ಅಂಡರ್ 19 ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು 58 ರನ್‌ಗಳಿಂದ ಸೋಲಿಸಿ ಭಾರತ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಈ ಮೂಲಕ ಏಷ್ಯಾಕಪ್ ಫೈನಲ್‌ನಲ್ಲಿ ಅನುಭವಿಸಿದ ಸೋಲಿಗೆ ಯುವಪಡೆ ಸೇಡು ತೀರಿಸಿಕೊಂಡಿದ್ದು, ಪಾಕಿಸ್ತಾನ ಟೂರ್ನಿಯಿಂದ ಹೊರಬಿದ್ದಿದೆ.
ಬಲವಾಯೊ: ಅಂಡರ್ 19 ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು 58 ರನ್‌ಗಳಿಂದ ಸೋಲಿಸಿ ಭಾರತ ಯುವಪಡೆ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ನೀಡಿದ 253 ರನ್‌ಗಳ ಗುರಿಯನ್ನು ಪಾಕಿಸ್ತಾನವು 33.3 ಓವರ್‌ಗಳಲ್ಲಿ ದಾಟಿದ್ದರೆ ಮಾತ್ರ ನೆಟ್ ರನ್‌ರೇಟ್‌ನಲ್ಲಿ ಭಾರತವನ್ನು ಹಿಂದಿಕ್ಕಿ ಸೆಮಿಫೈನಲ್‌ಗೆ ಪ್ರವೇಶಿಸಬಹುದಿತ್ತು. ಆದರೆ, 46.2 ಓವರ್‌ಗಳಲ್ಲಿ 194 ರನ್‌ಗಳಿಗೆ ಆಲೌಟ್ ಆದ ಪಾಕಿಸ್ತಾನ, 58 ರನ್‌ಗಳ ಸೋಲಿನೊಂದಿಗೆ ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿದೆ. ಇದರೊಂದಿಗೆ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ತಂಡಗಳ ಜೊತೆಗೆ ಭಾರತವೂ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.
ಮುಂದಿನ ವಾರ ಅಂದರೆ ಫೆಬ್ರವರಿ 07ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ಆಡುವುದಿಲ್ಲ ಎಂದು ಘೋಷಿಸಿದ ಬೆನ್ನಲ್ಲೇ, ಯುವಪಡೆ ಪಾಕಿಸ್ತಾನವನ್ನು ಬಗ್ಗುಬಡಿದು ಶಾಕ್ ಕೊಟ್ಟಿದೆ. ಇದಷ್ಟೇ ಅಲ್ಲದೇ ಅಂಡರ್ 19 ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ಅನುಭವಿಸಿದ ಸೋಲಿಗೆ ಭಾರತದ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
33.3 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿದ್ದ ಪಾಕಿಸ್ತಾನಕ್ಕೆ ಸೆಮಿಫೈನಲ್ ಟಿಕೆಟ್ ಕೈತಪ್ಪಿದರೂ, ಭಾರತವನ್ನು ಸೋಲಿಸಿ ಹಿಂದಿರುಗುವ ಲೆಕ್ಕಾಚಾರದಲ್ಲಿ ಬ್ಯಾಟಿಂಗ್ ಮುಂದುವರೆಸಿತು. ಒಂದು ಹಂತದಲ್ಲಿ 168-4 ಎಂಬ ಉತ್ತಮ ಸ್ಥಿತಿಯಿಂದ, ಪಾಕಿಸ್ತಾನವು ಕೇವಲ 26 ರನ್ ಸೇರಿಸುವಷ್ಟರಲ್ಲಿ ಉಳಿದ ಆರು ವಿಕೆಟ್‌ಗಳನ್ನು ಕಳೆದುಕೊಂಡು ಸೋಲೊಪ್ಪಿಕೊಂಡಿತು. ಏಷ್ಯಾಕಪ್ ಫೈನಲ್‌ನಲ್ಲಿ ಭಾರತದ ವಿರುದ್ಧ ಸ್ಫೋಟಕ ಶತಕ ಸಿಡಿಸಿದ್ದ ಸಮೀರ್ ಮಿನ್ಹಾಸ್ (9) ಅವರನ್ನು ಆರಂಭದಲ್ಲೇ ಔಟ್ ಮಾಡಿದ ಹೆನಿಲ್ ಪಟೇಲ್ ಭಾರತಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. ನಂತರ, ಹಮ್ಜಾ ಸಹೂರ್ ಮತ್ತು ಉಸ್ಮಾನ್ ಖಾನ್ ಪಾಕಿಸ್ತಾನವನ್ನು 17 ಓವರ್‌ಗಳಲ್ಲಿ 88 ರನ್‌ಗಳಿಗೆ ಕೊಂಡೊಯ್ದರೂ, ಭಾರತೀಯ ಬೌಲರ್‌ಗಳ ಬಿಗಿ ದಾಳಿಗೆ ರನ್ ಗಳಿಸಲು ಪರದಾಡಿದರು.
ಸಿಕ್ಕ ಅವಕಾಶ ಕೈಚೆಲ್ಲಿದ ಪಾಕ್
ಈ ನಡುವೆ ಪಾಕ್ ಬ್ಯಾಟರ್‌ಗಳು ನೀಡಿದ ಅವಕಾಶಗಳನ್ನು ಭಾರತೀಯ ಫೀಲ್ಡರ್‌ಗಳು ಕೈಚೆಲ್ಲಿದರೂ, ಪಾಕಿಸ್ತಾನಕ್ಕೆ ಅದರ ಲಾಭ ಪಡೆಯಲು ಸಾಧ್ಯವಾಗಲಿಲ್ಲ. 49 ಎಸೆತಗಳಲ್ಲಿ 42 ರನ್ ಗಳಿಸಿದ್ದ ಹಮ್ಜಾ ಸಹೂರ್ ಅವರನ್ನು ಕನಿಷ್ಕ್ ಚೌಹಾಣ್ ಔಟ್ ಮಾಡಿದ್ದು ಪಾಕಿಸ್ತಾನಕ್ಕೆ ದೊಡ್ಡ ಹೊಡೆತ ನೀಡಿತು. ಅರ್ಧಶತಕ ಗಳಿಸಿದ ಉಸ್ಮಾನ್ ಖಾನ್ ಜೊತೆ ನಾಯಕ ಬರ್ಹಾನ್ ಯೂಸುಫ್ (39 ಎಸೆತಗಳಲ್ಲಿ 38) ಹೋರಾಡಿದರೂ, 30ನೇ ಓವರ್‌ನಲ್ಲಿ ಅಂಬ್ರೀಶ್ ಅವರ ಎಸೆತದಲ್ಲಿ ಔಟಾದರು. ನಂತರ ಅಹ್ಮದ್ ಹುಸೇನ್ (2) ಅವರನ್ನು ಔಟ್ ಮಾಡಿದ ನಾಯಕ ಆಯುಷ್ ಮಾಥ್ರೆ ಪಾಕಿಸ್ತಾನವನ್ನು ಒತ್ತಡಕ್ಕೆ ಸಿಲುಕಿಸಿದರು. ಇದರ ನಂತರ ಪಾಕಿಸ್ತಾನದ ಕುಸಿತ ಆರಂಭವಾಯಿತು. ಭಾರತದ ಪರ ಬ್ಯಾಟಿಂಗ್‌ನಲ್ಲಿ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದ್ದ ನಾಯಕ ಆಯುಷ್ ಮಾಥ್ರೆ, ಬೌಲಿಂಗ್‌ನಲ್ಲಿ ಕೇವಲ 21 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರೆ, ಖಿಲನ್ ಪಟೇಲ್ 35 ರನ್‌ಗಳಿಗೆ ಮೂರು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಭಾರತ 49.5 ಓವರ್‌ಗಳಲ್ಲಿ 252 ರನ್‌ಗಳಿಗೆ ಆಲೌಟ್ ಆಯಿತು. ಅರ್ಧಶತಕದೊಂದಿಗೆ ವೇದಾಂತ್ ತ್ರಿವೇದಿ ಅವರ ಏಕಾಂಗಿ ಹೋರಾಟವು ಕುಸಿತದಿಂದ ಭಾರತವನ್ನು ಪಾರುಮಾಡಿತು. 98 ಎಸೆತಗಳಲ್ಲಿ 68 ರನ್ ಗಳಿಸಿದ ವೇದಾಂತ್ ತ್ರಿವೇದಿ ಭಾರತದ ಟಾಪ್ ಸ್ಕೋರರ್. ವೈಭವ್ ಸೂರ್ಯವಂಶಿ 22 ಎಸೆತಗಳಲ್ಲಿ 30 ರನ್ ಗಳಿಸಿ ಔಟಾದರೆ, ನಾಯಕ ಆಯುಷ್ ಮಾಥ್ರೆ ಎರಡು ಎಸೆತಗಳನ್ನು ಎದುರಿಸಿ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು. ವೇದಾಂತ್ ತ್ರಿವೇದಿ ಔಟಾದ ನಂತರ, ಕನಿಷ್ಕ್ ಚೌಹಾಣ್ ಮತ್ತು ಖಿಲನ್ ಪಟೇಲ್ ಭಾರತವನ್ನು ಉತ್ತಮ ಮೊತ್ತಕ್ಕೆ ಕೊಂಡೊಯ್ದರು.
ಪಾಕ್ ವಿರುದ್ದ ಸಿಹಿ ಸೇಡು ತೀರಿಸಿಕೊಂಡ ಭಾರತ:
ಮುಂಬರುವ ಪ್ರತಿಷ್ಠಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡರೂ ಭಾರತ ವಿರುದ್ದ ಕಣಕ್ಕಿಳಿಯುವುದಿಲ್ಲ ಎಂದು ಪಾಕಿಸ್ತಾನ ಈಗಾಗಲೇ ಘೋಷಿಸಿದೆ. ಇದೇ ಫೆಬ್ರವರಿ 15ರಂದು ಭಾರತ ಹಾಗೂ ಪಾಕಿಸ್ತಾನ ನಡುವಿನ ಮ್ಯಾಚ್ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದರು. ಆದರೆ ಪಾಕ್, ಭಾರತ ಎದುರು ಆಡಲ್ಲ ಎಂದು ಹೇಳಿದೆ. ಇದಕ್ಕೆ ಇದೀಗ ಭಾರತ ಯುವ ಪಡೆ ಅಂಡರ್-19 ವಿಶ್ವಕಪ್‌ನಲ್ಲಿ ಶಾಕ್ ಕೊಟ್ಟಿದೆ.


