* ಬರ್ಮಿಂಗ್‌ಹ್ಯಾಮ್ ಟೆಸ್ಟ್‌ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾಗೆ ಕೋವಿಡ್ ದೃಢ* ಜುಲೈ 01ರಿಂದ ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯ ಆರಂಭ* ಟೀಂ ಇಂಡಿಯಾ ಕೂಡಿಕೊಳ್ಳಲು ಬರ್ಮಿಂಗ್‌ಹ್ಯಾಮ್‌ಗೆ ತೆರಳಿದ ಮಯಾಂಕ್‌ ಅಗರ್‌ವಾಲ್

ಬೆಂಗಳೂರು(ಜೂ.27): ಟೀಂ ಇಂಡಿಯಾ ಆರಂಭಿಕ ಬ್ಯಾಟರ್‌ ಮಯಾಂಕ್‌ ಅಗರ್‌ವಾಲ್ ಇಂದು ಬೆಳಗ್ಗೆ(ಜೂ.27) ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ಗೆ ಹಾರಿದ್ದಾರೆ. ಇಂಗ್ಲೆಂಡ್ ಎದುರಿನ ಏಕೈಕ ಟೆಸ್ಟ್‌ ಪಂದ್ಯ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿತ್ತು. ಸದ್ಯ ರೋಹಿತ್ ಶರ್ಮಾ ಐಸೋಲೇಷನ್‌ನಲ್ಲಿದ್ದು, ಮಯಾಂಕ್ ಅಗರ್‌ವಾಲ್ ಭಾರತ ತಂಡ ಕೂಡಿಕೊಳ್ಳಲು ಆಂಗ್ಲರ ನಾಡಿಗೆ ಹಾರಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಮರುನಿಗದಿಯಾಗಿರುವ ಟೆಸ್ಟ್ ಪಂದ್ಯವು ಮುಂಬರುವ ಜುಲೈ 01ರಂದು ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿದೆ. ಈಗಾಗಲೇ ಟೀಂ ಇಂಡಿಯಾ, ಇಂಗ್ಲೆಂಡ್‌ ಎದುರಿನ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಇಂಗ್ಲೆಂಡ್ ಎದುರಿನ ಕೊನೆಯ ಟೆಸ್ಟ್ ಪಂದ್ಯದಲ್ಲಿ ಗೆಲುವು ಇಲ್ಲವೇ ಡ್ರಾ ಮಾಡಿಕೊಂಡರೂ ಸಹಾ ಟೆಸ್ಟ್‌ ಸರಣಿ ಭಾರತದ ಪಾಲಾಗಲಿದೆ.

ಶನಿವಾರ ನಡೆಸಿದ ಕೋವಿಡ್ ಟೆಸ್ಟ್ ವರದಿಯಲ್ಲಿ ರೋಹಿತ್ ಶರ್ಮಾಗೆ (Rohit Sharma) ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿತ್ತು. ಹೀಗಾಗಿ ರೋಹಿತ್ ಶರ್ಮಾಗೆ ಬ್ಯಾಕ್‌ಅಪ್ ಓಪನ್ನರ್ ಆಗಿ ಕನ್ನಡಿಗ ಮಯಾಂಕ್‌ ಅಗರ್‌ವಾಲ್‌ಗೆ ಬುಲಾವ್ ಬಂದಿದೆ. ಸದ್ಯ ಲೀಸೆಸ್ಟರ್‌ನಲ್ಲಿ ರೋಹಿತ್ ಶರ್ಮಾ ಐಸೋಲೇಷನ್‌ನಲ್ಲಿದ್ದು, ಬಿಸಿಸಿಐ (BCCI) ವೈದ್ಯರು ರೋಹಿತ್ ಶರ್ಮಾ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದಾರೆ.

Ind vs Eng ರೋಹಿತ್ ಶರ್ಮಾ ಹೊರಬಿದ್ದರೇ ಟೀಂ ಇಂಡಿಯಾ ಮುನ್ನಡೆಸುವವರು ಯಾರು..?

ಮಯಾಂಕ್ ಅಗರ್‌ವಾಲ್ (Mayank Agarwal) ಸಾಮಾಜಿಕ ಜಾಲತಾಣಗಳಲ್ಲಿ ಬರ್ಮಿಂಗ್‌ಹ್ಯಾಮ್‌ನತ್ತ ಮುಖಮಾಡಿರುವ ಬಗ್ಗೆ ಫೋಟೋವನ್ನು ಹಂಚಿಕೊಂಡಿದ್ದಾರೆ. ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ಮಯಾಂಕ್ ಅಗರ್‌ವಾಲ್‌ ಈ ವರ್ಷಾರಂಭದಲ್ಲಿ ಶ್ರೀಲಂಕಾ ವಿರುದ್ದ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ನೀರಸ ಪ್ರದರ್ಶನ ತೋರುವ ಮೂಲಕ ಆಯ್ಕೆ ಸಮಿತಿಯ ಕೆಂಗಣ್ಣಿಗೆ ಗುರಿಯಾಗಿದ್ದರು. ಹೀಗಾಗಿ ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ ಟೀಂ ಇಂಡಿಯಾದಲ್ಲಿ ಸ್ಥಾನಗಿಟ್ಟಿಸಿಕೊಳ್ಳಲು ಮಯಾಂಕ್ ಅಗರ್‌ವಾಲ್ ವಿಫಲವಾಗಿದ್ದರು. ಇನ್ನು ಇದೀಗ ಒಂದು ವೇಳೆ ಆಡುವ ಹನ್ನೊಂದರ ಬಳಗದಲ್ಲಿ ಮಯಾಂಕ್‌ ಅಗರ್‌ವಾಲ್‌ಗೆ ಅವಕಾಶ ಸಿಕ್ಕಿದರೇ ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳಲು ಎದುರು ನೋಡುತ್ತಿದ್ದಾರೆ.

Scroll to load tweet…

ಇನ್ನು ರೋಹಿತ್ ಶರ್ಮಾ ವಿಚಾರಕ್ಕೆ ಬರುವುದಾದರೇ, ಕಳೆದ ವಾರವಷ್ಟೇ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ (Team India), ಲೀಸೆಸ್ಟರ್‌ಶೈರ್ ವಿರುದ್ದ 4 ದಿನಗಳ ಅಭ್ಯಾಸ ಪಂದ್ಯದಲ್ಲಿ ಪಾಲ್ಗೊಂಡಿತ್ತು. ಮೊದಲ ಇನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ ಕೇವಲ 25 ರನ್‌ ಬಾರಿಸಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದ್ದರು. ಇನ್ನು ಎರಡನೇ ಇನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡಲು ಕ್ರೀಸ್‌ಗಿಳಿದಿರಲಿಲ್ಲ. ಇದು ಹಲವರ ಪಾಲಿಗೆ ಹುಬ್ಬೇರಿಸುವಂತೆ ಮಾಡಿತ್ತು. ಆದರೆ ಬಿಸಿಸಿಐ ಭಾನುವಾರ ಮುಂಜಾನೆ, ರೋಹಿತ್ ಶರ್ಮಾಗೆ ಕೋವಿಡ್ 19 ಸೋಂಕು ತಗುಲಿರುವ ವಿಚಾರವನ್ನು ಖಚಿತಪಡಿಸಿತ್ತು.

ಸದ್ಯ ಇಂಗ್ಲೆಂಡ್‌ನಲ್ಲಿ ಯಾವುದೇ ಕ್ವಾರಂಟೈನ್ ರೂಲ್ಸ್‌ ಜಾರಿಯಿಲ್ಲ. ಹೀಗಾಗಿ ಮಯಾಂಕ್‌ ಅಗರ್‌ವಾಲ್‌, ಬರ್ಮಿಂಗ್‌ಹ್ಯಾಮ್‌ಗೆ ಬಂದಿಳಿಯುತ್ತಿದ್ದಂತೆಯೇ ಭಾರತ ಕ್ರಿಕೆಟ್ ತಂಡವನ್ನು ಕೂಡಿಕೊಳ್ಳಲಿದ್ದಾರೆ. 

ಇಂಗ್ಲೆಂಡ್ ಎದುರಿನ ಬರ್ಮಿಂಗ್‌ಹ್ಯಾಮ್ ಟೆಸ್ಟ್‌ ಪಂದ್ಯಕ್ಕೆ ಭಾರತ ತಂಡ ಹೀಗಿದೆ:

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಮಯಾಂಕ್‌ ಅಗರ್‌ವಾಲ್ ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮಾ ವಿಹಾರಿ, ರಿಷಭ್ ಪಂತ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ , ಶ್ರೀಕರ್ ಭರತ್.