* ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ಬೌಲಿಂಗ್ ಆಯ್ಕೆ* ವೆಸ್ಟ್ ಇಂಡೀಸ್ ತಂಡದಲ್ಲಿ ಒಂದು ಮಹತ್ವದ ಬದಲಾವಣೆ* ಈಗಾಗಲೇ ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿರುವ ಭಾರತ
ಕೋಲ್ಕತಾ(ಫೆ.18): ಭಾರತ ಹಾಗೂ ವೆಸ್ಟ್ ಇಂಡೀಸ್ (India vs West Indies) ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡದ ನಾಯಕ ಕೀರನ್ ಪೊಲ್ಲಾರ್ಡ್ (Kieron Pollard) ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ನಿರೀಕ್ಷೆಯಂತೆಯೇ ವೆಸ್ಟ್ ಇಂಡೀಸ್ ತಂಡದಲ್ಲಿ ಒಂದು ಬದಲಾವಣೆಗಳಾಗಿವೆ. ಆದರೆ ಭಾರತ ತಂಡದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ.
ಇಲ್ಲಿನ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ (Eden Gardens Stadium) ಆರಂಭವಾದ ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದಲ್ಲಿ ಒಂದು ಬದಲಾವಣೆಯನ್ನು ಮಾಡಲಾಗಿದ್ದು, ಫ್ಯಾಬಿನ್ ಅಲೆನ್ ಬದಲಿಗೆ ಜೇಸನ್ ಹೋಲ್ಡರ್ (Jason Holder) ತಂಡಕೂಡಿಕೊಂಡಿದ್ದಾರೆ. ಫಿಟ್ನೆಸ್ ಸಮಸ್ಯೆಯಿಂದಾಗಿ ಜೇಸನ್ ಹೋಲ್ಡರ್ ಮೊದಲ ಟಿ20 ಪಂದ್ಯದಿಂದ ಹೊರಗುಳಿದಿದ್ದರು. ಇನ್ನು ಭಾರತ ತಂಡದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.
ಭಾರತ ತಂಡದಲ್ಲಿ ಎರಡು ಬದಲಾವಣೆಯನ್ನು ನಿರೀಕ್ಷೆ ಮಾಡಲಾಗಿತ್ತು. ದೀಪಕ್ ಚಹರ್ (Deepak Chahar) ಬದಲಿಗೆ ಶಾರ್ದೂಲ್ ಠಾಕೂರ್ ತಂಡ ಕೂಡಿಕೊಳ್ಳಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ರೋಹಿತ್ ಶರ್ಮಾ (Rohit Sharma) ಮೊದಲ ಪಂದ್ಯದಲ್ಲಿ ಕಣಕ್ಕಿಳಿದ ತಂಡವನ್ನೇ ಕಣಕ್ಕಿಳಿಸಿದ್ದಾರೆ. ಇನ್ನು ಇಶಾನ್ ಕಿಶನ್ ಬದಲಿಗೆ ಋತುರಾಜ್ ಗಾಯಕ್ವಾಡ್ ತಂಡಕೂಡಿಕೊಳ್ಳಬಹುದು ಎನ್ನುವ ನಿರೀಕ್ಷೆ ಕೂಡಾ ಹುಸಿಯಾಗಿದೆ.
ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಸಿಕ್ಕ ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ಪದೇ ಪದೇ ವಿಫಲರಾಗುತ್ತಿದ್ದಾರೆ. ಹೀಗಾಗಿ ಎರಡನೇ ಪಂದ್ಯದಲ್ಲಾದರೂ ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ. ಇನ್ನೊಂದೆಡೆ ಇಶಾನ್ ಕಿಶನ್ (Ishan Kishan) ಮೊದಲ ಟಿ20 ಪಂದ್ಯದಲ್ಲಿ ಸಾಕಷ್ಟು ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ್ದರು. ಇದೀಗ ಎರಡನೇ ಪಂದ್ಯದಲ್ಲಿ ಕಿಶನ್ ಅಬ್ಬರಿಸುತ್ತಾರಾ ಅಥವಾ ವಿಂಡೀಸ್ ಬೌಲರ್‌ಗಳು ಭಾರತೀಯ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಯಶಸ್ವಿಯಾಗುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
Ind vs WI: ಟೀಂ ಇಂಡಿಯಾಗಿಂದು ಟಿ20 ಸರಣಿ ಜಯದ ಗುರಿ
ಈಗಾಗಲೇ ಮೊದಲ ಟಿ20 ಪಂದ್ಯದಲ್ಲಿ ಆಲ್ರೌಂಡ್ ಪ್ರದರ್ಶನ ತೋರುವ ಭರ್ಜರಿ ಗೆಲುವು ದಾಖಲಿಸಿರುವ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಇದೀಗ ಎರಡನೇ ಪಂದ್ಯವನ್ನು ಗೆದ್ದು, ಇನ್ನೊಂದು ಪಂದ್ಯ ಭಾಕಿ ಇರುವಂತೆಯೇ ಸರಣಿ ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಇನ್ನೊಂದೆಡೆ, ಈ ಬಾರಿಯ ಭಾರತ ಪ್ರವಾಸದಲ್ಲಿ ಇದುವರೆಗೂ ಗೆಲುವ ಕಾಣದೇ ಪರಿತಪಿಸುತ್ತಿರುವ ವೆಸ್ಟ್ ಇಂಡೀಸ್ ತಂಡವು, ಟಿ20 ಸರಣಿ ಗೆಲ್ಲುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೆ, ಶತಾಯಗತಾಯ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ಪಿಚ್ ರಿಪೋರ್ಟ್
ಮೊದಲ ಪಂದ್ಯದಲ್ಲಿ ಇಬ್ಬನಿ ಸಮಸ್ಯೆ ಎದುರಾಗಿತ್ತು. ಹೀಗಾಗಿ 2ನೇ ಇನ್ನಿಂಗ್ಸ್ ವೇಳೆ ಬೌಲ್ ಮಾಡುವುದು ಕಷ್ಟವೆನಿಸಿತ್ತು. ಮತ್ತೊಮ್ಮೆ ಟಾಸ್ ನಿರ್ಣಾಯಕವೆನಿಸಲಿದೆ. ಮೊದಲು ಬ್ಯಾಟ್ ಮಾಡುವ ತಂಡ 170-180 ರನ್ ಕಲೆಹಾಕಿದರೆ ರಕ್ಷಿಸಿಕೊಳ್ಳುವ ಸಾಧ್ಯತೆ ಹೆಚ್ಚು.
ತಂಡಗಳು ಹೀಗಿವೆ ನೋಡಿ
ಭಾರತ: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ದೀಪಕ್ ಚಹರ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ರವಿ ಬಿಷ್ಣೋಯ್, ಯುಜುವೇಂದ್ರ ಚಹಲ್.
ವಿಂಡೀಸ್: ಬ್ರೆಂಡನ್ ಕಿಂಗ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್, ರೋಸ್ಟನ್ ಚೇಸ್, ಜೇಸನ್ ಹೋಲ್ಡರ್, ಕೀರನ್ ಪೊಲ್ಲಾರ್ಡ್(ನಾಯಕ), ರೋಮನ್ ಪೋವೆಲ್, ಶೆಫರ್ಡ್, ಒಡಿಯೇನ್ ಸ್ಮಿತ್, ಅಕೆಲ್ ಹೊಸೈನ್, ಶೆಲ್ಡನ್ ಕಾಟ್ರೆಲ್.
ಪಂದ್ಯ ಆರಂಭ: ಸಂಜೆ 7ಕ್ಕೆ,
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
