* ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿಗೆ ಇಂದು ಭಾರತ ತಂಡ ಪ್ರಕಟ* ಟಿ20 ವಿಶ್ವಕಪ್ ಟೂರ್ನಿಗೆ ಸ್ಥಾನ ಪಡೆದ ಆಟಗಾರರಿಗೆ ವಿಶ್ರಾಂತಿ* ಶಿಖರ್ ಧವನ್, ನಾಯಕರಾಗಿ ತಂಡ ಮುನ್ನಡೆಸುವುದು ಬಹುತೇಕ ಖಚಿತ

ನವದೆಹಲಿ(ಸೆ.28): ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿ ಮುಕ್ತಾಯಗೊಂಡ ಬೆನ್ನಲ್ಲೇ 3 ಪಂದ್ಯಗಳ ಏಕದಿನ ಸರಣಿ ಆರಂಭಗೊಳ್ಳಲಿದೆ. ಈ ಸರಣಿಗೆ ಬುಧವಾರ ಭಾರತ ತಂಡ ಪ್ರಕಟಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಟಿ20 ವಿಶ್ವಕಪ್‌ಗೆ ಆಯ್ಕೆಯಾಗಿರುವ ಆಟಗಾರರು ಈ ಸರಣಿಯಲ್ಲಿ ಆಡುವುದಿಲ್ಲ. 

ಅಕ್ಟೋಬರ್ 16ರಿಂದ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಸ್ಥಾನ ಪಡೆದಿರುವ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಬಹುತೇಕ ಟಿ20 ತಂಡದ ಆಟಗಾರರು, ದಕ್ಷಿಣ ಆಫ್ರಿಕಾ ವಿರುದ್ದದ ಏಕದಿನ ಸರಣಿಯಿಂದ ವಿಶ್ರಾಂತಿ ಪಡೆಯಲಿದ್ದಾರೆ. ಶಿಖರ್ ಧವನ್, ಭಾರತ ಏಕದಿನ ಕ್ರಿಕೆಟ್ ತಂಡವನ್ನು ಮುನ್ನಡೆಸಲಿದ್ದು, ಭಾರತ ಎ ಹಾಗೂ ನ್ಯೂಜಿಲೆಂಡ್ ಎ ವಿರುದ್ದದ ಮೂರನೇ ಪಂದ್ಯ ಮುಕ್ತಾಯದ ಬಳಿಕ ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಹೀಗಾಗಿ ಕೆಲ ಹೊಸ ಆಟಗಾರರಿಗೆ ಅವಕಾಶ ಸಿಗಲಿದೆ. ಶಿಖರ್‌ ಧವನ್‌ ನಾಯಕರಾಗುವುದು ಬಹುತೇಕ ಖಚಿತವಾಗಿದ್ದು, ಸಂಜು ಸ್ಯಾಮ್ಸನ್‌ಗೆ ಉಪನಾಯಕನ ಪಟ್ಟಸಿಗಬಹುದು. ಶುಭ್‌ಮನ್‌ ಗಿಲ್‌, ರಜತ್‌ ಪಾಟೀದಾರ್‌, ರಾಹುಲ್‌ ತ್ರಿಪಾಠಿಗೆ ಅವಕಾಶ ಸಿಗುವ ನಿರೀಕ್ಷೆ ಇದೆ. ಅಕ್ಟೋಬರ್ 6ರಿಂದ ಸರಣಿ ಆರಂಭಗೊಳ್ಳಲಿದೆ.

ದಕ್ಷಿಣ ಆಫ್ರಿಕಾ ವಿರುದ್ದದ ಏಕದಿನ ಸರಣಿಗೆ ಭಾರತ ಸಂಭಾವ್ಯ ತಂಡ ಹೀಗಿದೆ ನೋಡಿ:

ಶಿಖರ್ ಧವನ್(ನಾಯಕ), ಶುಭ್‌ಮನ್‌ ಗಿಲ್, ಋತುರಾಜ್ ಗಾಯಕ್ವಾಡ್, ಪೃಥ್ವಿ ಶಾ, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ರಾಹುಲ್ ತ್ರಿಪಾಠಿ, ರಜತ್ ಪಾಟೀದಾರ್, ಶಾಹಬಾಜ್ ಅಹಮ್ಮದ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಉಮ್ರಾನ್ ಮಲಿಕ್, ಪ್ರಸಿದ್ದ್ ಕೃಷ್ಣ, ಕುಲ್ದೀಪ್ ಸೆನ್.

ರಾಜ್ಯ ಸಂಭವನೀಯರ ತಂಡಕ್ಕೆ ಮಹಾರಾಜ ಟ್ರೋಫಿ ಸ್ಟಾ​ರ್ಸ್‌!

ಬೆಂಗಳೂರು: ಅಕ್ಟೋಬರ್ 11ರಿಂದ ಆರಂಭಗೊಳ್ಳಲಿರುವ ಸಯ್ಯದ್‌ ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿಗೆ ಕರ್ನಾಟಕ ಸಂಭವನೀಯರ ತಂಡ ಪ್ರಕಟಗೊಂಡಿದೆ. 25 ಸದಸ್ಯರ ಪಟ್ಟಿಯನ್ನು ಮಂಗಳವಾರ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಪ್ರಕಟಿಸಿದ್ದು, ಸೆಪ್ಟೆಂಬರ್ 29ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೋಚ್‌ ಮುಂದೆ ಹಾಜರಾಗಲು ಸೂಚಿಸಲಾಗಿದೆ.

ಇತ್ತೀಚೆಗೆ ನಡೆದಿದ್ದ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಮಿಂಚಿದ್ದ ಯುವ ಆಟಗಾರರಾದ ಎಲ್‌.ಆರ್‌.ಚೇತನ್‌, ರೋಹನ್‌ ಪಾಟೀಲ್‌ಗೆ ಸ್ಥಾನ ಸಿಕ್ಕಿದೆ. ಆಯ್ಕೆ ಟ್ರಯಲ್ಸ್‌ ಬಳಿಕ 25 ಸದಸ್ಯರ ಪಟ್ಟಿಯನ್ನು 15ಕ್ಕೆ ಇಳಿಸಲಾಗುತ್ತದೆ.

Ind vs SA: ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ20 ಪಂದ್ಯಕ್ಕೆ ಕ್ಷಣಗಣನೆ..!

ಸಂಭವನೀಯರ ಪಟ್ಟಿ: ಮಯಾಂಕ್‌, ಪಡಿಕ್ಕಲ್‌, ಚೇತನ್‌, ರೋಹನ್‌, ಮನೀಶ್‌, ಅಭಿನವ್‌, ಸಮ್ರಣ್‌, ಲುವ್ನಿತ್‌, ಶರತ್‌ ಬಿ.ಆರ್‌, ನಿಹಾಲ್‌, ಕೆ.ಗೌತಮ್‌, ಶ್ರೇಯಸ್‌ ಗೋಪಾಲ್‌, ರಿಶಿ ಬೋಪಣ್ಣ, ರಿತೇಶ್‌, ಸುಚಿತ್‌, ಶುಭಾಂಗ್‌, ಕೌಶಿಕ್‌, ವೈಶಾಖ್‌, ವಿದ್ಯಾಧರ್‌, ವೆಂಕಟೇಶ್‌, ಆದಿತ್ಯ ಗೋಯಲ್‌, ಮನೋಜ್‌, ವಿದ್ವತ್‌, ನಿಕಿನ್‌ ಜೋಸ್‌, ಕೆ.ಸಿ.ಕಾರ್ಯಪ್ಪ.

ರೇಪ್‌ ಕೇಸ್‌ ಆರೋಪಿ, ಕ್ರಿಕೆಟಿಗ ಸಂದೀಪ್‌ಗಾಗಿ ಪೊಲೀಸರ ಹುಡುಕಾಟ

ಕಾಠ್ಮಂಡು: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸೆಗಿದ ಆರೋಪಕ್ಕೆ ತುತ್ತಾಗಿರುವ ನೇಪಳ ಕ್ರಿಕೆಟ್‌ ತಂಡದ ಮಾಜಿ ನಾಯಕ ಸಂದೀಪ್‌ ಲಮಿಚ್ಚಾನೆ ನಾಪತ್ತೆಯಾಗಿದ್ದು, ಅವರಿಗಾಗಿ ಸ್ಥಳೀಯ ಪೊಲೀಸರು ತೀವ್ರ ಹುಡುಕಾಟ ಆರಂಭಿಸಿದ್ದಾರೆ.

ವೆಸ್ಟ್‌ಇಂಡೀಸ್‌ನಲ್ಲಿ ನಡೆದ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ಟಿ20 ಟೂರ್ನಿ ಮುಕ್ತಾಯಗೊಂಡ ಬಳಿಕ ಸಂದೀಪ್‌ ತವರಿಗೆ ವಾಪಸಾಗಿ ಪೊಲೀಸರ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಅವರು ವಿಂಡೀಸ್‌ನಲ್ಲೇ ಉಳಿದುಕೊಂಡಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕೆ ಅವರ ಹುಡುಕಾಟಕ್ಕಾಗಿ ನೇಪಾಳ ಪೊಲೀಸರು ಇಂಟರ್‌ಪೋಲ್‌ನ ಸಹಾಯ ಕೋರಿದ್ದಾರೆ.