Asianet Suvarna News Asianet Suvarna News

Kapil Dev on Virat Kohli: ಕೊಹ್ಲಿ ತಮ್ಮ ಅಹಂ ಬದಿಗಿಟ್ಟು ಹೊಸ ನಾಯಕನಡಿಯಲ್ಲಿ ಆಡಲಿ ಎಂದ ಕಪಿಲ್ ದೇವ್

* ಟೀಂ ಇಂಡಿಯಾ ಟೆಸ್ಟ್ ನಾಯಕತ್ವ ತ್ಯಜಿಸಿದ ಕೊಹ್ಲಿಗೆ ಕಪಿಲ್ ದೇವ್ ಕಿವಿಮಾತು

* ಎಲ್ಲಾ ಅಹಂ ಬದಿಗಿಟ್ಟು ಭಾರತ ತಂಡಕ್ಕೆ ಆಡಲು ಕಪಿಲ್ ದೇವ್ ಸಲಹೆ

* ಒಳ್ಳೆಯ ಬ್ಯಾಟರ್‌ನನ್ನು ಕಳೆದುಕೊಳ್ಳಲು ಇಷ್ಟವಿಲ್ಲ ಎಂದ ವಿಶ್ವಕಪ್ ವಿಜೇತ ನಾಯಕ

Ind vs SA Virat Kohli Will Have To Give Up His Ego And Play Under New Captain Says Kapil Dev kvn
Author
Bengaluru, First Published Jan 18, 2022, 6:14 PM IST

ಬೆಂಗಳೂರು(ಜ.18): ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವಿನ ಟೆಸ್ಟ್ ಸರಣಿ ಮುಕ್ತಾಯವಾಗುತ್ತಿದ್ದಂತೆಯೇ ದಿಢೀರ್ ಎನ್ನುವಂತೆ ವಿರಾಟ್ ಕೊಹ್ಲಿ (Virat Kohli) ಭಾರತ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿಯ ಭವಿಷ್ಯದ ಬಗ್ಗೆ ಹಲವು ಪ್ರಶ್ನೆಗಳು ಮೂಡಲಾರಂಭಿಸಿವೆ. ಇದೆಲ್ಲದರ ನಡುವೆ 1983ರ ಏಕದಿನ ವಿಶ್ವಕಪ್‌ ವಿಜೇತ ತಂಡದ ನಾಯಕ ಕಪಿಲ್‌ ದೇವ್‌(Kapil Dev), ವಿರಾಟ್ ಕೊಹ್ಲಿ ಕುರಿತಂತೆ ಅಚ್ಚರಿಯ ಹೇಳಿಕೆ ನೀಡಿದ್ದು, ಹಲವರ ಹುಬ್ಬೇರಿಸುವಂತೆ ಮಾಡಿದೆ.

ಈಗಾಗಲೇ ಭಾರತ ಟಿ20 ನಾಯಕತ್ವದಿಂದ ಕೆಳಗಿಳಿದಿದ್ದ 33 ವರ್ಷದ ವಿರಾಟ್ ಕೊಹ್ಲಿಗೆ ಬಿಸಿಸಿಐ (BCCI) ಆಯ್ಕೆ ಸಮಿತಿಯು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತಂಡವನ್ನು ಆಯ್ಕೆ ಮಾಡುವಾಗ ಶಾಕ್ ನೀಡಿತ್ತು. ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಒಬ್ಬನೇ ನಾಯಕನಿರಲಿ ಎನ್ನುವ ಉದ್ದೇಶದಿಂದ ವಿರಾಟ್ ಕೊಹ್ಲಿಯನ್ನು ಏಕದಿನ ನಾಯಕತ್ವದಿಂದ ಕೆಳಗಿಳಿಸಿ ರೋಹಿತ್ ಶರ್ಮಾಗೆ (Rohit Sharma) ಭಾರತ ಸೀಮಿತ ಓವರ್‌ಗಳ ತಂಡದ ನಾಯಕ ಪಟ್ಟ ಕಟ್ಟಲಾಗಿದೆ. ಇದೆಲ್ಲದರ ನಡುವೆ ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಯನ್ನು ಭಾರತ ಸೋಲುತ್ತಿದ್ದಂತೆಯೇ ವಿರಾಟ್ ಕೊಹ್ಲಿ ಇದೀಗ ಟೆಸ್ಟ್ ನಾಯಕತ್ವದಿಂದಲೂ ಕೆಳಗಿಳಿದಿದ್ದಾರೆ.
 
ಇದೀಗ ವಿರಾಟ್ ಕೊಹ್ಲಿ ಅವರ ಕುರಿತಂತೆ ತುಟಿಬಿಚ್ಚಿರುವ ವಿಶ್ವಕಪ್ ಹೀರೋ ಕಪಿಲ್‌ ದೇವ್, ವಿರಾಟ್ ಕೊಹ್ಲಿ ತಮ್ಮ ಅಹಂ ಅನ್ನು ಬದಿಗಿಟ್ಟು ಯುವ ನಾಯಕನ ಅಡಿಯಲ್ಲಿ ಆಡಬೇಕಿದೆ. ಇದು ಅವರಿಗೂ ಹಾಗೂ ಭಾರತ ತಂಡಕ್ಕೂ ಒಳ್ಳೆಯದು. ವಿರಾಟ್ ಕೊಹ್ಲಿಯು ಹೊಸ ನಾಯಕನಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಒಬ್ಬ ಬ್ಯಾಟರ್‌ ಆಗಿ ನಾವು ವಿರಾಟ್ ಕೊಹ್ಲಿಯನ್ನು ಕಳೆದುಕೊಳ್ಳಲು ಬಯಸುವುದಿಲ್ಲ ಎಂದು ಕಪಿಲ್‌ ದೇವ್ ಮಿಡ್‌ ಡೇ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. 

ಹಾಗೆ ಹೇಳಬೇಕೆಂದರೆ ನನ್ನ ನಾಯಕತ್ವದಡಿಯಲ್ಲಿ ಸುನಿಲ್ ಗವಾಸ್ಕರ್ ಆಡಿದ್ದಾರೆ. ಇನ್ನು ನಾನು ಕೃಷ್ಣಮಾಚಾರಿ ಶ್ರೀಕಾಂತ್ ಹಾಗೂ ಮೊಹಮ್ಮದ್ ಅಜರುದ್ದೀನ್ ಅವರ ನಾಯಕತ್ವದಡಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದೇನೆ. ನನಗ್ಯಾವ ಅಹಂ ಕೂಡಾ ಇರಲಿಲ್ಲ ಎಂದು ದೇಶಕ್ಕೆ ಚೊಚ್ಚಲ ವಿಶ್ವಕಪ್‌ ಗೆದ್ದುಕೊಟ್ಟ ನಾಯಕ ಕಪಿಲ್ ದೇವ್ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿಯುತ್ತಿದ್ದಂತೆಯೇ ಟೀಂ ಇಂಡಿಯಾ (Team India) ಟೆಸ್ಟ್ ಕ್ಯಾಪ್ಟನ್ಸಿ ಪಡೆಯಲು ರೋಹಿತ್ ಶರ್ಮಾ, ಕೆ.ಎಲ್. ರಾಹುಲ್ (KL Rahul) ಹಾಗೂ 24 ವರ್ಷದ ರಿಷಭ್ ಪಂತ್ (Rishabh Pant) ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ ಎಂದು ವರದಿಯಾಗಿದೆ. ಇನ್ನು ಖ್ಯಾತ ವೀಕ್ಷಕ ವಿವರಣೆಗಾರ ಹಾಗೂ ಕ್ರಿಕೆಟ್ ವಿಶ್ಲೇಷಕ ಹರ್ಷಾ ಬೋಗ್ಲೆ, ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (Ravichandran Ashwin) ಹಾಗೂ ಜಸ್ಪ್ರೀತ್ ಬುಮ್ರಾ (Jasprit Bumrah) ಕೂಡಾ ಭಾರತ ಟೆಸ್ಟ್ ತಂಡದ ನಾಯಕರಾಗಲು ಉತ್ತಮ ಆಯ್ಕೆಯಾಗಬಲ್ಲರು ಎಂದು ಟ್ವೀಟ್ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

Mohammed Siraj ನೀವೇ ನನ್ನ ಸೂಪರ್ ಹೀರೋ: ವಿರಾಟ್‌ಗೆ ಭಾವನಾತ್ಮಕ ನುಡಿನಮನ ಸಲ್ಲಿಸಿದ ಸಿರಾಜ್‌..!

34 ವರ್ಷದ ರೋಹಿತ್ ಶರ್ಮಾ ಈಗಾಗಲೇ ಭಾರತ ಏಕದಿನ ಹಾಗೂ ಟಿ20 ತಂಡದ ನಾಯಕರಾಗಿದ್ದಾರೆ. ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ತಂಡವನ್ನು ನಾಯಕನಾಗಿ ಐದು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಟೀಂ ಇಂಡಿಯಾ ಟೆಸ್ಟ್ ನಾಯಕರಾದರೂ ಅಚ್ಚರಿಪಡುವಂತಿಲ್ಲ.

ಇನ್ನುಳಿದಂತೆ 29 ವರ್ಷದ ಕೆ.ಎಲ್. ರಾಹುಲ್‌ ದಕ್ಷಿಣ ಆಫ್ರಿಕಾ ವಿರುದ್ದದ ಜೋಹಾನ್ಸ್‌ಬರ್ಗ್ ಟೆಸ್ಟ್‌ನಲ್ಲಿ ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸಿದ್ದರು. ಇದೀಗ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕೆ.ಎಲ್‌. ರಾಹುಲ್ ದಕ್ಷಿಣ ಆಫ್ರಿಕಾ ವಿರುದ್ದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಇದೀಗ ರಾಹುಲ್ ನಾಯಕತ್ವದಡಿಯಲ್ಲಿ ವಿರಾಟ್ ಕೊಹ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

Follow Us:
Download App:
  • android
  • ios