Virat Kohli Trolled: ರಾಷ್ಟ್ರಗೀತೆಗೆ ಕೊಹ್ಲಿ ಅಗೌರವ, ನೆಟ್ಟಿಗರಿಂದ ತರಾಟೆ..!
* ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಏಕದಿನ ಪಂದ್ಯದಲ್ಲಿ ಕೊಹ್ಲಿಯಿಂದ ರಾಷ್ಟ್ರಗೀತೆಗೆ ಅಗೌರವ
* ನೆಟ್ಟಿಗರಿಂದ ಟೀಂ ಇಂಡಿಯಾ ಮಾಜಿ ನಾಯಕನಿಗೆ ತರಾಟೆ
* ದಕ್ಷಿಣ ಆಫ್ರಿಕಾ ಎದುರು ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ವೈಟ್‌ವಾಶ್ ಮುಖಭಂಗ
ಕೇಪ್‌ಟೌನ್(ಜ.24): ಭಾರತ ಕ್ರಿಕೆಟ್ ತಂಡದ (Indian Cricket Team) ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ದಕ್ಷಿಣ ಆಫ್ರಿಕಾ ವಿರುದ್ದದ ಮೂರನೇ ಏಕದಿನ ಪಂದ್ಯದ ಆರಂಭದ ವೇಳೆ ರಾಷ್ಟ್ರಗೀತೆಗೆ ಅಗೌರವ ಸೂಚಿಸಿದ್ರಾ ಎನ್ನುವ ಅನುಮಾನ ಇದೀಗ ನೆಟ್ಟಿಗರಲ್ಲಿ ಕಾಡಲಾರಂಭಿಸಿದೆ. ಈಗಾಗಲೇ ದಕ್ಷಿಣ ಆಫ್ರಿಕಾದಲ್ಲಿ ಮೊದಲಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-2 ಅಂತರದಲ್ಲಿ ಹರಿಣಗಳಿಗೆ ಶರಣಾಗಿದ್ದ ಟೀಂ ಇಂಡಿಯಾ(Team India), ಇದಾದ ಬಳಿಕ ಏಕದಿನ ಸರಣಿಯಲ್ಲೂ 3-0 ಅಂತರದಲ್ಲಿ ಹೀನಾಯ ಸೋಲು ಕಂಡಿದೆ. ಇದೆಲ್ಲದರ ನಡುವೆ ವಿರಾಟ್ ಕೊಹ್ಲಿಯವರ ಒಂದು ವರ್ತನೆ ನೆಟ್ಟಿಗರ ಆಕ್ರೋಶಕ್ಕೆ ಒಳಗಾಗಿದೆ.
ಹೌದು, ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕೆ.ಎಲ್. ರಾಹುಲ್ (KL Rahul) ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸಿದ್ದರು. ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಬಿಸಿಸಿಐ (BCCI) ಆಯ್ಕೆ ಸಮಿತಿಯು ಸೀಮಿತ ಓವರ್‌ಗಳ ಕ್ರಿಕೆಟ್ ತಂಡಕ್ಕೆ ಒಬ್ಬನೇ ನಾಯಕನಿರಲಿ ಎನ್ನುವ ಉದ್ದೇಶದಿಂದ ವಿರಾಟ್ ಕೊಹ್ಲಿಯನ್ನು ಏಕದಿನ ನಾಯಕತ್ವದಿಂದ ಕೆಳಗಿಳಿಸಿ ರೋಹಿತ್ ಶರ್ಮಾಗೆ (Rohit Sharma) ಸೀಮಿತ ಓವರ್‌ಗಳ ತಂಡದ ನಾಯಕತ್ವದ ಜವಾಬ್ದಾರಿ ನೀಡಲಾಗಿತ್ತು. ಇದಾದ ಬಳಿಕ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಗಾಯದ ಸಮಸ್ಯೆಯಿಂದಾಗಿ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಬಿದ್ದಿದ್ದರು. ಹೀಗಾಗಿ ರೋಹಿತ್ ಬದಲಿಗೆ ಏಕದಿನ ಸರಣಿಯಲ್ಲಿ ಕೆ.ಎಲ್. ರಾಹುಲ್ ಭಾರತ ತಂಡವನ್ನು ನಾಯಕನಾಗಿ ಕಾರ್ಯ ನಿರ್ವಹಿಸಿದ್ದರು.
ಇನ್ನು ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲೆರಡು ಪಂದ್ಯಗಳನ್ನು ಜಯಿಸುವ ಮೂಲಕ ಆತಿಥೇಯ ದಕ್ಷಿಣ ಆಫ್ರಿಕಾ ತಂಡವು ಸರಣಿ ಕೈವಶ ಮಾಡಿಕೊಂಡಿತ್ತು. ಇನ್ನು ಕೇಪ್‌ಟೌನ್‌ನಲ್ಲಿ ಆರಂಭವಾದ ಮೂರನೇ ಟೆಸ್ಟ್ ಪಂದ್ಯದಲ್ಲ ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ಪಂದ್ಯ ಆರಂಭಕ್ಕೂ ಮುನ್ನ ಎರಡು ರಾಷ್ಟ್ರಗಳ ರಾಷ್ಟ್ರಗೀತೆ ಹಾಡಲಾಗುತ್ತದೆ. ಈ ಸಂದರ್ಭದಲ್ಲಿ ಆಟಗಾರರು ಮಾತ್ರವಲ್ಲದೇ ತಂಡದ ಕೋಚ್ ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಎದ್ದುನಿಂತು ಗೌರವ ಸೂಚಿಸುವುದು ಮಾತ್ರವಲ್ಲದೇ ರಾಷ್ಟ್ರಗೀತೆಯನ್ನು ಹಾಡುತ್ತಾರೆ.
SA vs India 3rd ODI : ದೀಪಕ್ ಚಹರ್ ಕ್ಲಾಸಿಕ್ ಇನ್ನಿಂಗ್ಸ್ ವ್ಯರ್ಥ, ಕೇಪ್ ಟೌನ್ ನಲ್ಲೂ ಭಾರತಕ್ಕೆ ಸೋಲು
ಭಾರತದ ರಾಷ್ಟ್ರಗೀತೆ ಆರಂಭವಾದಾಗ ನಾಯಕ ಕೆ.ಎಲ್. ರಾಹುಲ್, ಜಸ್ಪ್ರೀತ್ ಬುಮ್ರಾ ಸೇರಿದಂತೆ ಬಹುತೇಕರು ರಾಷ್ಟ್ರಗೀತೆ ಗುನುಗುತ್ತಿರುವ ಕ್ಷಣಗಳು ವಿಡಿಯೋದಲ್ಲಿ ಕಂಡು ಬಂದಿತು. ಆದರೆ ವಿರಾಟ್ ಕೊಹ್ಲಿ ಅನ್ಯಮನಸ್ಕರಾಗಿ ಚೀವಿಂಗ್ ಗಮ್ ಮೆಲ್ಲುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರವಾಗಿತ್ತು. ಈ ವಿಚಾರದ ಕುರಿತಂತೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ವಿರಾಟ್ ಕೊಹ್ಲಿ ವಿರುದ್ದ ತಿರುಗಿ ಬಿದ್ದಿದ್ದಾರೆ.
ರಾಷ್ಟ್ರಗೀತೆ ಮೊಳಗುತ್ತಿರುವಾಗ ವಿರಾಟ್ ಕೊಹ್ಲಿ ಏನನ್ನೋ ಜಗಿಯುವುದರಲ್ಲಿ ಬ್ಯುಸಿಯಾಗಿದ್ದಾರೆ. ಇವರು ನಮ್ಮ ದೇಶದ ರಾಯಭಾರಿ ಎಂದು ನೆಟ್ಟಿಗರೊಬ್ಬರು ವ್ಯಂಗ್ಯವಾಡಿದ್ದಾರೆ.
ಇನ್ನೋರ್ವ ನೆಟ್ಟಿಗ, ರಾಷ್ಟ್ರಗೀತೆ ಹಾಡುವಾಗ ಕೊಹ್ಲಿ ಚೀವಿಂಗ್ ಗಮ್ ಜಗಿಯುತ್ತಿದ್ದರು ಹಾಗೂ ರಾಷ್ಟ್ರಗೀತೆ ಹಾಡದೇ ಅಗೌರವ ತೋರಿದ್ದಾರೆ. ಮೊದಲ ಟೆಸ್ಟ್ ಪಂದ್ಯವನ್ನು ಹೊರತುಪಡಿಸಿದಂತೆ ಉಳಿದೆಲ್ಲಾ ಪಂದ್ಯಗಳಲ್ಲೂ ಭಾರತ ನಿರಾಶಾದಾಯಕ ಪ್ರದರ್ಶನ ತೋರಿದೆ ಎಂದು ಟ್ವೀಟ್ ಮೂಲಕ ತನ್ನ ಅಸಮಾಧಾನ ಹೊರಹಾಕಿದ್ದಾನೆ.
ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು ಕ್ವಿಂಟನ್ ಡಿ ಕಾಕ್ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ 287 ರನ್ ಬಾರಿಸಿತ್ತು. ಈ ಗುರಿ ಬೆನ್ನತ್ತಿದ ಭಾರತ ತಂಡವು ಆರಂಭಿಕ ಆಘಾತದ ಹೊರತಾಗಿಯೂ ಶಿಖರ್ ಧವನ್, ವಿರಾಟ್ ಕೊಹ್ಲಿ ಹಾಗೂ ದೀಪಕ್ ಚಹರ್ ಬಾರಿಸಿದ ಸಮಯೋಚಿಯ ಅರ್ಧಶತಕದ ನೆರವಿನಿಂದ 283 ರನ್ ಗಳಿಸಿತಾದರೂ ಕೇವಲ 4 ರನ್ ಅಂತರದ ರೋಚಕ ಸೋಲು ಕಾಣುವ ಮೂಲಕ ವೈಟ್‌ವಾಶ್ ಮುಖಭಂಗ ಅನುಭವಿಸಿತು.