ಕೇವಲ ಬಿಸಿಸಿಐ ಕಾರ್ಯದರ್ಶಿ ಮಾತ್ರವಲ್ಲದೇ, ಏಷ್ಯಾದ ಇತರೆ ಕ್ರಿಕೆಟ್ ಮಂಡಳಿಗಳ ಮುಖ್ಯಸ್ಥರಿಗೂ ಕೂಡಾ ಉದ್ಘಾಟನಾ ಪಂದ್ಯವನ್ನು ವೀಕ್ಷಿಸಲು ಪಾಕಿಸ್ತಾನಕ್ಕೆ ಬರುವಂತೆ ಆಮಂತ್ರಣವನ್ನು ಕಳಿಸಿದೆ. ಇತ್ತೀಚೆಗಷ್ಟೇ ಡರ್ಬನ್‌ನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಝಾಕಾ ಅಶ್ರಫ್‌ ಭೇಟಿಯಾಗಿದ್ದರು.

ಇಸ್ಲಾಮಾಬಾದ್‌(ಆ.19): ಬಹುನಿರೀಕ್ಷಿತ 2023ರ ಏಷ್ಯಾಕಪ್ ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. 2023ರ ಏಷ್ಯಾಕಪ್ ಟೂರ್ನಿಯು ಆಗಸ್ಟ್ 30ರಿಂದ ಆರಂಭವಾಗಲಿದ್ದು, ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಿದೆ. ಇದೀಗ ಆಗಸ್ಟ್‌ 30ರಂದು ಮುಲ್ತಾನ್‌ನಲ್ಲಿ ನಡೆಯಲಿರುವ ಏಷ್ಯಾಕಪ್ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ಹಾಗೂ ನೇಪಾಳ ತಂಡಗಳು ಕಾದಾಡಲಿದ್ದು, ಈ ಪಂದ್ಯವನ್ನು ವೀಕ್ಷಿಸಲು ಪಾಕಿಸ್ತಾನಕ್ಕೆ ಬರುವಂತೆ ಬಿಸಿಸಿಐ ಕಾರ್ಯದರ್ಶಿ ಹಾಗೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿರುವ ಜಯ್ ಶಾ ಅವರಿಗೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್(ಪಿಸಿಬಿ) ಆಹ್ವಾನ ನೀಡಿದೆ ಎಂದು ವರದಿಯಾಗಿದೆ.

ಪಿಸಿಬಿ ಮೂಲಗಳ ಪ್ರಕಾರ, ಕೇವಲ ಬಿಸಿಸಿಐ ಕಾರ್ಯದರ್ಶಿ ಮಾತ್ರವಲ್ಲದೇ, ಏಷ್ಯಾದ ಇತರೆ ಕ್ರಿಕೆಟ್ ಮಂಡಳಿಗಳ ಮುಖ್ಯಸ್ಥರಿಗೂ ಕೂಡಾ ಉದ್ಘಾಟನಾ ಪಂದ್ಯವನ್ನು ವೀಕ್ಷಿಸಲು ಪಾಕಿಸ್ತಾನಕ್ಕೆ ಬರುವಂತೆ ಆಮಂತ್ರಣವನ್ನು ಕಳಿಸಿದೆ. ಇತ್ತೀಚೆಗಷ್ಟೇ ಡರ್ಬನ್‌ನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಝಾಕಾ ಅಶ್ರಫ್‌ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಝಾಕಾ ಅಶ್ರಫ್, ಮೌಖಿಕವಾಗಿ ಏಷ್ಯಾಕಪ್ ಉದ್ಘಾಟನಾ ಪಂದ್ಯ ವೀಕ್ಷಿಸಲು ಪಾಕಿಸ್ತಾನಕ್ಕೆ ಬರುವಂತೆ ಆಹ್ವಾನಿಸಿದ್ದರು. ಇದೀಗ ಮತ್ತೊಮ್ಮೆ ಪಿಸಿಬಿ ವತಿಯಿಂದ ಜಯ್ ಶಾ ಅವರಿಗೆ ಆಹ್ವಾನ ನೀಡಲಾಗಿದೆ ಎಂದು ತಿಳಿಸಿದ್ದಾರೆ.

"ರಜೆ ಇದೆ, ಆದ್ರೂ...?": ವಿರಾಟ್ ಕೊಹ್ಲಿ ವರ್ಕೌಟ್‌ ಬಗ್ಗೆ ಹೇಳಿದ್ದೇನು? ವಿಡಿಯೋ ವೈರಲ್‌

ಝಾಕಾ ಅಶ್ರಫ್ ಅವರ ಆಹ್ವಾನವನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಒಪ್ಪಿಕೊಂಡಿದ್ದಾರೆ ಎಂದು ಪಾಕಿಸ್ತಾನ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಈ ಗಾಳಿ ಸುದ್ದಿಯನ್ನು ಸ್ವತಃ ಜಯ್ ಶಾ ತಳ್ಳಿ ಹಾಕಿದ್ದರು. "ಪಾಕಿಸ್ತಾನ ಮಾಧ್ಯಮಗಳಲ್ಲಿ ವರದಿಯಾದಂತೆ ಝಕಾ ಅಶ್ರಫ್ ಅಹ್ವಾನವನ್ನು ಜಯ್ ಶಾ ಸ್ವೀಕರಿಸಿದ್ದಾರೆ ಎನ್ನುವುದು ಶುದ್ದ ಸುಳ್ಳು. ಇದು ಸಹಜವಾಗಿಯೇ ಪಿಸಿಬಿಗೆ ಇರಿಸುಮುರಿಸುಂಟು ಮಾಡಿದೆ ಎಂದು ಅವರು ತಿಳಿಸಿದ್ದಾರೆ.

ಏಷ್ಯಾಕಪ್ ಟೂರ್ನಿಯ ಬಗ್ಗೆ ಹೇಳುವುದಾದರೇ, ಟೂರ್ನಿಯಲ್ಲಿ 6 ತಂಡಗಳು ಪಾಲ್ಗೊಳ್ಳುತ್ತಿದ್ದು, 3 ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ ತಂಡವು 'ಎ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇದೇ ಗುಂಪಿನಲ್ಲಿ ಪಾಕಿಸ್ತಾನ ಹಾಗೂ ನೇಪಾಳ ತಂಡಗಳು ಕೂಡಾ ಸ್ಥಾನ ಪಡೆದಿವೆ. ಇನ್ನು 'ಬಿ' ಗುಂಪಿನಲ್ಲಿ ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ಆಫ್ಘಾನಿಸ್ತಾನ ತಂಡಗಳು ಸ್ಥಾನ ಪಡೆದಿವೆ.

ವಿರಾಟ್ ಕೊಹ್ಲಿಗೆ ಬಿಟ್ಟಿ ಸಲಹೆ ಕೊಟ್ಟ ಶೋಯೆಬ್ ಅಖ್ತರ್..! ಪಾಕ್ ವೇಗಿಗೆ ದಾದಾ ಕೊಟ್ರು ಸೂಪರ್ ಆನ್ಸರ್

ಮುಂಬರುವ ಅಕ್ಟೋಬರ್ 05ರಿಂದ ನವೆಂಬರ್ 19ರ ವರೆಗೆ ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು, ಈ ಬಾರಿಯ ಏಷ್ಯಾಕಪ್ ಟೂರ್ನಿಯನ್ನು 50 ಓವರ್‌ಗಳ ಮಾದರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. 2023ರ ಏಷ್ಯಾಕಪ್ ಟೂರ್ನಿಗೆ ಪಾಕಿಸ್ತಾನ ಆತಿಥ್ಯದ ಹಕ್ಕು ಪಡೆದುಕೊಂಡಿದೆ. ಆದರೆ ಭಾರತ ಕ್ರಿಕೆಟ್ ತಂಡವು, ಪಾಕಿಸ್ತಾನ ಪ್ರವಾಸ ಮಾಡಲು ನಿರಾಕರಿಸಿದ ಕಾರಣ, ಹೈಬ್ರೀಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲಾಗಿದೆ. ಭಾರತದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ. ಪಾಕಿಸ್ತಾನದಲ್ಲಿ 4 ಪಂದ್ಯಗಳು ನಡೆದರೆ, ಶ್ರೀಲಂಕಾದಲ್ಲಿ 9 ಪಂದ್ಯಗಳು ನಡೆಯಲಿವೆ.