ಮೊದಲೆರಡು ಪಂದ್ಯ ಗೆದ್ದಿದ್ದ ಭಾರತ ಕಳೆದ ಪಂದ್ಯವನ್ನು ಗ್ಲೆನ್ ಮ್ಯಾಕ್ಸ್‌ವೆಲ್‌ರ ಸಾಹಸದ ಮುಂದೆ ಕೈಚೆಲ್ಲಿತ್ತು. ಮೂರೂ ಪಂದ್ಯಗಳಲ್ಲಿ ಬೌಲರ್‌ಗಳ ಪ್ರದರ್ಶನ ತೀರಾ ಕಳಪೆಯಾಗಿತ್ತು. ಕ್ರಮವಾಗಿ 209, 191 ಹಾಗೂ 225 ರನ್‌ ಬಿಟ್ಟುಕೊಟ್ಟಿದ್ದು, ಈ ಪಂದ್ಯದಲ್ಲಾದರೂ ಮೊನಚು ಕಂಡುಕೊಳ್ಳಬೇಕಿದೆ.

ರಾಯ್ಪುರ(ಡಿ.01): ಆಸ್ಟ್ರೇಲಿಯಾ ವಿರುದ್ಧ ಹ್ಯಾಟ್ರಿಕ್‌ ಟಿ20 ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿರುವ ಟೀಂ ಇಂಡಿಯಾ ಯುವ ಪಡೆ, ಶುಕ್ರವಾರ 4ನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿಯಲಿದೆ. 5 ಪಂದ್ಯದ ಸರಣಿಯಲ್ಲಿ 2-1ರಲ್ಲಿ ಮುಂದಿರುವ ಭಾರತ ಕೊನೆಯ ಪಂದ್ಯದ ವರೆಗೂ ಕಾಯದೆ ಸರಣಿ ಗೆಲ್ಲಲು ಎದುರು ನೋಡುತ್ತಿದ್ದರೆ, ಆಸೀಸ್‌ ಸರಣಿ ಸಮಬಲದ ವಿಶ್ವಾಸದಲ್ಲಿದೆ.

ಮೊದಲೆರಡು ಪಂದ್ಯ ಗೆದ್ದಿದ್ದ ಭಾರತ ಕಳೆದ ಪಂದ್ಯವನ್ನು ಗ್ಲೆನ್ ಮ್ಯಾಕ್ಸ್‌ವೆಲ್‌ರ ಸಾಹಸದ ಮುಂದೆ ಕೈಚೆಲ್ಲಿತ್ತು. ಮೂರೂ ಪಂದ್ಯಗಳಲ್ಲಿ ಬೌಲರ್‌ಗಳ ಪ್ರದರ್ಶನ ತೀರಾ ಕಳಪೆಯಾಗಿತ್ತು. ಕ್ರಮವಾಗಿ 209, 191 ಹಾಗೂ 225 ರನ್‌ ಬಿಟ್ಟುಕೊಟ್ಟಿದ್ದು, ಈ ಪಂದ್ಯದಲ್ಲಾದರೂ ಮೊನಚು ಕಂಡುಕೊಳ್ಳಬೇಕಿದೆ. ಪ್ರಸಿದ್ಧ್‌ ಕೃಷ್ಣ ಗಾಯದಿಂದ ಚೇತರಿಸಿ ತಂಡಕ್ಕೆ ಮರಳಿದ ಬಳಿಕ ದುಬಾರಿಯಾಗುತ್ತಿದ್ದು, ಇತರರಿಂದಲೂ ಆಸೀಸ್‌ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಸಾಧ್ಯವಾಗುತ್ತಿಲ್ಲ. ಶ್ರೇಯಸ್‌ ಅಯ್ಯರ್‌, ದೀಪಕ್‌ ಚಹರ್‌ ಸೇರ್ಪಡೆ ತಂಡಕ್ಕೆ ಬಲ ಒದಗಿಸಲಿದ್ದು, ಶ್ರೇಯಸ್‌ಗಾಗಿ ತಿಲಕ್‌ ಜಾಗ ಬಿಟ್ಟುಕೊಡಬೇಕಾಗಬಹುದು. ಪ್ರಸಿದ್ಧ್‌ರನ್ನು ಹೊರಗಿಟ್ಟು ಚಹರ್‌ರನ್ನು ಆಡಿಸುವ ಸಾಧ್ಯತೆ ಹೆಚ್ಚು.

ಮತ್ತೊಂದೆಡೆ ಆಸೀಸ್‌ನ ಗ್ಲೆನ್ ಮ್ಯಾಕ್ಸ್‌ವೆಲ್‌, ಸ್ಟೀವ್ ಸ್ಮಿತ್‌, ಆಡಂ ಜಂಪಾ ಸೇರಿ ಪ್ರಮುಖ ಆಟಗಾರರು ತವರಿಗೆ ಮರಳಿದ್ದು, ಯುವ ಪಡೆ ಮೇಲೆ ಸರಣಿ ಉಳಿಸಿಕೊಳ್ಳುವ ಜವಾಬ್ದಾರಿಯಿದೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಋತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್‌, ಇಶಾನ್‌ ಕಿಶನ್, ಶ್ರೇಯಸ್‌ ಅಯ್ಯರ್, ಸೂರ್ಯಕುಮಾರ್ ಯಾದವ್(ನಾಯಕ), ರಿಂಕು ಸಿಂಗ್, ಅಕ್ಷರ್‌ ಪಟೇಲ್, ದೀಪಕ್‌ ಚಹರ್, ರವಿ ಬಿಷ್ಣೋಯಿ, ಆವೇಶ್‌ ಖಾನ್/ಮುಕೇಶ್‌ ಕುಮಾರ್, ಅರ್ಶ್‌ದೀಪ್‌ ಸಿಂಗ್.

ಆಸ್ಟ್ರೇಲಿಯಾ: ಟ್ರಾವಿಸ್ ಹೆಡ್‌, ಹಾರ್ಡೀ, ಜೋಶ್ ಇಂಗ್ಲಿಸ್‌, ಮ್ಯಾಥ್ಯೂ ವೇಡ್‌, ಕ್ಯಾಮರೋನ್ ಗ್ರೀನ್‌, ಮಾರ್ಕಸ್ ಸ್ಟೋಯ್ನಿಸ್‌, ಟಿಮ್ ಡೇವಿಡ್‌, ನೇಥನ್ ಎಲ್ಲಿಸ್‌, ಜೇಸನ್ ಬೆಹ್ರನ್‌ಡ್ರಾಫ್‌, ತನ್ವೀರ್‌, ಕೇನ್ ರಿಚರ್ಡ್‌ಸನ್‌,

ಪಂದ್ಯ ಆರಂಭ: ಸಂಜೆ 7ಕ್ಕೆ, ನೇರ ಪ್ರಸಾರ: ಸ್ಪೋರ್ಟ್ಸ್‌ 18, ಜಿಯೋ ಸಿನಿಮಾ