* ಭಾರತ-ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20 ಪಂದ್ಯಕ್ಕೆ ಕ್ಷಣಗಣನೆ* ನಾಯಕನಾಗಿ ತಂಡವನ್ನು ಮುನ್ನಡೆಸಲಿರುವ ರೋಹಿತ್ ಶರ್ಮಾ* ಮುಂಬರುವ ಟಿ20 ವಿಶ್ವಕಪ್ ದೃಷ್ಟಿಯಿಂದ ಮಹತ್ವದ ಸರಣಿ
ತರೌಬ(ಜು.29): ಯುವ ಆಟಗಾರರೇ ಹೆಚ್ಚಿದ್ದರೂ ವಿಂಡೀಸ್ ವಿರುದ್ಧ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಭಾರತ, ಇದೀಗ ಟಿ20 ಸರಣಿಯತ್ತ ಚಿತ್ತ ಹರಿಸಿದೆ. ಶುಕ್ರವಾರ 5 ಪಂದ್ಯಗಳ ಟಿ20 ಸರಣಿಗೆ ಚಾಲನೆ ದೊರೆಯಲಿದ್ದು, ಭಾರತ ಶುಭಾರಂಭ ಮಾಡಲು ಎದುರು ನೋಡುತ್ತಿದೆ. ಟಿ20 ವಿಶ್ವಕಪ್‌ಗೆ ಕೇವಲ 3 ತಿಂಗಳು ಬಾಕಿ ಇರುವ ಕಾರಣ, ಇಲ್ಲಿಂದ ಮುಂದಕ್ಕೆ ಪ್ರತಿ ಪಂದ್ಯವೂ ಮಹತ್ವದೆನಿಸಲಿದೆ. ವಿಶ್ವಕಪ್‌ಗೆ ಬಲಿಷ್ಠ ತಂಡವನ್ನು ಕಟ್ಟಲು ಟೀಂ ಇಂಡಿಯಾ ಈ ಸರಣಿಯನ್ನು ಬಳಸಿಕೊಳ್ಳಲಿದೆ.
ನಾಯಕ ರೋಹಿತ್ ಶರ್ಮಾ ಸರಣಿಯಲ್ಲಿ ಆಡಲಿದ್ದು, ಕೋಚ್ ರಾಹುಲ್ ದ್ರಾವಿಡ್ ಜೊತೆ ಕೆಲ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ. ವಿಶ್ವಕಪ್‌ಗೆ ಸಿದ್ಧತೆ ನಡೆಸಲು ಭಾರತಕ್ಕೆ 16 ಪಂದ್ಯಗಳು (ವಿಂಡೀಸ್ ವಿರುದ್ಧ 5, ಏಷ್ಯಾಕಪ್‌ನಲ್ಲಿ 5-ಫೈನಲ್ ಪ್ರವೇಶಿಸಿದರೆ, ಆಸ್ಪ್ರೇಲಿಯಾ ವಿರುದ್ಧ 3, ದಕ್ಷಿಣ ಆಫ್ರಿಕಾ ವಿರುದ್ಧ 3) ಸಿಗಲಿವೆ. ಹೀಗಾಗಿ ಪ್ರತಿ ಪಂದ್ಯದಲ್ಲೂ ತನ್ನ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಬಲಿಷ್ಠ ತಂಡ ಕಟ್ಟುವತ್ತ ಟೀಂ ಇಂಡಿಯಾ ಚಿತ್ತ ನೆಟ್ಟಿದೆ.
ರೋಹಿತ್ ಶರ್ಮಾ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಮತ್ತು ದಿನೇಶ್ ಕಾರ್ತಿಕ್‌ರಂತಹ ಘಟಾನುಘಟಿ ಬ್ಯಾಟರ್‌ಗಳ ಬಲ ಭಾರತ ತಂಡಕ್ಕಿದ್ದು, ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಮಿಂಚಿದ ದೀಪಕ್ ಹೂಡಾ ಮೇಲೆ ಎಲ್ಲರ ಕಣ್ಣಿದೆ. ಇನ್ನು ಬೌಲರ್‌ಗಳ ನಡುವೆ ಪೈಪೋಟಿ ಇದ್ದು, ಯಜುವೇಂದ್ರ ಚಹಲ್, ಕುಲ್ದೀಪ್ ಯಾದವ್, ಆರ್.ಅಶ್ವಿನ್, ರವಿ ಬಿಷ್ಣೋಯ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಪೈಕಿ ಯಾರಾರಯರಿಗೆ ಸ್ಥಾನ ಸಿಗಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಇನ್ನು ಭುವನೇಶ್ವರ್ ಕುಮಾರ್, ಆವೇಶ್ ಖಾನ್, ಅಶ್‌ರ್‍ದೀಪ್ ಸಿಂಗ್ ಪೈಕಿ ಒಬ್ಬರು ಹೊರಗುಳಿಯಲಿದ್ದಾರೆ.
Ind vs WI 'ನಮ್ಮ ಹುಡುಗರು ಯುವಕರು, ಆದರೆ..' ಸರಣಿ ಗೆಲುವಿನ ಬಳಿಕ ನಾಯಕ ಧವನ್ ಹೇಳಿದ್ದಿದು..!
ಏಕದಿನಕ್ಕೆ ಹೋಲಿಸಿದರೆ ಟಿ20 ಮಾದರಿಯಲ್ಲಿ ವಿಂಡೀಸ್ ಬಲಿಷ್ಠವಾಗಿದ್ದ, ಆತಿಥೇಯರನ್ನು ಭಾರತ ಲಘುವಾಗಿ ಪರಿಗಣಿಸುವಂತಿಲ್ಲ. ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ವಿಂಡೀಸ್‌ನಿಂದ ಟೀಂ ಇಂಡಿಯಾಗೆ ಕಠಿಣ ಪೈಪೋಟಿ ಎದುರಾಗಬಹುದು.
ಸಂಭಾವ್ಯ ತಂಡಗಳು ಹೀಗಿವೆ ನೋಡಿ
ಭಾರತ:
ರೋಹಿತ್ ಶರ್ಮಾ(ನಾಯಕ), ರಿಷಭ್ ಪಂತ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಆರ್ಶದೀಪ್ ಸಿಂಗ್
ವೆಸ್ಟ್ ಇಂಡೀಸ್
ಬ್ರೆಂಡನ್ ಕಿಂಗ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್(ನಾಯಕ), ಶಿಮ್ರೊನ್ ಹೆಟ್ಮೇಯರ್, ರೋಮನ್ ಪೋವೆಲ್, ಓಡೆನ್ ಸ್ಮಿತ್, ಜೇಸನ್ ಹೋಲ್ಡರ್, ಅಕೆಲ್ ಹುಸೇನ್, ರೊಮಾರಿಯೋ ಶೆಫರ್ಡ್, ಒಬೆಡ್ ಮೆಕಾಯ್, ಅಲ್ಜೆರಿ ಜೋಸೆಫ್.
ಪಂದ್ಯ ಆರಂಭ: ರಾತ್ರಿ 8ಕ್ಕೆ
ನೇರ ಪ್ರಸಾರ: ಡಿಡಿ ಸ್ಪೋರ್ಟ್ಸ್, ಫ್ಯಾನ್ ಕೋಡ್
ಟಿ20 ರನ್: ರೋಹಿತ್‌ರನ್ನು ಹಿಂದಿಕ್ಕಿದ ಮಾರ್ಟಿನ್ ಗಪ್ಟಿಲ್
ಎಡಿನ್‌ಬಗ್‌ರ್: ನ್ಯೂಜಿಲೆಂಡ್‌ನ ಆರಂಭಿಕ ಬ್ಯಾಟರ್ ಮಾರ್ಟಿನ್ ಗಪ್ಟಿಲ್ ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಭಾರತದ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ್ದಾರೆ. ಸ್ಕಾಟ್ಲೆಂಡ್ ವಿರುದ್ಧ ಬುಧವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ 40 ರನ್ ಗಳಿಸಿ ಮಾರ್ಟಿನ್ ಗಪ್ಟಿಲ್ ಈ ದಾಖಲೆ ಬರೆದರು.
ಗಪ್ಟಿಲ್ ಸದ್ಯ 3,399 ರನ್ ಗಳಿಸಿದ್ದು ರೋಹಿತ್‌ಗಿಂತ 20 ರನ್ ಮುಂದಿದ್ದಾರೆ. ರೋಹಿತ್ 3379 ರನ್ ಗಳಿಸಿದ್ದು, ವಿರಾಟ್ ಕೊಹ್ಲಿ 3308 ರನ್‌ಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ. ವಿಂಡೀಸ್ ವಿರುದ್ಧ ಮೊದಲ ಟಿ20ಯಲ್ಲಿ ರೋಹಿತ್ ಮತ್ತೆ ಅಗ್ರಸ್ಥಾನಕ್ಕೇರುವ ಅವಕಾಶ ಹೊಂದಿದ್ದಾರೆ.
