Asianet Suvarna News Asianet Suvarna News

Ind vs WI 'ನಮ್ಮ ಹುಡುಗರು ಯುವಕರು, ಆದರೆ..' ಸರಣಿ ಗೆಲುವಿನ ಬಳಿಕ ನಾಯಕ ಧವನ್ ಹೇಳಿದ್ದಿದು..!

* ವೆಸ್ಟ್ ಇಂಡೀಸ್ ಎದುರು ಏಕದಿನ ಸರಣಿ ಕ್ಲೀನ್‌ಸ್ವೀಪ್ ಮಾಡಿದ ಟೀಂ ಇಂಡಿಯಾ
* ಮೂರನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಗೆಲುವು
* ಟೀಂ ಇಂಡಿಯಾ ಆಟಗಾರರ ಪ್ರದರ್ಶನ ಕೊಂಡಾಡಿದ ಧವನ್

Shikhar Dhawan feeling proud for Youngsters After Says India Series Win against West Indies kvn
Author
Bengaluru, First Published Jul 28, 2022, 12:51 PM IST

ಪೋರ್ಟ್‌ ಆಫ್‌ ಸ್ಪೇನ್‌(ಜು.28): ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ 3-0 ಅಂತರದಲ್ಲಿ ಕ್ಲೀನ್‌ಸ್ವೀಪ್ ಮಾಡಿದೆ. ಮೂರನೇ ಏಕದಿನ ಪಂದ್ಯದಲ್ಲಿ ಸಹಾ ಆತಿಥೇಯ ವಿಂಡೀಸ್ ಎದುರು ಪ್ರಾಬಲ್ಯ ಮೆರೆದ ಭಾರತ ಕ್ರಿಕೆಟ್ ತಂಡವು 119 ರನ್‌ಗಳ ಭಾರೀ ಅಂತರದ ಗೆಲುವು ದಾಖಲಿಸಿತು. ಮೂರೂ ಪಂದ್ಯಗಳನ್ನು ಗೆದ್ದು ಬೀಗಿದ ಯುವ ಪಡೆಯ ಕುರಿತಂತೆ ಟೀಂ ಇಂಡಿಯಾ ಹಂಗಾಮಿ ನಾಯಕ ಶಿಖರ್ ಧವನ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ನಮ್ಮ ಹುಡುಗರು ಯುವಕರು, ಆದರೆ ಅವರು ಪ್ರಬುದ್ದವಾದ ಪ್ರದರ್ಶನವನ್ನು ತೋರಿದ್ದಾರೆ. ಮೈದಾನದಲ್ಲಿ ಅವರೆಲ್ಲರೂ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡು ಆಡಿದ ರೀತಿಯನ್ನು ನೋಡಿದರೇ ನನಗೆ ಅವರ ಬಗ್ಗೆ ಹೆಮ್ಮೆ ಎನಿಸುತ್ತದೆ. ಇದು ನಮ್ಮ ತಂಡದ ಪಾಲಿಗೆ ಒಳ್ಳೆಯ ಬೆಳವಣಿಗೆಯಾಗಿದೆ. ನನ್ನ ಫಾರ್ಮ್‌ ಬಗ್ಗೆಯು ಖುಷಿಯಿದೆ. ನಾನು ಈ ಮಾದರಿಯ ಕ್ರಿಕೆಟ್‌ನಲ್ಲಿ ಸಾಕಷ್ಟು ಸಮಯದಿಂದ ಆಡುತ್ತಿದ್ದೇನೆ. ಮೊದಲ ಪಂದ್ಯದಲ್ಲಿ ಹಾಗೂ ಮೂರನೇ ಪಂದ್ಯದಲ್ಲಿ ನನ್ನ ಪ್ರದರ್ಶನದ ಬಗ್ಗೆ ತೃಪ್ತಿಯಿದೆ. ಇಲ್ಲಿನ ಪ್ರೇಕ್ಷಕರಿಗೆ ನಾವು ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇವೆ. ಅವರು ಈ ಸರಣಿಯನ್ನು ಮತ್ತಷ್ಟು ವರ್ಣರಂಜಿತವನ್ನಾಗಿಸಿದರು. ನಮ್ಮ ಬೌಲಿಂಗ್ ಪಡೆಯ ಪ್ರದರ್ಶನದ ಬಗ್ಗೆಯೂ ಹೆಮ್ಮೆಯಿದೆ. ಅವರು 100% ಪ್ರದರ್ಶನ ತೋರಿದ್ದಾರೆ. ಸಿರಾಜ್ ಹಾಗೂ ಶಾರ್ದೂಲ್ ಠಾಕೂರ್ ಬೌಲಿಂಗ್ ಪ್ರದರ್ಶನ ತುಂಬಾ ಚೆನ್ನಾಗಿತ್ತು ಎಂದು ಟೀಂ ಇಂಡಿಯಾ ನಾಯಕ ಶಿಖರ್ ಧವನ್ ಹೇಳಿದ್ದಾರೆ.

ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಗೆ ಖಾಯಂ ನಾಯಕ ರೋಹಿತ್ ಶರ್ಮಾ, ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಸೇರಿದಂತೆ ಹಲವು ಆಟಗಾರರು ಗೈರಾಗಿದ್ದರು. ಇದರ ಹೊರತಾಗಿಯೂ ಧವನ್ ನೇತೃತ್ವದ ಟೀಂ ಇಂಡಿಯಾ ಮೂರೂ ಪಂದ್ಯಗಳಲ್ಲೂ ಅದ್ಭುತ ಪ್ರದರ್ಶನ ತೋರುವ ಮೂಲಕ ಏಕದಿನ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡುವಲ್ಲಿ ಯಶಸ್ವಿಯಾಗಿದೆ. ಮೂರನೇ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದರೂ ಸಹಾ ಮೊದಲು ಬ್ಯಾಟ್‌ ಮಾಡಿದ ಟೀಂ ಇಂಡಿಯಾ, ಶಿಖರ್ ಧವನ್(58) ಹಾಗೂ ಶುಭ್‌ಮನ್ ಗಿಲ್ ಬಾರಿಸಿದ ಅಜೇಯ 98 ರನ್‌ಗಳ ನೆರವಿನಿಂದ 36 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 225 ರನ್‌ ಗಳಿಸಿತ್ತು. ಮೂರನೇ ಏಕದಿನ ಪಂದ್ಯಕ್ಕೆ ಎರಡು ಬಾರಿ ಮಳೆ ಅಡ್ಡಿಪಡಿಸಿದ್ದರಿಂದ ಡೆಕ್ವರ್ಥ್‌ ಲೂಯಿಸ್ ನಿಯಮದನ್ವಯ ವಿಂಡೀಸ್‌ಗೆ ಗೆಲ್ಲಲು 35 ಓವರ್‌ಗಳಲ್ಲಿ 257 ರನ್‌ಗಳ ಗುರಿ ನೀಡಲಾಗಿತ್ತು. 

ಕಠಿಣ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು ಖಾತೆ ತೆರೆಯುವ ಮುನ್ನವೇ ಎರಡು ವಿಕೆಟ್ ಕಳೆದುಕೊಂಡು ಕಂಗಾಲಾಗಿ ಹೋಯಿತು. ಆರಂಭದಲ್ಲೇ ವೇಗಿ ಮೊಹಮ್ಮದ್ ಸಿರಾಜ್, ಕೈಲ್ ಮೇಯರ್ಸ್‌ ಹಾಗೂ ಸಮರ್ಥ್‌ ಬ್ರೂಕ್ಸ್ ಅವರನ್ನು ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಮಧ್ಯಮ ಕ್ರಮಾಂಕದಲ್ಲಿ ಬ್ರೆಂಡನ್ ಕಿಂಗ್ ಹಾಗೂ ನಾಯಕ ನಿಕೋಲಸ್ ಪೂರನ್ ತಲಾ 42 ರನ್ ಬಾರಿಸುವ ಮೂಲಕ ಭಾರತಕ್ಕೆ ತಿರುಗೇಟು ನೀಡುವ ಯತ್ನ ನಡೆಸಿದರು. ಆದರೆ ಈ ಇಬ್ಬರು ಆಟಗಾರರು ವಿಕೆಟ್‌ ಒಪ್ಪಿಸುತ್ತಿದ್ದಂತೆಯೇ ವೆಸ್ಟ್ ಇಂಡೀಸ್ ತಂಡವು ನಾಟಕೀಯ ಕುಸಿತ ಕಂಡಿತು. ಯುಜುವೇಂದ್ರ ಚಹಲ್ ಹಾಗೂ ಶಾರ್ದೂಲ್ ಠಾಕೂರ್ ದಾಳಿಗೆ ತತ್ತರಿಸಿದ ವಿಂಡೀಸ್ ತಂಡವು ಕೇವಲ 136 ರನ್‌ಗಳಿಗೆ ಸರ್ವಪತನ ಕಂಡು ಹೀನಾಯ ಸೋಲು ಅನುಭವಿಸಿತು.  

ಭಾರತ ಪರ ಲೆಗ್‌ ಸ್ಪಿನ್ನರ್ ಯುಜುವೇಂದ್ರ ಚಹಲ್‌ 17 ರನ್‌ ನೀಡಿ 4 ವಿಕೆಟ್ ಪಡೆದರೇ, ಶಾರ್ದೂಲ್ ಠಾಕೂರ್ ಕೂಡಾ 17 ರನ್ ನೀಡಿ 2 ವಿಕೆಟ್ ಉರುಳಿಸಿದರು. ಇನ್ನು ಮೊಹಮ್ಮದ್ ಸಿರಾಜ್ 14 ರನ್ ನೀಡಿ 2 ಮತ್ತು ಅಕ್ಷರ್ ಪಟೇಲ್ ಹಾಗೂ ಪ್ರಸಿದ್ದ್ ಕೃಷ್ಣ ತಲಾ ಒಂದೊಂದು ವಿಕೆಟ್ ಪಡೆದರು.

Follow Us:
Download App:
  • android
  • ios