Asianet Suvarna News Asianet Suvarna News

Ind vs SA: ದಕ್ಷಿಣ ಆಫ್ರಿಕಾ ಎದುರು ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಟೀಂ ಇಂಡಿಯಾ.!

* ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಎರಡನೇ ಪಂದ್ಯಕ್ಕೆ ಕ್ಷಣಗಣನೆ

* ಸರಣಿ ಜೀವಂತವಾಗಿಟ್ಟುಕೊಳ್ಳಲು ಟೀಂ ಇಂಡಿಯಾ ಹೋರಾಟ

* ಮಧ್ಯಮ ಕ್ರಮಾಂಕದ ಸವಾಲನ್ನು ಮೆಟ್ಟಿ ನಿಲ್ಲುತ್ತಾ ಟೀಂ ಇಂಡಿಯಾ..?

Ind vs SA KL Rahul led Team India take on South Africa in 2nd ODI Do or Die Situation for India kvn
Author
Bengaluru, First Published Jan 21, 2022, 12:00 PM IST

ಪಾರ್ಲ್‌(ಜ.21)‍: ಭಾರತ ಟೆಸ್ಟ್‌ ತಂಡದ ಪೂರ್ಣಾವಧಿ ನಾಯಕನಾಗುವ ನಿರೀಕ್ಷೆಯಲ್ಲಿರುವ ಕೆ.ಎಲ್‌.ರಾಹುಲ್‌(KL Rahul), ದಕ್ಷಿಣ ಆಫ್ರಿಕಾ ವಿರುದ್ಧ ಶುಕ್ರವಾರ ನಡೆಯಲಿರುವ 2ನೇ ಏಕದಿನ ಪಂದ್ಯದಲ್ಲಿ ತಂಡವನ್ನು ಸೋಲಿನಿಂದ ಪಾರು ಮಾಡುವ ಜೊತೆಗೆ ಸುಧಾರಿತ ನಾಯಕತ್ವ ಕೌಶಲ್ಯಗಳನ್ನು ತೋರಬೇಕಿದೆ. ಮೊದಲ ಪಂದ್ಯದಲ್ಲಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿದ ಭಾರತ, ಈ ಪಂದ್ಯದಲ್ಲಿ ತನ್ನ ಮಧ್ಯಮ ಕ್ರಮಾಂಕದ ಸಮಸ್ಯೆಯನ್ನು ಮೀರಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ರಿಷಭ್‌ ಪಂತ್‌(Rishabh Pant) ಹಾಗೂ 5, 6ನೇ ಕ್ರಮಾಂಕದಲ್ಲಿ ಆಡುವ ಬ್ಯಾಟರ್‌ಗಳು ಜವಾಬ್ದಾರಿಯುತ ಇನ್ನಿಂಗ್ಸ್‌ ಕಟ್ಟಬೇಕಿದೆ. ಮೊದಲ ಪಂದ್ಯದಂತೆ ಮೈಮರೆತರೆ ಟೆಸ್ಟ್‌ ಸರಣಿಯನ್ನು ಕಳೆದುಕೊಂಡಂತೆ ಏಕದಿನ ಸರಣಿಯನ್ನೂ ಆತಿಥೇಯರಿಗೆ ಬಿಟ್ಟುಕೊಡಬೇಕಾಗುತ್ತದೆ.

ಭಾರತ ಕ್ರಿಕೆಟ್ ತಂಡದಲ್ಲಿ (Indian Cricket Team) ಕೆಲ ಬದಲಾವಣೆಗಳು ಆಗುವ ನಿರೀಕ್ಷೆ ಇದೆ. ಆರ್‌.ಅಶ್ವಿನ್‌ (Ravichandran Ashwin), ಯಜುವೇಂದ್ರ ಚಹಲ್‌, ಶಾರ್ದೂಲ್‌ ಠಾಕೂರ್‌ (Shardul Thakur) ದುಬಾರಿಯಾಗುತ್ತಿದ್ದರೂ 6ನೇ ಬೌಲಿಂಗ್‌ ಆಯ್ಕೆಯಾಗಿ ತಂಡದಲ್ಲಿದ್ದ ವೆಂಕಟೇಶ್‌ ಅಯ್ಯರ್‌ ಕೈಗೆ ಚೆಂಡು ನೀಡದೆ ಇದ್ದಿದ್ದು ಅಚ್ಚರಿಗೆ ಕಾರಣವಾಗಿತ್ತು. ವೆಂಕಿಯನ್ನು ಕೇವಲ ಬ್ಯಾಟರ್‌ ಆಗಿ ಆಡಿಸುವುದು ತಂಡದ ಉದ್ದೇಶವಾಗಿದ್ದರೆ, ಈ ಪಂದ್ಯದಲ್ಲಿ ಅವರು ಬದಲು ಸೂರ್ಯಕುಮಾರ್‌ ಯಾದವ್‌ಗೆ ಸ್ಥಾನ ಸಿಗಬಹುದು.

ಭುವನೇಶ್ವರ್‌ ಕುಮಾರ್‌ ಸ್ಲಾಗ್‌ ಓವರ್‌ಗಳಲ್ಲಿ ಪರಿಣಾಮಕಾರಿಯಾಗಲಿಲ್ಲ. ಹೊಸ ಚೆಂಡಿನಲ್ಲೂ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ. ಭುವಿ ಬದಲು ದೀಪಕ್‌ ಚಹರ್‌ರನ್ನು ಆಡಿಸುವ ಸಾಧ್ಯತೆ ಇದೆ. ಭಾರತೀಯ ಸ್ಪಿನ್ನರ್‌ಗಳ ಪ್ರದರ್ಶನ ಸಪ್ಪೆ ಎನಿಸಿದರೂ, ಬೋಲೆಂಡ್‌ ಪಾರ್ಕ್ ಪಿಚ್‌ನಲ್ಲಿ ದ.ಆಫ್ರಿಕಾದ ಮೂವರು ಸ್ಪಿನ್ನರ್‌ಗಳು ಒಟ್ಟು 26 ಓವರ್‌ ಬೌಲ್‌ ಮಾಡಿ 124 ರನ್‌ ಬಿಟ್ಟುಕೊಟ್ಟು 4 ವಿಕೆಟ್‌ ಕಿತ್ತಿದ್ದರು. ಹೀಗಾಗಿ ಅಶ್ವಿನ್‌ ಹಾಗೂ ಚಹಲ್‌ ಮೇಲೆ ಒತ್ತಡ ಬೀಳುವುದು ಸಹಜ.

Ind vs SA: ಕೈಕೊಟ್ಟ ಮಧ್ಯಮ ಕ್ರಮಾಂಕ, ಮೊದಲ ಏಕದಿನ ಪಂದ್ಯದಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ..!

ದಕ್ಷಿಣ ಆಫ್ರಿಕಾ (South Africa Cricket Team) ತಂಡದಲ್ಲಿ ಯಾವುದೇ ಬದಲಾವಣೆಯ ನಿರೀಕ್ಷೆ ಇಲ್ಲ. ಪಿಚ್‌ ಆರಂಭದಲ್ಲಿ ನಿಧಾನ ಎನಿಸಿದರೂ ಇನ್ನಿಂಗ್ಸ್‌ ಸಾಗಿದಂತೆ ಬ್ಯಾಟಿಂಗ್‌ಗೆ ಅನುಕೂಲಕರವಾಗಿತ್ತು. ಈ ಪಂದ್ಯದಲ್ಲೂ ಪಿಚ್‌ ಅದೇ ರೀತಿ ವರ್ತಿಸುವ ಸಾಧ್ಯತೆ ಇದೆ. ಕಳೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬ ಬವುಮಾ (Temba Bavuma) ಹಾಗೂ ರಾಸ್ಸಿ ವ್ಯಾನ್ ಡರ್ ಡುಸೇನ್ ಆಕರ್ಷಕ ಶತಕ ಸಿಡಿಸುವ ಮೂಲಕ ಟೀಂ ಇಂಡಿಯಾ (Team India) ಬೌಲರ್‌ಗಳನ್ನು ಕಾಡಿದ್ದರು. ಹೀಗಾಗಿ ಈ ಬ್ಯಾಟರ್‌ಗಳನ್ನು ಆದಷ್ಟು ಬೇಗ ಕಟ್ಟಿ ಹಾಕುವ ಸವಾಲು ಭಾರತೀಯ ಬೌಲರ್‌ಗಳ ಮುಂದಿದೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರಾಹುಲ್‌(ನಾಯಕ), ಧವನ್‌, ಕೊಹ್ಲಿ, ಪಂತ್‌, ಶ್ರೇಯಸ್‌, ವೆಂಕಿ/ಸೂರ್ಯ, ಅಶ್ವಿನ್‌, ಶಾರ್ದೂಲ್‌, ಭುವಿ/ದೀಪಕ್‌, ಬೂಮ್ರಾ, ಚಹಲ್‌.

ದ.ಆಫ್ರಿಕಾ: ಡಿ ಕಾಕ್‌, ಮಲಾನ್‌, ಬವುಮಾ(ನಾಯಕ), ಮಾರ್ಕ್ರಮ್‌, ಡುಸ್ಸೆನ್‌, ಮಿಲ್ಲರ್‌, ಫೆಲುಕ್ವಾಯೋ, ಯಾನ್ಸನ್‌, ಕೇಶವ್‌, ಎನ್‌ಗಿಡಿ, ಶಮ್ಸಿ.

ಪಂದ್ಯ ಆರಂಭ: ಮಧ್ಯಾಹ್ನ 2ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಭಾರತ, ವಿಂಡೀಸ್‌ ಸರಣಿಗೆ ಎರಡೇ ನಗರಗಳ ಆತಿಥ್ಯ?

ನವದೆಹಲಿ: ಭಾರತ ಹಾಗೂ ವೆಸ್ಟ್‌ಇಂಡೀಸ್‌ (India vs West Indies) ನಡುವೆ ಫೆಬ್ರವರಿ 6ರಿಂದ ಆರಂಭಗೊಳ್ಳಲಿರುವ ಸೀಮಿತ ಓವರ್‌ ಸರಣಿಗಳನ್ನು 6 ನಗರಗಳ ಬದಲು ಕೇವಲ 2 ನಗರಗಳಲ್ಲಿ ಆಯೋಜಿಸುವ ಸಾಧ್ಯತೆ ಇದೆ. ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಆಟಗಾರರ ಆರೋಗ್ಯದ ದೃಷ್ಟಿಯಿಂದ ಬಿಸಿಸಿಐ (BCCI) ಅಹಮದಾಬಾದ್‌ನಲ್ಲಿ ಏಕದಿನ, ಕೋಲ್ಕತಾದಲ್ಲಿ ಟಿ20 ಸರಣಿಯನ್ನು ನಡೆಸಲು ಚಿಂತನೆ ನಡೆಸಿದೆ. ಬಿಸಿಸಿಐನ ಟೂರ್ನಿ ಹಾಗೂ ವೇಳಾಪಟ್ಟಿ ಸಮಿತಿಯು ಎರಡೇ ನಗರಗಳಲ್ಲಿ ಪಂದ್ಯಗಳನ್ನು ನಡೆಸಲು ಶಿಫಾರಸು ಮಾಡಿದೆ ಎನ್ನಲಾಗಿದೆ.

Follow Us:
Download App:
  • android
  • ios