ಇಂದಿನಿಂದ ಭಾರತ-ಕಿವೀಸ್ ಟಿ20 ಕದನ; ಹೈವೋಲ್ಟೇಜ್ ಕದನಕ್ಕೆ ರಾಂಚಿ ಆತಿಥ್ಯ
ಭಾರತ-ಕಿವೀಸ್ ಮೊದಲ ಟಿ20 ಪಂದ್ಯಕ್ಕೆ ಕ್ಷಣಗಣನೆ
ಹೈವೋಲ್ಟೇಜ್ ಪಂದ್ಯಕ್ಕೆ ರಾಂಚಿ ಕ್ರಿಕೆಟ್ ಮೈದಾನ ಆತಿಥ್ಯ
ಏಕದಿನ ಸರಣಿ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಟೀಂ ಇಂಡಿಯಾ

ರಾಂಚಿ(ಜ.27): 2023ರಲ್ಲಿ ಶ್ರೀಲಂಕಾ, ನ್ಯೂಜಿಲೆಂಡ್ ಸರಣಿಗಳನ್ನು ಗೆದ್ದು ತುಂಬು ಆತ್ಮವಿಶ್ವಾಸದಲ್ಲಿರುವ ಭಾರತ ತಂಡ ಮತ್ತೊಂದು ಸೀಮಿತ ಓವರ್ ಚಾಲೆಂಜ್‌ಗೆ ರೆಡಿಯಾಗಿದ್ದು, ಶುಕ್ರವಾರದಿಂದ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಕಣಕ್ಕಿಳಿಯಲಿದೆ. 3 ಪಂದ್ಯಗಳ ಸರಣಿಯ ಮೊದಲ ಪಂದ್ಯಕ್ಕೆ ರಾಂಚಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
ಹಿರಿಯರ ಅನುಪಸ್ಥಿತಿಯಲ್ಲಿ ಯುವ ಆಟಗಾರರಿಗೆ ಮಿಂಚಲು ಮತ್ತೊಂದು ಅವಕಾಶ ಲಭಿಸಿದೆ. ಹಾರ್ದಿಕ್ ಪಾಂಡ್ಯ ಮತ್ತೊಮ್ಮೆ ನಾಯಕತ್ವದ ಅಗ್ನಿಪರೀಕ್ಷೆಗೆ ಒಳಗಾಗಲಿದ್ದಾರೆ. ಲಂಕಾ ವಿರುದ್ಧದ ಸರಣಿಯಲ್ಲಿದ್ದ ಬಹುತೇಕ ಆಟಗಾರರು ಈ ಸರಣಿಯಲ್ಲೂ ಆಡುತ್ತಿದ್ದು, ಹೆಚ್ಚಿನ ಬದಲಾವಣೆಯಾಗುವ ಸಾಧ್ಯತೆ ಇಲ್ಲ.
ಗಾಯಕ್ವಾಡ್ ಹೊರಕ್ಕೆ: ಮುಂಗೈ ಗಾಯಕ್ಕೆ ತುತ್ತಾಗಿರುವ ಋುತುರಾಜ್ ಗಾಯಕ್ವಾಡ್ ಈ ಸರಣಿಯಿಂದ ಹೊರಬಿದ್ದಿದ್ದಾರೆ. ಇದೇ ವೇಳೆ ರಣಜಿ ಸೇರಿದಂತೆ ದೇಸಿ ಟೂರ್ನಿಗಳಲ್ಲಿ ಅಬ್ಬರಿಸಿದ್ದ ಪೃಥ್ವಿ ಶಾಗೆ ಮತ್ತೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಕ್ಕರೂ ಮೊದಲ ಪಂದ್ಯದಲ್ಲಿ ಆಡುವ ಬಳಗದಿಂದ ಹೊರಗುಳಿಯಲಿದ್ದಾರೆ. ಶುಭ್‌ಮನ್ ಗಿಲ್‌ಗೆ ಅವಕಾಶ ನೀಡುವುದಾಗಿ ಹಾರ್ದಿಕ್ ಪಾಂಡ್ಯ ಖಚಿತಪಡಿಸಿದ್ದು, ಇಶಾನ್ ಕಿಶನ್ ಜೊತೆ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ. ಜಿತೇಶ್ ಶರ್ಮಾ ಕೂಡಾ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಆಲ್ರೌಂಡರ್‌ಗಳಾಗಿ ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್ ಸಹ ಇದ್ದಾರೆ. ಅಶ್‌ರ್‍ದೀಪ್, ಉಮ್ರಾನ್, ಶಿವಂ ಮಾವಿ, ಮುಕೇಶ್ ಕುಮಾರ್ ಬೌಲಿಂಗ್ ಪಡೆಯನ್ನು ಮುನ್ನಡೆಸಲಿದ್ದಾರೆ.
IND vs NZ ಟಿ20 ಸರಣಿಗೂ ಮುನ್ನ ಪಾಂಡ್ಯ ಸೈನ್ಯಕ್ಕೆ ಅಚ್ಚರಿ, ಡ್ರೆಸ್ಸಿಂಗ್ ರೂಂಗೆ ಧೋನಿ ಭೇಟಿ!
ಪುಟಿದೇಳುತ್ತಾ ಕಿವೀಸ್?
ಈಗಾಗಲೇ ಏಕದಿನ ಸರಣಿಯಲ್ಲಿ 0-3 ಅಂತರದಲ್ಲಿ ಮುಖಭಂಗಕ್ಕೊಳಗಾಗಿರುವ ಕಿವೀಸ್ ಟಿ20 ಸರಣಿಯಲ್ಲಾದರೂ ಗೆಲುವಿನ ನಿರೀಕ್ಷೆಯಲ್ಲಿದೆ. ಆಲ್ರೌಂಡರ್ ಮಿಚೆಲ್ ಸ್ಯಾಂಟ್ನರ್ ತಂಡ ಮುನ್ನಡೆಸಲಿದ್ದು, ಡೆವೋನ್ ಕಾನ್‌ವೇ, ಮೈಕಲ್ ಬ್ರೇಸ್‌ವೆಲ್ ಸೇರಿದಂತೆ ಕೆಲ ಸ್ಫೋಟಕ ಬ್ಯಾಟರ್‌ಗಳ ಬಲವೂ ತಂಡಕ್ಕಿದೆ. ಆದರೆ ಬೌಲಿಂಗ್ ವಿಭಾಗದಲ್ಲಿ ಅನುಭವಿಗಳ ಕೊರತೆ ಎದುರಾಗಬಹುದು.
ಟಿ20 ಕ್ರಿಕೆಟ್‌ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಒಟ್ಟು 22 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಆತಿಥೇಯ ಭಾರತ ತಂಡವು ಕೊಂಚ ಮೇಲುಗೈ ಸಾಧಿಸಿದೆ. 22 ಪಂದ್ಯಗಳ ಪೈಕಿ ಭಾರತ ತಂಡವು 12 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೇ, ನ್ಯೂಜಿಲೆಂಡ್ ತಂಡವು 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇನ್ನೊಂದು ಪಂದ್ಯ ಟೈನಲ್ಲಿ ಅಂತ್ಯವಾಗಿತ್ತು.
ಸಂಭವನೀಯರ ಪಟ್ಟಿ
ಭಾರತ: ಇಶಾನ್ ಕಿಶನ್, ಶುಭ್‌ಮನ್ ಗಿಲ್, ಸೂರ್ಯಕುಮಾರ್ ಯಾದವ್, ರಾಹುಲ್ ತ್ರಿಪಾಠಿ, ಹಾರ್ದಿಕ್ ಪಾಂಡ್ಯ (ನಾಯಕ), ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಅಶ್‌ರ್‍ದೀಪ್ ಸಿಂಗ್, ಉಮ್ರಾನ್ ಮಲಿಕ್, ಶಿವಂ ಮಾವಿ, ಯುಜುವೇಂದ್ರ ಚಹಲ್.
ಕಿವೀಸ್: ಫಿನ್ ಆ್ಯಲೆನ್, ಡೆವೊನ್ ಕಾನ್‌ವೇ, ಡ್ಯಾರಿಲ್ ಮಿಚೆಲ್, ಬ್ರೇಸ್‌ವೆಲ್, ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಫ್ಸ್, ಮಿಚೆಲ್ ಸ್ಯಾಂಟ್ನರ್(ನಾಯಕ), ಹೆನ್ರಿ ಶಿಪ್ಲೆ, ಇಶ್ ಸೋಧಿ, ಲಾಕಿ ಫಗ್ರ್ಯೂಸನ್, ಬ್ಲೈರ್ ಟಿಕ್ನರ್.
ಪಂದ್ಯ: ಸಂಜೆ 7ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್