Asianet Suvarna News Asianet Suvarna News

Ind vs WI: ವಿಂಡೀಸ್‌ ಟಿ20 ಚಾಲೆಂಜ್‌ಗೆ ಟೀಂ ಇಂಡಿಯಾ ಸಜ್ಜು..!

* ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿಗೆ ಸಜ್ಜಾದ ಟೀಂ ಇಂಡಿಯಾ

* ಏಕದಿನ ಸರಣಿ ಕ್ಲೀನ್‌ ಸ್ವೀಪ್‌ ಮಾಡಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ರೋಹಿತ್ ಶರ್ಮಾ ಪಡೆ

* ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣವು ಮೂರೂ ಪಂದ್ಯಗಳಿಗೆ ಆತಿಥ್ಯ

Ind vs WI Team India take on West Indies Challenge in T20I Series kvn
Author
Bengaluru, First Published Feb 16, 2022, 10:43 AM IST | Last Updated Feb 16, 2022, 10:43 AM IST

ಕೋಲ್ಕತಾ(ಫೆ.16): ಏಕಪಕ್ಷೀಯವಾಗಿ ನಡೆದ ಏಕದಿನ ಸರಣಿಯನ್ನು ಭಾರತ 3-0ಯಿಂದ ಕ್ಲೀನ್‌ ಸ್ವೀಪ್‌ ಮಾಡಿದ ಬಳಿಕ ಎಲ್ಲರ ಗಮನ 2 ದಿನಗಳ ಐಪಿಎಲ್‌ ಹರಾಜು (IPL Auction) ಪ್ರಕ್ರಿಯೆ ಮೇಲೆ ನೆಟ್ಟಿತ್ತು. ಭಾರತ ತಂಡದಲ್ಲಿರುವ 10 ಆಟಗಾರರು ಹರಾಜಿನ ಬಹುಕೋಟಿ ಒಡೆಯರಾದ ಮೇಲೆ ಈಗ ಗಮನ ವಿಂಡೀಸ್‌ ವಿರುದ್ಧದ ಟಿ20 ಸರಣಿ ಮೇಲೆ ಕೇಂದ್ರೀಕೃತವಾಗಿದೆ. 3 ಪಂದ್ಯಗಳ ಸರಣಿಯು ಬುಧವಾರದಿಂದ ಆರಂಭಗೊಳ್ಳಲಿದ್ದು, ಭಾರತ ಮತ್ತೊಮ್ಮೆ ಮೇಲುಗೈ ಸಾಧಿಸಲು ಎದುರು ನೋಡುತ್ತಿದೆ.

ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣವು ಮೂರೂ ಪಂದ್ಯಗಳಿಗೆ ಆತಿಥ್ಯ ನೀಡಲಿದ್ದು, ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. ಕಳೆದ ವರ್ಷ ಟಿ20 ವಿಶ್ವಕಪ್‌ನ (ICC T20 World Cup) ಗುಂಪು ಹಂತದಲ್ಲೇ ನಿರ್ಗಮಿಸಿದ್ದ ಭಾರತ, ಈ ವರ್ಷ ಆಸ್ಪ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಬಲಿಷ್ಠ ತಂಡ ಕರೆದೊಯ್ಯಲು ಸಿದ್ಧತೆ ನಡೆಸುತ್ತಿದೆ. ಈ ಸರಣಿ ಆ ಸಿದ್ಧತೆಯ ಭಾಗವಾಗಿರಲಿದೆ.

5 ಬಾರಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ನ (Mumbai Indians) ನಾಯಕ ರೋಹಿತ್‌ ಶರ್ಮಾ (Rohit Sharma) ಹೆಗಲಿಗೆ ಭಾರತ ತಂಡದ ನಾಯಕತ್ವದ ಜವಾಬ್ದಾರಿಯೂ ಬಿದ್ದಿದ್ದು, ತಂಡದ ಮಧ್ಯಮ ಕ್ರಮಾಂಕದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದರ ಜೊತೆಗೆ ಬೌಲಿಂಗ್‌ ಯೋಜನೆಗಳನ್ನು ರೂಪಿಸುವ ಸವಾಲಿದೆ. ಕೆ.ಎಲ್‌.ರಾಹುಲ್‌ (KL Rahul) ಸರಣಿಯಿಂದ ಹೊರಬಿದ್ದ ಕಾರಣ, ಹರಾಜಿನಲ್ಲಿ 15.25 ಕೋಟಿ ರು. ಜಾಕ್‌ಪಾಟ್‌ ಹೊಡೆದ ಇಶಾನ್‌ ಕಿಶನ್‌ (Ishan Kishan) ಇನ್ನಿಂಗ್ಸ್‌ ಆರಂಭಿಸುವ ನಿರೀಕ್ಷೆ ಇದೆ. ಇಶಾನ್‌ ಕಿಶನ್‌ಗೆ ಋುತುರಾಜ್‌ ಗಾಯಕ್ವಾಡ್‌ರಿಂದ ಸ್ಪರ್ಧೆ ಏರ್ಪಡಬಹುದು. ವೆಂಕಟೇಶ್‌ ಅಯ್ಯರ್‌ ಸಹ ಆರಂಭಿಕನ ಸ್ಥಾನದ ರೇಸ್‌ನಲ್ಲಿದ್ದಾರೆ.

ವಿರಾಟ್‌ ಕೊಹ್ಲಿಯ ಲಯದ ಬಗ್ಗೆ ತಂಡಕ್ಕೆ ಚಿಂತೆ ಇಲ್ಲ ಎಂದು ನಾಯಕ ರೋಹಿತ್‌ ಪದೇ ಪದೇ ಹೇಳುತ್ತಿದರೂ, ಕೊಹ್ಲಿ ಒತ್ತಡದಲ್ಲಿದ್ದಾರೆ ಎನ್ನುವುದು ಮೈದಾನದಲ್ಲಿ ಅವರ ಹಾವಭಾವದಿಂದಲೇ ತಿಳಿಯುತ್ತದೆ. ಶ್ರೇಯಸ್‌ ಅಯ್ಯರ್‌ (Shreyas Iyer), ಸೂರ್ಯಕುಮಾರ್‌ ಯಾದವ್ ತಮ್ಮ ಸ್ಥಾನಗಳನ್ನು ಕಾಯಂಗೊಳಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.

Ind vs WI: ವಿಂಡೀಸ್ ಎದುರಿನ ಟಿ20 ಸರಣಿಗೂ ಮುನ್ನ ಕೊಹ್ಲಿ ಕುರಿತಂತೆ ವಿಶೇಷ ಮನವಿ ಮಾಡಿದ ರೋಹಿತ್ ಶರ್ಮಾ

ಜಸ್ಪ್ರೀತ್ ಬುಮ್ರಾ (Jasprit Bumrah) ಹಾಗೂ ಮೊಹಮ್ಮದ್ ಶಮಿ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಸಿರಾಜ್‌ ಬೌಲಿಂಗ್‌ ಪಡೆಯನ್ನು ಮುನ್ನಡೆಸಲಿದ್ದಾರೆ. ಹರ್ಷಲ್ ಪಟೇಲ್‌, ದೀಪಕ್‌ ಚಹರ್‌, ಶಾರ್ದೂಲ್‌ ಠಾಕೂರ್ ಪೈಕಿ ಇಬ್ಬರಿಗೆ ಅವಕಾಶ ಸಿಗಲಿದೆ. ಯುಜುವೇಂದ್ರ ಚಹಲ್‌, ರವಿ ಬಿಷ್ಣೋಯ್‌, ಕುಲ್ದೀಪ್‌ ಯಾದವ್ ಸ್ಪಿನ್ನರ್‌ ಸ್ಥಾನಕ್ಕೆ ಪೈಪೋಟಿ ನಡೆಸಲಿದ್ದಾರೆ. ಇನ್ನು ವಿಂಡೀಸ್‌ ಏಕದಿನಕ್ಕೆ ಹೋಲಿಸಿದರೆ ಟಿ20ಯಲ್ಲಿ ಸುಧಾರಿತ ಆಟವಾಡುವ ನಿರೀಕ್ಷೆ ಇದೆ. ಭಾರತಕ್ಕೆ ಬರುವ ಮೊದಲು ತವರಿನಲ್ಲಿ ಇಂಗ್ಲೆಂಡ್‌ ವಿರುದ್ಧ 3-2ರಲ್ಲಿ ಸರಣಿ ಗೆದ್ದಿದ್ದ ವಿಂಡೀಸ್‌, ಆ ಗೆಲುವಿನಿಂದ ಸ್ಫೂರ್ತಿ ಪಡೆದು ಭಾರತದ ವಿರುದ್ಧವೂ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ.

ಟಿ20 ಕ್ರಿಕೆಟ್‌ನಲ್ಲಿ ಉಭಯ ತಂಡಗಳು ಇದುವರೆಗೂ 17 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಟೀಂ ಇಂಡಿಯಾ (Team India) 10 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದ್ದರೆ, ವೆಸ್ಟ್ ಇಂಡೀಸ್ ತಂಡವು 6 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ. ಇನ್ನೊಂದು ಪಂದ್ಯದಲ್ಲಿ ಫಲಿತಾಂಶ ಹೊರಬಿದ್ದಿರಲಿಲ್ಲ.

ಪಿಚ್‌ ರಿಪೋರ್ಟ್‌

ಚಳಿ ವಾತಾವರಣವಿರುವ ಕಾರಣ ಇಬ್ಬನಿ ಬೀಳುವ ಸಾಧ್ಯತೆ ಇದ್ದು, ಟಾಸ್‌ ನಿರ್ಣಾಯಕವಾಗಲಿದೆ. ಟಾಸ್‌ ಗೆಲ್ಲುವ ತಂಡ ಮೊದಲು ಫೀಲ್ಡ್‌ ಮಾಡುವ ಸಾಧ್ಯತೆ ಹೆಚ್ಚು. 3 ಪಂದ್ಯಗಳಿಗೆ ಬಂಗಾಳ ಕ್ರಿಕೆಟ್‌ ಮಂಡಳಿ 4 ಪಿಚ್‌ಗಳನ್ನು ಸಿದ್ಧಪಡಿಸಿದೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್ ಶರ್ಮಾ‌(ನಾಯಕ), ಇಶಾನ್ ಕಿಶನ್‌, ವಿರಾಟ್ ಕೊಹ್ಲಿ, ರಿಷಭ್ ಪಂತ್‌, ಸೂರ್ಯಕುಮಾರ್‌ ಯಾದವ್, ವೆಂಕಟೇಶ್ ಅಯ್ಯರ್‌, ದೀಪಕ್ ಚಹರ್‌, ಶಾರ್ದೂಲ್ ಠಾಕೂರ್‌, ಮೊಹಮ್ಮದ್ ಸಿರಾಜ್‌, ಯುಜುವೇಂದ್ರ ಚಹಲ್‌, ಕುಲ್ದೀಪ್ ಯಾದವ್‌.

ವಿಂಡೀಸ್‌: ಬ್ರೆಂಡನ್ ಕಿಂಗ್‌, ಕೈಲ್ ಮೇಯರ್ಸ್‌, ಶೆಫರ್ಡ್‌, ನಿಕೋಲಸ್ ಪೂರನ್‌, ಕೀರನ್ ಪೊಲ್ಲಾರ್ಡ್‌(ನಾಯಕ), ರೋಮನ್ ಪೋವೆಲ್‌, ಜೇಸನ್ ಹೋಲ್ಡರ್‌, ಫ್ಯಾಬಿನ್ ಆ್ಯಲೆನ್‌, ಓಡೆನ್ ಸ್ಮಿತ್‌, ಅಕೆಲ್ ಹೊಸೈನ್‌, ಶೆಲ್ಡನ್ ಕಾಟ್ರೆಲ್‌.

ಪಂದ್ಯ ಆರಂಭ: ಸಂಜೆ 7.30ಕ್ಕೆ, 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

Latest Videos
Follow Us:
Download App:
  • android
  • ios