ಡೇ ಅಂಡ್ ನೈಟ್ ಟೆಸ್ಟ್ ಮ್ಯಾಚ್: ಏನು? ಎತ್ತ..? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಭಾರತ ಹಾಗೂ ಬಾಂಗ್ಲದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯ ಐತಿಹಾಸ ಕ್ಷಣಗಳಿಗೆ ಸಾಕ್ಷಿಯಾಗಲಿದೆ. ಸೌರವ್ ಗಂಗೂಲಿಯ ಶ್ರಮದಿಂದಾಗಿ ಟೀಂ ಇಂಡಿಯಾ ಚೊಚ್ಚಲ ಹಗಲು ರಾತ್ರಿಯ ಟೆಸ್ಟ್ ಪಂದ್ಯವನ್ನಾಡಲಿದೆ. ಈ ಟೆಸ್ಟ್ ಪಂದ್ಯದ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...

India to host 1st ever day night Test in Kolkata against Bangladesh

ಕೋಲ್ಕತಾ(ಅ.30): ಭಾರತ ಕ್ರಿಕೆಟ್‌ ತಂಡ, ಮುಂದಿನ ತಿಂಗಳು ತನ್ನ ಚೊಚ್ಚಲ ಹಗ​ಲು-ರಾತ್ರಿ ಟೆಸ್ಟ್‌ ಪಂದ್ಯ​ವನ್ನು ಆಡ​ಲಿದೆ. ಭಾರತ ಪ್ರವಾಸ ಕೈಗೊ​ಳ್ಳ​ಲಿ​ರುವ ಬಾಂಗ್ಲಾ​ದೇಶ ತಂಡ ಕೋಲ್ಕ​ತಾದ ಈಡನ್‌ ಗಾರ್ಡನ್ಸ್‌ನಲ್ಲಿ ನವೆಂಬರ್‌ 22ರಿಂದ ನಡೆ​ಯ​ಲಿ​ರುವ 2ನೇ ಪಂದ್ಯ​ವನ್ನು ಹಗ​ಲು-ರಾತ್ರಿ ಮಾದ​ರಿ​ಯಲ್ಲಿ ಆಡಲು ಒಪ್ಪಿಗೆ ಸೂಚಿ​ಸಿದೆ. ಮಂಗ​ಳ​ವಾರ ಸಂಜೆ ಸೌರವ್‌ ಗಂಗೂಲಿ ಈ ವಿಷ​ಯ​ವನ್ನು ಬಹಿ​ರಂಗಪಡಿ​ಸಿ​ದರು. ಬಿಸಿ​ಸಿಐ ಅಧ್ಯಕ್ಷರಾದ ಒಂದೇ ವಾರದಲ್ಲಿ ಗಂಗೂಲಿ ಮಹ​ತ್ವದ ಯೋಜನೆಯನ್ನು ಕಾರ್ಯ​ರೂ​ಪಕ್ಕೆ ತರು​ವಲ್ಲಿ ಯಶ​ಸ್ವಿ​ಯಾ​ಗಿ​ದ್ದಾರೆ.

ಕೆಲ ದಿನ​ಗಳ ಹಿಂದಷ್ಟೇ ಗಂಗೂಲಿ, ಬಾಂಗ್ಲಾ​ದೇಶ ಕ್ರಿಕೆಟ್‌ ಮಂಡಳಿ (ಬಿ​ಸಿ​ಬಿ) ಮುಂದೆ ಹೊನ​ಲು-ಬೆಳ​ಕಿನ ಪಂದ್ಯದ ಪ್ರಸ್ತಾ​ಪ​ವ​ನ್ನಿ​ರಿ​ಸಿ​ದ್ದರು. ಆಟ​ಗಾ​ರ​ರಿಂದ ವಿರೋಧ ವ್ಯಕ್ತ​ವಾ​ದರೂ ಹಲವು ಸಭೆಗಳ ಬಳಿಕ ಅವ​ರ ಮನ​ವೊ​ಲಿ​ಸಲು ಬಿಸಿಬಿ ಮುಖ್ಯಸ್ಥರು ಯಶ​ಸ್ವಿ​ಯಾ​ಗಿ​ದ್ದಾರೆ.

‘ಬಾಂಗ್ಲಾ ಕ್ರಿಕೆಟ್‌ ಮಂಡಳಿ ಖಚಿತ ಪಡಿ​ಸಿದೆ. ನಾವು ಪಿಂಕ್‌ ಬಾಲ್‌ ಪಂದ್ಯಕ್ಕೆ ವೇದಿಕೆ ಒದ​ಗಿ​ಸ​ಲಿ​ದ್ದೇವೆ. ಇದೊಂದು ಅದ್ಭುತ ಬೆಳ​ವ​ಣಿಗೆ. ಟೆಸ್ಟ್‌ ಕ್ರಿಕೆಟ್‌ಗೆ ಈ ರೀತಿಯ ಬೆಂಬ​ಲದ ಅವ​ಶ್ಯ​ಕತೆ ಇದೆ. ನಾನು ಹಾಗೂ ನನ್ನ ತಂಡ ಈ ಯೋಜನೆಯನ್ನು ಕಾರ್ಯ​ರೂ​ಪಕ್ಕೆ ತರಲು ಪಣತೊಟ್ಟಿ​ದ್ದೆವು. ವಿರಾಟ್‌ ಕೊಹ್ಲಿಗೆ ಧನ್ಯ​ವಾದ. ಅವರು ಒಪ್ಪಿ​ಕೊಂಡಿದ್ದ​ರಿಂದಲೇ ಇದು ಸಾಧ್ಯ​ವಾ​ಯಿ​ತು’ ಎಂದು ಮಂಗ​ಳ​ವಾರ ಗಂಗೂಲಿ ಮಾಧ್ಯ​ಮ​ಗ​ಳಿಗೆ ಪ್ರತಿ​ಕ್ರಿ​ಯಿ​ಸಿ​ದರು.

ದಾದಾ ಪ್ರಸ್ತಾವನೆಗೆ ಬಾಂಗ್ಲಾ ಸಮ್ಮತಿ; ಭಾರತದಲ್ಲಿ ಮೊಟ್ಟ ಮೊದಲ ಡೇ & ನೈಟ್ ಟೆಸ್ಟ್!

ಬಾಂಗ್ಲಾ​ದೇ​ಶದ ಕೋಚ್‌ ರಸೆಲ್‌ ಡೊಮಿನ್ಗೊ, ಢಾಕಾ​ದಲ್ಲಿ ಮಾತ​ನಾ​ಡಿ ‘ಪಂದ್ಯ ಹೇಗೆ ಸಾಗ​ಲಿದೆ ಎನ್ನುವ ಬಗ್ಗೆ ಆತಂಕವಿದೆ. ಆದರೆ ಬದ​ಲಾ​ವಣೆಯನ್ನು ಒಪ್ಪಿ​ಕೊ​ಳ್ಳ​ಲು ತಂಡ ಸಿದ್ಧ​ವಿ​ದೆ. ಹೊಸ ಪ್ರಯೋಗಗಳನ್ನು ತಂಡ ಸ್ವಾಗ​ತಿ​ಸು​ತ್ತದೆ. ಭಾರತ ಸಹ ಹೊನ​ಲು-ಬೆಳಕಿನ ಟೆಸ್ಟ್‌ ಆಡಿಲ್ಲ. ಈಡನ್‌ ಗಾರ್ಡನ್ಸ್‌ನಲ್ಲಿ ವಿಶ್ವದ ನಂ.1 ತಂಡದ ವಿರುದ್ಧ ಆಡು​ವುದು ಅಮೋಘ ಅನು​ಭವ’ ಎಂದರು.

ಮಧ್ಯಾಹ್ನ 2ಕ್ಕೆ ಆರ​ಂಭ: ಕೋಲ್ಕತಾ ಪಂದ್ಯ ಮಧ್ಯಾಹ್ನ 2 ಗಂಟೆಗೆ ಆರಂಭ​ಗೊ​ಳ್ಳ​ಲಿದ್ದು, ಚಹಾ ಹಾಗೂ ರಾತ್ರಿ ಭೋಜ​ನ ವಿರಾಮಗಳನ್ನು ಒಳ​ಗೊಂಡಿ​ರ​ಲಿದೆ. ರಾತ್ರಿ 9 ಗಂಟೆ ವೇಳೆಗೆ ದಿನ​ದಾಟ ಮುಕ್ತಾ​ಯ​ಗೊ​ಳ್ಳಲಿದೆ. ಪಂದ್ಯಕ್ಕೆ ಸಾಂಪ್ರ​ದಾ​ಯಿಕ ಕೆಂಪು ಚಂಡಿನ ಬದ​ಲಿಗೆ ಪಿಂಕ್‌ (ಗು​ಲಾ​ಬಿ) ಬಾಲ್‌ ಬಳಕೆ ಮಾಡ​ಲಾ​ಗು​ತ್ತದೆ.

ಶಕೀಬ್ ಅಲ್ ಹಸನ್ ಕ್ರಿಕೆಟ್'ನಿಂದ 2 ವರ್ಷ ಬ್ಯಾನ್..!

ಗಂಗೂಲಿ ಕಟ್ಟಿದ ಕನಸು!

ಭಾರ​ತ​ದಲ್ಲಿ ಮೊದಲ ಪಿಂಕ್‌ ಬಾಲ್‌ ಟೆಸ್ಟ್‌ ಆಯೋ​ಜಿ​ಸು​ವಲ್ಲಿ ಗಂಗೂಲಿ ಪಾತ್ರ ಮಹ​ತ್ವ​ದೆ​ನಿ​ಸಿದೆ. 2016ರಲ್ಲಿ ಅವರು ಬಂಗಾಳ ಕ್ರಿಕೆಟ್‌ ಸಂಸ್ಥೆ (ಸಿ​ಎ​ಬಿ) ಅಧ್ಯಕ್ಷರಾಗಿ​ದ್ದಾಗ ಮೋಹನ್‌ ಬಗಾನ್‌ ಹಾಗೂ ಭೋವಾ​ನಿ​ಪೋರ್‌ ತಂಡ​ಗಳ ನಡು​ವಿ​ನ ಸಿಎಬಿ ಸೂಪರ್‌ ಲೀಗ್‌ ಫೈನಲ್‌ ಪಂದ್ಯಕ್ಕೆ ಪಿಂಕ್‌ ಬಾಲ್‌ ಬಳಕೆಯಾಗಿತ್ತು. ಈ ಪಂದ್ಯ​ದಲ್ಲಿ ಭಾರತ ತಂಡ​ದ ಆಟ​ಗಾ​ರ​ರಾದ ವೃದ್ಧಿ​ಮಾನ್‌ ಸಾಹ ಹಾಗೂ ಮೊಹ​ಮದ್‌ ಶಮಿ ಆಡಿ​ದ್ದರು. ಈ ಇಬ್ಬರೂ ಭಾರತ ತಂಡದ ಚೊಚ್ಚಲ ಪಿಂಕ್‌ ಬಾಲ್‌ ಪಂದ್ಯ​ದಲ್ಲೂ ಆಡುವ ನಿರೀಕ್ಷೆ ಇದೆ. ಅದೇ ವರ್ಷ ಬಿಸಿ​ಸಿಐ, ದುಲೀಪ್‌ ಟ್ರೋಫಿ​ಯನ್ನು ಹಗ​ಲು-ರಾತ್ರಿ ಮಾದ​ರಿ​ಯಲ್ಲಿ ನಡೆ​ಸಿತ್ತು. ಪ್ರಸಾರ ಹಕ್ಕು ಹೊಂದಿ​ರುವ ವಾಹಿನಿ ನಿರಾ​ಸಕ್ತಿ ತೋರಿದ್ದರಿಂದ ಹಾಗೂ ಚೆಂಡಿ​ನ ಗುಣ​ಮ​ಟ್ಟದ ಬಗ್ಗೆ ಆಟ​ಗಾ​ರರು ಅಸ​ಮಾ​ಧಾನ ತೋರಿದ್ದರಿಂದ ಈ ವರ್ಷ ಪಿಂಕ್‌ ಬಾಲ್‌ ಪಂದ್ಯ​ಗ​ಳನ್ನು ಕೈಬಿ​ಡ​ಲಾ​ಯಿ​ತು. ಸದ್ಯ ಭಾರತ ತಂಡ​ದ​ಲ್ಲಿ​ರುವ ಮಯಾಂಕ್‌ ಅಗರ್‌ವಾಲ್‌, ಆರ್‌.ಅ​ಶ್ವಿನ್‌, ಕುಲ್ದೀಪ್‌ ಯಾದವ್‌, ಇಶಾಂತ್‌ ಶರ್ಮಾ ಪಿಂಕ್‌ ಬಾಲ್‌ನಲ್ಲಿ ಆಡಿದ ಅನು​ಭವ ಹೊಂದಿ​ದ್ದಾರೆ.

ಕೋಲ್ಕತಾದಲ್ಲಿ ಪ್ರತಿ ವರ್ಷ ಪಂದ್ಯ?

ಕ್ರಿಕೆಟ್‌ ಆಸ್ಪ್ರೇ​ಲಿಯಾ ಆಯೋ​ಜಿ​ಸು​ವಂತೆ ಭಾರ​ತ​ದಲ್ಲೂ ಪ್ರತಿ ವರ್ಷ ಹಗ​ಲು-ರಾತ್ರಿ ಟೆಸ್ಟ್‌ ನಡೆ​ಸ​ಬೇಕು ಎನ್ನು​ವುದು ಬಿಸಿ​ಸಿಐ ಅಧ್ಯಕ್ಷ ಗಂಗೂಲಿ ಕನ​ಸಾ​ಗಿದ್ದು, ಕೋಲ್ಕತಾವನ್ನೇ ಆತಿಥ್ಯ ತಾಣವಾಗಿ ನಿಗದಿಪಡಿ​ಸಲು ಮುಂದಾ​ಗಿದ್ದಾರೆ. ಆಸ್ಪ್ರೇ​ಲಿಯಾ ತಂಡ ಸ್ತನ ಕ್ಯಾನ್ಸರ್‌ ಜಾಗೃತಿ ಮೂಡಿ​ಸಲು ಪಿಂಕ್‌ ಬಾಲ್‌ ಪಂದ್ಯ​ವನ್ನು ಬಳ​ಸಿ​ಕೊ​ಳ್ಳ​ಲಿದೆ. ಅದೇ ರೀತಿ ಯಾವು​ದಾ​ದರೂ ಸದುದ್ದೇಶದೊಂದಿಗೆ ಪಂದ್ಯ ನಡೆ​ಸಲು ಚಿಂತ​ನೆ ಮಾಡ​ಲಾ​ಗಿದೆ ಎಂದು ಬಿಸಿ​ಸಿಐ ಮೂಲ​ಗಳು ತಿಳಿ​ಸಿವೆ.

ಪಿಂಕ್‌ ಬಾಲ್‌ ಪೂರೈಕೆ ಬಿಸಿ​ಸಿಐಗೆ ಸವಾ​ಲು?

ಹಗ​ಲು-ರಾತ್ರಿ ಟೆಸ್ಟ್‌ ಪಂದ್ಯಕ್ಕೆ ಪಿಂಕ್‌ ಬಾಲ್‌ ಹೊಂದಿಸು​ವುದೇ ಬಿಸಿ​ಸಿಐ ಮುಂದಿ​ರುವ ಸವಾಲೆನಿ​ಸಿದೆ. ಭಾರ​ತ​ದಲ್ಲಿ ಬಳಕೆಯಾಗುವ ಎಸ್‌ಜಿ ಚೆಂಡಿನ ಗುಣ​ಮ​ಟ್ಟದ ಬಗ್ಗೆ ಆಟ​ಗಾ​ರರು ಪದೇ ಪದೇ ಅಸ​ಮಾ​ಧಾನ ವ್ಯಕ್ತ​ಪ​ಡಿ​ಸಿ​ದ್ದಾರೆ. ಹೀಗಾಗಿ ಆಸ್ಪ್ರೇ​ಲಿ​ಯಾ​ದಿಂದ ಕೂಕಬುರ್ರಾ ಚೆಂಡನ್ನು ತರಿ​ಸ​ಬೇ​ಕಾದ ಅನಿ​ವಾ​ರ್ಯತೆಗೆ ಬಿಸಿ​ಸಿಐ ಸಿಲು​ಕಲಿದೆ. ತಂಡ​ಗಳ ಅಭ್ಯಾಸ ಹಾಗೂ ಪಂದ್ಯಕ್ಕೆ ಕನಿಷ್ಠ 24 ಚೆಂಡು​ಗಳ ಅಗ​ತ್ಯ​ವಿದೆ. ಎಲ್ಲ​ಕ್ಕಿಂತ ಮುಖ್ಯ​ವಾಗಿ ಪಂದ್ಯದ ಮಧ್ಯ ಚೆಂಡು ಬದ​ಲಿ​ಸ​ಬೇ​ಕಾ​ದರೆ, ಆಟ ಎಷ್ಟುಓವರ್‌ ನಡೆ​ದಿ​ರು​ತ್ತ​ದೆ​ಯೋ ಅಷ್ಟೇ ಓವರ್‌ಗಳಿ​ಗೆ ಬಳಕೆಯಾಗಿ​ರುವ ಚೆಂಡನ್ನೇ ಅಂಪೈರ್‌ಗಳು ಆಯ್ಕೆ ಮಾಡ​ಬೇ​ಕಾ​ಗು​ತ್ತದೆ. ಹೀಗಾಗಿ ಚೆಂಡುಗ​ಳನ್ನು ಸಂಗ್ರ​ಹಿ​ಸಿ​ಡು​ವುದು ಸವಾ​ಲಾಗಿ ಪರಿ​ಣ​ಮಿ​ಸ​ಲಿದೆ.

ಪಿಂಕ್‌ ಬಾಲ್‌ ಬಳಕೆ ಶುರು​ವಾ​ಗಿದ್ದು ಹೇಗೆ?

ಟೆಸ್ಟ್‌ ಕ್ರಿಕೆಟ್‌ ಅನ್ನು ಮತ್ತಷ್ಟುಜನ​ಪ್ರಿ​ಯ​ಗೊ​ಳಿ​ಸಲು ಹಗ​ಲು-ರಾತ್ರಿ ಪಂದ್ಯ​ವನ್ನು ಆಯೋ​ಜಿ​ಸಲು ನಿರ್ಧ​ರಿ​ಸಿದಾಗ ಕೆಂಪು ಚೆಂಡಿನ ಬಳಕೆ ಕಷ್ಟ ಎನ್ನುವ ಅಭಿ​ಪ್ರಾ​ಯ​ಗಳು ಮೂಡಿ​ದ​ವು. ಹೀಗಾಗಿ ಚೆಂಡು ತಯಾ​ರಕ ಸಂಸ್ಥೆಗಳು ಹಳದಿ, ಕಿತ್ತಳೆ ಬಣ್ಣದ ಚೆಂಡು​ಗ​ಳನ್ನು ಪರಿ​ಚ​ಯಿ​ಸಿ​ದವು. ಆದರೆ ಪಿಚ್‌ ಕಂದು ಬಣ್ಣ​ವಿ​ರುವ ಕಾರಣ, ಚೆಂಡು ಸರಿ​ಯಾಗಿ ಕಾಣು​ವು​ದಿಲ್ಲ ಎಂದು ಬ್ಯಾಟ್ಸ್‌ಮನ್‌ಗಳು ಹೇಳಿದ ಕಾರಣ, ಕೊನೆಗೆ ಗುಲಾಬಿ (ಪಿಂಕ್‌) ಬಣ್ಣದ ಚೆಂಡನ್ನು ಪರಿ​ಚ​ಯಿ​ಸ​ಲಾ​ಯಿತು. ಈ ಚೆಂಡಿ​ನ ಮೇಲಿನ ಸೀಮ್‌ (ದಾರ) ಮೊದಲು ಹಸಿರು ಬಣ್ಣ​ದ​ಲ್ಲಿತ್ತು. ಬಳಿಕ ಬಿಳಿಗೆ ಬದ​ಲಿ​ಸ​ಲಾ​ಯಿತು. ಆಟ​ಗಾ​ರರ ಸಲ​ಹೆ ಮೇರೆಗೆ ಈಗ ಕಪ್ಪು ಬಣ್ಣದ ದಾರವನ್ನು ಬಳಕೆ ಮಾಡ​ಲಾ​ಗು​ತ್ತಿದೆ. 2015ರ ನವೆಂಬರ್‌ನಲ್ಲಿ ಆಸ್ಪ್ರೇ​ಲಿಯಾ ಹಾಗೂ ನ್ಯೂಜಿ​ಲೆಂಡ್‌ ನಡುವೆ ಚೊಚ್ಚಲ ಹಗ​ಲು-ರಾತ್ರಿ ಟೆಸ್ಟ್‌ ಪಂದ್ಯ ನಡೆ​ಯಿತು. ಇದು ವರೆಗೂ ಒಟ್ಟು 11 ಪಂದ್ಯ​ಗಳು ನಡೆದಿವೆ. ಎಲ್ಲಾ 11 ಪಂದ್ಯ​ಗಳು ಫಲಿ​ತಾಂಶ ನೀಡಿವೆ.

ಇಷ್ಟುದಿನ ಭಾರತ ಏಕೆ ಒಪ್ಪಿ​ರ​ಲಿ​ಲ್ಲ?

ಭಾರ​ತೀ​ಯರು ಪಿಂಕ್‌ ಬಾಲ್‌ ಟೆಸ್ಟ್‌ ಅನ್ನು ವಿರೋ​ಧಿ​ಸಲು ಹಲವು ಕಾರ​ಣ​ಗ​ಳಿವೆ. ಚೆಂಡಿನ ಗೋಚ​ರತೆಯಲ್ಲಿ ಸಮಸ್ಯೆಗಳಿ​ದ್ದವು. 2016ರ ದುಲೀಪ್‌ ಟ್ರೋಫಿ​ಯಲ್ಲಿ ಆಡಿದ್ದ ಪೂಜಾರ, ಮಯಾಂಕ್‌ ಸೇರಿ​ದಂತೆ ಅನೇ​ಕ ಆಟ​ಗಾ​ರರು ಧನಾ​ತ್ಮಕ ಪ್ರತಿ​ಕ್ರಿಯೆ ನೀಡಿ​ರ​ಲಿಲ್ಲ. ಚೆಂಡು ವೇಗಿ​ಗ​ಳಿಗೆ ಯಾವುದೇ ರೀತಿ​ಯಲ್ಲಿ ಸಹ​ಕಾರ ಕೊಟ್ಟಿ​ರ​ಲಿಲ್ಲ. ಆರಂಭಿಕ 20 ಓವರ್‌ಗಳ ಬಳಿಕ ಚೆಂಡಿನ ಆಕಾರ ಗಣ​ನೀಯ ಪ್ರಮಾಣದಲ್ಲಿ ಬದ​ಲಾ​ಗಿತ್ತು. ರಿವರ್ಸ್‌ ಸ್ವಿಂಗ್‌ ಸಾಧ್ಯ​ವಾ​ಗಿ​ರ​ಲಿಲ್ಲ. ಚೆಂಡು ಬಣ್ಣ ಬಿಡಲಿದ್ದು, ಬೆಳ​ಕಿ​ನ​ಲ್ಲಿ ಸರಿ​ಯಾಗಿ ಕಾಣು​ವು​ದಿಲ್ಲ ಎಂದು ಆಟ​ಗಾ​ರರು ತಿಳಿ​ಸಿ​ದ್ದರು. ಹೀಗಾಗಿ ಬಿಸಿ​ಸಿಐ ಹಗ​ಲು​-ರಾತ್ರಿ ಪಂದ್ಯಕ್ಕೆ ವಿರೋಧ ವ್ಯಕ್ತ​ಪ​ಡಿ​ಸಿತ್ತು. ಕಳೆದ ವರ್ಷ ಆಸ್ಪ್ರೇಲಿಯಾ ಪ್ರವಾಸ ಕೈಗೊಂಡಿದ್ದ ವೇಳೆ ಕ್ರಿಕೆಟ್‌ ಆಸ್ಪ್ರೇ​ಲಿ​ಯಾದ ಮನವಿಯನ್ನು ಬಿಸಿ​ಸಿಐ ಒಪ್ಪಿ​ರ​ಲಿಲ್ಲ.

Latest Videos
Follow Us:
Download App:
  • android
  • ios