Asianet Suvarna News Asianet Suvarna News

Ind vs WI: ಸಾವಿರದ ಏಕದಿನ ಇತಿಹಾಸಕ್ಕೆ ಟೀಂ ಇಂಡಿಯಾ ಸನ್ನದ್ದ..!

* 1000ನೇ ಏಕದಿನ ಪಂದ್ಯವನ್ನಾಡಲು ರೆಡಿಯಾದ ಟೀಂ ಇಂಡಿಯಾ

* ಇದುವರೆಗೆ 999 ಪಂದ್ಯಗಳನ್ನಾಡಿರುವ ಭಾರತ ಹೊಸ ಮೈಲಿಗಲ್ಲು ತಲುಪಲಿದೆ

* ಈ ಐತಿಹಾಸಿಕ ಕ್ಷಣಗಳಿಗೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಸಾಕ್ಷಿಯಾಗಲಿದೆ

Ind vs WI Team India Set For Huge Record In 1st ODI against West Indies kvn
Author
Bengaluru, First Published Feb 6, 2022, 10:04 AM IST | Last Updated Feb 6, 2022, 10:04 AM IST

ಅಹಮದಾಬಾದ್(ಫೆ.06)‌: ಏಕದಿನ ಇತಿಹಾಸದಲ್ಲೇ ಸಾವಿರ ಏಕದಿನ ಪಂದ್ಯವಾಡಿರುವ ಮೊದಲ ದೇಶ ಎಂಬ ಹೆಗ್ಗಳಿಕೆ ಗಳಿಸಿಕೊಳ್ಳಲು ಭಾರತ ಸನ್ನದ್ಧವಾಗಿದೆ. ಭಾರತ ಹಾಗೂ ವೆಸ್ಟ್‌ಇಂಡೀಸ್‌ (India vs West Indies) ನಡುವಿನ 3 ಪಂದ್ಯಗಳ ಏಕದಿನ ಸರಣಿಗೆ ಭಾನುವಾರದಿಂದ ಚಾಲನೆ ದೊರೆಯಲಿದ್ದು, ಇದುವರೆಗೆ 999 ಪಂದ್ಯಗಳನ್ನಾಡಿರುವ ಭಾರತ ಹೊಸ ಮೈಲಿಗಲ್ಲು ತಲುಪಲಿದೆ. ಈ ಐತಿಹಾಸಿಕ ಕ್ಷಣಗಳಿಗೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಸಾಕ್ಷಿಯಾಗಲಿದೆ.

ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಹಾಗೂ ಟೆಸ್ಟ್‌ ಸರಣಿ ಎರಡರಲ್ಲೂ ಸೋತಿದ್ದ ಭಾರತಕ್ಕೆ ಈ ಸರಣಿ ಮಹತ್ವದ್ದಾಗಿದೆ. ಹೀನಾಯ ಸೋಲಿನ ಸುಳಿಯಿಂದ ಪುಟಿದೇಳಬೇಕಿದ್ದರೆ, ವಿಂಡೀಸ್‌ ವಿರುದ್ಧದ ಸರಣಿಯಲ್ಲಿ ಭಾರತ ಜಯ ಸಾಧಿಸಬೇಕಿದೆ. ಇದಕ್ಕೆ ಭಾನುವಾರ ನಡೆಯುವ ಮೊದಲ ಪಂದ್ಯದಲ್ಲೇ ಜಯ ಸಾಧಿಸುವ ಮೂಲಕ ಭದ್ರ ಬುನಾದಿ ಹಾಕಬೇಕಿದೆ.

ತಂಡದ ಪ್ರಮುಖ ಆಟಗಾರರಾದ ಶಿಖರ್‌ ಧವನ್‌(Shikhar Dhawan), ಶ್ರೇಯಸ್‌ ಅಯ್ಯರ್‌(Shreyas Iyer), ಋುತುರಾಜ್‌ ಗಾಯಕ್ವಾಡ್‌, ನವದೀಪ್‌ ಸೈನಿ, ಕೊರೋನಾ ಸೋಂಕಿಗೆ (Coronavirus) ಒಳಗಾಗಿದ್ದಾರೆ. ಜತೆಗೆ ಜಸ್‌ಪ್ರೀತ್‌ ಬುಮ್ರಾ(Jasprit Bumrah), ಮೊಹಮದ್‌ ಶಮಿ ಸರಣಿಗೆ ಹಾಗೂ ಕೆ.ಎಲ್‌.ರಾಹುಲ್‌ (KL Rahul) ಮೊದಲ ಪಂದ್ಯಕ್ಕೆ ಅಲಭ್ಯರಾಗಿರುವುದು ಕೊಂಚ ಪೆಟ್ಟು ನೀಡಿದೆ. ತಂಡವನ್ನೂ ಕೂಡಿಕೊಂಡಿದ್ದರೂ ಮಯಾಂಕ್‌ ಅಗರ್‌ವಾಲ್‌  ಕಾರಂಟೈನ್‌ನಲ್ಲಿರುವ ಕಾರಣ ಮೊದಲ ಪಂದ್ಯಕ್ಕೆ ಲಭ್ಯರಿಲ್ಲ. ಹೀಗೆ ಪ್ರಮುಖ ಆಟಗಾರರಿಲ್ಲದೇ ಕಣಕ್ಕಿಳಿಯುತ್ತಿರುವ ತಂಡ ಹಲವು ಸವಾಲುಗಳನ್ನು ಮೀರಿ ದಿಟ್ಟಉತ್ತರ ನೀಡಬೇಕಿದೆ.

ಕೊಹ್ಲಿ ಮೇಲೆ ನಿರೀಕ್ಷೆ:

ಇಶಾನ್‌ ಕಿಶನ್‌ರೊಂದಿಗೆ ಇನ್ನಿಂಗ್ಸ್‌ ಆರಂಭಿಸುವುದಾಗಿ ನಾಯಕ ರೋಹಿತ್‌ ಶರ್ಮಾ (Rohit Sharma) ಖಚಿತ ಪಡಿಸಿದ್ದು, ವಿರಾಟ್‌ ಕೊಹ್ಲಿ (Virat Kohli) 3ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಇಳಿಯಲಿದ್ದಾರೆ. ನಾಯಕತ್ವದ ಜವಾಬ್ದಾರಿ ಇಲ್ಲದ ಕಾರಣ, ಬ್ಯಾಟರ್‌ ಆಗಿ ಆಡುತ್ತಿರುವ ವಿರಾಟ್‌ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ. ಇನ್ನು 4ನೇ ಕ್ರಮಾಂಕದಲ್ಲಿ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌(Rishabh Pant), 5ನೇ ಕ್ರಮಾಂಕದಲ್ಲಿ ಸೂರ್ಯಕುಮಾರ್‌ ಯಾದವ್‌ (Suryakumar Yadav) ಆಡುವುದು ಬಹುತೇಕ ಖಚಿತವಾಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲು ಕಾಯುತ್ತಿರುವ ದೀಪಕ್‌ ಹೂಡಾಗೆ ಅವಕಾಶ ದೊರೆಯುವ ಸಾಧ್ಯತೆಯಿದ್ದು, ಆಲ್ರೌಂಡರ್‌ ಆಗಿ ಉತ್ತಮ ಪ್ರದರ್ಶನ ನೀಡಬೇಕಿದೆ. ಮತ್ತೊಬ್ಬ ಆಲ್ರೌಂಡರ್‌ ಆಗಿ ವಾಷಿಂಗ್ಟನ್‌ ಸುಂದರ್‌ಗೆ ಅವಕಾಶ ದೊರೆಯುವ ನಿರೀಕ್ಷೆಯಿದೆ. ಬೂಮ್ರಾ, ಶಮಿ, ಸೈನಿ ಅಲಭ್ಯರಾಗಿರುವ ಕಾರಣ ಬೌಲರ್‌ಗಳಾದ ದೀಪಕ್‌ ಚಹರ್‌, ಚಹಲ್‌, ಪ್ರಸಿದ್ಧ ಕೃಷ್ಣ, ಸಿರಾಜ್‌ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ.

Ind vs WI: ಐತಿಹಾಸಿಕ 1000ನೇ ಏಕದಿನ ಪಂದ್ಯವನ್ನಾಡಲು ಸಜ್ಜಾದ ಟೀಂ ಇಂಡಿಯಾ..!

ಅತ್ತ ವೆಸ್ಟ್‌ಇಂಡೀಸ್‌ ಸಹ ಶುಭಾರಂಭದ ವಿಶ್ವಾಸದಲ್ಲಿದೆ. ಪೊಲಾರ್ಡ್‌, ಪೂರನ್‌, ಬ್ರಾವೋ, ಹೋಲ್ಡರ್‌, ಹೋಪ್‌ಗೆ ಯಾವುದೇ ಕ್ಷಣದಲ್ಲೂ ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯವಿದ್ದು, ವಿಂಡೀಸ್‌ನ ಪ್ರಮುಖ ಟ್ರಂಪ್‌ ಕಾರ್ಡ್‌ಗಳಾಗಿದ್ದಾರೆ.

ಭಾರತ ಹೊಸ ಮೈಲಿಗಲ್ಲು

1974ರಲ್ಲಿ ಇಂಗ್ಲೆಂಡ್‌ ವಿರುದ್ಧ ಮೊದಲ ಏಕದಿನ ಪಂದ್ಯವನ್ನಾಡಿದ್ದ ಭಾರತ ತಂಡ, ಇದುವರೆಗೂ 999 ಪಂದ್ಯಗಳನ್ನಾಡಿದೆ. ಇದರಲ್ಲಿ 518 ಪಂದ್ಯಗಳಲ್ಲಿ ಗೆಲುವು, 431ರಲ್ಲಿ ಸೋಲುಂಡಿದೆ. 9 ಪಂದ್ಯ ಟೈ ಆಗಿದ್ದರೆ, 41 ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಹೊರಬಂದಿಲ್ಲ. ಇನ್ನು 958 ಪಂದ್ಯಗಳನ್ನಾಡಿರುವ ಆಸ್ಪ್ರೇಲಿಯಾ 2ನೇ, 936 ಪಂದ್ಯಗಳನ್ನಾಡಿರುವ ಪಾಕಿಸ್ತಾನ 3ನೇ ಸ್ಥಾನದಲ್ಲಿದೆ.

ಪಿಚ್‌ ರಿಪೋರ್ಟ್‌

ನರೇಂದ್ರ ಮೋದಿ ಕ್ರೀಡಾಂಗಣವು (Narendra Modi Stadium) ವೇಗದ ಬೌಲರ್‌ಗಳಿಗಿಂತ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡಲಿದೆ. ರನ್‌ ಗಳಿಸುವುದು ಸುಲಭವಾದರೂ ಸ್ಪಿನ್ನರ್‌ಗಳ ವಿರುದ್ಧ ರನ್‌ ಗಳಿಸುವುದು ದೊಡ್ಡ ಸವಾಲಾಗಿದೆ. ಇನ್ನು ಸಂಜೆ ಬಳಿಕ ಇಬ್ಬನಿ ಬೀಳುವುದರಿಂದ ಬ್ಯಾಟರ್‌ಗಳಿಗೆ ಕೊಂಚ ನೆರವಾಗಲಿದೆ. ಟಾಸ್‌ ಗೆಲ್ಲುವ ತಂಡ ಫೀಲ್ಡಿಂಗ್‌ ಆಯ್ಕೆ ಮಾಡುವ ಸಾಧ್ಯತೆಯೇ ಹೆಚ್ಚು.

ಸಂಭವನೀಯ ತಂಡ

ಭಾರತ

ರೋಹಿತ್‌ ಶರ್ಮಾ(ನಾಯಕ), ಇಶಾನ್‌ ಕಿಶನ್‌, ವಿರಾಟ್‌ ಕೊಹ್ಲಿ, ರಿಷಭ್‌ ಪಂತ್‌, ಸೂರ್ಯಕುಮಾರ್‌ ಯಾದವ್‌, ದೀಪಕ್‌ ಹೂಡಾ, ಶಾರ್ದೂಲ್‌ ಠಾಕೂರ್‌, ವಾಷಿಂಗ್ಟನ್‌ ಸುಂದರ್‌, ದೀಪಕ್‌ ಚಹರ್‌, ಯಜುವೇಂದ್ರ ಚಹಲ್‌, ಪ್ರಸಿದ್ಧ ಕೃಷ್ಣ/ಮೊಹಮ್ಮದ್‌ ಸಿರಾಜ್‌

ವೆಸ್ಟ್‌ಇಂಡೀಸ್‌

ಶಾಯ್‌ ಹೋಪ್‌, ಬೋನರ್‌/ಬ್ರಾಂಡನ್‌ ಕಿಂಗ್‌, ಶಮರ್‌ ಬ್ರೂಕ್ಸ್‌, ಬ್ರಾವೋ, ಪೂರನ್‌, ಕೀರಾನ್‌ ಪೊಲಾರ್ಡ್‌(ನಾಯಕ), ಜೇಸನ್‌ ಹೋಲ್ಡರ್‌, ರೊಮಾರಿಯೋ ಶೆಫರ್ಡ್‌/ಹೇಡನ್‌ ವಾಲ್ಷ್‌ ಜೂನಿಯರ್‌, ಅಕೇಲ್‌ ಹೋಸೇನ್‌, ಅಲ್ಜಾರಿ ಜೋಸೆಫ್‌, ಕೆಮರ್‌ ರೋಚ್‌

ಪಂದ್ಯ ಆರಂಭ: ಮಧ್ಯಾಹ್ನ 1.30
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

Latest Videos
Follow Us:
Download App:
  • android
  • ios