿಲಕ್‌ ವರ್ಮಾ, ಶಿವಂ ದುಬೆ, ಅಕ್ಷರ್‌ ಪಟೇಲ್, ರವಿ ಬಿಷ್ಣೋಯ್‌, ಹರ್ಷಿತ್‌ ರಾಣಾ ಕೂಡಾ ಇದ್ದಾರೆ.

ಮತ್ತೊಂದೆಡೆ ಹ್ಯಾರಿ ಬ್ರೂಕ್‌ ನಾಯಕತ್ವದ ಇಂಗ್ಲೆಂಡ್‌ ತಂಡ ಇತ್ತೀಚೆಗಷ್ಟೇ ತವರಿನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಟೆಸ್ಟ್‌ ಸರಣಿ ಸೋತಿತ್ತು. ಈಗ ತಂಡ ಭಾರತದ ಸವಾಲು ಎದುರಿಸಲಿದೆ. ತಂಡದಲ್ಲಿ ಫಿಲ್‌ ಸಾಲ್ಟ್‌, ಸ್ಯಾಮ್‌ ಕರನ್‌, ಲಿವಿಂಗ್‌ಸ್ಟೋನ್‌, ಜೋಸ್‌ ಬಟ್ಲರ್‌, ಜೇಕಬ್‌ ಬೆಥೆಲ್‌ ಸೇರಿದಂತೆ ಪ್ರಮುಖ ಆಟಗಾರರಿದ್ದಾರೆ.

ಉಭಯ ತಂಡಗಳ ಸಂಭಾವ್ಯ ಆಟಗಾರರ ಪಟ್ಟಿ

ಭಾರತ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್/ವೈಭವ್ ಸೂರ್ಯವಂಶಿ, ಇಶಾನ್ ಕಿಶನ್(ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್(ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಅರ್ಶದೀಪ್ ಸಿಂಗ್, ಪ್ರಿನ್ಸ್ ಯಾದವ್, ರವಿ ಬಿಷ್ಣೋಯ್‌.

ಇಂಗ್ಲೆಂಡ್: ಫಿಲ್ ಸಾಲ್ಟ್, ಜೋಸ್ ಬಟ್ಲರ್(ವಿಕೆಟ್ ಕೀಪರ್), ಹ್ಯಾರಿ ಬ್ರೂಕ್(ನಾಯಕ), ಜೇಕಬ್ ಬೆಥೆಲ್, ಟಾಮ್ ಬಾಂಟನ್, ಸ್ಯಾಮ್ ಕರ್ರನ್, ವಿಲ್ ಜ್ಯಾಕ್ಸ್, ಲಿಯಾಮ್ ಡಾಸನ್, ಆದಿಲ್ ರಶೀದ್, ಲೂಕ್ ವುಡ್, ಸಾಕಿಬ್ ಮೊಹಮ್ಮದ್.

ಪಂದ್ಯ ಆರಂಭ: ರಾತ್ರಿ 10 ಗಂಟೆಗೆ

ನೇರಪ್ರಸಾರ: ಸೋನಿ ಸ್ಪೋರ್ಟ್ಸ್‌, ಸೋನಿ ಲೈವ್‌