* ಭಾರತ-ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಇಂದಿನಿಂದ ಆರಂಭ* ಮೊದಲ ಹೈವೋಲ್ಟೇಜ್ ಪಂದ್ಯಕ್ಕೆ ಮೊಹಾಲಿಯ ಮೈದಾನ ಆತಿಥ್ಯ* ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಗೆಲುವಿನ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಉಭಯ ತಂಡಗಳು ಕಾತರ

ಮೊಹಾಲಿ(ಸೆ.20): ಏಷ್ಯಾ ಕಪ್‌ ಟಿ20 ಟೂರ್ನಿಯ ಸೋಲಿನಿಂದ ಕುಗ್ಗಿ ಹೋಗಿರುವ ಟೀಂ ಇಂಡಿಯಾಕ್ಕೆ ಮುಂಬರುವ ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಗೆಲುವಿನ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಅವಕಾಶವಿದ್ದು, 2 ಮಹತ್ವದ ಟಿ20 ಸರಣಿಗಳಲ್ಲಿ ಅಡಲಿದೆ. ಈ ಪೈಕಿ ಆಸ್ಪ್ರೇಲಿಯಾ ವಿರುದ್ಧದ ತವರಿನ 3 ಪಂದ್ಯಗಳ ಟಿ20 ಸರಣಿ ಮಂಗಳವಾರ ಆರಂಭವಾಗಲಿದ್ದು, ಮೊಹಾಲಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಇತ್ತೀಚಿನ ವರ್ಷಗಳಲ್ಲಿ ಭಾರತ ದ್ವಿಪಕ್ಷೀಯ ಸರಣಿಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದರೂ ಐಸಿಸಿ ಟೂರ್ನಿಗಳಲ್ಲಿ ಪ್ರಶಸ್ತಿ ಗೆಲ್ಲಲು ವಿಫಲವಾಗುತ್ತಿದೆ. ಈ ಬಾರಿ ಹೇಗಾದರೂ ವಿಶ್ವಕಪ್‌ ಗೆಲ್ಲಲೇಬೇಕೆಂದು ಪಣತೊಟ್ಟಿರುವ ರೋಹಿತ್‌ ಶರ್ಮಾ ಬಳಗಕ್ಕೆ ಆಸೀಸ್‌ ಸರಣಿ ಪ್ರಮುಖ ವೇದಿಕೆಯಾಗಲಿದೆ. ಸರಣಿಯಲ್ಲಿ ಯಾವುದೇ ಪ್ರಯೋಗಕ್ಕೆ ಕೈ ಹಾಕಲ್ಲ ಎಂದು ಸ್ವತಃ ರೋಹಿತ್‌ ಸ್ಪಷ್ಟಪಡಿಸಿದ್ದು, ಅವರ ಜೊತೆ ಕೆ.ಎಲ್‌.ರಾಹುಲ್‌ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ ಎಂದಿದ್ದಾರೆ. ಲಯಕ್ಕೆ ಮರಳಿರುವ ವಿರಾಟ್‌ ಕೊಹ್ಲಿ 3ನೇ ಕ್ರಮಾಂಕದಲ್ಲಿ ಆಡಲಿದ್ದು, ಸೂರ್ಯಕುಮಾರ್‌ ಯಾದವ್‌, ದೀಪಕ್‌ ಹೂಡಾ, ರಿಷಭ್‌ ಪಂತ್‌ ಹಾಗೂ ದಿನೇಶ್‌ ಕಾರ್ತಿಕ್‌ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ ವಿಭಾಗಕ್ಕೆ ಬಲ ತುಂಬಲಿದ್ದಾರೆ. ಆಲ್ರೌಂಡರ್‌ ವಿಭಾಗದಲ್ಲಿ ಅಬ್ಬರಿಸಲು ಹಾರ್ದಿಕ್‌ ಪಾಂಡ್ಯ ಕಾತರಿಸುತ್ತಿದ್ದು, ಜಡೇಜಾ ಅನುಪಸ್ಥಿತಿಯಲ್ಲಿ ಅಕ್ಷರ್‌ ಪಟೇಲ್‌ಗೆ ತಂಡದಲ್ಲಿ ಸ್ಥಾನ ಸಿಗಬಹುದು.

ಅನುಭವಿ ಜಸ್‌ಪ್ರೀತ್‌ ಬುಮ್ರಾ, ಭುವನೇಶ್ವರ್‌ ಕುಮಾರ್‌ ಜೊತೆ ದೀಪಕ್‌ ಚಹರ್‌, ಹರ್ಷಲ್‌ ಪಟೇಲ್‌ ಆಡುವ ಹನ್ನೊಂದರಲ್ಲಿ ಕಾಣಿಸಿಕೊಳ್ಳಬಹುದು. ಮೊಹಮದ್‌ ಶಮಿ ಬದಲು ತಂಡಕ್ಕೆ ಸೇರ್ಪಡೆಯಾಗಿರುವ ಉಮೇಶ್‌ ಯಾದವ್‌ 3 ವರ್ಷಗಳ ಬಳಿಕ ಟಿ20 ತಂಡದಲ್ಲಿ ಆಡುವ ಕಾತರದಲ್ಲಿದ್ದಾರೆ. ಯಜುವೇಂದ್ರ ಚಹಲ್‌ ಸ್ಪಿನ್‌ ಮೋಡಿ ಮಾಡಲು ಎದುರು ನೋಡುತ್ತಿದ್ದಾರೆ.

ಮತ್ತೊಂದೆಡೆ ಡೇವಿಡ್‌ ವಾರ್ನರ್‌ ಸೇರಿದಂತೆ ಕೆಲ ಪ್ರಮುಖ ಆಟಗಾರರೊಂದಿಗೆ ಭಾರತಕ್ಕೆ ಆಗಮಿಸಿರುವ ಆಸೀಸ್‌ ತಂಡಕ್ಕೆ ಭಾರತ ವಿರುದ್ಧ ಕಠಿಣ ಸವಾಲು ಎದುರಾಗುವ ಸಾಧ್ಯತೆ ಇದೆ. ಮಿಚೆಲ್‌ ಸ್ಟಾರ್ಕ್, ಮಾರ್ನಸ್‌ ಸ್ಟೋಯ್ನಿಸ್‌, ಮಿಚೆಲ್‌ ಮಾರ್ಷ್‌ ಗಾಯಗೊಂಡಿದ್ದರಿಂದ ಸರಣಿಯಲ್ಲಿ ಆಡುತ್ತಿಲ್ಲ.

T20 world cup ಟೀಂ ಇಂಡಿಯಾ ನೂತನ ಜರ್ಸಿ ಅನಾವರಣ, ಮರುಕಳಿಸಿತು 2007ರ ಚಾಂಪಿಯನ್ ಕಲರ್!

ಉಳಿದಂತೆ ನಾಯಕ ಆ್ಯರೋನ್‌ ಫಿಂಚ್‌, ಗ್ಲೆನ್‌ ಮ್ಯಾಕ್ಸ್‌ಚೆಲ್‌, ಸ್ಟೀವ್‌ ಸ್ಮಿತ್‌, ಮ್ಯಾಥ್ಯೂ ವೇಡ್‌ ಸೇರಿದಂತೆ ಹಲವು ಟಿ20 ತಜ್ಞ ಬ್ಯಾಟರ್‌ಗಳನ್ನು ಆಸೀಸ್‌ ತಂಡ ಹೊಂದಿದ್ದು, ಸಿಂಗಾಪೂರ ಮೂಲದ ಟಿಮ್‌ ಡೇವಿಡ್‌ ಆಸೀಸ್‌ ಪರ ಮೊದಲ ಪಂದ್ಯದಲ್ಲೇ ಅಬ್ಬರಿಸುವ ಕಾತರದಲ್ಲಿದ್ದಾರೆ. ಪ್ಯಾಟ್‌ ಕಮಿನ್ಸ್‌, ಜೋಶ್‌ ಹೇಜಲ್‌ವುಡ್‌, ಕೇನ್‌ ರಿಚಡ್ರ್ಸನ್‌, ಸೀನ್‌ ಅಬೋಟ್‌, ಆ್ಯಡಂ ಜಂಪಾ ಭಾರತೀಯ ಬೌಲರ್‌ಗಳನ್ನು ಕಟ್ಟಿಹಾಕಲು ಎದುರು ನೋಡುತ್ತಿದ್ದಾರೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌, ಕೆ.ಎಲ್‌.ರಾಹುಲ್‌, ವಿರಾಟ್‌, ಸೂರ್ಯಕುಮಾರ್‌, ರಿಷಭ್‌ ಪಂತ್‌, ಹಾರ್ದಿಕ್‌, ಅಕ್ಷರ್‌, ಭುವನೇಶ್ವರ್‌, ಹರ್ಷಲ್‌, ಬೂಮ್ರಾ, ಚಹಲ್‌.

ಆಸ್ಪ್ರೇಲಿಯಾ: ಆ್ಯರೋನ್‌ ಫಿಂಚ್‌, ಇಂಗ್ಲಿಸ್‌, ಸ್ಮಿತ್‌, ಮ್ಯಾಕ್ಸ್‌ವೆಲ್‌, ಗ್ರೀನ್‌, ಮ್ಯಾಥ್ಯೂ ವೇಡ್‌, ಟಿಮ್‌ ಡೇವಿಡ್‌, ಕಮಿನ್ಸ್‌, ಹೇಜಲ್‌ವುಡ್‌, ಶಮ್ಸ್‌, ಜಂಪಾ

ಪಿಚ್‌ ರಿಪೋರ್ಚ್‌

ಮೊಹಾಲಿ ಪಿಚ್‌ ಬ್ಯಾಟಿಂಗ್‌ ಸ್ನೇಹಿ ಎನಿಸಿಕೊಂಡಿದ್ದು, ದೊಡ್ಡ ಮೊತ್ತ ದಾಖಲಾಗುವ ನಿರೀಕ್ಷೆಯಿದೆ. ಮೊದಲು ಬ್ಯಾಟ್‌ ಮಾಡುವ ತಂಡ 180+ ರನ್‌ ಗಳಿಸಿದರಷ್ಟೇ ಗೆಲ್ಲುವ ಸಾಧ್ಯತೆ ಇದೆ. ಮಂಜು ಬೀಳುವ ಕಾರಣ ಟಾಸ್‌ ನಿರ್ಣಾಯಕ ಪಾತ್ರ ವಹಿಸಿಕೊಳ್ಳಬಹುದು.

ಪಂದ್ಯ: ಮೊಹಾಲಿ ಕ್ರೀಡಾಂಗಣ

ಸಮಯ: ಸಂಜೆ 7.30ಕ್ಕೆ

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌