ಸಿಡ್ನಿ [ಮಾ.05]: ಚೊಚ್ಚಲ ಬಾರಿಗೆ ಫೈನಲ್‌ ಪ್ರವೇಶಿಸಿ, ಚಾಂಪಿಯನ್‌ ಪಟ್ಟಕ್ಕೇರಲು ಕಾತರಿಸುತ್ತಿರುವ ಭಾರತ ಮಹಿಳಾ ತಂಡ ಐಸಿಸಿ ಟಿ20 ವಿಶ್ವಕಪ್‌ನ ಸೆಮಿಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ  ಆಡಲಿದ್ದು, 9.30ಕ್ಕೆ ಆರಂಭವಾಗುತ್ತಿದ್ದ ಪಂದ್ಯ ಮಳೆ ಕಾರಣ ಕೊಂಚ ಮುಂದೂಡಲ್ಪಟ್ಟಿದೆ. 

ಗುಂಪು ಹಂತದಲ್ಲಿ ಆಡಿದ 4 ಪಂದ್ಯಗಳಲ್ಲೂ ಜಯಿಸಿ, ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಭಾರತ ಟೂರ್ನಿಯ ಶ್ರೇಷ್ಠ ತಂಡವೆನಿಸಿಕೊಂಡಿದೆ. ಹಾಲಿ ಚಾಂಪಿಯನ್‌ ಆಸ್ಪ್ರೇಲಿಯಾ ವಿರುದ್ಧ ಗೆದ್ದು ಶುಭಾರಂಭ ಮಾಡಿದ್ದ ಭಾರತ, ಬಾಂಗ್ಲಾದೇಶ, ನ್ಯೂಜಿಲೆಂಡ್‌ ಹಾಗೂ ಶ್ರೀಲಂಕಾ ವಿರುದ್ಧದ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿತು.

ಸೇಡಿನ ಪಂದ್ಯ: ಭಾರತ ತಂಡ ಉತ್ಕೃಷ್ಟಲಯದಲ್ಲಿದ್ದರೂ, ಇತಿಹಾಸ ಇಂಗ್ಲೆಂಡ್‌ ಪರವಾಗಿದೆ. ಭಾರತ ವಿರುದ್ಧ ಆಡಿರುವ ಎಲ್ಲಾ 5 ವಿಶ್ವಕಪ್‌ ಪಂದ್ಯಗಳಲ್ಲೂ ಇಂಗ್ಲೆಂಡ್‌ ಜಯಭೇರಿ ಬಾರಿಸಿದೆ. ಕಳೆದ ಬಾರಿ ಉಭಯ ತಂಡಗಳು ಮುಖಾಮುಖಿಯಾಗಿದ್ದು 2018ರ ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ. ಆ ಪಂದ್ಯದಲ್ಲಿ ಇಂಗ್ಲೆಂಡ್‌ 8 ವಿಕೆಟ್‌ಗಳ ಗೆಲುವು ಸಾಧಿಸಿ ಫೈನಲ್‌ ಪ್ರವೇಶಿಸಿತ್ತು. ಈ ಮೊದಲು 2009, 2012, 2014, 2016ರ ವಿಶ್ವಕಪ್‌ಗಳಲ್ಲೂ ಭಾರತ ಗುಂಪು ಹಂತದ ಪಂದ್ಯಗಳಲ್ಲಿ ಸೋಲುಂಡಿತ್ತು. ಕಳೆದ ಬಾರಿ ಸೆಮಿಫೈನಲ್‌ನಲ್ಲಿ ಸೋತಿದ್ದ ಭಾರತ ತಂಡದಲ್ಲಿದ್ದ 7 ಆಟಗಾರ್ತಿಯರು ಈ ಬಾರಿಯೂ ತಂಡದಲ್ಲಿದ್ದಾರೆ. ಹರ್ಮನ್‌ಪ್ರೀತ್‌ ಕೌರ್‌ ಪಡೆ ಸೇಡಿಗಾಗಿ ಕಾಯುತ್ತಿದೆ. ವಿಶ್ವಕಪ್‌ಗೂ ಮುನ್ನ ನಡೆದ ತ್ರಿಕೋನ ಸರಣಿಯಲ್ಲಿ ಭಾರತ ತಂಡ ಇಂಗ್ಲೆಂಡ್‌ ವಿರುದ್ಧ ಜಯಗಳಿಸಿತ್ತು. ಆ ಗೆಲುವು ತಂಡಕ್ಕೆ ಸ್ಫೂರ್ತಿಯಾಗಬೇಕಿದೆ.

ಶಫಾಲಿ ಮೇಲೆ ನಿರೀಕ್ಷೆ: ಭಾರತದ ಪ್ರತಿ ಗೆಲುವಿನಲ್ಲೂ 16 ವರ್ಷದ ಶಫಾಲಿ ವರ್ಮಾ ಕೊಡುಗೆ ದೊಡ್ಡದಿದೆ. 4 ಪಂದ್ಯಗಳಲ್ಲಿ 161 ರನ್‌ ಸಿಡಿಸಿರುವ ಶಫಾಲಿ, ಇಂಗ್ಲೆಂಡ್‌ ಬೌಲರ್‌ಗಳ ಪ್ರಮುಖ ಗುರಿಯಾಗುತ್ತಿದ್ದಾರೆ. ಜೆಮಿಮಾ ರೋಡ್ರಿಗಸ್‌ ಸಹ ಉತ್ತಮ ಲಯದಲ್ಲಿದ್ದಾರೆ. ಆದರೆ ಸ್ಮೃತಿ ಮಂಧನಾ, ಹರ್ಮನ್‌ಪ್ರೀತ್‌ ಕೌರ್‌ ಲಯ ಕಂಡುಕೊಳ್ಳಬೇಕಿದೆ. ಭಾರತದ ಮಧ್ಯಮ ಕ್ರಮಾಂಕ ಸ್ಥಿರತೆ ಕಾಪಾಡಿಕೊಂಡಿಲ್ಲ. ಹೀಗಾಗಿ, ಶಫಾಲಿ ಮೇಲೆಯೇ ತಂಡ ಹೆಚ್ಚು ಅವಲಂಬಿತಗೊಂಡಿದೆ.

IPL 2020: ಆರ್‌ಸಿಬಿ ತಂಡದ ಸಹಾಯಕ ಸಿಬ್ಬಂದಿಯ ಸಂಪೂರ್ಣ ಲಿಸ್ಟ್!.

ವೇಗಿ ಶಿಖಾ ಪಾಂಡೆ ಜತೆ ಸ್ಪಿನ್ನರ್‌ಗಳಾದ ಪೂನಂ ಯಾದವ್‌, ರಾಧಾ ಯಾದವ್‌, ರಾಜೇಶ್ವರ್‌ ಗಾಯಕ್ವಾಡ್‌ ಹಾಗೂ ಆಲ್ರೌಂಡರ್‌ ದೀಪ್ತಿ ಶರ್ಮಾ ಬೌಲಿಂಗ್‌ ನಿರ್ವಹಿಸಲಿದ್ದಾರೆ.

ಮತ್ತೊಂದಡೆ ಇಂಗ್ಲೆಂಡ್‌ ಸಹ ತನ್ನ ತಾರಾ ಆಟಗಾರರನ್ನು ನೆಚ್ಚಿಕೊಂಡಿದೆ. ನತಾಲಿ ಶೀವರ್‌ 3 ಅರ್ಧಶತಕಗಳೊಂದಿಗೆ 202 ರನ್‌ ಗಳಿಸಿದ್ದಾರೆ. ಅವರ ಪ್ರದರ್ಶನ ತಂಡಕ್ಕೆ ನಿರ್ಣಾಯಕವಾಗಲಿದೆ. ಪ್ರತಿಭಾವಂತ ಸ್ಪಿನ್ನರ್‌ ಸೋಫಿ ಎಕ್ಲೆಸ್ಟೋನ್‌ ಹಾಗೂ ವೇಗಿ ಆನ್ಯಾ ಶ್ರಬ್‌ಸೋಲ್‌ ಬೌಲಿಂಗ್‌ ವಿಭಾಗವನ್ನು ಮುನ್ನಡೆಸುತ್ತಿದ್ದಾರೆ.