Asianet Suvarna News Asianet Suvarna News

Breaking: 19 ವಯೋಮಿತಿ ವಿಶ್ವಕಪ್‌ ಫೈನಲ್‌ಗೇರಿದ ಭಾರತ ತಂಡ!


ಸೆಮಿಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 2 ವಿಕೆಟ್‌ಗಳಿಂದ ರೋಚಕವಾಗಿ ಮಣಿಸಿದ ಭಾರತ ತಂಡ 19 ವಯೋಮಿತಿ ವಿಶ್ವಕಪ್‌ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದೆ.
 

India reaches final of ICC Under 19 Cricket World Cup san
Author
First Published Feb 6, 2024, 9:29 PM IST

ಬೆನೋನಿ (ಫೆ.6): ನಾಯಕ ಉದಯ್  ಶರಣ್‌ ಹಾಗೂ ಸಚಿನ್‌ ಧಾಸ್‌ ಅವರ ಅದ್ಭುತ ಬ್ಯಾಟಿಂಗ್‌ ನಿರ್ವಹಣೆ ನೆರವಿನಿಂದ ಭಾರತ ತಂಡ 19 ವಯೋಮಿತಿ ವಿಶ್ವಕಪ್‌ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಐದು ಬಾರಿಯ ಚಾಂಪಿಯನ್‌ ಭಾರತ ತಂಡ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಅಥವಾ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಬೆನೋನಿಯ ವಿಲೋಮೂರ್ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಫ್ರಿಕಾ ತಂಡ 7 ವಿಕೆಟ್‌ಗೆ 244 ರನ್‌ಗಳ ಸವಾಲಿನ ಮೊತ್ತವನ್ನು ಪೇರಿಸಿತ್ತು. ಪ್ರತಿಯಾಗಿ ಭಾರತ  ತಂಡ 48.5 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 248 ರನ್‌ ಬಾರಿಸುವ ಮೂಲಕ ಸತತ ಐದನೇ ಬಾರಿಗೆ 19 ವಯೋಮಿತಿ ವಿಶ್ವಕಪ್‌ ಟೂರ್ನಿಯ ಫೈನಲ್‌ಗೆ ಲಗ್ಗೆ ಇಟ್ಟಿತು.ಹಾಗೇನಾದರೂ ಪಾಕಿಸ್ತಾನ ಅಥವಾ ಆಸ್ಟ್ರೇಲಿಯಾ ತಂಡ ಫೈನಲ್‌ಗೆ ಬಂದಲ್ಲಿ ರೋಚಕವಾಗಿರಲಿದೆ. ಪಾಕಿಸ್ತಾನ ವಿರುದ್ಧದ ಪಂದ್ಯ ಸಾಂಪ್ರದಾಯಿಕ ಎದುರಾಳಿಯ ವಿರುದ್ಧದ ಫೈನಲ್‌ ಎನ್ನುವ ಕಾರಣಕ್ಕೆ ಕ್ರಿಕೆಟ್‌ ಅಭಿಮಾನಿಗಳನ್ನು ಸೆಳೆಯಲಿದ್ದರೆ, ಆಸ್ಟ್ರೇಲಿಯಾ ವಿರುದ್ಧದ ಫೈನಲ್‌ ಪಂದ್ಯ ಸೇಡಿನ ಕಣವಾಗಿ ಮಾರ್ಪಡಲಿದೆ. ಕಳೆದ ವರ್ಷ ಅಹಮದಾಬಾದ್‌ನಲ್ಲಿ ನಡೆದ ಪುರುಷರ ಏಕದಿನ ವಿಶ್ವಕಪ್‌ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿತ್ತು.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ದಕ್ಷಿಣ ಆಫ್ರಿಕಾ ತಂಡ, ವಿಕೆಟ್‌ ಕೀಪರ್‌ ಲುವಾನ್-ಡ್ರೆ ಪ್ರಿಟೋರಿಯಸ್ (76 ರನ್‌, 102 ಎಸೆತ, 6 ಬೌಂಡರಿ, 3 ಸಿಕ್ಸರ್‌)  ಹಾಗೂ ರಿಚರ್ಡ್ ಸೆಲೆಟ್ಸ್ವಾನೆ (64 ರನ್‌, 100 ಎಸೆತ, 4 ಬೌಂಡರಿ, 2 ಸಿಕ್ಸರ್‌) ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ 7 ವಿಕೆಟ್‌ಗೆ 244 ರನ್‌ ಪೇರಿಸಿತ್ತು. ಈ ಮೊತ್ತ ಬೆನ್ನಟ್ಟಲು ಆರಂಭಿಸಿದ ಭಾರತ ತಂಡ ಒಂದು ಹಂತದಲ್ಲಿ 32 ರನ್‌ಗೆ 4 ವಿಕೆಟ್‌ ಕಳೆದುಕೊಂಡು ಸೋಲಿನ ಭೀತಿಯಲ್ಲಿತ್ತು.

171 ರನ್‌ಗಳ ಜೊತೆಯಾಟವಾಡಿದ ಸಚಿನ್‌-ಉದಯ್‌: ಆರಂಭಿಕ ಆಟಗಾರರಾದ ಆದರ್ಶ್‌ ಸಿಂಗ್‌ (0), ಆರ್ಶಿನ್‌ ಕುಲಕರ್ಣಿ (1), ಮುಶೀರ್‌ ಖಾನ್‌ ಹಾಗೂ ಪ್ರಿಯಾಂಶು ಮೂಲಿಯಾ (5) ವಿಕೆಟ್‌ಗಳನ್ನು ಕೇವಲ 32 ರನ್‌ ಬಾರಿಸುವಾಗಲೇ ಕಳೆದುಕೊಂಡಿದ್ದ ಭಾರತ ತಂಡ ಸೋಲಿನ ಸೂಚನೆಯಲ್ಲಿತ್ತು. ಆದರೆ, ಈ ವೇಳೆ ನಾಯಕ ಉದಯ್‌ ಶರಣ್‌ಗೆ ಜೊತೆಯಾದ 6ನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಸಚಿನ್‌ ಧಾಸ್‌ ಅಮೂಲ್ಯ ಜೊತೆಯಾಟ ನಿಭಾಯಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾದರು. 5ನೇ ವಿಕೆಟ್‌ಗೆ ಈ ಜೋಡಿ ಅಮೂಲ್ಯ 171 ರನ್‌ ಜೊತೆಯಾಟವಾಡಿತು. 95 ಎಸೆತಗಳಲ್ಲಿ 11 ಬೌಂಡರಿ, 1 ಸಿಕ್ಸರ್‌ ಬಾರಿಸಿದ್ದ ಸಚಿನ್‌ ಧಾಸ್‌ 96 ರನ್‌ಗೆ ಔಟಾದರು. ಸಚಿನ್‌ ತಮ್ಮ ಶತಕದಿಂದ ವಂಚಿತರಾದರೂ, ತಂಡವನ್ನು ಮಾತ್ರ ಗೆಲುವಿನ ದಡದತ್ತ ಸಾಗಿಸಿದ್ದರು.

U 19 World Cup: ಇಂದು ಭಾರತ vs ದಕ್ಷಿಣ ಆಫ್ರಿಕಾ ಸೆಮೀಸ್ ಕದನ

ಸಚಿನ್‌ ಔಟಾದಾಗ ತಂಡದ ಗೆಲುವಿಗೆ ಇನ್ನೂ45 ರನ್‌ ಬೇಕಿದ್ದವು. ಈ ಹಂತದಲ್ಲಿ ನಾಯಕ ಉದಯ್‌ ಶರಣ್‌, ವಿಕೆಟ್‌ ಕೀಪರ್‌ ಎ ಅವಿನಾಶ್‌ (10) ಹಾಗೂ ರಾಜ್‌ ಲಿಂಬಾಣಿ (13 ರನ್‌, 4 ಎಸೆತ, 1 ಬೌಂಡರಿ, 1 ಸಿಕ್ಸರ್‌) ಅವರೊಂದಿಗೆ ಪ್ರಮುಖ ಕ್ಷಿಪ್ರ ಜೊತೆಯಾಟವಾಡಿದ್ದರಿಂದ ತಂಡದ ಗೆಲುವು ಸುಲಭವಾಯಿತು. ಗೆಲುವಿನಿಂದ ಕೇವಲ 4 ರನ್‌ ದೂರವಿದ್ದಾಗ  124 ಎಸೆತಗಳಲ್ಲಿ 6 ಬೌಂಡರಿಗಳೊಂದಿಗೆ 81 ರನ್‌ ಬಾರಿಸಿದ್ದ ಉದಯ್‌ ಶರಣ್‌ ರನ್‌ಔಟ್‌ ಆಗಿ ನಿರ್ಗಮಿಸಿದರೂ ಮರು ಎಸೆತದಲ್ಲಿ ರಾಜ್‌ ಲಿಂಬಾಣಿ ಬೌಂಡರಿ ಸಿಡಿಸಿ ತಂಡವನ್ನು ಫೈನಲ್‌ಗೇರಿಸಿದರು.

ಮದುವೆಯಾಗೋದಾಗಿ ನಂಬಿಸಿ ವಂಚನೆ ಆರೋಪ; ಭಾರತ ಹಾಕಿ ಆಟಗಾರನ ಮೇಲೆ ಪೋಕ್ಸೊ ಪ್ರಕರಣ ದಾಖಲು!

Follow Us:
Download App:
  • android
  • ios