* ತೀವ್ರ ಕುತೂಹಲ ಕೆರಳಿಸಿರುವ ಭಾರತ-ನ್ಯೂಜಿಲೆಂಡ್ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌* ಕೊನೆಯ ದಿನದಾಟಕ್ಕೆ ಉಭಯ ತಂಡಗಳು ಸಜ್ಜು.* ಎರಡನೇ ಇನಿಂಗ್ಸ್‌ನಲ್ಲಿ ಒಟ್ಟಾರೆ 32 ರನ್‌ಗಳ ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ

ಸೌಥಾಂಪ್ಟನ್‌(ಜೂ.23): ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯ ರೋಚಕ ಘಟ್ಟ ತಲುಪಿದ್ದು, ಕೊನೆಯ ದಿನದಾಟದಲ್ಲಿ ಫಲಿತಾಂಶ ಯಾವ ತಂಡದ ಪರ ವಾಲಿದರೂ ಅಚ್ಚರಿಪಡುವಂತಿಲ್ಲ.

ಮಳೆಯ ಅವಕೃಪೆಯ ಹೊರತಾಗಿಯೂ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯ ಕತೂಹಲಘಟ್ಟ ತಲುಪಿದೆ. ಇದೆಲ್ಲದರ ನಡುವೆ ಜೂನ್ 26ರ ಮೀಸಲು ದಿನದ ಸೌಥಾಂಪ್ಟನ್‌ ಹವಾಮಾನ ವರದಿ ಹೊರಬಿದ್ದಿದ್ದು, ಸಂಪೂರ್ಣ ದಿನದಾಟ ನಡೆಯುವುದು ಬಹುತೇಕ ಖಚಿತ ಎನಿಸಿದೆ. ಟೆಸ್ಟ್‌ ಪಂದ್ಯದ ಆರನೇ ದಿನ ಮಳೆ ಅಡ್ಡಿಪಡಿಸುವ ಸಾಧ್ಯತೆ ಬಹುತೇಕ ವಿರಳ ಎನ್ನುವುದನ್ನು ಯುಕೆ ಹವಾಮಾನ ಇಲಾಖೆ ತಿಳಿಸಿದೆ.

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಕ್ಲೈಮ್ಯಾಕ್ಸ್‌ ಕುತೂಹಲ

Scroll to load tweet…

ಮಂಗಳವಾರಕ್ಕೆ ಹೋಲಿಸಿದರೆ ಇಂದು ತಾಪಮಾನ ಹೆಚ್ಚಿರಲಿದ್ದು, ಲಘು ಗಾಳಿ ಇರಲಿದೆ. ಹಾಗೆಯೇ ಸೌಥಾಂಪ್ಟನ್‌ನಲ್ಲಿ ಗರಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದು ಇಂಗ್ಲೆಂಡ್ ಹವಾಮಾನ ಇಲಾಖೆ ತಿಳಿಸಿದೆ. ಈ ಮೂಲಕ ಕ್ರಿಕೆಟ್‌ ಅಭಿಮಾನಿಗಳು ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯದ ಅಂತಿಮ ದಿನದಾಟವನ್ನು ಕಣ್ತುಂಬಿಕೊಳ್ಳಬಹುದಾಗಿದೆ ಎನ್ನುವುದು ಖಚಿತವಾಗಿದೆ.

Scroll to load tweet…

ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ನ ಮೊದಲ ಹಾಗೂ ನಾಲ್ಕನೇ ದಿನ ಮಳೆಯಿಂದಾಗಿ ಒಂದೇ ಒಂದು ಎಸೆತ ಕಾಣದೇ ಪಂದ್ಯ ರದ್ದಾಗಿತ್ತು. ಮೊದಲು ಬ್ಯಾಟ್ ಮಾಡಿದ್ದ ಟೀಂ ಇಂಡಿಯಾ 217 ರನ್‌ ಬಾರಿಸಿ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್‌ ಆರಂಭಿಸಿದ್ದ ನ್ಯೂಜಿಲೆಂಡ್ ತಂಡವು 249 ರನ್‌ ಬಾರಿಸಿ ಸರ್ವಪತನ ಕಂಡಿತು. ಮೂಲಕ ಮೊದಲ ಇನಿಂಗ್ಸ್‌ನಲ್ಲಿ 32 ರನ್‌ಗಳ ಮುನ್ನಡೆ ಸಾಧಿಸಿತ್ತು. ಇನ್ನು ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ ತಂಡವು 5ನೇ ದಿನದಾಟದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 64 ರನ್ ಬಾರಿಸಿದ್ದು, ಒಟ್ಟಾರೆ 32 ರನ್‌ಗಳ ಮುನ್ನಡೆ ಸಾಧಿಸಿದೆ. ಹೀಗಾಗಿ 6ನೇ ಹಾಗೂ ಕೊನೆಯ ದಿನದಾಟದಲ್ಲಿ ಯಾರ ಕೈ ಮೇಲಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. ಒಂದು ವೇಳೆ ಪಂದ್ಯ ಡ್ರಾ ಆದರೆ ಎರಡು ತಂಡವನ್ನು ಜಂಟಿ ಚಾಂಪಿಯನ್‌ಗಳಾಗಿ ಹೊರಹೊಮ್ಮಲಿವೆ.