ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಮುಕ್ತಾಯದ ನಂತರ ಐಸಿಸಿ ನೂತನ ರ್‍ಯಾಂಕಿಂಗ್ ಪ್ರಕಟಿಸಿದೆ. ಈ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದ್ದು, ಅಗ್ರಸ್ಥಾನದಲ್ಲಿರುವ ರೋಹಿತ್ ಶರ್ಮಾ ಅವರಿಗಿಂತ ಕೇವಲ 8 ರೇಟಿಂಗ್ ಅಂಕಗಳಷ್ಟು ಹಿಂದಿದ್ದಾರೆ.
ದುಬೈ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ ನೂತನ ಏಕದಿನ ರ್‍ಯಾಂಕಿಂಗ್ ಪ್ರಕಟಗೊಂಡಿದ್ದು, ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ ಅಗ್ರಸ್ಥಾನದತ್ತ ದಾಪುಗಾಲಿಟ್ಟಿದ್ದಾರೆ. ಇದೀಗ ಮೊದಲ ಸ್ಥಾನದಲ್ಲಿರುವ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಲು ವಿರಾಟ್ ಕೊಹ್ಲಿಗೆ ಕೇವಲ 8 ರೇಟಿಂಗ್ ಅಂಕಗಳ ಅಗತ್ಯವಿದೆ.
ಹೌದು, ಡಿಸೆಂಬರ್ 10ರ ಬುಧವಾರ ಪ್ರಕಟಗೊಂಡ ನೂತನ ಐಸಿಸಿ ರ್‍ಯಾಂಕಿಂಗ್‌ನಲ್ಲಿ ರೋಹಿತ್ ಶರ್ಮಾ ಮೊದಲ ಸ್ಥಾನದಲ್ಲಿಯೇ ಮುಂದುವರೆದಿದ್ದು, ವಿರಾಟ್ ಕೊಹ್ಲಿ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನು ನ್ಯೂಜಿಲೆಂಡ್‌ನ ಡೇರಲ್ ಮಿಚೆಲ್ ಮೂರನೇ ಹಾಗೂ ಆಫ್ಘಾನಿಸ್ತಾನದ ಇಬ್ರಾಹಿಂ ಜದ್ರಾನ್ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ.
ಈಗಾಗಲೇ ಟೆಸ್ಟ್ ಹಾಗೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ವಿರಾಟ್ ಕೊಹ್ಲಿ, ಏಕದಿನ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ನಡೆದ ದಕ್ಷಿಣ ಆಫ್ರಿಕಾ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ತೋರಿದ್ದರು. ಮೂರು ಪಂದ್ಯಗಳಲ್ಲಿ ಕೊಹ್ಲಿ ಎರಡು ಶತಕ ಹಾಗೂ ಒಂದು ಅಜೇಯ ಅರ್ಧಶತಕದ ನೆರವಿನಿಂದ 151ರ ಸರಾಸರಿಯಲ್ಲಿ 302 ರನ್ ಬಾರಿಸಿದ್ದರು. ಈ ಸರಣಿಯನ್ನು ಭಾರತ 2-1 ಅಂತರದಲ್ಲಿ ಜಯಿಸಿತ್ತು. ವಿರಾಟ್ ಕೊಹ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾಗಿದ್ದರು.
2021ರಲ್ಲಿ ಕೊನೆಯ ಬಾರಿಗೆ ನಂ.1 ಸ್ಥಾನಕ್ಕೇರಿದ್ದ ಕೊಹ್ಲಿ!'
ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, 2021ರ ಮಾರ್ಚ್‌ನಲ್ಲಿ ಕೊನೆಯ ಬಾರಿಗೆ ಐಸಿಸಿ ಏಕದಿನ ರ್‍ಯಾಂಕಿಂಗ್‌ನಲ್ಲಿ ಪಾಕಿಸ್ತಾನದ ಬಾಬರ್ ಅಜಂ ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ್ದಾರೆ. ಇದೀಗ ಮತ್ತೊಮ್ಮೆ ವಿರಾಟ್ ಕೊಹ್ಲಿ ನಂ.1 ಸ್ಥಾನಕ್ಕೇರಲು ಸುವರ್ಣಾವಕಾಶ ಒದಗಿ ಬಂದಿದೆ.
ಇನ್ನು ದಕ್ಷಿಣ ಆಫ್ರಿಕಾ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 146 ರನ್ ಸಿಡಿಸಿದ ಮಾಜಿ ನಾಯಕ ರೋಹಿತ್ ಶರ್ಮಾ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನಂ.1 ಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಐಸಿಸಿ ಏಕದಿನ ಬ್ಯಾಟರ್‌ಗಳ ಟಾಪ್ ರ್‍ಯಾಂಕಿಂಗ್ ಪಟ್ಟಿ ಹೀಗಿದೆ:
01. ರೋಹಿತ್ ಶರ್ಮಾ(ಭಾರತ)- 781 ರೇಟಿಂಗ್ ಅಂಕ
02. ವಿರಾಟ್ ಕೊಹ್ಲಿ(ಭಾರತ)- 773 ರೇಟಿಂಗ್ ಅಂಕ
03. ಡೇರಲ್ ಮಿಚೆಲ್(ನ್ಯೂಜಿಲೆಂಡ್)- 766 ರೇಟಿಂಗ್ ಅಂಕ
04. ಇಬ್ರಾಹಿಂ ಜದ್ರಾನ್(ಆಫ್ಘಾನಿಸ್ತಾನ)- 764 ರೇಟಿಂಗ್ ಅಂಕ
05. ಶುಭ್‌ಮನ್ ಗಿಲ್(ಭಾರತ)- 723 ರೇಟಿಂಗ್ ಅಂಕ
06. ಬಾಬರ್ ಅಜಂ(ಪಾಕಿಸ್ತಾನ)- 722 ರೇಟಿಂಗ್ ಅಂಕ
07. ಹ್ಯಾರಿ ಟೆಕ್ಟರ್(ಐರ್ಲೆಂಡ್)- 708 ರೇಟಿಂಗ್ ಅಂಕ
08. ಶಾಯ್ ಹೋಪ್(ವೆಸ್ಟ್ ಇಂಡೀಸ್)- 701 ರೇಟಿಂಗ್ ಅಂಕ
09. ಚರಿತ್ ಅಸಲಂಕಾ(ಶ್ರೀಲಂಕಾ)- 690 ರೇಟಿಂಗ್ ಅಂಕ
10. ಶ್ರೇಯಸ್ ಅಯ್ಯರ್(ಭಾರತ)- 679 ರೇಟಿಂಗ್ ಅಂಕ

