Asianet Suvarna News Asianet Suvarna News

Ind vs SA: ಕೈಕೊಟ್ಟ ಮಧ್ಯಮ ಕ್ರಮಾಂಕ, ಮೊದಲ ಏಕದಿನ ಪಂದ್ಯದಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ..!

* ದಕ್ಷಿಣ ಆಫ್ರಿಕಾ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಸೋಲಿನ ಶಾಕ್‌

* ಮೊದಲ ಏಕದಿನ ಪಂದ್ಯದಲ್ಲಿ ಕೆ.ಎಲ್ ರಾಹುಲ್‌ ಪಡೆಗೆ 31 ರನ್‌ಗಳ ಅಂತರದ ಸೋಲು

* ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಹರಿಣಗಳ ಪಡೆಗೆ 1-0 ಮುನ್ನಡೆ

Team India Middle Order Batting Collapse South Africa Thrash India by 31 runs in 1st ODI kvn
Author
Bengaluru, First Published Jan 19, 2022, 10:08 PM IST

ಪಾರ್ಲ್‌(ಜ.19): ಶಿಖರ್ ಧವನ್‌(Shikhar Dhawan), ವಿರಾಟ್ ಕೊಹ್ಲಿ (Virat Kohli) ಹಾಗೂ ಶಾರ್ದೂಲ್ ಠಾಕೂರ್(Shardul Thakur) ಆಕರ್ಷಕ ಅರ್ಧಶತಕದ ಹೊರತಾಗಿಯೂ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಬೇಜವಾಬ್ದಾರಿಯುತ ಪ್ರದರ್ಶನದಿಂದಾಗಿ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಟೀಂ ಇಂಡಿಯಾ (Team India) 31 ರನ್‌ಗಳ ಅಂತರದ ಸೋಲು ಕಂಡಿದೆ. ಜೋಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯದಲ್ಲಿ ಮೊದಲ ಬಾರಿಗೆ ನಾಯಕನಾಗಿದ್ದ ಕೆ ಎಲ್‌ ರಾಹುಲ್‌ (KL Rahul) ಸೋಲಿನ ಕಹಿಯುಂಡಿದ್ದರು. ಇದೀಗ ಏಕದಿನ ಸರಣಿಯ ಮೊದಲ ಪಂದ್ಯದಲ್ಲೂ ರಾಹುಲ್ ಪಡೆಗೆ ಸೋಲಿನ ಶಾಕ್ ಎದುರಾಗಿದೆ.

ದಕ್ಷಿಣ ಆಫ್ರಿಕಾ ನೀಡಿದ್ದ 297 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಟೀಂ ಇಂಡಿಯಾ 8 ವಿಕೆಟ್ ಕಳೆದುಕೊಂಡು 265 ರನ್‌ಗಳಿಸಲಷ್ಟೇ ಶಕ್ತವಾಯಿತು. ಮೊದಲ ವಿಕೆಟ್‌ಗೆ ನಾಯಕ ಕೆ.ಎಲ್‌. ರಾಹುಲ್ ಹಾಗೂ ಶಿಖರ್ ಧವನ್‌ 8.3 ಓವರ್‌ಗಳಲ್ಲಿ 46 ರನ್‌ಗಳ ಜತೆಯಾಟವಾಡಿತು. ಕೆ.ಎಲ್. ರಾಹುಲ್‌ 17 ಎಸೆತಗಳನ್ನು ಎದುರಿಸಿ 12 ರನ್‌ ಬಾರಿಸಿ ಏಯ್ಡನ್‌ ಮಾರ್ಕ್‌ರಮ್‌ ಬೌಲಿಂಗ್‌ನಲ್ಲಿ ಡಿ ಕಾಕ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.

ಆಸರೆಯಾದ ಧವನ್-ಕೊಹ್ಲಿ ಜತೆಯಾಟ: ರಾಹುಲ್ ವಿಕೆಟ್ ಪತನದ ಬಳಿಕ ಶಿಖರ್ ಧವನ್ ಅವರನ್ನು ಕೂಡಿಕೊಂಡ ವಿರಾಟ್ ಕೊಹ್ಲಿ ತಂಡಕ್ಕೆ ಆಸರೆಯಾಗಲು ಯತ್ನಿಸಿದರು. ಡೆಲ್ಲಿ ಮೂಲದ ಈ ಇಬ್ಬರು ಬ್ಯಾಟರ್‌ಗಳು ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ತಂಡದ ಮೊತ್ತವನ್ನು 130ರ ಗಡಿ ದಾಟಿಸಿದರು. ಎರಡನೇ ವಿಕೆಟ್‌ಗೆ ಈ ಜೋಡಿ 102 ಎಸೆತಗಳನ್ನು ಎದುರಿಸಿ 92 ರನ್‌ಗಳ ಜತೆಯಾಟ ನಿಭಾಯಿಸಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಕೇಶವ್ ಮಹರಾಜ್ ಯಶಸ್ವಿಯಾದರು. ಶಿಖರ್ ಧವನ್‌ 84 ಎಸೆತಗಳನ್ನು ಎದುರಿಸಿ 10 ಬೌಂಡರಿ ಸಹಿತ 79 ರನ್‌ ಬಾರಿಸಿ ಕೇಶವ್ ಮಹರಾಜ್ ಬೌಲಿಂಗ್‌ನಲ್ಲಿ ಬೌಲ್ಡ್‌ ಆಗಿ ಪೆವಿಲಿಯನ್ ಸೇರಿದರು.

Ind vs SA : ನಾಯಕ ಟೆಂಬಾ ಬವುಮಾ, ರಸ್ಸಿ ವ್ಯಾನ್ ಡೆರ್ ಡಸ್ಸೆನ್ ಶತಕ, ಭಾರತದ ಗೆಲುವಿಗೆ 297 ರನ್ ಟಾರ್ಗೆಟ್

ಅರ್ಧಶತಕ ಬಾರಿಸಿದ ಬೆನ್ನಲ್ಲೇ ವಿಕೆಟ್‌ ಒಪ್ಪಿಸಿದರ ಕೊಹ್ಲಿ: ಕಳೆದೆರಡುವರೆ ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಲು ವಿಫಲರಾಗುತ್ತಾ ಬಂದಿರುವ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಮತ್ತೊಮ್ಮೆ ತಮಗೆ ಸಿಕ್ಕ ಉತ್ತಮ ಆರಂಭವನ್ನು ಮೂರಂಕಿ ಮೊತ್ತವಾಗಿ ಪರಿವರ್ತಿಸಲು ವಿಫಲರಾದರು. ಸಾಕಷ್ಟು ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ವಿರಾಟ್ ಕೊಹ್ಲಿ 63 ಎಸೆತಗಳನ್ನು ಎದುರಿಸಿ 3 ಬೌಂಡರಿ ಸಹಿತ 51 ರನ್‌ ಬಾರಿಸಿ ಸ್ಪಿನ್ನರ್ ತಬ್ರೀಜ್ ಶಮ್ಸಿ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. 

Ind vs SA: ದಾದಾ, ದ್ರಾವಿಡ್‌, ಸಚಿನ್‌ ದಾಖಲೆ ಮುರಿಯಲು ಸಜ್ಜಾದ ವಿರಾಟ್ ಕೊಹ್ಲಿ..!

ಸಚಿನ್ ದಾಖಲೆ ಮುರಿದ ಕೊಹ್ಲಿ:  ವಿದೇಶಿ ನೆಲದಲ್ಲಿ ಏಕದಿನ ಮಾದರಿಯಲ್ಲಿ ಭಾರತ ಪರ ಗರಿಷ್ಠ ರನ್‌ ಬಾರಿಸಿದ ದಾಖಲೆ ಇದೀಗ ವಿರಾಟ್ ಕೊಹ್ಲಿ ಪಾಲಾಗಿದೆ. ಕೊಹ್ಲಿ 9 ರನ್‌ ಬಾರಿಸುತ್ತಿದ್ದಂತೆಯೇ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರ ಹೆಸರಿದಲ್ಲಿದ್ದ ದಾಖಲೆ ಮುರಿದು ಹಾಕಿದರು. ಈ ಮೊದಲು ಸಚಿನ್ ತೆಂಡುಲ್ಕರ್ ವಿದೇಶಿ ಪಿಚ್‌ಗಳಲ್ಲಿ ಏಕದಿನ ಕ್ರಿಕೆಟ್‌ನಲ್ಲಿ 5,065 ರನ್‌ ಬಾರಿಸಿದ್ದರು. ಇದೀಗ ಕೊಹ್ಲಿ 5,108 ರನ್‌ ಬಾರಿಸಿ ಮೊದಲ ಸ್ಥಾನಕ್ಕೇರಿದ್ದಾರೆ.

ದಿಢೀರ್ ಕೈಕೊಟ್ಟ ಮಧ್ಯಮ ಕ್ರಮಾಂಕ: ಟೀಂ ಇಂಡಿಯಾ ಒಂದು ಹಂತದಲ್ಲಿ 137 ರನ್‌ಗಳವರೆಗೆ ಕೇವಲ ಒಂದು ವಿಕೆಟ್ ಕಳೆದುಕೊಂಡಿತ್ತು. ಆದರೆ ಶಿಖರ್ ಧವನ್ ಹಾಗೂ ವಿರಾಟ್ ಕೊಹ್ಲಿ ವಿಕೆಟ್‌ ಪತನವಾಗುತ್ತಿದ್ದಂತೆಯೇ ದಿಢೀರ್ ಕುಸಿತ ಕಂಡಿತು. 138ರಿಂದ 188ರೊಳಗೆ ಟೀಂ ಇಂಡಿಯಾ ಒಟ್ಟು 5 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತು. ರಿಷಭ್ ಪಂತ್ 16 ರನ್‌ ಬಾರಿಸಿದರೆ, ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಕೇವಲ 17 ರನ್‌ಗಳಿಗೆ ಸೀಮಿತವಾಯಿತು. ಇನ್ನು ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ವೆಂಕಟೇಶ್ ಅಯ್ಯರ್ ಕೇವಲ 2 ರನ್‌ ಗಳಿಸಿ ವಿಕೆಟ್ ಒಪ್ಪಿಸಿದರು.

ಇನ್ನು ಕೊನೆಯಲ್ಲಿ ಶಾರ್ದೂಲ್ ಠಾಕೂರ್ ಅಜೇಯ 50 ರನ್‌ ಬಾರಿಸುವ ಮೂಲಕ ದಿಟ್ಟ ಹೋರಾಟ ನಡೆಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಬುಮ್ರಾ 14 ರನ್ ಬಾರಿಸಿ ಅಜೇಯರಾಗುಳಿದರು

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಆರಂಭಿಕ ಬ್ಯಾಟರ್ ಜೇನೆಮನ್‌ ಮಲಾನ್ ಕೇವಲ 6 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು. ಇನ್ನು 27 ರನ್‌ ಗಳಿಸಿದ್ದ ಕ್ವಿಂಟನ್‌ ಡಿ ಕಾಕ್ ಆಫ್‌ಸ್ಪಿನ್ನರ್ ಅಶ್ವಿನ್ ಬೌಲಿಂಗ್‌ನಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇದರ ಬೆನ್ನಲ್ಲೇ ಏಯ್ಡನ್ ಮಾರ್ಕ್‌ರಮ್ 4 ರನ್‌ಗಳಿಸಿ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆದರು.

ಆಕರ್ಷಕ ಶತಕ ಚಚ್ಚಿದ ಬವುಮಾ-ಡುಸೇನ್‌: ಒಂದು ಹಂತದಲ್ಲಿ 68 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ನಾಯಕ ತೆಂಬ ಬವುಮಾ ಹಾಗೂ ರಾಸ್ಸಿ ವ್ಯಾನ್ ಡರ್‌ ಡುಸೇನ್ ಆಸರೆಯಾದರು. ನಾಲ್ಕನೇ ವಿಕೆಟ್‌ಗೆ ಈ ಜೋಡಿ 184 ಎಸೆತಗಳನ್ನು ಎದುರಿಸಿ 204 ರನ್‌ಗಳ ಜತೆಯಾಟವಾಡಿತು. ಹರಿಣಗಳ ನಾಯಕ ತೆಂಬ ಬವುಮಾ 143 ಎಸೆತಗಳನ್ನು ಎದುರಿಸಿ 8 ಬೌಂಡರಿ ಸಹಿತ 110 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಮತ್ತೊಂದು ತುದಿಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ರಾಸ್ಸಿ ವ್ಯಾನ್ ಡರ್ ಡುಸೇನ್‌ ಕೇವಲ 96 ಎಸೆತಗಳಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್‌ ಸಹಿತ ಅಜೇಯ 129 ರನ್‌ ಗಳಿಸಿದರು.

Follow Us:
Download App:
  • android
  • ios