Asianet Suvarna News Asianet Suvarna News

Ind vs Eng ರೋಹಿತ್ ಶರ್ಮಾ ಹೊರಬಿದ್ದರೇ ಟೀಂ ಇಂಡಿಯಾ ಮುನ್ನಡೆಸುವವರು ಯಾರು..?

* ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ
* ಜುಲೈ 01ರಿಂದ ಆರಂಭವಾಗಲಿರುವ ಏಕೈಕ ಟೆಸ್ಟ್ ಪಂದ್ಯ
* ರೋಹಿತ್ ಶರ್ಮಾ ಬದಲಿಗೆ ಟೀಂ ಇಂಡಿಯಾ ಮುನ್ನಡೆಸುವವರು ಯಾರು ಎನ್ನುವ ಕುತೂಹಲ

Ind vs Eng Who will lead Indian Test Cricket Team if Rohit Sharma ruled out of Edgbaston Test kvn
Author
Bengaluru, First Published Jun 27, 2022, 11:53 AM IST

ಬರ್ಮಿಂಗ್‌ಹ್ಯಾಮ್‌(ಜೂ.27): ಭಾರತ ಹಾಗೂ ಇಂಗ್ಲೆಂಡ್ (India vs England) ತಂಡಗಳ ನಡುವಿನ 5ನೇ ಟೆಸ್ಟ್‌ ಪಂದ್ಯಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ. ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಏಕೈಕ ಟೆಸ್ಟ್‌ ಪಂದ್ಯವು ಜುಲೈ 01ರಿಂದ ಆರಂಭವಾಗಲಿದ್ದು, ಇಲ್ಲಿನ ಎಡ್ಜ್‌ಬಾಸ್ಟನ್ ಮೈದಾನ ಈ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸಿದೆ. ಒಂದು ವೇಳೆ ಇಂಗ್ಲೆಂಡ್ ಎದುರಿನ ಟೆಸ್ಟ್‌ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ (Rohit Sharma) ಕೋವಿಡ್‌ನಿಂದ ಸಂಪೂರ್ಣ ಗುಣಮುಖರಾಗದೇ ಹೋದರೆ ಟೀಂ ಇಂಡಿಯಾ ಮುನ್ನಡೆಸುವವರು ಯಾರು ಎನ್ನುವ ಕುತೂಹಲ ಜೋರಾಗಿದೆ.

ಆದರೆ ಬಿಸಿಸಿಐಯಾಗಲಿ, ಟೀಂ ಮ್ಯಾನೇಜ್‌ಮೆಂಟ್ ಆಗಲಿ ಅಥವಾ ಬಿಸಿಸಿಐ ಆಯ್ಕೆಸಮಿತಿಯಾಗಲಿ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತೆ ಕಂಡು ಬರುತ್ತಿಲ್ಲ. ಇನ್ನು ಕೆಲವೇ ದಿನಗಳೊಳಗಾಗಿ ರೋಹಿತ್ ಶರ್ಮಾ ಸಂಪೂರ್ಣ ಫಿಟ್ ಆಗುವ ವಿಶ್ವಾಸ ಇವರೆಲ್ಲರಿಗೂ ಇದೆ. ಒಂದು ವೇಳೆ ರೋಹಿತ್ ಶರ್ಮಾ, ಕೋವಿಡ್‌ನಿಂದ (COVID 19) ಗುಣಮುಖರಾಗದೇ ಹೋದರೆ ಇಂಗ್ಲೆಂಡ್ ಎದುರಿನ ಟೆಸ್ಟ್‌ ಪಂದ್ಯಕ್ಕೆ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ (Rishabh Pant) ಇಲ್ಲವೇ ಜಸ್ಪ್ರೀತ್ ಬುಮ್ರಾ (Jasprit Bumrah) ನಾಯಕನಾಗಿ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿ ಬರಲಾರಂಭಿಸಿವೆ.

ಇದೀಗ ರೋಹಿತ್ ಶರ್ಮಾ ಐಸೋಲೇಷನ್‌ನಲ್ಲಿದ್ದು, ಟೀಂ ಇಂಡಿಯಾ (Team India) ಆಯ್ಕೆ ಸಮಿತಿಯು ಇಂಗ್ಲೆಂಡ್‌ ಎದುರಿನ ಟೆಸ್ಟ್‌ ಪಂದ್ಯಕ್ಕೆ ಮತ್ತೊಬ್ಬ ಆರಂಭಿಕ ಬ್ಯಾಟರ್‌ಗೆ ಬುಲಾವ್ ನೀಡಿದೆ. ಸದ್ಯ ತಜ್ಞ ಆರಂಭಿಕರಾಗಿ ಶುಭ್‌ಮನ್ ಗಿಲ್ ಮಾತ್ರ ಉಳಿದುಕೊಂಡಿದ್ದಾರೆ. ಖ್ಯಾತ ಕ್ರಿಕೆಟ್ ವೆಬ್‌ಸೈಟ್ ವರದಿ ಪ್ರಕಾರ, ರೋಹಿತ್ ಶರ್ಮಾ ಅವರಿಗೆ ಇನ್ನೂ ಬದಲಿ ಆಟಗಾರನನ್ನು ಆಯ್ಕೆ ಸಮಿತಿಯು ಹೆಸರಿಸಿಲ್ಲ. ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ಕನ್ನಡಿಗ ಮಯಾಂಕ್‌ ಅಗರ್‌ವಾಲ್‌ಗೆ (Mayank Agarwal) ಬಿಸಿಸಿಐನಿಂದ ಬುಲಾವ್ ಬಂದಿದೆ ಎನ್ನಲಾಗಿದೆ.

ಒಂದು ವೇಳೆ ರೋಹಿತ್ ಶರ್ಮಾ ಅವರ ಕೋವಿಡ್ ಟೆಸ್ಟ್ (COVID 19 Test) ನೆಗೆಟಿವ್ ಬಂದರೆ ಸಹಜವಾಗಿಯೇ ಅವರು ಭಾರತ ಕ್ರಿಕೆಟ್ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಯಾಕೆಂದರೆ ಇಂಗ್ಲೆಂಡ್‌ನಲ್ಲಿ ಕೋವಿಡ್ ದೃಢಪಟ್ಟರೇ ಕ್ವಾರಂಟೈನ್ ಕಡ್ಡಾಯವಲ್ಲ ಎನ್ನುವ ನಿಯಮವಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಈಗಾಗಲೇ ಬಿಸಿಸಿಐ ತನ್ನ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದು, ವೈದ್ಯರು ರೋಹಿತ್ ಶರ್ಮಾ ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದಾರೆ ಎಂದು ತಿಳಿಸಿದೆ.

Rohit Sharma ಟೀಂ ಇಂಡಿಯಾ ನಾಯಕನಿಗೆ ಕೋವಿಡ್ ದೃಢ..!

ರೋಹಿತ್ ಶರ್ಮಾ, ಆದಷ್ಟು ಬೇಗ ಕೋವಿಡ್‌ನಿಂದ ಗುಣಮುಖರಾಗುವ ವಿಶ್ವಾಸವನ್ನು ತಂಡವು ಹೊಂದಿದ್ದು, ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯಕ್ಕೆ ಭಾರತ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ. ಮಯಾಂಕ್ ಅಗರ್‌ವಾಲ್, ಬ್ಯಾಕ್‌ಅಪ್ ಆರಂಭಿಕರಾಗಿ ಎಡ್ಜ್‌ಬಾಸ್ಟನ್‌ಗೆ ತೆರಳಲಿದ್ದು, ಒಂದು ವೇಳೆ ರೋಹಿತ್‌ ಶರ್ಮಾ ಅವರಿಗೆ ಕಡೆಯ ಕ್ಷಣದಲ್ಲಿ ಫಿಟ್ನೆಸ್ ಸಮಸ್ಯೆ ಎದುರಾದರೇ ತಂಡಕ್ಕೆ ಅನುಕೂಲವಾಗಲಿ ಎಂದು ಅಗರ್‌ವಾಲ್‌ಗೆ ಬುಲಾವ್ ನೀಡಲಾಗಿದೆ.

ಇನ್ನು ಕ್ರಿಕ್‌ಬಜ್ ವರದಿಯ ಪ್ರಕಾರ, ಒಂದು ವೇಳೆ ರೋಹಿತ್ ಶರ್ಮಾ, ಇಂಗ್ಲೆಂಡ್ ಎದುರಿನ ಟೆಸ್ಟ್ ಪಂದ್ಯದಿಂದ ಹೊರಬಿದ್ದರೇ ಯಾರನ್ನು ನಾಯಕನನ್ನಾಗಿ ನೇಮಕ ಮಾಡಬೇಕು ಎನ್ನುವುದನ್ನು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ಇಂಗ್ಲೆಂಡ್ ತಲುಪಿದ ಬಳಿಕ ತೀರ್ಮಾನಿಸಲಿದ್ದಾರೆ ಎನ್ನಲಾಗಿದೆ. ಸದ್ಯ ಚೇತನ್ ಶರ್ಮಾ, ಐರ್ಲೆಂಡ್‌ನಲ್ಲಿದ್ದು, ಜೂನ್ 28ರಂದು ಐರ್ಲೆಂಡ್ ವಿರುದ್ದ ನಡೆಯಲಿರುವ ಎರಡನೇ ಟಿ20 ಪಂದ್ಯವನ್ನು ಮುಗಿಸಿ ಇಂಗ್ಲೆಂಡ್‌ನತ್ತ ಮುಖ ಮಾಡಲಿದ್ದಾರೆ. ಆ ವೇಳೆಗೆ ರೋಹಿತ್ ಶರ್ಮಾ ಫಿಟ್ನೆಸ್‌ ಪರಿಸ್ಥಿತಿಯನ್ನು ಅವಲೋಕಿಸಿ ಅಂತಿಮ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ

Follow Us:
Download App:
  • android
  • ios