ಮುಂಬರುವ ಅಕ್ಟೋಬರ್ 03ರಿಂದ ಯುಎಇನಲ್ಲಿ ನಡೆಯಲಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ಮಹಿಳಾ ಕ್ರಿಕೆಟ್ ತಂಡ ಪ್ರಕಟವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ: ಅ.3ರಿಂದ ಯುಎಇನಲ್ಲಿ ನಡೆಯಲಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ಗೆ ಮಂಗಳವಾರ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿದ್ದು, 15 ಸದಸ್ಯೆಯರ ತಂಡವನ್ನು ಹರ್ಮನ್‌ಪ್ರೀತ್ ಕೌರ್ ಮುನ್ನಡೆಸಲಿದ್ದಾರೆ. ಸ್ಮೃತಿ ಮಂಧನಾ ಉಪನಾಯಕಿಯಾಗಿ ನೇಮಕಗೊಂಡಿದ್ದಾರೆ. ಕರ್ನಾಟಕದ ಶ್ರೇಯಾಂಕ ಪಾಟೀಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ತಂಡದಲ್ಲಿರುವ ಎಲ್ಲಾ ಆಟಗಾರ್ತಿಯರು, ಕಳೆದ ಜುಲೈನಲ್ಲಿ ನಡೆದ ಏಷ್ಯಾಕಪ್‌ನಲ್ಲಿ ಆಡಿದ್ದರು. ಫೈನಲ್‌ನಲ್ಲಿ ಲಂಕಾ ವಿರುದ್ಧ ಭಾರತ ಸೋತು ನಿರಾಸೆ ಅನುಭವಿಸಿತ್ತು. ಹೀಗಾಗಿ, ಹರ್ಮನ್‌ಪ್ರೀತ್ ಮೇಲೆ ಹೆಚ್ಚಿನ ಒತ್ತಡ ಇರಲಿದ್ದು, ಭಾರತ ಚೊಚ್ಚಲ ವಿಶ್ವಕಪ್ ಗೆಲ್ಲುವ ಕನಸಿನೊಂದಿಗೆ ಕಣಕ್ಕಿಳಿಯಲಿದೆ. ಶ್ರೇಯಾಂಕ ಏಷ್ಯಾಕಪ್ ವೇಳೆ ಕೈಬೆರಳಿನ ಗಾಯಕ್ಕೆ ತುತ್ತಾಗಿದ್ದರು. ಅವರು ಫಿಟ್ ಆಗಿದ್ದರಷ್ಟೇ ಯುಎಇಗೆ ಕಳುಹಿಸುವುದಾಗಿ ಬಿಸಿಸಿಐ ತಿಳಿಸಿದೆ.
ಬಾಂಗ್ಲಾ ಎದುರಿನ ಪಾಕ್ ಸೋಲಿಗೆ ಭಾರತ ಕಾರಣವೆಂದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಾಜಾ..!
ಕಳೆದ ಆವೃತ್ತಿಯ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಸೆಮಿಫೈನಲ್ ಪ್ರವೇಶಿಸಿತ್ತು. ಭಾರತ ಮಹಿಳಾ ತಂಡವನ್ನು ಸಾಕಷ್ಟು ಅಳೆದು ತೂಗಿಯೇ ಆಯ್ಕೆ ಮಾಡಲಾಗಿದೆ. ಆರಂಭಿಕ ಆಟಗಾರ್ತಿಯರಾಗಿ ಉಪನಾಯಕಿ ಮಂಧನಾ ಜತೆಗೆ ಶಫಾಲಿ ವರ್ಮಾ ಸ್ಥಾನ ಪಡೆದಿದ್ದಾರೆ. ಇದರ ಜತೆಗೆ ಡಯಾಲಿನ್ ಹೇಮಲತಾ ಕೂಡಾ ಅಗ್ರಕ್ರಮಾಂಕದ ಆಟಗಾರ್ತಿಯಾಗಿ ಸ್ಥಾನ ಪಡೆದಿದ್ದಾರೆ. ಇದರ ಜತೆಗೆ ಜಮಿಯಾ ರೋಡ್ರಿಗ್ಸ್, ದೀಪ್ತಿ ಶರ್ಮಾ ಹಾಗೂ ರಿಚಾ ಘೋಷ್ ಅವರಂತ ಟಿ20 ಸ್ಪೆಷಲಿಸ್ಟ್ ಆಟಗಾರ್ತಿಯರ ಬಲ ಭಾರತ ತಂಡಕ್ಕಿದೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ರೇಣುಕಾ ಸಿಂಗ್, ಪೂಜಾ ವಸ್ತ್ರಾಕರ್, ದೀಪ್ತಿ ಶರ್ಮಾ, ರಾಧಾ ಯಾದವ್, ಆಶಾ ಶೋಭನಾ, ಸಜನಾ ಸಜೀವನ್ ಹಾಗೂ ಶ್ರೇಯಾಂಕ ಪಾಟೀಲ್ ಸ್ಥಾನ ಪಡೆದಿದ್ದು, ಬೌಲಿಂಗ್‌ನಲ್ಲೂ ತಂಡಕ್ಕೆ ಸಾಕಷ್ಟು ಆಯ್ಕೆಗಳಿವೆ. ಅದರಲ್ಲೂ ಆಲ್ರೌಂಡರ್‌ಗಳಾದ ನಾಯಕಿ ಹರ್ಮನ್‌ಪ್ರೀತ್ ಕೌರ್, ದೀಪ್ತಿ ಶರ್ಮಾ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.
ತವರಲ್ಲೇ ಪಾಕಿಸ್ತಾನಕ್ಕೆ ಮುಖಭಂಗ; ಐತಿಹಾಸಿಕ ಟೆಸ್ಟ್ ಗೆಲುವು ಸಾಧಿಸಿದ ಬಾಂಗ್ಲಾದೇಶ..!
ಭಾರತ ತಂಡ ‘ಎ’ ಗುಂಪಿನಲ್ಲಿ ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಳ ಜೊತೆ ಸ್ಥಾನ ಪಡೆದಿದೆ. ಅ.4ರಂದು ಭಾರತಕ್ಕೆ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರಾಗಲಿದೆ. ಅ.6ರಂದು ಬದ್ಧವೈರಿ ಪಾಕಿಸ್ತಾನ, ಅ.9ರಂದು ಶ್ರೀಲಂಕಾ, ಅ.13ರಂದು ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ.
ಟಿ20 ವಿಶ್ವಕಪ್‌ಗೆ ಭಾರತ ತಂಡ
ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧನಾ (ಉಪನಾಯಕಿ), ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಜೆಮಿಮಾ ರೋಡ್ರಿಗ್ಸ್, ರಿಚಾ ಘೋಷ್, ಯಸ್ತಿಕಾ ಭಾಟಿಯಾ, ಪೂಜಾ ವಸ್ತ್ರಕರ್, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್, ದಯಾಳನ್ ಹೇಮಲತಾ, ಆಶಾ ಶೋಭನಾ, ರಾಧಾ ಯಾದವ್, ಶ್ರೇಯಾಂಕ ಪಾಟೀಲ್, ಸಜನಾ ಸಜೀವನ್.
ಮೀಸಲು ಆಟಗಾರ್ತಿಯರು: ಉಮಾ ಚೆಟ್ರಿ, ತನುಜಾ ಕನ್ವರ್, ಸೈಮಾ ಥಾಕೋರ್.
