Asianet Suvarna News Asianet Suvarna News

SA vs India 3rd ODI : ದೀಪಕ್ ಚಹರ್ ಕ್ಲಾಸಿಕ್ ಇನ್ನಿಂಗ್ಸ್ ವ್ಯರ್ಥ, ಕೇಪ್ ಟೌನ್ ನಲ್ಲೂ ಭಾರತಕ್ಕೆ ಸೋಲು


ದೀಪಕ್ ಚಹರ್ ಆಡಿದ ಸ್ಫೋಟಕ ಇನ್ನಿಂಗ್ಸ್ ವ್ಯರ್ಥ
3ನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 4 ರನ್ ಸೋಲು
8ನೇ ವಿಕೆಟ್ ಗೆ ಬುಮ್ರಾ ಜೊತೆಗೂಡಿ ಅಮೂಲ್ಯ 55 ರನ್ ಜೊತೆಯಾಟವಾಡಿದ್ದ ದೀಪಕ್ ಚಹರ್

Cricket News Deepak Chahar cameo in vain India lose by 4 runs in Cape Town ODI vs South Africa san
Author
Bengaluru, First Published Jan 23, 2022, 10:28 PM IST

ಕೇಪ್ ಟೌನ್ (ಜ. 23): ಕೆಳ ಕ್ರಮಾಂಕದ ಬ್ಯಾಟ್ಸ್ ಮನ್ ದೀಪಕ್ ಚಹರ್ (Deepak Chahar ) ಹೋರಾಟದ ಇನ್ನಿಂಗ್ಸ್ ಹೊರತಾಗಿಯೂ ಕೊನೇ ಕೆಲ ಎಸೆತಗಳಲ್ಲಿ ಎಡವಿದ ಭಾರತ ತಂಡ (India) ಆತಿಥೇಯ ದಕ್ಷಿಣ ಆಫ್ರಿಕಾ (South Africa) ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ (ODI Match) ಪಂದ್ಯದಲ್ಲಿ 4 ರನ್ ಸೋಲು ಕಂಡಿದೆ. 8ನೇ ವಿಕೆಟ್ ಗೆ ದೀಪಕ್ ಚಹರ್ ಹಾಗೂ ಜಸ್ ಪ್ರೀತ್ ಬುಮ್ರಾ (Jasprit Bumrah) ಆಕರ್ಷಕ 55 ರನ್ ಜೊತೆಯಾಟವಾಡಿದ್ದ ವೇಳೆ ಥ್ರಿಲ್ಲಿಂಗ್ ಗೆಲುವು ಪಡೆಯುವ ನಿರೀಕ್ಷೆಯಲ್ಲಿ ಟೀಂ ಇಂಡಿಯಾ ಇತ್ತಾದರೂ, ಕೊನೇ ಹಂತದಲ್ಲಿ ದಕ್ಷಿಣ ಆಫ್ರಿಕಾ ಬೌಲರ್ ಮಾರಕ ದಾಳಿ ನಡೆಸಿ ಭಾರತದ ಸೋಲಿಗೆ ಕಾರಣರಾದರು. ಇದರೊಂದಿಗೆ ಭಾರತ ತಂಡ ಏಕದಿನ ಸರಣಿಯಲ್ಲಿ ಕ್ಲೀನ್ ಸ್ವೀಪ್ ಅವಮಾನ ಎದುರಿಸಿದೆ.

ನ್ಯೂಲ್ಯಾಂಡ್ಸ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅನುಭವಿ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ (124ರನ್, 130 ಎಸೆತ, 12 ಬೌಂಡರಿ, 2 ಸಿಕ್ಸರ್) ಭರ್ಜರಿ ಶತಕದ ನಡುವೆಯೂ ದಕ್ಷಿಣ ಆಫ್ರಿಕಾ ತಂಡ 49.5 ಓವರ್ ಗಳಲ್ಲಿ 287 ರನ್ ಗೆ ಆಲೌಟ್ ಆಯಿತು. ಬೌಲಿಂಗ್ ನಲ್ಲಿ ಗಮನಸೆಳೆದ ಕನ್ನಡಿಗ ಪ್ರಸಿದ್ಧ ಕೃಷ್ಣ(Prasidh Krishna) 59 ರನ್ ಗೆ ಮೂರು ವಿಕೆಟ್ ಉರುಳಿಸಿದರೆ, ಜಸ್ ಪ್ರೀತ್ ಬುಮ್ರಾ ಹಾಗೂ ದೀಪಕ್ ಚಹರ್ ತಲಾ 2 ವಿಕೆಟ್ ಸಾಧನೆ ಮಾಡಿದರು.

ಮೊತ್ತ ಬೆನ್ನಟ್ಟಿದ ಭಾರತ ತಂಡ, ಮಾಜಿ ನಾಯಕ ವಿರಾಟ್ ಕೊಹ್ಲಿ (65 ರನ್, 84 ಎಸೆತ, 5 ಬೌಂಡರಿ), ಶಿಖರ್ ಧವನ್ (61 ರನ್, 73 ಎಸೆತ, 5 ಬೌಂಡರಿ, 1 ಸಿಕ್ಸರ್) ಹಾಗೂ ಕೊನೇ ಹಂತದಲ್ಲಿ ದೀಪಕ್ ಚಹರ್ (54 ರನ್, 34 ಎಸೆತ, 5 ಬೌಂಡರಿ, 2 ಸಿಕ್ಸರ್) ಹೋರಾಟದ ಅರ್ಧಶತಕದ ನಡುವೆಯೂ 49.2 ಓವರ್ ಗಳಲ್ಲಿ 283 ರನ್ ಗೆ ಆಲೌಟ್ ಆಗಿ ಸೋಲು ಕಂಡಿತು. ಕ್ವಿಂಟನ್ ಡಿ ಕಾಕ್ (Quinton de Kock) ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಗೌರವವಕ್ಕೆ ಪಾತ್ರರಾದರು.
 


ಮೊತ್ತ ಬೆನ್ನಟ್ಟಿದ ಭಾರತ ತಂಡ 5ನೇ ಓವರ್ ನಲ್ಲಿಯೇ ಆಘಾತ ಕಂಡಿತು. ನಾಯಕ ಕೆಎಲ್ ರಾಹುಲ್ (KL Rahul) ಕೇವಲ 9 ರನ್ ಬಾರಿಸಿ ಔಟಾದರೆ, 2ನೇ ವಿಕೆಟ್ ಗೆ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಹಾಗೂ ಶಿಖರ್ ಧವನ್ (Shikhar Dhawan) 98 ರನ್ ಜೊತೆಯಾಟವಾಡಿ ಚೇಸಿಂಗ್ ಗೆ ಬಲ ನೀಡಿದ್ದರು. ಶಿಖರ್ ಧವನ್ ಔಟಾದ ಬಳಿಕ ಕ್ರೀಸ್ ಗಿಳಿದ ರಿಷಭ್ ಪಂತ್ ಮೊದಲ ಎಸೆತದಲ್ಲಿಯೇ ಔಟಾಗಿ ಹೊರನಡೆದರು. 118 ರನ್ ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕ ಆಸರೆಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ನಲ್ಲಿ ತಮ್ಮ 64ನೇ ಅರ್ಧಶತಕವನ್ನು ಪೂರೈಸಿ ಗಮನಸೆಳೆದರು.

Pro Kabaddi League : ಗೆಲುವಿನ ಹಳಿಗೆ ಬಂದ ಬೆಂಗಳೂರು ಬುಲ್ಸ್!
ಕೊಹ್ಲಿ ಜೊತೆಗೂಡಿದ ಶ್ರೇಯಸ್ ಅಯ್ಯರ್ (Shreyas Iyer) ತಂಡದ ಮೊತ್ತವನ್ನು 150ರ ಗಡಿ ದಾಟಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಈ ಜೊತೆಯಾಟ ದೀರ್ಘಕಾಲ ಉಳಿಯಲಿಲ್ಲ. ತಂಡದ ಮೊತ್ತ 150ರ ಗಡಿ ದಾಟಿದ ಬಳಿಕ ಕೊಹ್ಲಿ ನಿರ್ಗಮಿಸಿದರು. ಬಳಿಕ ಶ್ರೇಯಸ್ ಅಯ್ಯರ್ (26) ಜೊತೆಯಾದ ಸೂರ್ಯಕುಮಾರ್ ಯಾದವ್ (39) ಸ್ಕೋರ್ ಬೋರ್ಡ್ ಪ್ರಗತಿಯಲ್ಲಿರುವಂತೆ ಶ್ರಮವಹಿಸಿದರು. 5ನೇ ವಿಕೆಡ್ ಗೆ ಈ ಜೋಡಿ 39 ರನ್ ಜೊತೆಯಾಟವಾಡಿದ್ದ ವೇಳೆ ಶ್ರೇಯಸ್ ಅಯ್ಯರ್ ನಿರ್ಗಮಿಸಿದರೆ, 32 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದ್ದ ಸೂರ್ಯಕುಮಾರ್ ಯಾದವ್ (Suryakumar Yadav)40ನೇ ಓವರ್ ನಲ್ಲಿ ವಿಕೆಟ್ ಒಪ್ಪಿಸಿದರು. ನಂತರದ ಕೆಲ ರನ್ ಗೆ ಜಯಂತ್ ಯಾದವ್ ಕೂಡ ಔಟಾದಾಗ ಭಾರತ ತಂಡ 223 ರನ್ ಗೆ 7 ವಿಕೆಟ್ ಕಳೆದುಕೊಂಡು ಸೋಲಿನ ನಿರೀಕ್ಷೆಯಲ್ಲಿತ್ತು. 

IPL 2022: ನಿಗದಿಗಿಂತ ಒಂದು ವಾರ ಮುಂಚಿತವಾಗಿ ಐಪಿಎಲ್ ಟೂರ್ನಿ ಆರಂಭ..!
ಈ ವೇಳೆ ಜೊತೆಯಾದ ದೀಪಕ್ ಚಹರ್ ಹಾಗೂ ಜಸ್ ಪ್ರೀತ್ ಬುಮ್ರಾ ಬಿರುಸಿನ ಬ್ಯಾಟಿಂಗ್ ಮಾಡಿದರು. ಅದರಲ್ಲೂ ಚಹರ್ ಅವರ ಬೌಂಡರಿ ಸಿಕ್ಸರ್ ಗಳಿಂದ 45ನೇ ಓವರ್ ನಲ್ಲಿ ತಂಡ 250 ರನ್ ಗಳ ಗಡಿ ದಾಟಿತ್ತು. ಕೇವಲ 31 ಎಸೆತಗಳಲ್ಲಿಯೇ ಏಕದಿನದಲ್ಲಿ ತಮ್ಮ 2ನೇ ಅರ್ಧಶತಕ ಪೂರೈಸಿದ ಚಹರ್ ತಂಡಕ್ಕೆ ಗೆಲುವು ನೀಡುವ ಸಂಪೂರ್ಣ ವಿಶ್ವಾಸದಲ್ಲಿದ್ದರು. ಗೆಲುವಿಗೆ 18 ಎಸೆತಗಳಲ್ಲಿ 10 ರನ್ ಬೇಕಿದ್ದಾಗ ಎನ್ ಗಿಡಿ ಬೌಲಿಂಗ್ ನಲ್ಲಿ ಚಹರ್ ಔಟಾಗಿದ್ದು ಭಾರತದ ದಿಕ್ಕು ತಪ್ಪಿಸಿತು.9 ಎಸೆತಗಳಲ್ಲಿ 7 ರನ್ ಬೇಕಿದ್ದಾಗ ಜಸ್ ಪ್ರೀತ್ ಬುಮ್ರಾ ಔಟಾದರೆ, ಕೊನೇ ಓವರ್ ನಲ್ಲಿ ಚಾಹಲ್ ರನ್ನು ಔಟ್ ಮಾಡಿದ ಡ್ವೈನ್ ಪ್ರಿಟೋರಿಯಸ್ ದಕ್ಷಿಣ ಆಫ್ರಿಕಾದ ರೋಚಕ ಗೆಲುವಿಗೆ ಕಾರಣರಾದರು. 

ದಕ್ಷಿಣ ಆಫ್ರಿಕಾ: 49.5 ಓವರ್ ಗಳಲ್ಲಿ 287 (ಕ್ವಿಂಟನ್ ಡಿ ಕಾಕ್ 124, ರಸ್ಸಿ ವಾನ್ ಡೆರ್ ಡ್ಯುಸೆನ್ 52, ಪ್ರಸಿದ್ಧ ಕೃಷ್ಣ 59ಕ್ಕೆ 2, ಜಸ್ ಪ್ರೀತ್ ಬುಮ್ರಾ 52ಕ್ಕೆ 2, ದೀಪಕ್ ಚಹರ್ 53ಕ್ಕೆ 2), ಭಾರತ: 49.2 ಓವರ್ ಗಳಲ್ಲಿ 283 (ವಿರಾಟ್ ಕೊಹ್ಲಿ 65, ಶಿಖರ್ ಧವನ್ 61, ದೀಪಕ್ ಚಹರ್ 54, ಆಂಡಿಲ್ ಪೆಹ್ಲುಕ್ ವಾಯೋ 40ಕ್ಕೆ 3, ಲುಂಜಿ ಎನ್ ಗಿಡಿ 58ಕ್ಕೆ 3). 

Follow Us:
Download App:
  • android
  • ios