ಸೌರವ್ ಗಂಗೂಲಿ BCCI ಅಧ್ಯಕ್ಷರಾದ್ಮೇಲೆ ಏನೆಲ್ಲಾ ಅವಾಂತರಗಳು ಆಗಿವೆ ಗೊತ್ತಾ..?
ಟೀಂ ಇಂಡಿಯಾ ಯಶಸ್ವಿ ನಾಯಕ ದಾದಾ ಆಡಳಿತಾಧಿಕಾರಿಯಾಗಿ ಫೇಲ್
ದಾದಾ ಬಿಸಿಸಿಐ ಅಧ್ಯಕ್ಷರಾದ ಮೇಲೆ ಹಲವು ಸಂಕಷ್ಟ ಎದುರಿಸಿದೆ ಭಾರತ
2019ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ನೇಮಕವಾಗಿರುವ ಸೌರವ್ ಗಂಗೂಲಿ
ಮುಂಬೈ(ಜು.11): ಸೌರವ್ ಗಂಗೂಲಿ. ಟೀಂ ಇಂಡಿಯಾಗೆ ಹೆಚ್ಚೆಚ್ಚು ಯುವ ಆಟಗಾರರನ್ನ ಪರಿಚಯಿಸಿದ ನಾಯಕ. ಯಂಗ್ ಇಂಡಿಯಾವನ್ನ ಕಟ್ಟಿದ ಕ್ಯಾಪ್ಟನ್. ಭಾರತೀಯ ಕ್ರಿಕೆಟ್ಗೆ ಹೊಸ ಭಾಷ್ಯ ಬರೆದ ಕಪ್ತಾನ. ಫಿಕ್ಸಿಂಗ್ನಲ್ಲಿ ಮುಳುಗಿ ಹೋಗಿದ್ದ ಭಾರತೀಯ ಕ್ರಿಕೆಟ್ ಅನ್ನು ಮೇಲೆತ್ತಿದ ಸುಲ್ತಾನ್. ಅವರ ನಾಯಕತ್ವದ ನಂತರವೇ ಟೀಂ ಇಂಡಿಯಾ ವಿದೇಶಗಳಲ್ಲಿ ಸರಣಿ ಗೆಲ್ಲಲು ಶುರು ಮಾಡಿದ್ದು. ಈ ಕಾರಣಕ್ಕಾಗಿಯೇ ಸೌರವ್ ಗಂಗೂಲಿಗೆ ದಾದಾ ಎನ್ನುವ ಮತ್ತೊಂದು ಹೆಸರು ಸಹಾ ಇದೆ.
ಆಟಗಾರನಾಗಿ ಮತ್ತು ನಾಯಕನಾಗಿ ಸಕ್ಸಸ್ ಆದ್ಮೇಲೆ ಸೌರವ್ ಆಡಳಿತಾಧಿಕಾರಿಯಾಗಿ ಸಕ್ಸಸ್ ಆಗ್ತಾರೆ ಅಂತ ಎಲ್ಲರೂ ನಿರೀಕ್ಷಿಸಿದ್ದರು. ದಾದಾ ಬಿಸಿಸಿಐ ಅಧ್ಯಕ್ಷರಾದಾಗ ಇಡೀ ಭಾರತೀಯ ಕ್ರಿಕೆಟ್ ಖುಷಿ ಪಟ್ಟಿತ್ತು. ಯಾಕೆ ಗೊತ್ತಾ..? ಭಾರತೀಯ ಕ್ರಿಕೆಟ್ ಅನ್ನ ಮತ್ತಷ್ಟು ಉತ್ತುಂಗಕ್ಕೇರಿಸುತ್ತಾರೆ ಅನ್ನೋ ಭರವಸೆಯೊಂದಿಗೆ. ಆದರೆ ಕ್ರಿಕೆಟರ್ ಆಗಿ ಸಕ್ಸಸ್ ಆದ ಗಂಗೂಲಿ, ಆಡಳಿತಾಧಿಕಾರಿಯಾಗಿ ಸಕ್ಸಸ್ ಆಗ್ತಿಲ್ಲ. ಅವರು 2019ರ ಅಕ್ಟೋಬರ್ನಲ್ಲಿ ಬಿಸಿಸಿಐ ಅಧ್ಯಕ್ಷರಾದ್ಮೇಲೆ ಟೀಂ ಇಂಡಿಯಾ ಸಕ್ಸಸ್ ಆಗಿದ್ದಕ್ಕಿಂತ ವಿಫಲವಾಗಿದ್ದೇ ಹೆಚ್ಚು. ಅದು ಹೇಗೆ ಅನ್ನೋದನ್ನ ಒಂದೊಂದಾಗಿ ಹೇಳ್ತೀವಿ ನೋಡಿ.
ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ಮೊದಲ ಸೋಲು:
ಒನ್ಡೇ ಮತ್ತು ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋತೇ ಇರಲಿಲ್ಲ. ಆದರೆ 2020ರ ಟಿ20 ವರ್ಲ್ಡ್ಕಪ್ನಲ್ಲಿ ಬದ್ಧವೈರಿಯಾದ ಪಾಕಿಸ್ತಾನ ವಿರುದ್ಧ ಸೋತಿತು. ಈ ಮೂಲಕ ಪಾಕ್ ವಿರುದ್ಧ ವಿಶ್ವಕಪ್ನಲ್ಲಿ ಭಾರತಕ್ಕೆ ಮೊದಲ ಸೋಲಾಯ್ತು. ಅಷ್ಟೇ ಅಲ್ಲ ಬಲಿಷ್ಠ ಭಾರತ ತಂಡ ನಾಕೌಟ್ ಹಂತಕ್ಕೇರುವಲ್ಲೂ ವಿಫಲವಾಯ್ತು.
378 ರನ್ ಚೇಸ್ ಮಾಡಿಸಿಕೊಂಡ ಭಾರತ:
ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ವಿರುದ್ಧ ಯಾವೊಂದು ತಂಡವೂ 300 ಪ್ಲಸ್ ರನ್ ಚೇಸ್ ಮಾಡಿ ಗೆದ್ದಿರಲಿಲ್ಲ. ಆದರೆ ಮೊನ್ನೆ ಮೊನ್ನೆಯಷ್ಟೇ ಟೀಂ ಇಂಡಿಯಾ ವಿರುದ್ಧ ಇಂಗ್ಲೆಂಡ್ ತಂಡ 378 ರನ್ ಚೇಸ್ ಮಾಡಿ 5ನೇ ಟೆಸ್ಟ್ ಗೆದ್ದಿತು. ಈ ಮೂಲಕ ಇಂಗ್ಲೆಂಡ್ನಲ್ಲಿ 15 ವರ್ಷಗಳ ಬಳಿಕ ಸರಣಿ ಗೆಲ್ಲೋ ಭಾರತೀಯ ಕನಸು ನುಚ್ಚು ನೂರಾಯ್ತು. ಸರಣಿ 2-2ರಿಂದ ಡ್ರಾಗೊಂಡಿತು.
ಟೀಂ ಇಂಡಿಯಾ ಆಟಗಾರರಿಗೆ ರೆಸ್ಟ್ ನೀಡೋದ್ರಿಂದ ಆಗ್ತಿದೆಯಾ ತೊಂದರೆ..?
ಟೀಂ ಇಂಡಿಯಾಗೆ 8 ಮಂದಿ ನಾಯಕರು:
ಹೌದು, ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ್ಮೇಲೆ ಟೀಂ ಇಂಡಿಯಾಗೆ ಬರೋಬ್ಬರಿ 8 ಮಂದಿ ನಾಯಕರಾಗಿದ್ದಾರೆ. ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ, ಶಿಖರ್ ಧವನ್, ಕೆ ಎಲ್ ರಾಹುಲ್, ರಿಷಭ್ ಪಂತ್, ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾವನ್ನ ಮುನ್ನಡೆಸಿದ್ದಾರೆ. ಅದು ಈ ವರ್ಷ ಜಸ್ಟ್ 7 ತಿಂಗಳಲ್ಲಿ 7 ನಾಯಕರು ಭಾರತ ತಂಡವನ್ನು ಮುನ್ನಡೆಸಿದ್ದಾರೆ.
ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಕಳೆದುಕೊಂಡ ಭಾರತ:
ಐದಾರು ವರ್ಷಗಳ ಕಾಲ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಟೀಂ ಇಂಡಿಯಾ ಅಗ್ರಸ್ಥಾನದಲ್ಲಿತ್ತು. ಆದ್ರೆ ಈ ವರ್ಷ ಅಗ್ರಸ್ಥಾನವನ್ನ ಕಳೆದುಕೊಂಡಿದೆ. ಇನ್ನು ಅದ್ಭುತ ಫಾರ್ಮ್ನಲ್ಲಿದ್ದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ 2019ರ ನಂತರವೇ ಫಾರ್ಮ್ ಕಳೆದುಕೊಂಡಿರೋದು. ಈ ಎಲ್ಲಾ ಸಮಸ್ಯೆಗಳು ಆಗಿರೋದು ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ್ಮೇಲೆ.