Asianet Suvarna News Asianet Suvarna News

Ind vs Aus ರಾಹುಲ್‌ ದ್ರಾವಿಡ್ ಐತಿಹಾಸಿಕ ದಾಖಲೆ ಅಳಿಸಿ ಹಾಕಲು ಕೊಹ್ಲಿಗೆ ಬೇಕಿದೆ ಕೇವಲ 207 ರನ್‌..!

* ಭಾರತ-ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಗೆ ಕ್ಷಣಗಣನೆ
* ಆಸೀಸ್ ಎದುರಿನ ಸರಣಿಯಲ್ಲಿಯೇ ಹೊಸ ಮೈಲಿಗಲ್ಲು ನೆಡಲು ಸಜ್ಜಾದ ಕೊಹ್ಲಿ
* 207 ರನ್ ಬಾರಿಸಿದರೆ ರಾಹುಲ್ ದ್ರಾವಿಡ್ ದಾಖಲೆ ದೂಳೀಪಟ

India vs Australia Virat Kohli 207 Runs Away From Surpassing Rahul Dravid unique record kvn
Author
First Published Sep 20, 2022, 3:55 PM IST

ಮೊಹಾಲಿ(ಸೆ.20): ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಬರೋಬ್ಬರಿ ಎರಡೂವರೆ ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಲು ಯಶಸ್ವಿಯಾಗಿದ್ದರು. ಯುಎಇನಲ್ಲಿ ನಡೆದ ಏಷ್ಯಾಕಪ್‌ ಟೂರ್ನಿಯಲ್ಲಿ ಆಫ್ಘಾನಿಸ್ತಾನ ಎದುರು ವಿರಾಟ್ ಕೊಹ್ಲಿ ಶತಕ ಸಿಡಿಸಿ ಘರ್ಜಿಸಿದ್ದರು. ಇದಷ್ಟೇ ಅಲ್ಲದೇ ಟೂರ್ನಿಯಲ್ಲಿ 276 ರನ್ ಬಾರಿಸುವ ಮೂಲಕ ಎರಡನೇ ಗರಿಷ್ಠ ಸ್ಕೋರರ್ ಎನಿಸಿಕೊಂಡು, ಏಷ್ಯಾಕಪ್ ಟೂರ್ನಿಯನ್ನು ಸ್ಮರಣೀಯವಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಇಂದಿನಿಂದ ತವರಿನಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ದದ ಸರಣಿಯಲ್ಲೂ ವಿರಾಟ್ ಕೊಹ್ಲಿ ತಮ್ಮ ಲಯ ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದ್ದಾರೆ.

ಹೌದು, ಮೊಹಾಲಿಯಲ್ಲಿಂದು ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಆರಂಭವಾಗಲಿದೆ. ಈ ಸರಣಿಯಲ್ಲಿಯೇ, ಮಾಜಿ ನಾಯಕ ವಿರಾಟ್ ಕೊಹ್ಲಿ, ಕ್ರಿಕೆಟ್ ದಿಗ್ಗಜ ಹಾಗೂ ಟೀಂ ಇಂಡಿಯಾ ಹಾಲಿ ಕೋಚ್ ರಾಹುಲ್ ದ್ರಾವಿಡ್ ಅವರ ಹೆಸರಿನಲ್ಲಿರುವ ಅಪರೂಪದ ದಾಖಲೆಯನ್ನು ಅಳಿಸಿಹಾಕಲು  ಸಜ್ಜಾಗಿದ್ದಾರೆ. ವಿರಾಟ್ ಕೊಹ್ಲಿ ಇನ್ನು ಕೇವಲ 207 ರನ್ ಗಳಿಸಿದರೆ, ರಾಹುಲ್ ದ್ರಾವಿಡ್‌ ಹೆಸರಿನಲ್ಲಿದ್ದ ದಾಖಲೆ ದೂಳಿಪಟವಾಗಲಿದೆ. ಸದ್ಯ ರಾಹುಲ್ ದ್ರಾವಿಡ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಪರ ಎರಡನೇ ಹಾಗೂ ಒಟ್ಟಾರೆ ಆರನೇ ಗರಿಷ್ಠ ರನ್‌ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇನ್ನು ಕೊಹ್ಲಿ 207 ರನ್ ಬಾರಿಸಿದರೆ, ಆ ದಾಖಲೆ ಕೊಹ್ಲಿ ಪಾಲಾಗಲಿದೆ.

Ind vs Aus ಇಂದಿನಿಂದ ಭಾರತ-ಆಸೀಸ್ ಟಿ20 ಕದನ; ಹೈವೋಲ್ಟೇಜ್‌ ಕದನಕ್ಕೆ ಕ್ಷಣಗಣನೆ

ದ ವಾಲ್ ಖ್ಯಾತಿಯ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್, ಸದ್ಯ 509 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿ 605 ಇನಿಂಗ್ಸ್‌ಗಳಿಂದ 45.41ರ ಬ್ಯಾಟಿಂಗ್ ಸರಾಸರಿಯಲ್ಲಿ 48 ಶತಕ ಹಾಗೂ 146 ಅರ್ಧಶತಕಗಳ ನೆರವಿನಿಂದ 24,208 ರನ್‌ ಬಾರಿಸಿದ್ದಾರೆ. ಇನ್ನು ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಇದುವರೆಗೂ 478 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿ 20,002 ರನ್ ಬಾರಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 12,344 ರನ್ ಹಾಗೂ ಟೆಸ್ಟ್‌ ಕ್ರಿಕೆಟ್‌ನಲ್ಲಿ 8,074 ಹಾಗೂ ಟಿ20 ಕ್ರಿಕೆಟ್‌ನಲ್ಲಿ 3,584 ರನ್‌ ಗಳನ್ನು ಬಾರಿಸಿದ್ದಾರೆ.

ಆಧುನಿಕ ಕ್ರಿಕೆಟ್‌ನ ಸೂಪರ್ ಸ್ಟಾರ್ ಬ್ಯಾಟರ್ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ, 2019ರ ನವೆಂಬರ್‌ನಲ್ಲಿ ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ದ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ಇದಾದ ಬಳಿಕ 1020 ದಿನಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೂರಂಕಿ ಮೊತ್ತ ದಾಖಲಿಸಲು ವಿಫಲವಾಗಿದ್ದರು. ಆದರೆ ಏಷ್ಯಾಕಪ್ ಟೂರ್ನಿಯ ಆಫ್ಘಾನಿಸ್ತಾನ ವಿರುದ್ದದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಜೇಯ 122 ರನ್ ಚಚ್ಚುವ ಮೂಲಕ ವೃತ್ತಿಜೀವನ 71ನೇ ಅಂತಾರಾಷ್ಟ್ರೀಯ ಶತಕ ಹಾಗೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಮೊದಲ ಶತಕ ಸಿಡಿಸಿ ಭರ್ಜರಿಯಾಗಿಯೇ ಫಾರ್ಮ್‌ಗೆ ಮರಳಿದ್ದರು.

ಅಕ್ಟೋಬರ್ 16ರಿಂದ ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಪೂರ್ವಭಾವಿ ತಯಾರಿ ಎನಿಸಿರುವ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಟಿ20 ಸರಣಿಯಲ್ಲಿ ವಿರಾಟ್ ಕೊಹ್ಲಿ ತಮ್ಮ ಭರ್ಜರಿ ಫಾರ್ಮ್‌ ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದ್ದಾರೆ.

Follow Us:
Download App:
  • android
  • ios