ಗೊಂಗಾಡಿ ತ್ರಿಷಾ ಅವರ ಸರ್ವತೋಮುಖ ಪ್ರದರ್ಶನದಿಂದ ಭಾರತ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಗೆದ್ದುಕೊಂಡಿತು. ದಕ್ಷಿಣ ಆಫ್ರಿಕಾ ಕೇವಲ 82 ರನ್‌ಗಳಿಗೆ ಆಲೌಟ್ ಆಯಿತು. ತ್ರಿಷಾ 4 ವಿಕೆಟ್ ಪಡೆದರು. ಭಾರತ ಒಂದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ತ್ರಿಷಾ ಟೂರ್ನಿಯಲ್ಲಿ 293 ರನ್ ಗಳಿಸಿ, ವೈಷ್ಣವಿ ಶರ್ಮಾ 17 ವಿಕೆಟ್ ಪಡೆದರು.
ಕೌಲಾಲಂಪುರ: ಗೊಂಗಾಡಿ ತ್ರಿಷಾ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಹರಿಣಗಳನ್ನು ಮಣಿಸಿ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಭಾರತದ ಸಂಘಟಿದ ಬೌಲಿಂಗ್ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡವು ಕೇವಲ 82 ರನ್‌ಗಳಿಗೆ ಸರ್ವಪತನ ಕಂಡಿತು. ಇನ್ನು ಸಾಧಾರಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಕೇವಲ ಒಂದು ವಿಕೆಟ್ ಕಳೆದುಕೊಂಡು ಅನಾಯಾಸವಾಗಿ ಗೆಲುವಿನ ನಗೆ ಬೀರಿತು.
ಕನ್ನಡತಿ ನಿಕ್ಕಿ ಪ್ರಸಾದ್ ನೇತೃತ್ವದ ಭಾರತ, ಟೂರ್ನಿಯುದ್ದಕ್ಕೂ ಅಧಿಕಾರಯುತ ಗೆಲುವುಗಳನ್ನು ಸಾಧಿಸುವ ಮೂಲಕ ಫೈನಲ್ ಪ್ರವೇಶಿಸಿತ್ತು. ಇನ್ನು ಫೈನಲ್ ಕೂಡಾ ಏಕಪಕ್ಷೀಯವಾಗಿಯೇ ನಡೆಯಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಹರಿಣಗಳ ಪಡೆಯು ಭಾರತೀಯ ಬೌಲಿಂಗ್ ದಾಳಿಗೆ ತತ್ತರಿಸಿ ಹೋಯಿತು. ಪರಿಣಾಮ ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡವು ನಿಗದಿತ 20 ಓವರ್‌ನಲ್ಲಿ ಕೇವಲ 82 ರನ್ ಗಳಿಸಿ ಸರ್ವಪತನ ಕಂಡಿತು.
ಭಾರತದ ಮಿಂಚಿನ ದಾಳಿ ನಡೆಸಿದ ಗೊಂಗಾಡಿ ತ್ರಿಷಾ 15 ರನ್ ನೀಡಿ 4 ವಿಕೆಟ್ ಪಡೆದರೆ, ವೈಷ್ಣವಿ ಶರ್ಮಾ, ಆಯುಷಿ ಶುಕ್ಲಾ ಹಾಗೂ ಪಾರುಣಿಕಾ ಸಿಸೋಡಿಯಾ ತಲಾ 2 ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು. ಇನ್ನು ಶಬ್ನಂ ಶಕೀಲ್ ಒಂದು ವಿಕೆಟ್ ತಮ್ಮದಾಗಿಸಿಕೊಂಡರು.
ಟಿ20 ಸರಣಿ ಗೆದ್ದಿರುವ ಟೀಂ ಇಂಡಿಯಾಗೆ ಇಂಗ್ಲೆಂಡ್ ಎದುರು ಮತ್ತೊಂದು ಗೆಲುವಿನ ತವಕ
ಇನ್ನು ಸಾಧಾರಣ ಗುರಿ ಬೆನ್ನತ್ತಿದ ಭಾರತ ಕಿರಿಯರ ಮಹಿಳಾ ತಂಡಕ್ಕೆ ಕಮಿಲಿನಿ ಹಾಗೂ ತ್ರಿಷಾ 36 ರನ್‌ಗಳ ಸ್ಪೋಟಕ ಜತೆಯಾಟ ಒದಗಿಸಿಕೊಟ್ಟರು. ಕಮಲಿನಿ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ತ್ರಿಷಾ ಹಾಗೂ ಸಾನಿಕಾ ಚಲ್ಕೆ ಮುರಿಯದ 48 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಅನಾಸಾಯವಾಗಿ ಗೆಲುವಿನ ದಡ ಸೇರಿಸಿದರು.
ಟೂರ್ನಿಯುದ್ದಕ್ಕೂ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ ಗೊಂಗಾಡಿ ತ್ರಿಷಾ 293 ರನ್ ಸಿಡಿಸಿ ಗಮನ ಸೆಳೆದರು. ಇನ್ನು ಬೌಲಿಂಗ್‌ನಲ್ಲಿ ವೈಷ್ಣವಿ ಶರ್ಮಾ 17 ವಿಕೆಟ್ ಕಬಳಿಸುವ ಮೂಲಕ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದರು.
