ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026ರ ಟೂರ್ನಿಯಲ್ಲಿ ಭಾರತ ಎ ಮತ್ತು ಪಾಕಿಸ್ತಾನ ಎ ತಂಡಗಳು ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಮೊದಲ ಪಂದ್ಯಗಳಲ್ಲಿ ಜಯಗಳಿಸಿ ಆತ್ಮವಿಶ್ವಾಸದಿಂದ ಕಣಕ್ಕಿಳಿಯುತ್ತಿದ್ದು, ವೈಭವ್ ಮತ್ತು ಅಭಿಷೇಕ್ ಪ್ರದರ್ಶನ ಕುತೂಹಲ ಮೂಡಿಸಿದೆ.
ದೋಹಾ(ನ.22): ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026ರ ಟೂರ್ನಿಯಲ್ಲಿ ಭಾರತ ಎ ತಂಡ ತನ್ನ ಗೆಲುವಿನ ಓಟ ಮುಂದುವರಿಸುವ ಉತ್ಸಾಹದಲ್ಲಿದೆ. ಭಾನುವಾರ, ನವೆಂಬರ್ 22ರಂದು ನಡೆಯಲಿರುವ ಮಹತ್ವದ ಪಂದ್ಯದಲ್ಲಿ ಭಾರತ ಎ ತಂಡ ಪಾಕಿಸ್ತಾನ ಎ ತಂಡವನ್ನು ಎದುರಿಸಲಿದೆ. ಎರಡೂ ತಂಡಗಳು ತಮ್ಮ ಮೊದಲ ಪಂದ್ಯಗಳಲ್ಲಿ ಭರ್ಜರಿ ಗೆಲುವು ದಾಖಲಿಸಿ ಈ ಮುಖಾಮುಖಿಗೆ ಸಜ್ಜಾಗಿವೆ. ಈ ಪಂದ್ಯದಲ್ಲಿ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಆರಂಭಿಕ ಪಂದ್ಯದಲ್ಲಿ ಭಾರತ ಎ ತಂಡ ನೇಪಾಳ ವಿರುದ್ಧ ದಾಖಲೆ ಅಂತರದ ಗೆಲುವು ಸಾಧಿಸಿತ್ತು. ಮತ್ತೊಂದೆಡೆ, ಪಾಕಿಸ್ತಾನ ಎ ತಂಡವೂ ಯುಎಇ ವಿರುದ್ಧ ದೊಡ್ಡ ಅಂತರದ ಗೆಲುವು ದಾಖಲಿಸಿತ್ತು. ಹೀಗಾಗಿ ಗ್ರೂಪ್ ಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ದೃಷ್ಟಿಯಿಂದ ಈ ಪಂದ್ಯ ಎರಡೂ ತಂಡಗಳಿಗೆ ನಿರ್ಣಾಯಕವಾಗಿದೆ.
ವೈಭವ್, ಅಭಿಷೇಕ್ ಮೇಲೆ ಎಲ್ಲರ ಕಣ್ಣು:
ಭಾರತದ ಪ್ರತಿಭಾನ್ವಿತ ಆರಂಭಿಕ ಜೋಡಿಯಾದ 15 ವರ್ಷದ ವೈಭವ್ ಸೂರ್ಯವಂಶಿ ಹಾಗೂ ಸ್ಪೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ನೇಪಾಳ ಎದುರು ದೊಡ್ಡ ಮೊತ್ತ ಬಾರಿಸಲು ವಿಫಲವಾಗಿದ್ದರು. ಕಳೆದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ 9 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಕೇವಲ 26 ರನ್ಗಳಿಗೆ ಸೀಮಿತವಾಗಿತ್ತು. ಹೀಗಾಗಿ ಬದ್ದ ಎದುರಾಳಿ ಪಾಕಿಸ್ತಾನ ಎದುರು ಈ ಜೋಡಿ ಯಾವ ರೀತಿ ಪ್ರದರ್ಶನ ನೀಡುತ್ತಾರೆ ಎನ್ನುವ ಕುತೂಹಲ ಜೋರಾಗಿದೆ.
ಭಾರತ ಎ ಮತ್ತು ಪಾಕಿಸ್ತಾನ ಎ ನಡುವಿನ ಪಂದ್ಯಕ್ಕೆ ಸಂಬಂಧಿಸಿದ ದಿನಾಂಕ, ಸಮಯ, ಸ್ಥಳ, ಮುಖಾಮುಖಿ ದಾಖಲೆ ಹಾಗೂ ನೇರ ಪ್ರಸಾರದ ವಿವರಗಳು ಇಲ್ಲಿವೆ.
ಭಾರತ ಎ vs ಪಾಕಿಸ್ತಾನ ಎ: ಪಂದ್ಯದ ವಿವರ
ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026ರ ಭಾರತ ಎ ಮತ್ತು ಪಾಕಿಸ್ತಾನ ಎ ನಡುವಿನ ಪಂದ್ಯ ಕತಾರ್ನ ದೋಹಾದ ವೆಸ್ಟ್ ಎಂಡ್ ಪಾರ್ಕ್ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
ದಿನಾಂಕ: ಭಾನುವಾರ, ನವೆಂಬರ್ 22
ಸ್ಥಳ: ವೆಸ್ಟ್ ಎಂಡ್ ಪಾರ್ಕ್ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ, ದೋಹಾ
ಟಾಸ್ ಸಮಯ: ಮಧ್ಯಾಹ್ನ 3 ಗಂಟೆ (ಭಾರತೀಯ ಕಾಲಮಾನ)
ಪಂದ್ಯ ಆರಂಭ: ಮಧ್ಯಾಹ್ನ 3.30 (ಭಾರತೀಯ ಕಾಲಮಾನ)
ಭಾರತ ಎ vs ಪಾಕಿಸ್ತಾನ ಎ: ಹೆಡ್ ಟು ಹೆಡ್ ದಾಖಲೆ
ಭಾರತ ಎ ಮತ್ತು ಪಾಕಿಸ್ತಾನ ಎ ತಂಡಗಳು ಈವರೆಗೆ 14 ಲಿಸ್ಟ್ ಎ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಪೋಟಿಯಲ್ಲಿ ಭಾರತ ಎ ತಂಡ ಮೇಲುಗೈ ಸಾಧಿಸಿದೆ. ಆಡಿರುವ 14 ಪಂದ್ಯಗಳ ಪೈಕಿ ಭಾರತ ಎ 9 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದರೆ, ಪಾಕಿಸ್ತಾನ ಎ ತಂಡ 5 ಪಂದ್ಯಗಳಲ್ಲಿ ಜಯಗಳಿಸಿದೆ.
ಹಿಂದಿನ ಮುಖಾಮುಖಿಗಳಲ್ಲಿ ಭಾರತ ಎ ತಂಡ ಮೇಲುಗೈ ಹೊಂದಿದ್ದರೂ, ಈ ಬಾರಿಯ ಪಂದ್ಯದಲ್ಲಿ ಎರಡೂ ತಂಡಗಳು ತಮ್ಮ ಮೊದಲ ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದಿಂದ ಕಣಕ್ಕಿಳಿಯುತ್ತಿವೆ.
ಭಾರತ ಎ vs ಪಾಕಿಸ್ತಾನ ಎ ಪಂದ್ಯ ಎಲ್ಲಿ ವೀಕ್ಷಿಸಬಹುದು?
ಭಾರತದಲ್ಲಿ ಕ್ರಿಕೆಟ್ ಅಭಿಮಾನಿಗಳು ಭಾರತ ಎ ಮತ್ತು ಪಾಕಿಸ್ತಾನ ಎ ನಡುವಿನ ಪಂದ್ಯವನ್ನು ಟಿವಿಯಲ್ಲಿ ಹಾಗೂ ಆನ್ಲೈನ್ನಲ್ಲಿ ವೀಕ್ಷಿಸಬಹುದು.
ನೇರ ಪ್ರಸಾರ (Live Telecast): ಸೋನಿ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್ (Live Streaming): ಸೋನಿಲಿವ್ (SonyLIV) ಆ್ಯಪ್
ಹೀಗಾಗಿ ಟಿವಿಯಲ್ಲಿ ಸೋನಿ ಸ್ಪೋರ್ಟ್ಸ್ ಚಾನೆಲ್ಗಳ ಮೂಲಕ ಅಥವಾ ಸೋನಿಲಿವ್ ಆ್ಯಪ್ನಲ್ಲಿ ಪಂದ್ಯವನ್ನು ವೀಕ್ಷಿಸಬಹುದು.
ಟೂರ್ನಿಯಲ್ಲಿ ಉಭಯ ತಂಡಗಳು ಹೀಗಿವೆ:
ಭಾರತ 'ಎ' ತಂಡ: ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಆಯುಷ್ ಬದೋನಿ, ತಿಲಕ್ ವರ್ಮಾ(ನಾಯಕ), ಕುಮಾರ್ ಕುಶಾಗ್ರ(ವಿಕೆಟ್ ಕೀಪರ್), ರಿಂಕು ಸಿಂಗ್, ಸೂರ್ಯಾನ್ಶ್ ಶೆಡ್ಗೆ, ಶಹಬಾಜ್ ಅಹಮದ್, ವಿಪ್ರಾಜ್ ನಿಗಮ್, ಹರ್ಷಿತ್ ರಾಣಾ, ಪ್ರಿನ್ಸ್ ಯಾದವ್, ತನುಷ್ ಕೋಟ್ಯಾನ್, ಪ್ರಭ್ಸಿಮ್ರನ್ ಸಿಂಗ್, ಹರ್ಷ್ ದುಬೆ, ಅರ್ಶದ್ ಖಾನ್.
ಪಾಕಿಸ್ತಾನ 'ಎ' ತಂಡ: ಶಾಮ್ಯುಲ್ ಹುಸೇನ್, ಮಾಝ್ ಸಾಧಕತ್, ರೋಹಿಲ್ ನಜೀರ್(ವಿಕೆಟ್ ಕೀಪರ್), ಹಸನ್ ನವಾಜ್, ಅಬ್ದುಲ್ ಸಮದ್(ನಾಯಕ), ಫರ್ಹಾನ್ ಯೂಸುಫ್, ಸಾದ್ ಮಸೂದ್, ಮೊಹಮ್ಮದ್ ಇಮ್ರಾನ್ ರಂಧಾವಾ, ಅಹಮದ್ ಡೇನಿಯರ್, ಸುಫ್ಯಾನ್ ಮೊಹ್ಕಿಮ್, ಅಲಿ ರಜಾ, ಸಾಜೈಬ್ ಖಾನ್, ಹೈದರ್ ಅಲಿ, ಮೊಹಮ್ಮದ್ ಹಸನೈನ್, ಡ್ಯಾನಿಸ್ ಅಝೀಝ್.
















