Asianet Suvarna News Asianet Suvarna News

Mohammed Siraj ನೀವೇ ನನ್ನ ಸೂಪರ್ ಹೀರೋ: ವಿರಾಟ್‌ಗೆ ಭಾವನಾತ್ಮಕ ನುಡಿನಮನ ಸಲ್ಲಿಸಿದ ಸಿರಾಜ್‌..!

* ಭಾರತ ಟೆಸ್ಟ್ ನಾಯಕತ್ವಕ್ಕೆ ಗುಡ್ ಬೈ ಹೇಳಿರುವ ವಿರಾಟ್ ಕೊಹ್ಲಿ

* ವಿರಾಟ್ ಕೊಹ್ಲಿ ನೀಡಿದ ಸಹಕಾರವನ್ನು ಸ್ಮರಿಸಿಕೊಂಡ ವೇಗಿ ಸಿರಾಜ್

* ನೀವೇ ನನ್ನ ಸೂಪರ್ ಹೀರೋ ಎಂದು ಗುಣಗಾನ ಮಾಡಿದ ವೇಗಿ 

Team India Pacer Mohammed Siraj pens emotional tribute to Virat Kohli kvn
Author
Bengaluru, First Published Jan 18, 2022, 3:44 PM IST

ಬೆಂಗಳೂರು(ಜ.18): ಇತ್ತೀಚೆಗಷ್ಟೇ ಭಾರತ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದ ವಿರಾಟ್ ಕೊಹ್ಲಿ (Virat Kohli) ಕುರಿತಂತೆ ಭಾರತ ಕ್ರಿಕೆಟ್ ತಂಡದ (Indian Cricket Team) ವೇಗದ ಬೌಲರ್‌ ಮೊಹಮ್ಮದ್ ಸಿರಾಜ್‌ (Mohammed Siraj) ಭಾವನಾತ್ಮಕ ನುಡಿನಮನ ಸಲ್ಲಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 2-1 ಅಂತರದಲ್ಲಿ ಸೋಲುತ್ತಿದ್ದಂತೆಯೇ ವಿರಾಟ್‌ ಕೊಹ್ಲಿ 7 ವರ್ಷಗಳ ಸುದೀರ್ಘ ಟೆಸ್ಟ್ ನಾಯಕತ್ವಕ್ಕೆ ವಿದಾಯ ಘೋಷಿಸಿದ್ದರು. '

ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿರಾಟ್‌ ಕೊಹ್ಲಿ ಜತೆಗಿನ ಫೋಟೋ ಹಂಚಿಕೊಂಡಿರುವ ಮೊಹಮ್ಮದ್ ಸಿರಾಜ್, ನನ್ನ ಸೂಪರ್‌ ಹೀರೋ. ನಿಮ್ಮಿಂದ ಸಿಕ್ಕಿದ ಬೆಂಬಲ ಹಾಗೂ ಸಹಕಾರಕ್ಕೆ ಕೇವಲ ಧನ್ಯವಾದಗಳು ಎಂದು ಹೇಳಿದರೆ ಸಾಲದು. ನೀವು ಎಂದೆಂದಿಗೂ ನನ್ನ ಪಾಲಿಗೆ ಒಳ್ಳೆಯ ಸಹೋದರರಾಗಿದ್ದೀರ. ಇಷ್ಟು ವರ್ಷಗಳಿಂದ ನನ್ನ ಮೇಲೆ ವಿಶ್ವಾಸವಿಟ್ಟು ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು. ನಾನು ಕಳಪೆ ಪ್ರದರ್ಶನ ತೋರಿದ ಹೊರತಾಗಿಯೂ ನನಗೆ ಧೈರ್ಯ ತುಂಬಿ ಅವಕಾಶ ನೀಡಿದ್ದೀರ. ನೀವು ಎಂದೆಂದಿಗೂ ನನ್ನ ನಾಯಕ ಎಂದು ಮೊಹಮ್ಮದ್ ಸಿರಾಜ್ ಬರೆದುಕೊಂಡಿದ್ದಾರೆ.

ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ವಿರಾಟ್ ಕೊಹ್ಲಿ ನಾಯಕತ್ವದಡಿಯಲ್ಲಿ ಮೊಹಮ್ಮದ್ ಸಿರಾಜ್‌ ಹಲವು ವರ್ಷಗಳ ಕಾಲ ಕ್ರಿಕೆಟ್ ಆಡಿದ್ದಾರೆ. ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಸಿರಾಜ್‌ ಭಾರತ ಏಕದಿನ ಹಾಗೂ ಟಿ20 ಕ್ರಿಕೆಟ್‌ಗೂ ಕೊಹ್ಲಿ ನಾಯಕತ್ವದಲ್ಲಿಯೇ ಪಾದಾರ್ಪಣೆ ಮಾಡಿದ್ದರು. ಇನ್ನು ಟೆಸ್ಟ್ ಕ್ರಿಕೆಟ್‌ಗೆ ಅಜಿಂಕ್ಯ ರಹಾನೆ ನೇತೃತ್ವದಲ್ಲಿ ಸಿರಾಜ್‌ ಮೊದಲ ಬಾರಿಗೆ ಮೆಲ್ಬೊರ್ನ್‌ನಲ್ಲಿ ಕಣಕ್ಕಿಳಿದಿದ್ದರು. ವಿರಾಟ್ ಕೊಹ್ಲಿ ನಾಯಕತ್ವದಡಿ ಮೊಹಮ್ಮದ್ ಸಿರಾಜ್ ಮಾರಕ ದಾಳಿ ನಡೆಸುವ ಮೂಲಕ ಉದಯೋನ್ಮುಖ ವೇಗದ ಬೌಲರ್ ಆಗಿ ಹೊರಹೊಮ್ಮಿದ್ದಾರೆ.

2017-18ರಿಂದ ಇಲ್ಲಿಯವರೆಗೆ ಬಂದು ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತದ ಅತ್ಯುತ್ತಮ ವೇಗದ ಬೌಲರ್ ಆಗುವವರೆಗಿನ ಪಯಣಕ್ಕೆ ಕೊಹ್ಲಿ ನೀಡಿದ ಸಹಕಾರ ಹಾಗೂ ಬೆಂಬಲವೇ ಕಾರಣ ಎಂದು ಮೊಹಮ್ಮದ್ ಸಿರಾಜ್ ಅಭಿಪ್ರಾಯಪಟ್ಟಿದ್ದಾರೆ. ಹೈದರಾಬಾದ್ ಮೂಲದ ಬಲಗೈ ವೇಗಿ ಮೊಹಮ್ಮದ್ ಸಿರಾಜ್ ಇನ್ನು ಬಹುತೇಕ ಎಂದೆಂದಿಗೂ ಕೊಹ್ಲಿ ನಾಯಕತ್ವದಡಿಯಲ್ಲಿ ಕಣಕ್ಕಿಳಿಯುವ ಸಾಧ್ಯತೆ ಕಡಿಮೆ. ಏಕೆಂದರೆ ವಿರಾಟ್ ಕೊಹ್ಲಿ ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವಕ್ಕೂ ಗುಡ್‌ ಬೈ ಹೇಳಿದ್ದಾರೆ. ಇದಷ್ಟೇ ಅಲ್ಲದೇ ಭಾರತ ಕ್ರಿಕೆಟ್ ತಂಡದ ಎಲ್ಲಾ ಮಾದರಿಯ ನಾಯಕತ್ವದಿಂದಲೂ ಕೆಳಗಿಳಿಸಿದ್ದಾರೆ. ಇನ್ನೇನಿದ್ದರೂ ಈ ಜೋಡಿ ಭಾರತ ತಂಡದ ಪರ ಹಾಗೂ ಆರ್‌ಸಿಬಿ ತಂಡದಲ್ಲಿ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ.

Virat Kohli Quits Test captaincy ಹೊಸ ನಾಯಕನಿಗೆ ದೊಡ್ಡ ತಲೆನೋವು ತಂದಿಟ್ಟಿದ್ದೀರಿ ಎಂದ ಅಶ್ವಿನ್..!

2022ನೇ ಸಾಲಿನ ಐಪಿಎಲ್‌ ಮೆಗಾ ಹರಾಜಿಗೂ (IPL Mega Auction) ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯು ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್‌ (Glenn Maxwell) ಹಾಗೂ ಮೊಹಮ್ಮದ್ ಸಿರಾಜ್ ಅವರನ್ನು ರೀಟೈನ್ ಮಾಡಿಕೊಂಡಿದೆ. ಐಪಿಎಲ್‌ನ ಆರಂಭಿಕ ವರ್ಷಗಳಲ್ಲಿ ಬೌಲಿಂಗ್‌ನಲ್ಲಿ ಸಾಕಷ್ಟು ದುಬಾರಿಯಾಗುತ್ತಿದ್ದ ಸಿರಾಜ್, ಇದೀಗ ಡೆತ್‌ ಓವರ್‌ಗಳಲ್ಲಿ ಮಾರಕ ಬೌಲರ್‌ ಆಗಿ ಬೆಳೆದು ನಿಂತಿದ್ದಾರೆ. 

ಇನ್ನು ಸಿರಾಜ್ ಗಾಯದ ಸಮಸ್ಯೆಯಿಂದಾಗಿ ಕೇಪ್‌ಟೌನ್ ಟೆಸ್ಟ್ (Cape Town Test) ಪಂದ್ಯದಿಂದ ಹೊರಗುಳಿದಿದ್ದರು. ಇದೀಗ ಜನವರಿ 19ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ದದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸಿರಾಜ್ ಪಾಲ್ಗೊಳ್ಳಲಿದ್ದಾರೆ. ಕೆ.ಎಲ್‌. ರಾಹುಲ್‌ ಭಾರತ ಕ್ರಿಕೆಟ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. 

Follow Us:
Download App:
  • android
  • ios