ಬೆಂಗಳೂರು(ಫೆ.27): ಗ್ಲೆನ್ ಮ್ಯಾಕ್ಸ್‌ವೆಲ್ ಸಿಡಿಸಿದ ಭರ್ಜರಿ ಶತಕದ ನೆರವಿನಿಂದ ಭಾರತ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ 7 ವಿಕೆಟ್ ಗೆಲುವು ದಾಖಲಿಸಿದೆ. ಈ ಮೂಲಕ 2-0 ಅಂತರದಲ್ಲಿ ಸರಣಿ ಗೆದ್ದುಕೊಂಡಿದೆ.  ಆದರೆ ಭಾರತ  ತವರಿನಲ್ಲಿ ಸರಣಿ ಸೋತು ಮುಖಭಂಗ ಅನುಭವಿಸಿದೆ.

ಇದನ್ನೂ ಓದಿ: ಪಾಕ್ ಪಂದ್ಯ ಬಹಿಷ್ಕಾರ - ಮೌನ ಮುರಿದ ಕಪಿಲ್ ದೇವ್!

191 ರನ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 13 ರನ್ ಗಳಿಸುವಷ್ಟರಲ್ಲೇ ಮೊದಲ ವಿಕೆಟ್ ಕಳೆದುಕೊಂಡಿತು. ಮಾರ್ಕಸ್ ಸ್ಟೊಯಿನ್ಸ್ 7 ರನ್ ಸಿಡಿಸಿ ಔಟಾದರು. ನಾಯಕ ಆ್ಯರೋನ್ ಫಿಂಚ್ ಕೇವಲ 8 ರನ್ ಸಿಡಿಸಿ ಸತತ 2ನೇ ಬಾರಿ ನಿರಾಸೆ ಅನುಭವಿಸಿದರು. ಆದರೆ ಡಾರ್ಕಿ ಶಾರ್ಟ್ ಮಾತ್ರ ದಿಟ್ಟ ಹೋರಾಟ ನೀಡಿದರು.

ಶಾರ್ಟ್ 40 ರನ್ ಸಿಡಿಸಿ ಔಟಾದರು. ಆದರೆ ಗ್ಲೆನ್ ಮ್ಯಾಕ್ಸ್‌ವೆಲ್ ಪಂದ್ಯದ ಗತಿಯನ್ನೇ ಬದಲಿಸಿದರು. ಮ್ಯಾಕ್ಸ್‌ವೆಲ್ ಅಬ್ಬರ ಆರಂಭವಾಗುತ್ತಿದ್ದಂತೆ, ಅಭಿಮಾನಿಗಳಲ್ಲಿ ನಡುಕ ಶುರುವಾಯಿತು. ಮ್ಯಾಕ್ಸ್‌ವೆಲ್‌ಗೆ ಪೀಟರ್‌ಹ್ಯಾಂಡ್ಸ್‌ಕಾಂಬ್ ಸಾಥ್ ನೀಡಿದರು. ಹೀಗಾಗಿ ಆಸ್ಟ್ರೇಲಿಯಾ ಗೆಲುವಿನತ್ತ ಹೆಜ್ಜೆ ಇಟ್ಟಿತ್ತು.

ಇದನ್ನೂ ಓದಿ: ಭದ್ರತಾ ಸಿಬ್ಬಂದಿ ಹುಟ್ಟು ಹಬ್ಬ ಆಚರಿಸಿದ ವಿರಾಟ್ ಕೊಹ್ಲಿ!

ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಮ್ಯಾಕ್ಸ್‌ವೆಲ್ ಭರ್ಜರಿ  ಶತಕ ಸಿಡಿಸಿದರು. ಈ ಮೂಲಕ ಚುಟುಕು ಕ್ರಿಕೆಟ್‌ನಲ್ಲಿ 3ನೇ ಸೆಂಚುರಿ ದಾಖಲಿಸಿದರು. ಮ್ಯಾಕ್ಸ್‌ವೆಲ್ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ಗೆಲುವಿಗೆ ಅಂತಿಮ ಓವರ್‌ನಲ್ಲಿ 9 ರನ್ ಅವಶ್ಯಕತೆ ಇತ್ತು. ಮ್ಯಾಕ್ಸ್‌ವೆಲ್ ಭರ್ಜರಿ ಸಿಕ್ಸರ್ ಸಿಡಿಸೋ ಮೂಲಕ ಆಸ್ಟ್ರೇಲಿಯಾ ಇನ್ನೂ 2 ಎಸೆತ ಬಾಕಿ ಇರುವಂತೆ ಗೆಲುವು ಸಾಧಿಸಿತು. 7 ವಿಕೆಟ್ ಗೆಲುವು ಸಾಧಿಸಿದ ಆಸ್ಟ್ರೇಲಿಯಾ 0-2 ಅಂತರದಲ್ಲಿ ಸರಣಿ ಸೋತಿತು.

ಮ್ಯಾಕ್ಸ್‌ವೆಲ್ ಅಜೇಯ 113 ರನ್ ಸಿಡಿಸಿದರೆ, ಪೀಟರ್‌ಹ್ಯಾಂಡ್ಸ್‌ಕಾಂಬ್ ಅಜೇಯ  20 ರನ್ ದಾಖಲಿಸಿದರು. ಭಾರತದ ಪರ ವಿಜಯ್ ಶಂಕರ್ 2 ಹಾಗೂ ಸಿದ್ದಾರ್ಥ್ ಕೌಲ್ 1 ವಿಕೆಟ್ ಕಬಳಿಸಿದರು. ಆದರೆ ಎಲ್ಲಾ ಬೌಲರ್‌ಗಳು ದುಬಾರಿಯಾಗಿದ್ದೇ ತಂಡದ ಸೋಲಿಗೆ ಕಾರಣವಾಯಿತು. 

ಇದನ್ನೂ ಓದಿ: ಉಗ್ರರನ್ನು ಬೆಂಬಲಿಸುವ ಪಾಕ್ ತಂಡವನ್ನು ಬಹಿಷ್ಕರಿಸಿ: ವಿನೋದ್ ರಾಯ್

ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಅಬ್ಬರದ ಬ್ಯಾಟಿಂಗ್ ಮೂಲಕ 4 ವಿಕೆಟ್ ನಷ್ಟಕ್ಕೆ 190 ರನ್ ಸಿಡಿಸಿತ್ತು. ಕೆ.ಎಲ್.ರಾಹುಲ್ 47, ನಾಯಕ ವಿರಾಟ್ ಕೊಹ್ಲಿ ಅಜೇಯ 72 ಹಾಗೂ ಎಂ.ಎಸ್.ಧೋನಿ 40 ರನ್ ಸಿಡಿಸಿದ್ದರು. ಈ ಮೂಲಕ ಭಾರತ ಬೃಹತ್ ಮೊತ್ತ ದಾಖಲಿಸಿತು.