ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸೋಲಿನ ಬಳಿಕ ಕೋಚ್ ಗೌತಮ್ ಗಂಭೀರ್ ಅವರನ್ನು ಕೆಳಗಿಳಿಸಬೇಕೆಂಬ ಕೂಗು ಎದ್ದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸೌರವ್ ಗಂಗೂಲಿ, ಗಂಭೀರ್ ಮತ್ತು ನಾಯಕ ಗಿಲ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
ಕೋಲ್ಕತಾ: ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟೆಸ್ಟ್‌ನಲ್ಲಿ ಟೀಂ ಇಂಡಿಯಾ 30 ರನ್ ಅಂತರದ ಹೀನಾಯ ಸೋಲು ಅನುಭವಿಸಿದೆ. ಇದರ ಬೆನ್ನಲ್ಲೇ ತಂಡದ ಹೆಡ್‌ಕೋಚ್ ಗೌತಮ್ ಗಂಭೀರ್ ಅವರನ್ನು ಕೆಳಗಿಳಿಸಬೇಕು ಎನ್ನುವಂತಹ ಆಗ್ರಹ ಜೋರಾಗಿದೆ. ಹೀಗಿರುವಾಗಲೇ ಈ ಕುರಿತಂತೆ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದ ಕೋಚ್ ಸ್ಥಾನದಿಂದ ಗೌತಮ್ ಗಂಭೀರ್ ಅವರನ್ನು ತೆಗೆದುಹಾಕಬೇಕೇ ಎಂಬ ಪ್ರಶ್ನೆಗೆ ಮಾಜಿ ನಾಯಕ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಕೋಲ್ಕತಾ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸೋತ ಹಿನ್ನೆಲೆಯಲ್ಲಿ, ಗಂಭೀರ್ ಅವರನ್ನು ಬದಲಾಯಿಸಬೇಕೇ ಎಂದು ಮಾಧ್ಯಮಗಳು ಮಾಜಿ ನಾಯಕನನ್ನು ಪ್ರಶ್ನಿಸಿದ್ದವು. ಗಂಭೀರ್ ಕೋಚ್ ಆದ ನಂತರ ತವರಿನಲ್ಲಿ ಆಡಿದ ಆರು ಟೆಸ್ಟ್‌ಗಳಲ್ಲಿ ಭಾರತ ನಾಲ್ಕರಲ್ಲಿ ಸೋತಿದೆ.
ಗೌತಮ್ ಗಂಭೀರ್ ಬೆನ್ನಿಗೆ ನಿಂತ ಗಂಗೂಲಿ
ಗೌತಮ್ ಗಂಭೀರ್ ಮತ್ತು ಕ್ಯಾಪ್ಟನ್ ಶುಭಮನ್ ಗಿಲ್ ಅವರನ್ನು ಈಗ ತೆಗೆದುಹಾಕುವ ಅಗತ್ಯವಿಲ್ಲ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗಂಭೀರ್ ಮತ್ತು ಗಿಲ್ ಅದ್ಭುತ ಪ್ರದರ್ಶನ ನೀಡಿದ್ದಾರೆ ಎಂದು ಗಂಗೂಲಿ ಹೇಳಿದ್ದಾರೆ. ಇಂಗ್ಲೆಂಡ್‌ನ ಉತ್ತಮ ಬ್ಯಾಟಿಂಗ್ ವಿಕೆಟ್‌ಗಳಲ್ಲಿ ಗಂಭೀರ್ ಮತ್ತು ಗಿಲ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಭಾರತದಲ್ಲೂ ಉತ್ತಮ ಬ್ಯಾಟಿಂಗ್ ವಿಕೆಟ್ ಸಿಕ್ಕರೆ ಅವರು ಉತ್ತಮ ಪ್ರದರ್ಶನ ನೀಡಬಲ್ಲರು. ಕೋಲ್ಕತಾದ ಪಿಚ್ ಸಿದ್ಧಪಡಿಸುವಲ್ಲಿ ಕ್ಯುರೇಟರ್‌ನಿಂದ ಯಾವುದೇ ತಪ್ಪಾಗಿಲ್ಲ. ಪಂದ್ಯಕ್ಕೆ ನಾಲ್ಕು ದಿನಗಳ ಮೊದಲು ಸ್ಥಳೀಯ ಕ್ಯುರೇಟರ್‌ಗಳು ಬಿಸಿಸಿಐ ಕ್ಯುರೇಟರ್‌ಗೆ ಪಿಚ್‌ನ ಜವಾಬ್ದಾರಿಯನ್ನು ಹಸ್ತಾಂತರಿಸುತ್ತಾರೆ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.
ಕೋಲ್ಕತಾದಲ್ಲೂ ಅದೇ ನಡೆದಿದೆ. ಈಡನ್ ಗಾರ್ಡನ್ಸ್‌ನ ಕ್ಯುರೇಟರ್ ಸುಜನ್ ಮುಖರ್ಜಿ ಅವರು ಭಾರತೀಯ ತಂಡದ ಮ್ಯಾನೇಜ್‌ಮೆಂಟ್ ಮತ್ತು ಬಿಸಿಸಿಐ ಮುಖ್ಯ ಕ್ಯುರೇಟರ್ ಅವರ ನಿರ್ದೇಶನದಂತೆ ಪಿಚ್ ಸಿದ್ಧಪಡಿಸಿದ್ದಾರೆ. ಬಿಸಿಸಿಐ ಸೂಚಿಸಿದಾಗ, ಕ್ಯುರೇಟರ್ ಅದಕ್ಕೆ ತಕ್ಕಂತೆ ಪಿಚ್ ಸಿದ್ಧಪಡಿಸಲು ಮಾತ್ರ ಸಾಧ್ಯ. ಕೋಲ್ಕತಾದ ಪಿಚ್ ಗುಣಮಟ್ಟಕ್ಕೆ ತಕ್ಕಂತೆ ಇರಲಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಭಾರತ ತಂಡವು ಇದಕ್ಕಿಂತ ಉತ್ತಮವಾದ ಪಿಚ್‌ಗೆ ಅರ್ಹವಾಗಿದೆ. ಆದರೆ ಕೆಲವೊಮ್ಮೆ ವಿಷಯಗಳು ನಮ್ಮ ನಿಯಂತ್ರಣದಲ್ಲಿರುವುದಿಲ್ಲ. ತಂಡದ ಮ್ಯಾನೇಜ್‌ಮೆಂಟ್, ಕೋಚ್ ಅಥವಾ ಕ್ಯಾಪ್ಟನ್‌ನ ಸೂಚನೆಗಳನ್ನು ಸ್ಥಳೀಯ ಕ್ಯುರೇಟರ್ ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಗಂಗೂಲಿ ಹೇಳಿದ್ದಾರೆ.
ಸರಣಿ ಗೆಲ್ಲುವ ವಿಶ್ವಾಸದಲ್ಲಿ ಹರಿಣಗಳ ಪಡೆ
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಇಲ್ಲಿನ ಈಡನ್ ಗಾರ್ಡನ್ಸ್ ಮೈದಾನ ಆತಿಥ್ಯ ವಹಿಸಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವು ಜಸ್ಪ್ರೀತ್ ಬುಮ್ರಾ ಮಾರಕ ದಾಳಿಗೆ ತತ್ತರಿಸಿ ಕೇವಲ 159 ರನ್‌ಗಳಿಗೆ ಸರ್ವಪತನ ಕಂಡಿತ್ತು. ಇದಕ್ಕುತ್ತರವಾಗಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 189 ರನ್ ಸಿಡಿಸುವ ಮೂಲಕ 30 ರನ್‌ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿತ್ತು. ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವು ನಾಯಕ ತೆಂಬಾ ಬವುಮಾ ಬಾರಿಸಿದ ಅಜೇಯ ಅರ್ಧಶತಕದ ನೆರವಿನಿಂದ 153 ರನ್ ಗಳಿಸಿ ಸರ್ವಪತನ ಕಂಡಿತು. ಈ ಮೂಲಕ ಭಾರತಕ್ಕೆ ಗೆಲ್ಲಲು 123 ರನ್‌ಗಳ ಸಾಧಾರಣ ಗುರಿ ಸಿಕ್ಕಿತ್ತು. ಈ ಗುರಿ ಬೆನ್ನತ್ತಿದ ಭಾರತ ಕೇವಲ 93 ರನ್‌ಗಳಿಗೆ ಆಲೌಟ್ ಆಗಿ ಮೊದಲ ಟೆಸ್ಟ್‌ನಲ್ಲಿ ಸೋಲು ಅನುಭವಿಸಿದೆ. ಇದೀಗ ಎರಡನೇ ಟೆಸ್ಟ್ ಪಂದ್ಯವು ನವೆಂಬರ್ 22ರಿಂದ ಗುವಾಹಟಿಯಲ್ಲಿ ಆರಂಭವಾಗಲಿದೆ. ಸರಣಿ ಸಮಬಲ ಸಾಧಿಸಬೇಕಿದ್ದರೇ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಭಾರತ ತಂಡ ಸಿಲುಕಿದೆ. ಅಂದಹಾಗೆ ಇದುವರೆಗೂ ದಕ್ಷಿಣ ಆಫ್ರಿಕಾ ತಂಡವು ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದಿಲ್ಲ. ಒಂದು ವೇಳೆ ಎರಡನೇ ಟೆಸ್ಟ್ ದಕ್ಷಿಣ ಆಫ್ರಿಕಾ ತಂಡವು ಗೆದ್ದರೇ ಅಥವಾ ಡ್ರಾ ಮಾಡಿಕೊಂಡರೂ ಟೆಸ್ಟ್ ಸರಣಿ ಹರಿಣಗಳ ಪಾಲಾಗಲಿದೆ.


