IND vs SL T20 ಸೂರ್ಯಕುಮಾರ್ ಸ್ಫೋಟಕ ಸೆಂಚುರಿ, ಶ್ರೀಲಂಕಾಗೆ 229 ರನ್ ಬೃಹತ್ ಗುರಿ!
ಸರಣಿ ಗೆಲುವಿಗೆ ಅಬ್ಬರಿಸಲೇಬೇಕಾದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಹೋರಾಟ ಟೀಂ ಇಂಡಿಯಾ ಆತಂಕ ದೂರಮಾಡಿದೆ. ಯಾದವ್ ಹೋರಾಟದಿಂದ ಭಾರತ 228 ರನ್ ಸಿಡಿಸಿದೆ. ಬೃಹತ್ ಮೊತ್ತ ಚೇಸಿಂಗ್ ಶ್ರೀಲಂಕಾಗೆ ಸವಾಲಾಗಿದೆ.
ರಾಜ್‌ಕೋಟ್(ಜ.07): ಸೂರ್ಯಕುಮಾರ್ ಯಾದವ್ ಸ್ಫೋಟಕ ಸೆಂಚುರಿಯಿಂದ ಶ್ರೀಲಂಕಾ ತಬ್ಬಿಬ್ಬಾಗಿದೆ. ಅಂತಿಮ ಟಿ20 ಪಂದ್ಯ ಗೆಲ್ಲುವ ಲೆಕ್ಕಾಚಾರದೊಂದಿಗೆ ಆಗಮಿಸಿದ ಶ್ರೀಲಂಕಾಗೆ ಸೂರ್ಯಕುಮಾರ್ ಯಾದವ್ ಶಾಕ್ ನೀಡಿದ್ದಾರೆ. ಯಾದವ್ ಸೆಂಚುರಿ, ಅಕ್ಸರ್ ಪಟೇಲ್ ಹಾಗೂ ರಾಹುಲ್ ತ್ರಿಪಾಠಿ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ 5 ವಿಕೆಟ್ ನಷ್ಟಕ್ಕೆ 228 ರನ್ ಸಿಡಿಸಿದೆ.
ಕಳೆದ ಪಂದ್ಯದಲ್ಲಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಕೈಸುಟ್ಟಕೊಂಡ ಟೀಂ ಇಂಡಿಯಾ ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಮೊದಲ ಓವರ್‌ನಲ್ಲೇ ಟೀಂ ಇಂಡಿಯಾ ಇಶಾನ್ ಕಿಶನ್ ವಿಕೆಟ್ ಕಳೆದುಕೊಂಡಿತು.3 ರನ್‌ಗೆ ಮೊದಲ ವಿಕೆಟ್ ಸಂಕಷ್ಟ ಹೆಚ್ಚಿಸಿತು. ಇಷ್ಟೇ ಅಲ್ಲ ಬ್ಯಾಟಿಂಗ್ ಅಥವಾ ಚೇಸಿಂಗ್ ಎರಡಲ್ಲೂ ಟೀಂ ಇಂಡಿಯಾ ವೈಫಲ್ಯ ಅನುಭವಿಸುತ್ತಿದೆ ಅನ್ನೋ ಚರ್ಚೆ ಜೋರಾಯಿತು. ಅಷ್ಟರಲ್ಲೇ ಶಭಮನ್ ಗಿಲ್ ರಾಹುಲ್ ತ್ರಿಪಾಠಿ ಜೊತೆಯಾಟ ಪಂದ್ಯದ ಗತಿ ಬದಲಿಸಿತು.
IND vs SL ಲಂಕಾ ವಿರುದ್ಧ ಶತಕ ಸಿಡಿಸಿ ದಾಖಲೆ ಬರೆದ ಸೂರ್ಯಕುಮಾರ್ ಯಾದವ್!
ಕಳೆದೆರಡು ಪಂದ್ಯದಲ್ಲಿ ಸೈಲೆಂಟ್ ಆಗಿದ್ದ ಗಿಲ್ ಹೋರಾಟ ಆರಂಭಿಸಿದರು. ಇತ್ತ ಕಳೆದ ಪಂದ್ಯದಲ್ಲಿ ಪದಾರ್ಪಣೆ ಮಾಡಿ ನಿರಾಸೆ ಅನುಭವಿಸಿದ್ದ ರಾಹುಲ್ ತ್ರಿಪಾಠಿ ಸ್ಫೋಟಕ ಬ್ಯಾಟಿಂಗ್ ಆರಂಭಿಸಿದರು. ಇದರ ಪರಿಣಾಮ ಟೀಂ ಇಂಡಿಯಾ ಉತ್ತಮ ರನ್ ರೇಟ್ ಕಾಯ್ದುಕೊಂಡಿತು. ರಾಹುಲ್ ತ್ರಿಪಾಠಿ 16 ಎಸೆತದಲ್ಲಿ 35 ರನ್ ಸಿಡಿಸಿ ಔಟಾದರು.
ಗಿಲ್ ಹಾಗೂ ಸೂರ್ಯಕುಮಾರ್ ಯಾದವ್ ಹೋರಾಟದಿಂದ ಭಾರತ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತು. ಸೂರ್ಯಕುಮಾರ್ ಯಾದವ್ ಅಬ್ಬರದ ಬ್ಯಾಟಿಂಗ್ ಲಂಕಾ ತಂಡಕ್ಕೆ ತಲೆನೋವು ತಂದಿತು. ಭಾರತ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿ ಸುಲಭ ಚೇಸಿಂಗ್ ಲೆಕ್ಕಾಚಾರದಲ್ಲಿದ್ದ ಶ್ರೀಲಂಕಾ ಸೂರ್ಯಕುಮಾರ್ ಯಾದವ್ ಹೊಡೆತಕ್ಕೆ ಬೆಚ್ಚಿ ಬಿತ್ತು.
ಇತ್ತ ಶುಭಮನ್ ಗಿಲ್ 36 ಎಸೆತದಲ್ಲಿ 46 ರನ್ ಸಿಡಿಸಿ ಔಟಾದರು. ಆದರೆ ಸೂರ್ಯಕುಮಾರ್ ಯಾದವ್ ಹೋರಾಟ ಮುಂದುವರಿಯಿತು. ನಾಯಕ ಹಾರ್ದಿಕ್ ಪಾಂಡ್ಯ ಜೊತೆಗೆ ಇನ್ನಿಂಗ್ಸ್ ಮುಂದುವರಿಸಿದ ಸೂರ್ಯಕುಮಾರ್ ಯಾದವ್ ಮತ್ತೊಂದು ಶತಕದತ್ತ ಸಾಗಿದರು. ಆದರೆ ಪಾಂಡ್ಯ 4 ರನ್ ಸಿಡಿಸಿ ಔಟಾದರು. ಇತ್ತ ದೀಪಕ್ ಹೂಡ ಕೂಡ 4 ರನ್ ಸಿಡಿಸಿ ಔಟಾದರು. ಇನ್ನು ಅಕ್ಸರ್ ಪಟೇಲ್ ಜೊತೆ ಇನ್ನಿಂಗ್ಸ್ ಮುಂದುವರಿಸಿದ ಸೂರ್ಯಕುಮಾರ್ 45 ಎಸೆತದಲ್ಲಿ ಸೆಂಚುರಿ ಸಿಡಿಸಿದರು.
BCCI ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಚೇತನ್ ಶರ್ಮಾ ಪುನರಾಯ್ಕೆ..!
ಅತೀ ವೇಗದಲ್ಲಿ ಸೆಂಚುರಿ ಸಿಡಿಸಿದ ಭಾರತೀಯ ಕ್ರಿಕಟಿಗರ ಪಟ್ಟಿಯಲ್ಲಿ ಸೂರ್ಯಕುಮಾರ್ ಯಾದವ್ 2ನೇ ಸ್ಥಾನ ಅಲಂಕರಿಸಿದ್ದಾರೆ. ಮೊದಲ ಸ್ಥಾನದಲ್ಲಿರುವ ರೋಹಿತ್ ಶರ್ಮಾ 35 ಎಸೆತದಲ್ಲಿ ಸೆಂಚುರಿ ಪೂರೈಸಿದ್ದಾರೆ. ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್ ಮಾದರಿಯಲ್ಲಿ 3ನೇ ಶತಕ ಸಿಡಿಸಿದ್ದಾರೆ. ಇದಕ್ಕೂ ಮೊದಲು 2022ರಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ವಿರುದ್ಧ ಸೆಂಚುರಿ ಸಿಡಿಸಿದ್ದಾರೆ.
ಅಕ್ಸರ್ ಪಟೇಲ್ 9 ಎಸೆತದಲ್ಲಿ ಅಜೇಯ 21 ರನ್ ಸಿಡಿಸಿದರು. ಇತ್ತ ಸೂರ್ಯಕುಮಾರ್ ಯಾದವ್ 51 ಎಸೆತದಲ್ಲಿ 112 ರನ್ ಸಿಡಿಸಿದರು. ಯಾದವ್ 9 ಸಿಕ್ಸರ್ ಹಾಗೂ 7 ಬೌಂಡರಿ ಬಾರಿಸಿದರು. ಈ ಮೂಲಕ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 228 ರನ್ ಸಿಡಿಸಿತು.