* ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾಗಿಂದು ವಿಂಡೀಸ್ ಸವಾಲು* ಟಿ20 ಸರಣಿ ಕೈವಶ ಮಾಡಿಕೊಳ್ಳುವ ಹೊಸ್ತಿಲಲ್ಲಿ ಟೀಂ ಇಂಡಿಯಾ* ವಿಂಡೀಸ್ ವಿರುದ್ಧ ಟಿ20 ಸರಣಿ ಗೆಲುವಿನ ಮೇಲೂ ಭಾರತ ಕಣ್ಣಿಟ್ಟಿದೆ
ಕೋಲ್ಕತಾ(ಫೆ.18): ಭಾರತ ತಂಡದ ಪೂರ್ಣಾವಧಿ ನಾಯಕನಾದ ಮೇಲೆ ರೋಹಿತ್ ಶರ್ಮಾ (Rohit Sharma) ಹ್ಯಾಟ್ರಿಕ್ ಸರಣಿ ಗೆಲುವು ಸಾಧಿಸಲು ಎದುರು ನೋಡುತ್ತಿದ್ದು, ವಿಂಡೀಸ್ ವಿರುದ್ಧ ಶುಕ್ರವಾರ ನಡೆಯಲಿರುವ 2ನೇ ಟಿ20 ಪಂದ್ಯದಲ್ಲಿ ಭಾರತ ಗೆದ್ದರೆ ರೋಹಿತ್‌ರ ಆಸೆ ಈಡೇರಲಿದೆ. ಕಳೆದ ವರ್ಷಾಂತ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ನಡೆದ ಟಿ20 ಸರಣಿಯನ್ನು 3-0ಯಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದ ರೋಹಿತ್ ಶರ್ಮಾ ನಾಯಕತ್ವದ ಭಾರತ, ವೆಸ್ಟ್‌ಇಂಡೀಸ್ (India vs West Indies) ವಿರುದ್ಧದ ಏಕದಿನ ಸರಣಿಯನ್ನು 3-0ಯಲ್ಲಿ ಗೆದ್ದಿತ್ತು. ಇದೀಗ ವಿಂಡೀಸ್ ವಿರುದ್ಧ ಟಿ20 ಸರಣಿ ಗೆಲುವಿನ ಮೇಲೂ ಭಾರತ ಕಣ್ಣಿಟ್ಟಿದೆ. ಇನ್ನೊಂದೆಡೆ ಟಿ20 ಸರಣಿಯನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೆ, ವೆಸ್ಟ್ ಇಂಡೀಸ್ ತಂಡವು ಎರಡನೇ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ
ಮೊದಲ ಟಿ20ಯಲ್ಲಿ ಪವರ್-ಪ್ಲೇನಲ್ಲಿ ಉತ್ತಮ ಬೌಲಿಂಗ್, ಬ್ಯಾಟಿಂಗ್ ಮಾಡಿದ ಪರಿಣಾಮ ಭಾರತಕ್ಕೆ ಗೆಲುವು ಸುಲಭವಾಗಿ ಒಲಿದಿತ್ತು. ಹೀಗಾಗಿ ಪವರ್-ಪ್ಲೇನಲ್ಲಿ ಮೇಲುಗೈ ಸಾಧಿಸಲು ಭಾರತ ಹೆಚ್ಚಿನ ಗಮನ ವಹಿಸಲಿದೆ. ದೀಪಕ್ ಚಹರ್ (Deepak Chahar) ಗಾಯಗೊಂಡಿರುವ ಕಾರಣ ಅವರು ಈ ಪಂದ್ಯದಿಂದ ಹೊರಗುಳಿಯಬಹುದು. ಶಾರ್ದೂಲ್ ಠಾಕೂರ್‌ಗೆ (Shardul Thakur) ಅವಕಾಶ ಸಿಗುವ ನಿರೀಕ್ಷೆ ಇದೆ. ಸೂರ್ಯಕುಮಾರ್ ಯಾದವ್ ಹಾಗೂ ವೆಂಕಟೇಶ್ ಅಯ್ಯರ್ ಉತ್ತಮ ಮ್ಯಾಚ್ ಫಿನೀಶರ್ ಪಾತ್ರವನ್ನು ನಿಭಾಯಿಸಿದ್ದರು.
ಸ್ಫೋಟಕ ಆಟವಾಡಲು ಪದೇ ಪದೇ ವಿಫಲರಾಗುತ್ತಿರುವ ಇಶಾನ್ ಕಿಶನ್‌ರನ್ನು (Ishan Kishan) ಕೈಬಿಟ್ಟು ಋುತುರಾಜ್ ಗಾಯಕ್ವಾಡ್‌ರನ್ನು ಆರಂಭಿಕನನ್ನಾಗಿ ಕಣಕ್ಕಿಳಿಸಲಾಗುತ್ತಾ ಎನ್ನುವ ಕುತೂಹಲವೂ ಇದೆ. ವಿರಾಟ್ ಕೊಹ್ಲಿ (Virat Kohli) ದೊಡ್ಡ ಇನ್ನಿಂಗ್ಸ್‌ನ ಕಾಯುವಿಕೆ ಮುಂದುವರಿಯುತ್ತಲ್ಲೇ ಇದ್ದು, ಈ ಸರಣಿಯಲ್ಲಿ ಅವರಿಂದ ಕನಿಷ್ಠ ಒಂದು ಅರ್ಧಶತಕವನ್ನಾದರೂ ಅಭಿಮಾನಿಗಳು ನಿರೀಕ್ಷೆ ಮಾಡುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಮಿಂಚಿದ್ದ ರವಿ ಬಿಷ್ಣೋಯ್ ಬಗ್ಗೆ ರೋಹಿತ್ ಮೆಚ್ಚುಗೆಯ ಮಾತುಗಳನ್ನಾಡಿದ್ದು, ಟಿ20 ವಿಶ್ವಕಪ್ (ICC T20 World Cup) ತಂಡದಲ್ಲೂ ಸ್ಥಾನ ಗಳಿಸುವ ನಿರೀಕ್ಷೆಯಲ್ಲಿರುವ ಯುವ ಲೆಗ್ ಸ್ಪಿನ್ನರ್ ತಮ್ಮ ಪ್ರದರ್ಶನ ಗುಣಮಟ್ಟಕಾಯ್ದುಕೊಳ್ಳಲು ಪರಿಶ್ರಮವಹಿಸಬೇಕಿದೆ.
IND vs WI T20 ರೋಹಿತ್ ಅಬ್ಬರ, ವಿಂಡೀಸ್ ವಿರುದ್ಧ ಟೀಂ ಇಂಡಿಯಾಗೆ 6 ವಿಕೆಟ್ ಗೆಲುವು!
ಇನ್ನು ವಿಂಡೀಸ್ ಈ ಪ್ರವಾಸದಲ್ಲಿ ಮೊದಲ ಗೆಲುವಿಗೆ ಎದುರು ನೋಡುತ್ತಿದೆ. ನಿಕೋಲಸ್ ಪೂರನ್(Nicholas Pooran), ಕೈಲ್ ಮೇಯರ್ಸ್ ಭರವಸೆ ಮೂಡಿಸಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಮೊದಲ ಪಂದ್ಯಕ್ಕೆ ಗೈರಾಗಿದ್ದ ಜೇಸನ್ ಹೋಲ್ಡರ್ ಈ ಪಂದ್ಯದಲ್ಲಿ ಆಡುವ ನಿರೀಕ್ಷೆ ಇದೆ. ಜೇಸನ್ ಹೋಲ್ಡರ್ ಕಣಕ್ಕಿಳಿದರೆ ವಿಂಡೀಸ್‌ಗೆ ಮತ್ತಷ್ಟು ಬಲ ಸಿಗಲಿದೆ. ವಿಂಡೀಸ್‌ನ ಆಟಗಾರರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತ ಪ್ರದರ್ಶನ ತೋರಿದರೆ, ಗೆಲುವು ಕಷ್ಟವೇನಲ್ಲ
ಪಿಚ್ ರಿಪೋರ್ಟ್
ಮೊದಲ ಪಂದ್ಯದಲ್ಲಿ ಇಬ್ಬನಿ ಸಮಸ್ಯೆ ಎದುರಾಗಿತ್ತು. ಹೀಗಾಗಿ 2ನೇ ಇನ್ನಿಂಗ್ಸ್ ವೇಳೆ ಬೌಲ್ ಮಾಡುವುದು ಕಷ್ಟವೆನಿಸಿತ್ತು. ಮತ್ತೊಮ್ಮೆ ಟಾಸ್ ನಿರ್ಣಾಯಕವೆನಿಸಲಿದೆ. ಮೊದಲು ಬ್ಯಾಟ್ ಮಾಡುವ ತಂಡ 170-180 ರನ್ ಕಲೆಹಾಕಿದರೆ ರಕ್ಷಿಸಿಕೊಳ್ಳುವ ಸಾಧ್ಯತೆ ಹೆಚ್ಚು.
ಸಂಭವನೀಯ ಆಟಗಾರರ ಪಟ್ಟಿ
ಭಾರತ: ರೋಹಿತ್ ಶರ್ಮಾ(ನಾಯಕ), ಋುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ಶಾರ್ದೂಲ್ ಠಾಕೂರ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ರವಿ ಬಿಷ್ಣೋಯ್, ಯುಜುವೇಂದ್ರ ಚಹಲ್.
ವೆಸ್ಟ್ ಇಂಡೀಸ್ : ಬ್ರೆಂಡನ್ ಕಿಂಗ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್, ರೋಸ್ಟನ್ ಚೇಸ್, ಜೇಸನ್ ಹೋಲ್ಡರ್, ಕೀರನ್ ಪೊಲ್ಲಾರ್ಡ್(ನಾಯಕ), ಫ್ಯಾಬಿನ್ ಆ್ಯಲೆನ್, ಶೆಫರ್ಡ್, ಒಡಿಯೇನ್ ಸ್ಮಿತ್, ಅಕೆಲ್ ಹೊಸೈನ್, ಶೆಲ್ಡನ್ ಕಾಟ್ರೆಲ್.
ಪಂದ್ಯ ಆರಂಭ: ಸಂಜೆ 7ಕ್ಕೆ,
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
