ಭಾರತಕ್ಕೆ ಇಂದು ದಕ್ಷಿಣ ಆಫ್ರಿಕಾ ಎದುರು ಸತತ 2ನೇ ಜಯ ಗುರಿ!
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟಿ20 ಪಂದ್ಯದಲ್ಲಿಂದು ಉಭಯ ತಂಡಗಳು ಮುಖಾಮುಖಿಯಾಗುತ್ತಿದ್ದು, ಟೀಂ ಇಂಡಿಯಾ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಗೆಬೆರ್ಹಾ(ದಕ್ಷಿಣ ಆಫ್ರಿಕಾ): ಡರ್ಬನ್‌ನಲ್ಲಿ ತನ್ನದೇ ದರ್ಬಾರ್ ಮೂಲಕ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಅಧಿಪತ್ಯ ಸಾಧಿಸಿದ್ದ ಟೀಂ ಇಂಡಿಯಾ, ಸತತ ಎರಡನೇ ಗೆಲುವಿನ ನಿರೀಕ್ಷೆಯಲ್ಲಿದೆ. ಉಭಯ ತಂಡಗಳ ನಡುವಿನ 2ನೇ ಟಿ20 ಪಂದ್ಯ ಭಾನುವಾರ ನಿಗದಿಯಾಗಿದ್ದು, 4 ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಲು ಕಾಯುತ್ತಿದೆ.
ಮೊದಲ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ಅಬ್ಬರದ ಗೆಲುವು ಸಾಧಿಸಿತ್ತು. ಸಂಜು ಸ್ಯಾಮನ್ ಸ್ಫೋಟಕ ಶತಕ, ಬೌಲರ್‌ಗಳ ಮಾರಕ ದಾಳಿ ನೆರವಿನಿಂದ ಭಾರತಕ್ಕೆ 61 ರನ್ ಜಯ ಲಭಿಸಿತ್ತು. ಇದೇ ಆತ್ಮವಿಶ್ವಾಸದೊಂದಿಗೆ ಭಾರತ ಕಣಕ್ಕಿಳಿಯಲಿದ್ದರೂ, ತಂಡದಲ್ಲಿ ಇನ್ನೂ ಕೆಲ ಸಮಸ್ಯೆಗಳಿವೆ. ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಒತ್ತಡದಲ್ಲಿದ್ದು, ಅವರ ಬ್ಯಾಟ್‌ನಿಂದ ರನ್ ಹರಿದು ಬರುತ್ತಿಲ್ಲ, ಜಿಂಬಾಬೈ ವಿರುದ್ಧ ಶತಕ ಸಿಡಿಸಿದ ಬಳಿಕ ಕಳೆದ 7 ಇನ್ನಿಂಗ್ಸ್‌ಗಳಲ್ಲಿ ಯಾವುದರಲ್ಲೂ 20ಕ್ಕಿಂತ ಹೆಚ್ಚು ರನ್ ಗಳಿಸಿಲ್ಲ. ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಬೇಕಿದ್ದರೆ ಈ ಪಂದ್ಯದಲ್ಲಾದರೂ ಮಿಂಚಬೇಕಿದೆ. ಸೂರ್ಯಕುಮಾರ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್ ಕೂಡಾ ದೊಡ್ಡ ಇನ್ನಿಂಗ್ಸ್ ಕಟ್ಟಬೇಕಾದ ಅನಿವಾರ್ಯತೆ ಇದೆ.
ನೀರಜ್ ಚೋಪ್ರಾಗೆ ವಿಶ್ವದಾಖಲೆ ವೀರ, 3 ಒಲಿಂಪಿಕ್ಸ್ ವಿಜೇತ ಯಾನ್ ಜೆಲೆಜ್ನಿ ನೂತನ ಕೋಚ್!
ವೈಶಾಖ್‌ಗೆ ಸಿಗುತ್ತಾ ಅವಕಾಶ?: ಕರ್ನಾಟಕ ವೇಗಿ ವಿಜಯ್ ಕುಮಾರ್ ವೈಶಾಖ್ ಆರಂಭಿಕ ಪಂದ್ಯದಲ್ಲಿ ಆಡಿರಲಿಲ್ಲ. ಅವರು 2ನೇ ಪಂದ್ಯದಲ್ಲಾದರೂ ಅವಕಾಶ ಸಿಗಲಿದೆಯೇ ಎಂಬ ಕಾತರದಲ್ಲಿದ್ದಾರೆ. ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ.
ಪುಟಿದೇಳುವ ಗುರಿ: ದ.ಆಫ್ರಿಕಾ ತಂಡ ಭಾರತ ವಿರುದ್ಧ ಟಿ20 ವಿಶ್ವಕಪ್ ಫೈನಲ್ ಸೋತ ಬಳಿಕ ಈ ಸರಣಿಯ ಮೊದಲ ಪಂದ್ಯದಲ್ಲೂ ಪರಾಭವಗೊಂಡು ಒತ್ತಡದಲ್ಲಿದೆ. ತಂಡಕ್ಕೆ ಸರಣಿ ಗೆಲ್ಲಬೇಕಿದ್ದರೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ. ಆದರೆ ಬ್ಯಾಟರ್‌ಗಳ ಅಸ್ಥಿರ ಆಟ ತಂಡವನ್ನು ಕಾಡುತ್ತಿದ್ದು, ಸುಧಾರಿತ ಪ್ರದರ್ಶನ ನೀಡುವ ಕಾತರದಲ್ಲಿದೆ.
ಧ್ರುವ್ ಜುರೆಲ್ ಮಿಂಚಿದ್ರೂ ಆಸೀಸ್ ಎದುರು ಭಾರತ 'ಎ' ತಂಡಕ್ಕೆ ಮತ್ತೆ ಸೋಲು!
ಸಂಭವನೀಯ ಆಟಗಾರರ ಪಟ್ಟಿ:
ಭಾರತ:
ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್(ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಅಕ್ಷರ್ ಪಟೇಲ್, ವೈಶಾಖ್ ವಿಜಯ್‌ಕುಮಾರ್, ಆವೇಶ್ ಖಾನ್, ವರುಣ್ ಚಕ್ರವರ್ತಿ, ಆರ್ಶದೀಪ್ ಸಿಂಗ್.
ದಕ್ಷಿಣ ಆಫ್ರಿಕಾ:
ರೀಜಾ ಹೆಂಡ್ರಿಕ್ಸ್, ರಿಯಾನ್ ರಿಕೆಲ್ಟನ್, ಏಯ್ಡನ್ ಮಾರ್ಕ್‌ರಮ್(ನಾಯಕ), ಟ್ರಿಸ್ಟನ್ ಸ್ಟಬ್ಸ್, ಹೆನ್ರಿಚ್ ಕ್ಲಾಸೇನ್, ಡೇವಿಡ್ ಮಿಲ್ಲರ್, ಮಾರ್ಕೊ ಯಾನ್ಸೆನ್, ಕೇಶವ್ ಮಹರಾಜ್, ಗೆರಾಲ್ಡ್ ಕೋಟ್ಜಿ, ನಕ್ಬಾ ಪೀಟರ್, ಒಟ್ಟಿನೆಲ್ ಬಾರ್ಟ್‌ಮನ್.
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರಪ್ರಸಾರ: ಸ್ಪೋರ್ಟ್ಸ್ 18, ಜಿಯೋ ಸಿನಿಮಾ.