ಬಾಂಗ್ಲಾ ಎದುರಿನ ಪಾಕ್ ಸೋಲಿಗೆ ಭಾರತ ಕಾರಣವೆಂದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಾಜಾ..!
ತವರಿನಲ್ಲಿ ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನ ಸೋಲಲು ಭಾರತವೇ ಕಾರಣ ಎಂದು ರಮೀಜ್ ರಾಜಾ ಹೇಳಿದ್ದಾರೆ. ಏಷ್ಯಾಕಪ್‌ನಲ್ಲಿ ಭಾರತೀಯ ಬ್ಯಾಟರ್‌ಗಳು ಪಾಕಿಸ್ತಾನದ ವೇಗಿಗಳನ್ನು ಚೆನ್ನಾಗಿ ಆಡಿದ್ದರಿಂದ ಪಾಕ್ ವೇಗಿಗಳು ಆತ್ಮವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು: ಪಾಕಿಸ್ತಾನ ಕ್ರಿಕೆಟ್ ತಂಡವು ತವರಿನಲ್ಲೇ ಬಾಂಗ್ಲಾದೇಶ ಎದುರು ಮೊದಲ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಅಂತರದ ಹೀನಾಯ ಸೋಲು ಅನುಭವಿಸಿದೆ. ಈ ಮೂಲಕ ಬಾಂಗ್ಲಾದೇಶ ತಂಡವು ಇದೇ ಮೊದಲ ಬಾರಿಗೆ ಪಾಕಿಸ್ತಾನ ನೆಲದಲ್ಲಿ ಚೊಚ್ಚಲ ಟೆಸ್ಟ್ ಪಂದ್ಯ ಗೆದ್ದು ಸ್ಮರಣೀಯವಾಗಿಸಿಕೊಂಡಿದೆ. ಈ ಸೋಲು ಶಾನ್ ಮಸೂದ್ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡದ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಅಭಿಮಾನಿಗಳು ಹಾಗೂ ಮಾಜಿ ಕ್ರಿಕೆಟಿಗರಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.
ಇದೆಲ್ಲದರ ನಡುವೆ ಪಾಕಿಸ್ತಾನ ಕ್ರಿಕೆಟ್ ತಂಡವು ಕಂಡಂತಹ ಅತ್ಯುತ್ತಮ ಬ್ಯಾಟರ್ ಹಾಗೂ ಪ್ರಖ್ಯಾತ ವೀಕ್ಷಕವಿವರಣೆಗಾರ ಎನಿಸಿಕೊಂಡಿರುವ ರಮೀಜ್ ರಾಜಾ ವಿವಾದಾತ್ಮಕ ಹೇಳಿಕೆ ಮೂಲಕ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದ್ದಾರೆ. ತವರಿನಲ್ಲಿ ಬಾಂಗ್ಲಾದೇಶ ಎದುರು ಪಾಕಿಸ್ತಾನ ತಂಡ ಸೋಲಲು ಭಾರತದ ಪಾತ್ರವಿದೆ ಎಂದಿದ್ದಾರೆ. ಇದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
"ನೀವು ಸ್ಪಿನ್ನರ್ ಇಲ್ಲದೇ ಕಣಕ್ಕಿಳಿದಿದ್ದರಿಂದ, ಮೊದಲಿಗೆ ತಂಡದ ಆಯ್ಕೆಯಲ್ಲೇ ಮಿಸ್ಟೇಕ್ ಆಗಿದೆ. ಎರಡನೇಯದಾಗಿ ನಾವು ವೇಗದ ಬೌಲರ್‌ಗಳ ಮೇಲೆ ಅತೀವ ನಂಬಿಕೆಯಿಟ್ಟುಕೊಂಡಿದ್ದು ನಮಗೆ ಮುಳುವಾಯಿತು. ಯಾಕೆಂದರೆ ಏಷ್ಯಾಕಪ್ ಟೂರ್ನಿಯ ವೇಳೆಯಲ್ಲಿಯೇ ಭಾರತೀಯ ಬ್ಯಾಟರ್‌ಗಳು ಪಾಕಿಸ್ತಾನದ ವೇಗಿಗಳನ್ನು ಮನಬಂದಂತೆ ದಂಡಿಸಿದ್ದಾರೆ. ಹೀಗಾಗಿ ನಮ್ಮ ವೇಗಿಗಳು ಆತ್ಮವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ. ಇದು ಹೊರಜಗತ್ತಿಗೆ ಗುಟ್ಟಾಗಿಯೇನೂ ಉಳಿದಿಲ್ಲ. ನಮ್ಮ ವೇಗಿಗಳು ಗಂಟೆಗೆ 125 ರಿಂದ 135 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿದರೇ ಬಾಂಗ್ಲಾದೇಶದಂತಹ ಬ್ಯಾಟರ್‌ಗಳು ದಿಟ್ಟ ಹೋರಾಟ ನೀಡುವಂತಾಯಿತು" ಎಂದು ರಾಜಾ ಹೇಳಿದ್ದಾರೆ.
"ಬಾಂಗ್ಲಾದೇಶದ ವೇಗಿಗಳು ಹೆಚ್ಚು ಕರಾರುವಕ್ಕಾದ ದಾಳಿಯನ್ನು ನಡೆಸಿದರೆ, ಪಾಕಿಸ್ತಾನದ ವೇಗಿಗಳು ಈ ಪಿಚ್‌ನಲ್ಲಿ ಡ್ರಾಮಾ ಮಾಡುವುದಕ್ಕಷ್ಟೇ ಸೀಮಿತವಾದರು. ಪಾಕ್ ವೇಗಿಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತಹ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಬಾಂಗ್ಲಾದೇಶದ ಬ್ಯಾಟರ್‌ಗಳು ಒಳ್ಳೆಯ ಹೋರಾಟ ತೋರಿದರು" ಎಂದು ರಾಜಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
ತವರಲ್ಲೇ ಪಾಕಿಸ್ತಾನಕ್ಕೆ ಮುಖಭಂಗ; ಐತಿಹಾಸಿಕ ಟೆಸ್ಟ್ ಗೆಲುವು ಸಾಧಿಸಿದ ಬಾಂಗ್ಲಾದೇಶ..!
ಇನ್ನು ಇದೇ ವೇಳೆ ರಮೀಜ್ ರಾಜಾ, ಪಾಕಿಸ್ತಾನದ ನಾಯಕ ಶಾನ್ ಮಸೂದ್ ಅವರ ಕ್ರಿಕೆಟ್ ಜ್ಞಾನದ ಕುರಿತಂತೆಯೂ ಪ್ರಶ್ನೆ ಎತ್ತಿದ್ದಾರೆ. "ಶಾನ್ ಮಸೂದ್ ಸದ್ಯ ಸೋಲಿನ ಸರಪಳಿಯಲ್ಲಿ ಸಿಲುಕಿದ್ದಾರೆ. ನನಗೆ ಅನಿಸೋದು, ಆಸ್ಟ್ರೇಲಿಯಾದ ಕಂಡೀಷನ್‌ನಲ್ಲಿ ಪಾಕಿಸ್ತಾನ ಟೆಸ್ಟ್ ಸರಣಿ ಗೆಲ್ಲುವುದು ಕಷ್ಟಸಾಧ್ಯ ಎನ್ನುವುದು ನಮಗೂ ಅರಿವಿದೆ. ಆದರೆ ತವರಿನಲ್ಲಿ ಬಾಂಗ್ಲಾದೇಶದಂತಹ ತಂಡದ ಎದುರು ಸೋಲುತ್ತೀವಿ ಎಂದಾದರೇ, ನಾಯಕ ಶಾನ್ ಮಸೂದ್‌ಗೆ ಕಂಡೀಷನ್ ಅರ್ಥಮಾಡಿಕೊಳ್ಳುವ ಜ್ಞಾನ ಇಲ್ಲ ಎಂದೆನಿಸುತ್ತಿದೆ" ಎಂದು ರಾಜಾ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.