ಎಜ್‌ಬಾಸ್ಟನ್‌ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿರುವ ಟೀಂ ಇಂಡಿಯಾ ಲಾರ್ಡ್ಸ್‌ನಲ್ಲಿ ಮೂರನೇ ಟೆಸ್ಟ್‌ಗೆ ಸಜ್ಜಾಗಿದೆ. ಕರುಣ್ ನಾಯರ್ ಮತ್ತು ಪ್ರಸಿದ್ಧ್ ಕೃಷ್ಣ ಬದಲಿ ಆಟಗಾರರ ಸಾಧ್ಯತೆ ಇದೆ. ಇಂಗ್ಲೆಂಡ್ ತಂಡಕ್ಕೆ ಗಸ್ ಆಟ್ಕಿನ್ಸನ್ ಸೇರ್ಪಡೆಯಾಗಿದ್ದಾರೆ.
ಲಂಡನ್: ನಾಟಿಂಗ್‌ಹ್ಯಾಮ್‌ನಲ್ಲಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಕೈಚೆಲ್ಲಿದ್ದ ಟೀಂ ಇಂಡಿಯಾ, ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ಅಭೂತಪೂರ್ವ ಪ್ರದರ್ಶನ ನೀಡಿ ಐತಿಹಾಸಿಕ ಗೆಲುವು ತನ್ನದಾಗಿಸಿಕೊಂಡಿದೆ. ಶುಭ್‌ಮನ್ ಗಿಲ್ ನಾಯಕತ್ವದ ಭಾರತ ತಂಡ ಮುಂದಿನ ಗುರಿ ಲಾರ್ಡ್ಸ್. ಕ್ರಿಕೆಟ್ ಕಾಶಿ ಎಂದೇ ಕರೆಯಲ್ಪಡುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಗುರುವಾರದಿಂದ 3ನೇ ಟೆಸ್ಟ್ ಆರಂಭಗೊಳ್ಳಲಿದ್ದು, ಮತ್ತೊಮ್ಮೆ ಇಂಗ್ಲೆಂಡ್‌ನ ಬಗ್ಗುಬಡಿಯಲು ಭಾರತ ಕಾತರಿಸುತ್ತಿದೆ.
2ನೇ ಟೆಸ್ಟ್‌ನಲ್ಲಿ ಗೆದ್ದ ಹೊರತಾಗಿಯೂ ಭಾರತ ತಂಡದಲ್ಲಿ ಕೆಲ ಬದಲಾವಣೆ ಸಾಧ್ಯತೆಯಿದೆ. 8 ವರ್ಷಗಳ ಬಳಿಕ ತಂಡಕ್ಕೆ ಕಮ್‌ಬ್ಯಾಕ್ ಮಾಡಿರುವ ಕರುಣ್ ನಾಯರ್ ಸರಣಿ ಮೊದಲೆರಡು ಪಂದ್ಯಗಳಲ್ಲೂ ವಿಫಲರಾಗಿದ್ದಾರೆ. ಅವರು 4 ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 0, 20, 31, 26 ರನ್ ಗಳಿಸಿದ್ದಾರೆ. ಹೀಗಾಗಿ ಅವರನ್ನು ಲಾರ್ಡ್ಸ್ ಟೆಸ್ಟ್‌ನಿಂದ ಕೈಬಿಡುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಅಥವಾ ಅವರಿಗೆ ಮತ್ತೊಂದು ಅವಕಾಶ ನೀಡಲು ನಾಯಕ ಶುಭ್‌ಮನ್ ಗಿಲ್, ಕೋಚ್ ಗೌತಮ್ ಗಂಭೀರ್ ಮನಸ್ಸು ಮಾಡುತ್ತಾರೊ ಎಂಬುದನ್ನು ಕಾದುನೋಡಬೇಕಿದೆ.
ಇನ್ನು, 2 ಪಂದ್ಯಗಳಲ್ಲಿ ಸಾಧಾರಣ ಪ್ರದರ್ಶನ ನೀಡಿರುವ ಪ್ರಸಿದ್ಧ್ ಕೃಷ್ಣ 3ನೇ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ. ಮೊದಲ ಟೆಸ್ಟ್‌ನಲ್ಲಿ 5 ವಿಕೆಟ್ ಪಡೆದಿದ್ದ ಪ್ರಸಿದ್ಧ್ ದುಬಾರಿಯಾಗಿದ್ದರು. 2ನೇ ಪಂದ್ಯದಲ್ಲಿ ಅವರಿಗೆ ಲಭಿಸಿದ್ದು ಕೇವಲ 1 ವಿಕೆಟ್. ಲಾರ್ಡ್ಸ್‌ನಲ್ಲಿ ಜಸ್‌ಪ್ರೀತ್ ಬುಮ್ರಾ ಆಡುವುದು ಬಹುತೇಕ ಖಚಿತವಾಗಿರುವುದರಿಂದ ಪ್ರಸಿದ್ಧ್ ಹೊರಬೀಳುವ ಸಾಧ್ಯತೆಯಿದೆ. 2ನೇ ಟೆಸ್ಟ್‌ನ ಗೆಲುವಿನ ರೂವಾರಿಗಳಾದ ಆಕಾಶ್‌ದೀಪ್, ಮೊಹಮ್ಮದ್ ಸಿರಾಜ್ ಸ್ಥಾನ ಉಳಿಸಿಕೊಳ್ಳಲಿದ್ದಾರೆ. ಅಲ್ಲದೆ, ನಿತೀಶ್ ಕುಮಾರ್ ಸ್ಥಾನಕ್ಕೆ ಹೆಚ್ಚುವರಿ ಸ್ಪಿನ್ನರ್ ಆಗಿ ಕುಲ್ದೀಪ್ ಯಾದವ್‌ರನ್ನು ಕಣಕ್ಕಿಳಿಸಿದರೂ ಅಚ್ಚರಿಯಿಲ್ಲ.
ವಿಶ್ವ ಟೆಸ್ಟ್ ಅಂಕಪಟ್ಟಿ: 3ನೇ ಸ್ಥಾನಕ್ಕೆ ಭಾರತ
ಇಂಗ್ಲೆಂಡ್ ವಿರುದ್ಧ ಗೆಲುವಿನೊಂದಿಗೆ ಭಾರತ ತಂಡ 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಭಾರತ 2 ಪಂದ್ಯಗಳಲ್ಲಿ 1 ಜಯ, 1 ಸೋಲಿನೊಂದಿಗೆ ಶೇ.50 ಗೆಲುವಿನ ಪ್ರತಿಶತ ಹೊಂದಿದೆ. ಆಡಿರುವ 2 ಪಂದ್ಯಗಳಲ್ಲೂ ಗೆದ್ದಿರುವ ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ಅಗ್ರಸ್ಥಾನ ಕಾಯ್ದುಕೊಂಡಿದ್ದು, 2 ಪಂದ್ಯಗಳಲ್ಲಿ 1 ಗೆಲುವು, 1 ಡ್ರಾಗೊಂದಿಗೆ ಶೇ.66.67 ಗೆಲುವಿನ ಪ್ರತಿಶತ ಹೊಂದಿರುವ ಶ್ರೀಲಂಕಾ 2ನೇ ಸ್ಥಾನದಲ್ಲಿದೆ. ಇಂಗ್ಲೆಂಡ್ 4ನೇ, ಬಾಂಗ್ಲಾದೇಶ 5ನೇ ಸ್ಥಾನದಲ್ಲಿದೆ.
ಇಂಗ್ಲೆಂಡ್ ತಂಡಕ್ಕೆ ಆಟ್ಕಿನ್ಸನ್ ಸೇರ್ಪಡೆ
ಭಾರತ ವಿರುದ್ಧ 3ನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡ ವೇಗಿ ಗಸ್ ಆಟ್ಕಿನ್ಸನ್‌ರನ್ನು ಸೇರ್ಪಡೆಗೊಳಿಸಿದೆ. ಅವರು ಗಾಯದಿಂದಾಗಿ ಕೆಲ ಕಾಲ ತಂಡದಿಂದ ಹೊರಗುಳಿದಿದ್ದರು. ಲಾರ್ಡ್ಸ್ ಟೆಸ್ಟ್‌ನಲ್ಲಿ ಆಟ್ಕಿನ್ಸನ್ ಮಾತ್ರವಲ್ಲದೆ ಜೋಫ್ರಾ ಆರ್ಚರ್ ಕೂಡಾ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಬಹುದು. ಇಂಗ್ಲೆಂಡ್ ತಂಡ ಕೂಡಾ ತನ್ನ ಆಡುವ ಹನ್ನೊಂದರ ಬಳಗದಲ್ಲಿ ಕೆಲ ಬದಲಾವಣೆ ಮಾಡುವ ಸಾಧ್ಯತೆಯಿದೆ. ಅದರಲ್ಲೂ ಅನುಭವಿ ಕ್ರಿಕೆಟಿಗ ಜೋ ರೂಟ್ ಹಾಗೂ ಬೆನ್ ಸ್ಟೋಕ್ಸ್ ಎರಡನೇ ಟೆಸ್ಟ್‌ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವುದು ತಂಡವನ್ನು ಆತಂಕಕ್ಕೆ ಈಡು ಮಾಡಿದೆ.
ಇಂಥಾ ಬ್ಯಾಟಿಂಗ್ ಪಿಚ್ ಮತ್ತೆ ತಯಾರಿಸಲ್ಲ: ಗಿಲ್
ಆರಂಭಿಕ 2 ಟೆಸ್ಟ್‌ನಂತೆ ಲಾರ್ಡ್ಸ್‌ನಲ್ಲೂ ರನ್ ಮಳೆ ಹರಿಯುವ ಸಾಧ್ಯತೆಯನ್ನು ಭಾರತದ ನಾಯಕ ಶುಭ್‌ಮನ್ ಗಿಲ್ ತಳ್ಳಿ ಹಾಕಿದ್ದಾರೆ. ಈ ಬಗ್ಗೆ ಪಂದ್ಯದ ಬಳಿಕ ಪ್ರತಿಕ್ರಿಯಿಸಿರುವ ಅವರು, ‘ಲಾರ್ಡ್ಸ್‌ನಲ್ಲಿ ಯಾವ ರೀತಿ ಪಿಚ್ ನೀಡುತ್ತಾರೆ ನೋಡಬೇಕು. ಇಂಗ್ಲೆಂಡ್ ಮತ್ತೆ ಇಂತಹ ಬ್ಯಾಟಿಂಗ್ ಸ್ನೇಹಿ ಪಿಚ್ ತಯಾರಿಸಲಿದೆ ಎಂದು ನನಗೆ ಅನಿಸುವುದಿಲ್ಲ. ಪಿಚ್ ಹೇಗೆ ವರ್ತಿಸಲಿದೆ ಎಂಬುದನ್ನು ನೋಡಿ ತಂಡದ ಆಯ್ಕೆ ಮಾಡುತ್ತೇವೆ’ ಎಂದಿದ್ದಾರೆ.
