ಸಿಡ್ನಿಯಲ್ಲೇ ನಡೆಯಲಿದೆ ಇಂಡೋ-ಆಸೀಸ್ 3ನೇ ಟೆಸ್ಟ್ ಪಂದ್ಯ
ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯಕ್ಕೆ ಸಿಡ್ನಿ ಕ್ರಿಕೆಟ್ ಮೈದಾನವೇ ಆತಿಥ್ಯ ವಹಿಸಲಿದೆ ಎನ್ನುವುದನ್ನು ಕ್ರಿಕೆಟ್ ಆಸ್ಟ್ರೇಲಿಯಾ ಖಚಿತ ಪಡಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಸಿಡ್ನಿ(ಡಿ.30): ಭಾರತ-ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಟೆಸ್ಟ್ ಪಂದ್ಯಕ್ಕೆ ಈ ಹಿಂದೆಯೇ ನಿಗದಿಯಾದ ವೇಳಾಪಟ್ಟಿಯಂತೆ ಸಿಡ್ನಿ ಕ್ರಿಕೆಟ್ ಮೈದಾನ ಆತಿಥ್ಯ ವಹಿಸುವುದು ಖಚಿತವಾಗಿದೆ.
ಸಿಡ್ನಿಯ ಉತ್ತರ ಕರಾವಳಿ ತೀರ ಪ್ರದೇಶಗಳಲ್ಲಿ ಕೊರೋನಾ ಪ್ರಕರಣಗಳು ದಿಢೀರ್ ಎನ್ನುವಂತೆ ಹೆಚ್ಚಿತ್ತು. ಈ ಬಗ್ಗೆ ಕ್ವೀನ್ಸ್‌ಲ್ಯಾಂಡ್ ಆರೋಗ್ಯ ಇಲಾಖೆ ಕೆಲವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸ್ಥಳೀಯ ಸರ್ಕಾರಕ್ಕೆ ತಿಳಿಸಿತ್ತು. ಇದರ ಬೆನ್ನಲ್ಲೇ ಮೂರನೇ ಟೆಸ್ಟ್ ಪಂದ್ಯದ ಮೇಲೆ ಅನುಮಾನದ ತೂಗುಗತ್ತಿ ನೇತಾಡಲಾರಂಭಿಸಿತ್ತು.
ಕೋವಿಡ್ 19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಿಡ್ನಿಯಲ್ಲಿ ನಡೆಯಬೇಕಿರುವ 3ನೇ ಟೆಸ್ಟ್ ಪಂದ್ಯವನ್ನು ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲೇ ನಡೆಸಲು ಚಿಂತಿಸಲಾಗಿತ್ತು. ಆದರೆ ಪೂರ್ವ ನಿಗದಿಯಂತೆ ಜನವರಿ 07ರಿಂದ ಸಿಡ್ನಿಯಲ್ಲೇ ಮೂರನೇ ಟೆಸ್ಟ್ ಪಂದ್ಯ ಜರುಗಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಸ್ಪಷ್ಟಪಡಿಸಿದೆ.
ಮೆಲ್ಬರ್ನ್‌ನಲ್ಲೇ ಇಂಡೋ-ಆಸೀಸ್ 3ನೇ ಟೆಸ್ಟ್?
ಹೀಗಾಗಿ ಮೂರನೇ ಟೆಸ್ಟ್ ಪಂದ್ಯಕ್ಕೂ ಮೆಲ್ಬರ್ನ್ ಕ್ರಿಕೆಟ್ ಮೈದಾನ ಆತಿಥ್ಯ ವಹಿಸುವ ಸಾಧ್ಯತೆಗಳಿವೆ ಎಂದು ವರದಿಯಾಗಿತ್ತು. ಮಂಗಳವಾರ ಕೇವಲ 3 ಕೋವಿಡ್ 19 ಪ್ರಕರಣಗಳು ಸಿಡ್ನಿಯಲ್ಲಿ ಪತ್ತೆಯಾಗಿದ್ದರಿಂದ ಅಲ್ಲಿನ ಸ್ಥಳೀಯ ಸರ್ಕಾರ ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಆಯೋಜನೆಗೆ ಅನುಮತಿ ನೀಡಿದೆ.
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ಜಯಿಸುವ ಮೂಲಕ ಸರಣಿಯಲ್ಲಿ ಮುನ್ನಡೆ ಸಾಧಿಸಿತ್ತು. ಇನ್ನು ಮೆಲ್ಬರ್ನ್‌ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸಿದ್ದು, ಇನ್ನುಳಿದ ಎರಡು ಟೆಸ್ಟ್ ಪಂದ್ಯಗಳಲ್ಲಿ ಯಾವ ತಂಡದ ಕೈ ಮೇಲಾಗಲಿದೆ ಎನ್ನುವ ಕುತೂಹಲ ಜೋರಾಗಿದೆ.