ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತ ತಂಡಕ್ಕೆ ಬಿಸಿಸಿಐ 131 ಕೋಟಿ ರೂಪಾಯಿಗಳ ಬೃಹತ್ ಬಹುಮಾನವನ್ನು ಘೋಷಿಸಿದೆ. ಐಸಿಸಿ ನೀಡಿದ ಬಹುಮಾನಕ್ಕಿಂತ ಸುಮಾರು ಐದು ಪಟ್ಟು ಹೆಚ್ಚಿರುವ ಈ ಮೊತ್ತವನ್ನು ಆಟಗಾರರು, ಕೋಚ್‌ಗಳು ಮತ್ತು ಸಹಾಯಕ ಸಿಬ್ಬಂದಿಗೆ ಹಂಚಲಾಗುವುದು.  

ಅಹಮದಾಬಾದ್: ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತ ತಂಡಕ್ಕೆ ಬಿಸಿಸಿಐ ಬರೋಬ್ಬರಿ 131 ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ. ಇದು ಕೇವಲ ವೈಯಕ್ತಿಕ ಪ್ರದರ್ಶನಕ್ಕೆ ಸಿಕ್ಕ ಮನ್ನಣೆಯಲ್ಲ, ಬದಲಾಗಿ ಇಡೀ ತಂಡದ ಒಗ್ಗಟ್ಟು ಮತ್ತು ಕಠಿಣ ಪರಿಶ್ರಮಕ್ಕೆ ಸಿಕ್ಕ ಗೌರವ ಅಂತ ಬಿಸಿಸಿಐ ಅಧಿಕಾರಿಗಳು ಹೇಳಿದ್ದಾರೆ. ಈ ಐತಿಹಾಸಿಕ ಗೆಲುವಿನ ಹಿಂದೆ ಪ್ರತಿಯೊಬ್ಬ ಸದಸ್ಯನ ಶ್ರಮವಿದೆ ಎಂದು ಅವರು ತಿಳಿಸಿದ್ದಾರೆ. ಅಂದಹಾಗೆ, ಐಸಿಸಿ ನೀಡಿದ ಬಹುಮಾನದ ಮೊತ್ತಕ್ಕಿಂತ ಬಿಸಿಸಿಐ ನೀಡಿರುವ ಈ ಹಣ ಸುಮಾರು ಐದು ಪಟ್ಟು ಹೆಚ್ಚಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಸಿಸಿಐ ಘೋಷಿಸಿದ 131 ಕೋಟಿ ರುಪಾಯಿಯಲ್ಲಿ ಯಾರಿಗೆ ಎಷ್ಟು?

ಘೋಷಣೆಯಾದ ಈ 131 ಕೋಟಿ ರೂಪಾಯಿ ಹಣವನ್ನು ಆಟಗಾರರು, ಕೋಚ್‌ಗಳು ಮತ್ತು ಸಹಾಯಕ ಸಿಬ್ಬಂದಿಗೆ ಹಂಚಲಾಗುವುದು ಎಂದು ಬಿಸಿಸಿಐ ತಿಳಿಸಿತ್ತು. ಈಗ, ಯಾರಿಗೆ ಎಷ್ಟು ಹಣ ಸಿಗಲಿದೆ ಅನ್ನೋ ಲೆಕ್ಕಾಚಾರ ಹೊರಬಿದ್ದಿದೆ. ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಕನ್ನಡಿಗರಿಗೆ ಚಿರಪರಿಚಿತರಾದ ಸಂಜು ಸ್ಯಾಮ್ಸನ್ ಸೇರಿದಂತೆ 15 ಆಟಗಾರರಿಗೆ ತಲಾ 6 ಕೋಟಿ ರೂಪಾಯಿ ಸಿಗಲಿದೆ. ಉಳಿದ 41 ಕೋಟಿ ರೂಪಾಯಿಯನ್ನು ಕೋಚ್‌ಗಳು ಮತ್ತು ಇತರೆ ಸಹಾಯಕ ಸಿಬ್ಬಂದಿಗೆ ಹಂಚಲಾಗುತ್ತದೆ. ಇದಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಇಡೀ ತಂಡಕ್ಕೆ ದೆಹಲಿಗೆ ಬರುವಂತೆ ಸೂಚನೆ ನೀಡಲಾಗಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳಿಂದ ಸೋಲಿಸಿ, ತನ್ನ ಮೂರನೇ ಟಿ20 ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿತು. ಈ ಮೂಲಕ, ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಉಳಿಸಿಕೊಂಡ ಮೊದಲ ತಂಡ ಎಂಬ ದಾಖಲೆಯನ್ನು ಭಾರತ ಬರೆಯಿತು. ಗೌತಮ್ ಗಂಭೀರ್ ಅವರ ಕೋಚಿಂಗ್‌ನಲ್ಲಿ ಭಾರತ ಈ ಬಾರಿ ಯುವ ಆಟಗಾರರ ಪಡೆಯೊಂದಿಗೆ ಕಣಕ್ಕಿಳಿದಿತ್ತು. ಸಂಜು ಸ್ಯಾಮ್ಸನ್ ಈ ಟೂರ್ನಿಯ ಶ್ರೇಷ್ಠ ಆಟಗಾರರಾಗಿ ಹೊರಹೊಮ್ಮಿದರು.

ಐಸಿಸಿ ಕೊಟ್ಟ ಹಣವೆಷ್ಟು?

ವಿಜೇತ ತಂಡವಾದ ಭಾರತಕ್ಕೆ ಐಸಿಸಿ 3.5 ಮಿಲಿಯನ್ ಡಾಲರ್ (ಸುಮಾರು 27.58 ಕೋಟಿ ರೂಪಾಯಿ) ಬಹುಮಾನದ ಮೊತ್ತವನ್ನು ನೀಡಿತ್ತು. 2024ರ ಚಾಂಪಿಯನ್ ಆಗಿದ್ದ ಭಾರತಕ್ಕೆ ಐಸಿಸಿ 2.45 ಮಿಲಿಯನ್ ಡಾಲರ್ (ಸುಮಾರು 22.52 ಕೋಟಿ ರೂ.) ನೀಡಿತ್ತು. ಆದರೆ ಈ ಬಾರಿ ಭಾರತಕ್ಕೆ 3 ಮಿಲಿಯನ್ ಡಾಲರ್ (ಸುಮಾರು 27.58 ಕೋಟಿ ರೂ.) ಬಹುಮಾನವಾಗಿ ಸಿಕ್ಕಿದೆ. ಎರಡನೇ ಸ್ಥಾನ ಪಡೆದ ನ್ಯೂಜಿಲೆಂಡ್ ತಂಡಕ್ಕೆ 1.6 ಮಿಲಿಯನ್ ಡಾಲರ್ (ಸುಮಾರು 14.65 ಕೋಟಿ ರೂ.) ಲಭಿಸಿದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಿದ್ದ ಈ ಟೂರ್ನಿಯಲ್ಲಿ ಉತ್ತಮ ಪ್ರಾಯೋಜಕತ್ವದ ಆದಾಯ ಬಂದಿದ್ದೇ ಬಹುಮಾನದ ಮೊತ್ತ ಇಷ್ಟೊಂದು ಹೆಚ್ಚಾಗಲು ಕಾರಣ.

ಅದ್ಭುತ ಹೋರಾಟ, ಭರ್ಜರಿ ಜಯ

ಸೂಪರ್ 8 ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯವಾಗಿ ಸೋತರೂ, ಭಾರತ ತಂಡ ಬಲವಾಗಿ ಕಮ್‌ಬ್ಯಾಕ್ ಮಾಡಿತು. ನಂತರದ ಎಲ್ಲಾ ಪಂದ್ಯಗಳನ್ನು ಗೆದ್ದು ಫೈನಲ್‌ಗೆ ಲಗ್ಗೆ ಇಟ್ಟಿತ್ತು. ನಾಯಕ ಸೂರ್ಯಕುಮಾರ್ ಯಾದವ್ ಅವರ ಅತ್ಯುತ್ತಮ ನಾಯಕತ್ವ ತಂಡಕ್ಕೆ ದೊಡ್ಡ ಬಲವಾಗಿತ್ತು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದ ಹಾರ್ದಿಕ್ ಪಾಂಡ್ಯ ಹಾಗೂ ನಿರ್ಣಾಯಕ ಸಮಯದಲ್ಲಿ ವಿಕೆಟ್ ಪಡೆದು ಬೌಲಿಂಗ್ ವಿಭಾಗವನ್ನು ಮುನ್ನಡೆಸಿದ ಜಸ್ಪ್ರೀತ್ ಬುಮ್ರಾ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಯುವ ಆಟಗಾರರಾದ ಸಂಜು ಸ್ಯಾಮ್ಸನ್, ಇಶಾನ್ ಕಿಶನ್ ಅವರ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್‌ಗಳು ಮತ್ತು ಅಭಿಷೇಕ್ ಶರ್ಮಾ ಅವರ ನಿರ್ಭೀತ ಬ್ಯಾಟಿಂಗ್ ಭಾರತದ ಪ್ರಾಬಲ್ಯವನ್ನು ಖಚಿತಪಡಿಸಿತು.