Asianet Suvarna News Asianet Suvarna News

ಏಷ್ಯಾಕಪ್‌ಗೆ ಇಂದು ಭಾರತ ಕ್ರಿಕೆಟ್ ತಂಡ ಆಯ್ಕೆ; ಯಾರಿಗೆಲ್ಲಾ ಸ್ಥಾನ?

ಏಷ್ಯಾಕಪ್‌ಗೆ 17 ಸದಸ್ಯರ ತಂಡವನ್ನು ಆಯ್ಕೆ ಮಾಡಲು ಅವಕಾಶವಿದ್ದು, ವಿಶ್ವಕಪ್‌ ಸಿದ್ಧತೆ ದೃಷ್ಟಿಯಿಂದ ಬಿಸಿಸಿಐ 17 ಸದಸ್ಯರನ್ನು ಆಯ್ಕೆ ಮಾಡಲಿದೆ ಎನ್ನಲಾಗಿದೆ. ಗಾಯದಿಂದ ಚೇತರಿಸಿಕೊಂಡು ಫಿಟ್ನೆಸ್‌ ಸಾಬೀತುಪಡಿಸಿರುವ ಕೆ.ಎಲ್‌.ರಾಹುಲ್‌ ಹಾಗೂ ಶ್ರೇಯಸ್‌ ಅಯ್ಯರ್‌ಗೆ ತಂಡದಲ್ಲಿ ಸ್ಥಾನ ಸಿಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

India Asia Cup squad to be announced on August 21 kvn
Author
First Published Aug 21, 2023, 10:02 AM IST

ನವದೆಹಲಿ(ಆ.21): ಮುಂಬರುವ ಆಗಸ್ಟ್ 30ರಿಂದ ಆರಂಭಗೊಳ್ಳಲಿರುವ ಏಷ್ಯಾಕಪ್‌ ಏಕದಿನ ಕ್ರಿಕೆಟ್‌ ಟೂರ್ನಿಗೆ ಸೋಮವಾರ ಭಾರತ ತಂಡದ ಆಯ್ಕೆ ನಡೆಯಲಿದ್ದು, ಸಂಜೆ ವೇಳೆಗೆ ಬಿಸಿಸಿಐ ತಂಡ ಪ್ರಕಟಿಸಲಿದೆ. ಅಜಿತ್‌ ಅಗರ್ಕರ್‌ ನೇತೃತ್ವದ ಆಯ್ಕೆ ಸಮಿತಿ ರಾಷ್ಟ್ರ ರಾಜಧಾನಿಯಲ್ಲಿ ಸಭೆ ಸೇರಲಿದ್ದು, ನಾಯಕ ರೋಹಿತ್‌ ಶರ್ಮಾ ಹಾಗೂ ಪ್ರಧಾನ ಕೋಚ್‌ ರಾಹುಲ್‌ ದ್ರಾವಿಡ್‌ ಸಹ ಭಾಗಿಯಾಗಲಿದ್ದಾರೆ.

ಏಷ್ಯಾಕಪ್‌ಗೆ 17 ಸದಸ್ಯರ ತಂಡವನ್ನು ಆಯ್ಕೆ ಮಾಡಲು ಅವಕಾಶವಿದ್ದು, ವಿಶ್ವಕಪ್‌ ಸಿದ್ಧತೆ ದೃಷ್ಟಿಯಿಂದ ಬಿಸಿಸಿಐ 17 ಸದಸ್ಯರನ್ನು ಆಯ್ಕೆ ಮಾಡಲಿದೆ ಎನ್ನಲಾಗಿದೆ. ಗಾಯದಿಂದ ಚೇತರಿಸಿಕೊಂಡು ಫಿಟ್ನೆಸ್‌ ಸಾಬೀತುಪಡಿಸಿರುವ ಕೆ.ಎಲ್‌.ರಾಹುಲ್‌ ಹಾಗೂ ಶ್ರೇಯಸ್‌ ಅಯ್ಯರ್‌ಗೆ ತಂಡದಲ್ಲಿ ಸ್ಥಾನ ಸಿಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಆ.23ರಿಂದ ಬೆಂಗಳೂರಲ್ಲಿ 6 ದಿನಗಳ ಅಭ್ಯಾಸ ಶಿಬಿರ ನಡೆಯಲಿದ್ದು, ಆ ಬಳಿಕ ತಂಡ ಕೊಲಂಬೊಗೆ ತೆರಳಲಿದೆ.

ಐಸಿಸಿ ಏಕದಿನ ವಿಶ್ವಕಪ್‌ ವೇಳಾಪಟ್ಟಿ ಮತ್ತೆ ಬದಲು?

ಹೈದರಾಬಾದ್‌: 2 ದಿನಗಳಲ್ಲಿ 2 ಪಂದ್ಯಗಳಿಗೆ ಆತಿಥ್ಯ ವಹಿಸುವುದು ಕಷ್ಟ ಎಂದು ಹೈದರಾಬಾದ್‌ ಕ್ರಿಕೆಟ್‌ ಸಂಸ್ಥೆ(ಎಚ್‌ಸಿಎ) ಚಕಾರ ಎತ್ತಿದ್ದು, ಏಕದಿನ ವಿಶ್ವಕಪ್‌ನ ವೇಳಾಪಟ್ಟಿಯಲ್ಲಿ ಮತ್ತೊಮ್ಮೆ ಬದಲಾವಣೆಯಾಗುವ ಸಾಧ್ಯತೆ ಇದೆ. ಇತ್ತೀಚೆಗೆ 9 ಪಂದ್ಯಗಳ ವೇಳಾಪಟ್ಟಿಯನ್ನು ಬದಲಿಸಿದ್ದ ಐಸಿಸಿ ಹಾಗೂ ಬಿಸಿಸಿಐ, ಭಾರತ-ಪಾಕಿಸ್ತಾನ ನಡುವೆ ನಿಗದಿಯಾಗಿದ್ದ ಅ.15ರ ಪಂದ್ಯವನ್ನು ಒಂದು ದಿನ ಮೊದಲು ನಡೆಸುವ ಸಲುವಾಗಿ, ಅ.12ರಂದು ಹೈದರಾಬಾದ್‌ನಲ್ಲಿ ನಡೆಯಬೇಕಿದ್ದ  ಪಾಕಿಸ್ತಾನ-ಶ್ರೀಲಂಕಾ ಪಂದ್ಯವನ್ನು ಅಕ್ಟೋಬರ್ 10ಕ್ಕೆ ಮರುನಿಗದಿಪಡಿಸಿದ್ದವು. 

Ireland vs India 2nd T20I: ಸಂಜು, ರುತುರಾಜ್‌, ರಿಂಕು ಶೈನ್‌, ಐರ್ಲೆಂಡ್‌ ವಿರುದ್ಧ ಭಾರತ ಸರಣಿ ವಿನ್‌!

ಅಕ್ಟೋಬರ್ 9ರಂದು ನ್ಯೂಜಿಲೆಂಡ್‌ ಹಾಗೂ ನೆದರ್‌ಲೆಂಡ್ಸ್‌ ಪಂದ್ಯಕ್ಕೂ ಹೈದರಾಬಾದ್‌ ಆತಿಥ್ಯ ನೀಡಲಿದೆ. ಹೀಗಾಗಿ ಸತತ 2 ದಿನ ಪಂದ್ಯ ಆಯೋಜನೆಯಿಂದ ಭದ್ರತಾ ಸಮಸ್ಯೆ ಉಂಟಾಗಬಹುದು ಎಂದು ಹೈದರಾಬಾದ್‌ ಪೊಲೀಸ್ ಇಲಾಖೆ ಆತಂಕ ವ್ಯಕ್ತಪಡಿಸುತ್ತಿರುವ ಹಿನ್ನೆಲೆ ವೇಳಾಪಟ್ಟಿ  ಬದಲಿಸುವಂತೆ ಎಚ್‌ಸಿಎ, ಬಿಸಿಸಿಐಗೆ ಮನವಿ ಸಲ್ಲಿಸಿದೆ ಎನ್ನಲಾಗಿದೆ.

ಕಿವೀಸ್‌ ವಿರುದ್ಧ ಯುಎಇಗೆ ಐತಿಹಾಸಿಕ ಟಿ20 ಜಯ!

ದುಬೈ: ನ್ಯೂಜಿಲೆಂಡ್ ವಿರುದ್ಧ ಯುಎಇ ಐತಿಹಾಸಿಕ ಟಿ20 ಗೆಲುವು ಸಾಧಿಸಿದೆ. 3 ಪಂದ್ಯಗಳ ಸರಣಿಯ 2ನೇ ಪಂದ್ಯದಲ್ಲಿ ಯುಎಇ 7 ವಿಕೆಟ್‌ ಜಯ ಸಾಧಿಸಿತು. ಇದು ಯಾವುದೇ ಮಾದರಿಯಲ್ಲಿ ಕಿವೀಸ್‌ ವಿರುದ್ಧ ಯುಎಇಗೆ ಮೊದಲ ಗೆಲುವು. ಇನ್ನು ಟೆಸ್ಟ್ ಆಡದ ದೇಶಗಳ ವಿರುದ್ಧ ಮೂರು ಮಾದರಿ ಸೇರಿ ಸತತ 38 ಗೆಲುವು ಸಾಧಿಸಿದ್ದ ನ್ಯೂಜಿಲೆಂಡ್‌ ದಾಖಲೆ ಪತನಗೊಂಡಿದೆ. ಶನಿವಾರದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಕಿವೀಸ್‌ 8 ವಿಕೆಟ್‌ಗೆ 142 ರನ್‌ ಗಳಿಸಿದರೆ, ಯುಎಇ 15.4 ಓವರಲ್ಲಿ 3 ವಿಕೆಟ್‌ಗೆ 144 ರನ್‌ ಕಲೆಹಾಕಿತು.

Asia Cup 2023: ಉದ್ಘಾಟನಾ ಪಂದ್ಯ ವೀಕ್ಷಿಸಲು ಪಾಕಿಸ್ತಾನಕ್ಕೆ ಬರುವಂತೆ ಜಯ್ ಶಾಗೆ ಪಿಸಿಬಿ ಆಹ್ವಾನ..!

ಹುಬ್ಬಳ್ಳಿಗೆ ಮೊದಲ ಸೋಲು!

ಬೆಂಗಳೂರು: ಸತತ 5 ಗೆಲುವಿನೊಂದಿಗೆ ಸೆಮೀಸ್‌ ಹೊಸ್ತಿಲು ತಲುಪಿದ್ದ ಹುಬ್ಬಳ್ಳಿ ಟೈಗರ್ಸ್‌ 2023ರ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಮೊದಲ ಸೋಲು ಕಂಡಿದೆ. ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಹುಬ್ಬಳ್ಳಿಯನ್ನು 6 ವಿಕೆಟ್‌ಗಳಿಂದ ಸೋಲಿಸಿದ ಮೈಸೂರು ವಾರಿಯರ್ಸ್‌, 4ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು.

ಲುವ್ನಿತ್‌ ಸಿಸೋಡಿಯಾ(105 ರನ್‌, 62 ಎಸೆತ, 7 ಬೌಂಡರಿ, 7 ಸಿಕ್ಸರ್‌)ರ ಶತಕದ ನೆರವಿನಿಂದ ಹುಬ್ಬಳ್ಳಿ 20 ಓವರಲ್ಲಿ 7 ವಿಕೆಟ್‌ಗೆ 185 ರನ್‌ ಕಲೆಹಾಕಿತು. ಅಜಿತ್‌ ಕಾರ್ತಿಕ್‌ 4 ವಿಕೆಟ್‌ ಕಿತ್ತರು. ಕಠಿಣ ಗುರಿ ಬೆನ್ನತ್ತಿದ ಮೈಸೂರು, 4 ವಿಕೆಟ್‌ಗೆ 188 ರನ್‌ ಗಳಿಸಿ, ಇನ್ನೂ 7 ಎಸೆತ ಬಾಕಿ ಇರುವಂತೆ ಜಯಿಸಿತು. ಸಮರ್ಥ್‌ 73, ಕರುಣ್‌ 41 ರನ್‌ ಸಿಡಿದರು.

ಗುಲ್ಬರ್ಗಗೆ ಜಯ

ಭಾನುವಾರದ 2ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಗುಲ್ಬರ್ಗ ಮಿಸ್ಟಿಕ್ಸ್‌ 5 ವಿಕೆಟ್‌ಗಳಿಂದ ಮಂಗಳೂರು ಡ್ರ್ಯಾಗನ್ಸ್‌ ತಂಡವನ್ನು ಸೋಲಿಸಿತು. ಮಂಗಳೂರು 9 ವಿಕೆಟ್‌ಗೆ 120 ರನ್‌ ಗಳಿಸಿದರೆ, ಗುಲ್ಬರ್ಗ 17.1 ಓವರಲ್ಲಿ 5 ವಿಕೆಟ್‌ಗೆ 121 ರನ್‌ ಕಲೆಹಾಕಿತು.

Follow Us:
Download App:
  • android
  • ios