Asianet Suvarna News Asianet Suvarna News

ಕೋಲ್ಕತಾದಲ್ಲಿ ಮೊದಲ ಹಗ​ಲು-ರಾತ್ರಿ ಟೆಸ್ಟ್‌?

ಬಾಂಗ್ಲಾ​ದೇಶ ವಿರುದ್ಧ ಹಗ​ಲು-ರಾತ್ರಿ ಟೆಸ್ಟ್‌ ಆಯೋ​ಜ​ನೆಗೆ ಗಂಗೂಲಿ ಒಲವು! ಬಾಂಗ್ಲಾ ಕ್ರಿಕೆಟ್‌ ಮಂಡ​ಳಿಗೆ ಮನವಿ ಸಲ್ಲಿ​ಸಿದ ಬಿಸಿ​ಸಿಐ! ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಸಿದ್ಧತೆ ಆರಂಭ!

India vs bangladesh kolkata test likely to play day night
Author
Bengaluru, First Published Oct 29, 2019, 10:08 AM IST

ನವ​ದೆ​ಹ​ಲಿ(ಅ.29): ಭಾರತ ಕ್ರಿಕೆಟ್‌ ತಂಡ ಹಗಲು-ರಾತ್ರಿ ಟೆಸ್ಟ್‌ ಪಂದ್ಯ​ವನ್ನು ಆಡು​ವ ದಿನ ಹತ್ತಿರವಾಗಿದೆ. ಬಿಸಿ​ಸಿಐ ಅಧ್ಯಕ್ಷ ಗುದ್ದು​ಗೇ​ರು​ತ್ತಿ​ದ್ದಂತೆ ಸೌರವ್‌ ಗಂಗೂಲಿ, ಟೆಸ್ಟ್‌ ಕ್ರಿಕೆಟ್‌ ಜನ​ಪ್ರಿಯಗೊಳಿ​ಸಲು ಕ್ರಮಕ್ಕೆ ಮುಂದಾ​ಗಿ​ದ್ದಾರೆ. ಬಾಂಗ್ಲಾದೇಶ ತಂಡ ಮುಂದಿನ ತಿಂಗಳು ಭಾರತ ಪ್ರವಾಸ ಕೈಗೊ​ಳ್ಳ​ಲಿದ್ದು, ಆ ವೇಳೆ ಹಗ​ಲು-ರಾತ್ರಿ ಟೆಸ್ಟ್‌ ಆಯೋ​ಜನೆಗೆ ಬಿಸಿ​ಸಿಐ ಸಿದ್ಧತೆ ಆರಂಭಿ​ಸಿದೆ. ಕೋಲ್ಕ​ತಾದ ಈಡನ್‌ ಗಾರ್ಡನ್ಸ್‌ ಮೈದಾ​ನ​ದಲ್ಲಿ ನ.22ರಿಂದ ನಡೆ​ಯ​ಲಿ​ರುವ 2ನೇ ಟೆಸ್ಟ್‌ ಪಂದ್ಯ​ವನ್ನು ಹಗ​ಲು-ರಾತ್ರಿ ಮಾದ​ರಿ​ಯಲ್ಲಿ ನಡೆ​ಸಲು ಬಿಸಿ​ಸಿಐ ಆಸ​ಕ್ತಿ ತೋರಿದ್ದು, ಬಾಂಗ್ಲಾ​ದೇಶ ಕ್ರಿಕೆಟ್‌ ಮಂಡ​ಳಿ (ಬಿ​ಸಿ​ಬಿ​)ಗೆ ತಮ್ಮ ಪ್ರಸ್ತಾಪ ಒಪ್ಪಿ​ಕೊ​ಳ್ಳು​ವಂತೆ ಮನವಿ ಸಲ್ಲಿ​ಸಿದೆ.

ಇದನ್ನೂ ಓದಿ: ಭಾರತ vs ಬಾಂಗ್ಲಾದೇಶ ಸರಣಿ; ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ!

ದ್ವಿಪ​ಕ್ಷೀಯ ಸರ​ಣಿ​ ವೇಳೆ ಹಗ​ಲು-ರಾತ್ರಿ ಪಂದ್ಯ ಆಯೋ​ಜನೆ ವಿಚಾರ ಆತಿ​ಥೇಯ ಕ್ರಿಕೆಟ್‌ ಮಂಡಳಿಗೆ ಬಿಟ್ಟಿದ್ದು. ಪ್ರವಾಸಿ ತಂಡ ಒಪ್ಪಿ​ಕೊಂಡರೆ ಪಂದ್ಯ ಆಯೋ​ಜಿ​ಸಲು ಐಸಿಸಿ ಅನು​ಮ​ತಿ ನೀಡಿದೆ. ಹೀಗಾಗಿ ಒಂದೊಮ್ಮೆ ಬಿಸಿಬಿ ಒಪ್ಪಿಗೆ ಸೂಚಿ​ಸಿ​ದರೆ, ಭಾರತದಲ್ಲಿ ಮೊದಲ ಬಾರಿಗೆ ಹಗ​ಲು-ರಾತ್ರಿ ಟೆಸ್ಟ್‌ ಪಂದ್ಯ ನಡೆ​ಯ​ಲಿದೆ. ಟೀಂ ಇಂಡಿಯಾ ಇದು​ವ​ರೆಗೂ ಹಗ​ಲು-ರಾತ್ರಿ ಟೆಸ್ಟ್‌ ಆಡಿಲ್ಲ.

ಇದನ್ನೂ ಓದಿ: ಭಾರತ vs ಬಾಂಗ್ಲಾ ಟಿ20; ಮೊದಲ ಪಂದ್ಯಕ್ಕೆ ಧೂಳಿನ ಸಮಸ್ಯೆ!

ಬಿಸಿಬಿ ಒಪ್ಪಿಗೆಗೆ ಕಾಯು​ತ್ತಿದೆ ಬಿಸಿ​ಸಿಐ
ಬಿಸಿ​ಸಿಐನಿಂದ ಮನವಿ ಬಂದಿ​ರು​ವು​ದಾಗಿ ಸ್ಪಷ್ಟ​ಪ​ಡಿ​ಸಿ​ರುವ ಬಾಂಗ್ಲಾ​ದೇಶ ಕ್ರಿಕೆಟ್‌ ಮಂಡಳಿ ಸಿಇಒ ನಿಜಾ​ಮುದ್ದಿನ್‌ ಚೌಧರಿ, ‘ಈ ಬಗ್ಗೆ ಚರ್ಚಿ​ಸು​ತ್ತಿ​ದ್ದೇವೆ. ಆದರೆ ಇನ್ನೂ ಯಾವ ನಿರ್ಧಾರವನ್ನೂ ತೆಗೆ​ದು​ಕೊಂಡಿಲ್ಲ. ಆಟ​ಗಾ​ರರು ಹಾಗೂ ಕೋಚ್‌ಗಳನ್ನು ಸಂಪ​ರ್ಕಿಸಿ ಅವ​ರೊಂದಿಗೆ ಮಾತು​ಕತೆ ನಡೆ​ಸಿದ ಬಳಿಕ ನಿರ್ಧಾರ ಪ್ರಕ​ಟಿ​ಸು​ತ್ತೇವೆ’ ಎಂದಿ​ದ್ದಾರೆ. ಬಿಸಿಬಿ ಅಧಿ​ಕೃತ ನಿರ್ಧಾರ ಪ್ರಕ​ಟಿ​ಸಲು ಸಮಯ ಕೇಳಿ​ದ್ದರೂ, ಕೋಲ್ಕ​ತಾ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಸಿದ್ಧ​ತೆ ಆರಂಭ​ವಾ​ಗಿದೆ ಎಂದು ಮಾಧ್ಯ​ಮ​ವೊಂದು ವರದಿ ಮಾಡಿದೆ. ಕ್ರೀಡಾಂಗ​ಣದ ಮುಖ್ಯ ಕ್ಯುರೇ​ಟರ್‌ ಸುಜನ್‌ ಮುಖರ್ಜಿ, ಆಯೋ​ಜ​ಕರು ಹಗ​ಲು-ರಾತ್ರಿ ಪಂದ್ಯವೆಂದು ಖಚಿತ ಪಡಿ​ಸಿ​ದ್ದಾ​ರೆಂದು ತಿಳಿ​ಸಿ​ದ್ದಾರೆ. ‘ಅಂತಿಮ ನಿರ್ಧಾರ ಪ್ರಕಟವಾಗ​ಲೆಂದು ಕಾಯುತ್ತಿದ್ದೇವೆ. ಆದರೆ ಹಗ​ಲು-ರಾತ್ರಿ ಪಂದ್ಯ ನಡೆ​ಯ​ಲಿದೆ ಎನ್ನುವ ನಂಬಿಕೆ ಇದೆ. ಇದ​ಕ್ಕಾಗಿ ವಿಶೇಷವಾಗೇನೂ ಪಿಚ್‌ ತಯಾ​ರಿ​ಸುತ್ತಿಲ್ಲ. ಸ್ಪರ್ಧಾ​ತ್ಮಕ ಪಿಚ್‌ ಸಿದ್ಧ​ಗೊ​ಳಿ​ಸ​ಲಿದ್ದು, ಹೆಚ್ಚಿನ ವೇಗ ಹೊಂದಿ​ರ​ಲಿದೆ’ ಎಂದು ಮುಖರ್ಜಿ ಹೇಳಿ​ದ್ದಾರೆ.

ಇದನ್ನೂ ಓದಿ: ಭಾಂಗ್ಲಾದೇಶ ವಿರುದ್ಧದ ಸರಣಿಗೆ ಭಾರತ ತಂಡ, ಯಾರಿಗೆ ಅವಕಾಶ, ಯಾರಿಗೆ ಕೊಕ್!

ಪಿಂಕ್‌ ಬಾಲ್‌ ಬಳಕೆ
ಹಗಲು-ರಾತ್ರಿ ಟೆಸ್ಟ್‌ ಪಂದ್ಯಕ್ಕೆ ಸಾಂಪ್ರ​ದಾ​ಯಿಕ ಕೆಂಪು ಚೆಂಡಿನ ಬದ​ಲಿಗೆ ಗುಲಾಬಿ (ಪಿಂಕ್‌) ಬಣ್ಣದ ಚೆಂಡನ್ನು ಬಳಕೆ ಮಾಡ​ಲಾ​ಗುತ್ತದೆ. ಆಸ್ಪ್ರೇ​ಲಿಯಾ, ಇಂಗ್ಲೆಂಡ್‌, ನ್ಯೂಜಿ​ಲೆಂಡ್‌ ಸೇರಿ​ದಂತೆ ಪ್ರಮುಖ ತಂಡಗಳು ಈಗಾ​ಗಲೇ ಹಗ​ಲು-ರಾತ್ರಿ ಟೆಸ್ಟ್‌ ಪಂದ್ಯಗಳನ್ನು ಆಡಿವೆ. ಸೌರ​ವ್‌ ಗಂಗೂಲಿ ಬಿಸಿ​ಸಿಐ ತಾಂತ್ರಿಕ ಸಮಿ​ತಿಯ ಮುಖ್ಯಸ್ಥರಾಗಿ​ದ್ದಾ​ಗಲೂ ಪಿಂಕ್‌ ಬಾಲ್‌ ಬಳಕೆಗೆ ಒತ್ತು ನೀಡಿ​ದ್ದರು. ಅವರ ಸಲಹೆ ಮೇರೆಗೆ 2016ರ ದುಲೀಪ್‌ ಟ್ರೋಫಿ​ಯನ್ನು ಹಗ​ಲು-ರಾತ್ರಿ ಮಾದ​ರಿ​ಯಲ್ಲಿ ನಡೆ​ಸ​ಲಾ​ಗಿತ್ತು. ಪಂದ್ಯ​ಗ​ಳಿ​ಗೆ ಬಳಕೆಯಾಗಿ​ದ್ದ ಎಸ್‌ಜಿ ಪಿಂಕ್‌ ಚೆಂಡಿನ ಗುಣ​ಮ​ಟ್ಟದ ಬಗ್ಗೆ ಆಟ​ಗಾ​ರರು ಅಸ​ಮಾ​ಧಾನ ವ್ಯಕ್ತ​ಪ​ಡಿ​ಸಿ​ದ್ದರು. ಈ ಋುತು​ವಿ​ನಲ್ಲೂ ದುಲೀಪ್‌ ಟ್ರೋಫಿ ಪಂದ್ಯ​ಗ​ಳನ್ನು ಹಗ​ಲು-ರಾತ್ರಿ ಮಾದರಿಯಲ್ಲಿ ನಡೆ​ಸಲು ನಿರ್ಧ​ರಿ​ಸ​ಲಾ​ಗಿತ್ತು. ಆದರೆ ಕೊನೆ ಕ್ಷಣದಲ್ಲಿ ಬಿಸಿ​ಸಿಐ ಮನಸು ಬದ​ಲಿ​ಸಿತ್ತು.

ಬಾಂಗ್ಲಾ​ದೇಶ ತಂಡಕ್ಕೂ ಪಿಂಕ್‌ ಬಾಲ್‌ನಲ್ಲಿ ಆಡಿದ ಅನು​ಭ​ವ​ವಿಲ್ಲ. 2013ರಲ್ಲಿ ಬಾಂಗ್ಲಾ​ದೇಶ ಕ್ರಿಕೆಟ್‌ ಲೀಗ್‌ನ ಫೈನಲ್‌ ಪಂದ್ಯ​ದಲ್ಲಿ ಬಳಕೆ ಮಾಡ​ಲಾ​ಗಿತ್ತು. ಹೀಗಾಗಿ ಬಾಂಗ್ಲಾ​ ಆಟ​ಗಾ​ರರು ಹಿಂದೇಟು ಹಾಕುವ ಸಾಧ್ಯತೆ ಇದೆ. ಆದ​ರೆ ಪಂದ್ಯ ವೀಕ್ಷಣೆಗೆ ಬಾಂಗ್ಲಾ ಪ್ರಧಾನಿ ಆಗ​ಮಿ​ಸ​ಲಿ​ದ್ದಾರೆ ಎಂದು ಖಚಿತ ಪಡಿ​ಸಿ​ರುವ ಗಂಗೂಲಿ, ಬಾಂಗ್ಲಾ ಕ್ರಿಕೆಟ್‌ ಮಂಡ​ಳಿ​ಯನ್ನೂ ಒಪ್ಪಿ​ಸ​ಲಿ​ದ್ದಾರೆ ಎಂದು ಬಿಸಿ​ಸಿಐ ಮೂಲ​ಗಳು ತಿಳಿ​ಸಿವೆ.

ಮಾಲಿ​ನ್ಯದ ನಡುವೆಯೇ ದಿಲ್ಲಿ​ಯಲ್ಲಿ ಮೊದಲ ಟಿ20!
ಧೂಳು, ವಾಯು ಮಾಲಿ​ನ್ಯದ ಹೊರ​ತಾ​ಗಿಯೂ ನವ​ದೆ​ಹಲಿಯ ಫಿರೋಜ್‌ ಶಾ ಕೋಟ್ಲಾ ಮೈದಾ​ನ​ದಲ್ಲಿ ನ.3ರಂದು ಭಾರತ-ಬಾಂಗ್ಲಾ​ದೇಶ ಮೊದಲ ಟಿ20 ಪಂದ್ಯ ನಡೆ​ಯ​ಲಿದೆ ಎಂದು ಬಿಸಿ​ಸಿಐ ಮೂಲ​ಗಳು ಸ್ಪಷ್ಟ​ಪ​ಡಿ​ಸಿವೆ. ದೀಪಾ​ವಳಿ ಪಟಾಕಿಯಿಂದಾಗಿ ವಾಯು ಮಾಲಿನ್ಯ ಪ್ರಮಾಣ ಹೆಚ್ಚಾ​ಗಿದ್ದು, ಮೂರ್ನಾಲ್ಕು ದಿನ​ಗ​ಳಲ್ಲಿ ಕಡಿಮೆಯಾಗ​ಲಿದೆ. ಪಂದ್ಯ ನಡೆ​ಯುವ ದಿನದಂದು ಯಾವುದೇ ಸಮಸ್ಯೆ ಇರು​ವು​ದಿಲ್ಲ ಎಂದು ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿ ದೃಢಪಡಿ​ಸಿದ ಬಳಿ​ಕ​ವಷ್ಟೇ ಪಂದ್ಯ ಆಯೋ​ಜನೆಗೆ ನಿರ್ಧ​ರಿ​ಸ​ಲಾ​ಯಿತು. ಪೂರ್ವ ನಿಗ​ದಿ​ಯಂತೆ ಪಂದ್ಯ ನಡೆ​ಯ​ಲಿದೆ ಎಂದು ಬಿಸಿ​ಸಿಐ ಅಧಿ​ಕಾ​ರಿಯೊಬ್ಬರು ಸ್ಪಷ್ಟ​ಪ​ಡಿ​ಸಿ​ದ್ದಾರೆ.

Follow Us:
Download App:
  • android
  • ios