2026ರ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಮಹಿಳಾ ತಂಡಗಳು ಮುಖಾಮುಖಿಯಾಗಲಿವೆ. ಜೂನ್ 14 ರಂದು ಎಡ್ಜ್‌ಬಾಸ್ಟನ್‌ನಲ್ಲಿ ಈ ಪಂದ್ಯ ನಡೆಯಲಿದ್ದು, ಒಟ್ಟು 12 ತಂಡಗಳು ಭಾಗವಹಿಸಲಿವೆ. ಈ ಟೂರ್ನಿಯು ಜೂನ್ 12 ರಿಂದ ಜುಲೈ 5 ರವರೆಗೆ ನಡೆಯಲಿದೆ.
ದುಬೈ: ಈ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ಮಹಿಳಾ ತಂಡಗಳು ಸೆಣಸಾಡುವುದರ ಜೊತೆಗೆ, ಮುಂದಿನ ವರ್ಷ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲೂ ಉಭಯ ತಂಡಗಳು ಮುಖಾಮುಖಿಯಾಗಲಿವೆ.
ಬುಧವಾರ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ) 2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟಿಸಿತು. 12 ತಂಡಗಳ ನಡುವಿನ ಟೂರ್ನಿ ಜೂ.12ರಂದು ಆರಂಭಗೊಳ್ಳಲಿದೆ. ಬದ್ಧವೈರಿಗಳಾದ ಭಾರತ ಹಾಗೂ ಪಾಕ್ ಜೂ.14ರಂದು ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಸೆಣಸಾಡಲಿವೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಹಾಗೂ ಶ್ರೀಲಂಕಾ ತಂಡಗಳು ಜೂ.12ರಂದು ಆಡಲಿವೆ. ಎಡ್ಜ್‌ಬಾಸ್ಟನ್ ಮಾತ್ರವಲ್ಲದೇ ಲಾರ್ಡ್ಸ್, ಹ್ಯಾಂಪ್‌ಶೈರ್ ಬೌಲ್, ಹೆಡಿಂಗ್ಲೆ, ಓಲ್ಡ್ ಟ್ರಾಫರ್ಡ್, ಓವಲ್, ಬ್ರಿಸ್ಟೋಲ್ ಕ್ರೀಡಾಂಗಣದಲ್ಲೂ ಪಂದ್ಯಗಳು ನಡೆಯಲಿವೆ. ಜುಲೈ 5ಕ್ಕೆ ಟೂರ್ನಿ ಕೊನೆಗೊಳ್ಳಲಿದೆ.
ಟೂರ್ನಿ ಮಾದರಿ ಹೇಗೆ?: 12 ತಂಡಗಳನ್ನು ತಲಾ 6 ತಂಡಗಳ 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. 6 ಬಾರಿ ಚಾಂಪಿಯನ್ ಆಸ್ಟ್ರೇಲಿಯಾ, ಭಾರತ, ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಹಾಗೂ ಅರ್ಹತಾ ಸುತ್ತಿನಲ್ಲಿ ಗೆಲ್ಲುವ 2 ತಂಡಗಳು ಗುಂಪು 1ರಲ್ಲಿವೆ. ಹಾಲಿ ಚಾಂಪಿಯನ್ ನ್ಯೂಜಿಲೆಂಡ್, ವೆಸ್ಟ್‌ಇಂಡೀಸ್, ಶ್ರೀಲಂಕಾ, ಇಂಗ್ಲೆಂಡ್ ಹಾಗೂ ಅರ್ಹತಾ ಸುತ್ತಿನಲ್ಲಿ ಗೆಲ್ಲುವ ಮತ್ತೆರಡು ತಂಡಗಳು 2ನೇ ಗುಂಪಿನಲ್ಲಿವೆ. ಪ್ರತಿ ತಂಡ ಗುಂಪಿನ ಇತರ ತಂಡಗಳ ವಿರುದ್ಧ ತಲಾ 1 ಪಂದ್ಯವನ್ನಾಡಲಿದೆ. ಗುಂಪು ಹಂತದ ಪಂದ್ಯ ಮುಕ್ತಾಯಕ್ಕೆ ಅಗ್ರ-2 ಸ್ಥಾನ ಪಡೆದ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.
ಭಾರತದ ಪಂದ್ಯಗಳ ವೇಳಾಪಟ್ಟಿ
ದಿನಾಂಕ ಎದುರಾಳಿ ಸ್ಥಳ ಸಮಯ
ಜೂ.14 ಪಾಕಿಸ್ತಾನ ಎಡ್ಜ್‌ಬಾಸ್ಟನ್ ಸಂಜೆ 7
ಜೂ.17 ಅರ್ಹತಾ ಸುತ್ತಿನ ತಂಡ ಹೆಡಿಂಗ್ಲೆ ಸಂಜೆ 7
ಜೂ.21 ದ.ಆಫ್ರಿಕಾ ಓಲ್ಡ್ ಟ್ರಾಫರ್ಡ್ ಸಂಜೆ 7
ಜೂ.25 ಅರ್ಹತಾ ಸುತ್ತಿನ ತಂಡ ಓಲ್ಡ್ ಟ್ರಾಫರ್ಡ್ ಸಂಜೆ 7
ಜೂ.28 ಆಸ್ಟ್ರೇಲಿಯಾ ಲಾರ್ಡ್ಸ್ ಸಂಜೆ 7
ಇಂಗ್ಲೆಂಡ್ ಸರಣಿ: ಶುಚಿ ಬದಲು ರಾಧಾ ಭಾರತ ಮಹಿಳಾ ಕ್ರಿಕೆಟ್ ತಂಡ ಸೇರ್ಪಡೆ
ಮುಂಬೈ: ಜೂ.28ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಹಾಗೂ 3 ಪಂದ್ಯಗಳ ಏಕದಿನ ಸರಣಿಯಿಂದ ಭಾರತ ಮಹಿಳಾ ತಂಡದ ಆಟಗಾರ್ತಿ ಶುಚಿ ಉಪಾಧ್ಯಾಯ ಹೊರಬಿದ್ದಿದ್ದಾರೆ.
20 ವರ್ಷದ ಎಡಗೈ ಸ್ಪಿನ್ನರ್ ಶುಚಿ ಕಾಲಿನ ಗಾಯಕ್ಕೆ ತುತ್ತಾಗಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಅವರ ಬದಲು ಅನುಭವಿ ಆಟಗಾರ್ತಿ ರಾಧಾ ಯಾದವ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. 5 ಟಿ20 ಪಂದ್ಯಗಳು ಜೂ.28(ನಾಟಿಂಗ್‌ಹ್ಯಾಮ್), ಜು.1(ಬ್ರಿಸ್ಟೋಲ್), ಜು.4(ಓವಲ್), ಜು.9(ಮ್ಯಾಂಚೆಸ್ಟರ್), ಜು.12(ಬರ್ಮಿಂಗ್‌ಹ್ಯಾಮ್)ರಂದು ನಡೆಯಲಿವೆ. ಏಕದಿನ ಪಂದ್ಯಗಳು ಜು.16, 19 ಹಾಗೂ 22ರಂದು ಕ್ರಮವಾಗಿ ಸೌಥಾಂಪ್ಟನ್, ಲಾರ್ಡ್ಸ್ ಹಾಗೂ ಚೆಸ್ಟರ್ ಲೆ ಸ್ಟ್ರೀಟ್ ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ.
ಭಾರತ ಸರಣಿ: ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡ ಪ್ರಕಟ
ಲಂಡನ್: ಭಾರತ ವಿರುದ್ಧ ಜೂ.28ರಿಂದ ಆರಂಭಗೊಳ್ಳಲಿರುವ 5 ಪಂದ್ಯಗಳ ಟಿ20 ಸರಣಿಗೆ 14 ಆಟಗಾರ್ತಿಯರ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. ಸ್ಪಿನ್ನರ್ ಸೋಫಿ ಎಕ್ಲೆಸ್ಟೋನ್ ತಂಡಕ್ಕೆ ಮರಳಿದ್ದಾರೆ.
ತಂಡ: ಶೀವರ್ ಬ್ರಂಟ್(ನಾಯಕಿ), ಆ್ಯರ್ಲೊಟ್, ಟಾಮಿ ಬ್ಯೂಮೊಂಟ್, ಲಾರೆನ್ ಬೆಲ್, ಅಲೈಸ್ ಕ್ಯಾಪ್ಸಿ, ಚಾರ್ಲಿ ಡೀನ್, ಸೋಫಿಯಾ ಡಂಕ್ಲಿ, ಎಕ್ಲೆಸ್ಟೋನ್, ಲಾರೆನ್ ಫಿಲೆರ್, ಆ್ಯಮಿ ಜಾನ್ಸ್, ಸ್ಕೋಲ್‌ಫಿಲ್ಡ್, ಲಿನ್ಸೆ ಸ್ಮಿತ್, ಡ್ಯಾನಿ ವ್ಯಾಟ್, ಇಸ್ಸಿ ವೊಂಗ್.
