ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯ ಗೆದ್ದ ಭಾರತ, ಇದೀಗ ಎರಡನೇ ಪಂದ್ಯಕ್ಕೆ ಸಜ್ಜಾಗಿದೆ. ಗಾಯಗೊಂಡಿರುವ ವಾಷಿಂಗ್ಟನ್ ಸುಂದರ್ ಬದಲಿಗೆ ಆಯುಷ್ ಬದೋನಿ, ನಿತೀಶ್ ಕುಮಾರ್ ರೆಡ್ಡಿ ರೇಸ್‌ನಲ್ಲಿದ್ದರೆ, ದುಬಾರಿಯಾಗಿದ್ದ ಪ್ರಸಿದ್ದ್ ಕೃಷ್ಣ ಬದಲಿಗೆ ಅರ್ಶದೀಪ್ ಸಿಂಗ್‌ಗೆ ಅವಕಾಶ ಸಿಗುವ ಸಾಧ್ಯತೆಯಿದೆ.
ರಾಜ್‌ಕೋಟ್: ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿದ ಭಾರತ, ಇದೀಗ ಜನವರಿ 14ರಂದು ಎರಡನೇ ಏಕದಿನ ಪಂದ್ಯವನ್ನಾಡಲಿದೆ. ಮೊದಲ ಪಂದ್ಯದಲ್ಲಿ ಆಡಿದ್ದ ಸ್ಪಿನ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಗಾಯಗೊಂಡು ಹೊರಗುಳಿದ ಕಾರಣ, ನಾಳಿನ ಎರಡನೇ ಪಂದ್ಯದಲ್ಲಿ ಭಾರತದ ಆಡುವ ಬಳಗದಲ್ಲಿ ಬದಲಾವಣೆ ಖಚಿತವಾಗಿದೆ. ಸುಂದರ್ ಬದಲಿಗೆ ದೆಹಲಿ ಆಟಗಾರ ಆಯುಷ್ ಬದೋನಿಯನ್ನು ಆಯ್ಕೆಗಾರರು ತಂಡಕ್ಕೆ ಸೇರಿಸಿಕೊಂಡಿದ್ದಾರೆ. ರಾಜ್‌ಕೋಟ್‌ನ ಬ್ಯಾಟಿಂಗ್ ವಿಕೆಟ್‌ನಲ್ಲಿ ವಾಷಿಂಗ್ಟನ್ ಸುಂದರ್ ಇಲ್ಲದೆ ಕಣಕ್ಕಿಳಿಯುವ ಭಾರತ, ಐವರು ಬೌಲರ್‌ಗಳೊಂದಿಗೆ ಆಡಲಿದೆಯೇ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಸುಂದರ್ ಬದಲಿಗೆ ಯಾರಿಗೆ ಸಿಗುತ್ತೆ ಚಾನ್ಸ್?
ಮೊದಲ ಪಂದ್ಯದಲ್ಲಿ ಸುಲಭ ಜಯದತ್ತ ಸಾಗುತ್ತಿದ್ದಾಗ ಮಧ್ಯಮ ಕ್ರಮಾಂಕದ ಅನಿರೀಕ್ಷಿತ ಕುಸಿತದ ಹಿನ್ನೆಲೆಯಲ್ಲಿ, ಎರಡನೇ ಏಕದಿನದಲ್ಲಿ ಬ್ಯಾಟಿಂಗ್ ಬಲಪಡಿಸಲು ನಿರ್ಧರಿಸಿದರೆ, ಉತ್ತಮ ಫಾರ್ಮ್‌ನಲ್ಲಿರುವ ಧ್ರುವ್ ಜುರೆಲ್‌ಗೆ ಆಡುವ ಬಳಗದಲ್ಲಿ ಅವಕಾಶ ಸಿಗಬಹುದು. ಆದರೆ, ಜುರೆಲ್‌ಗೆ ಆಡುವ ಬಳಗದಲ್ಲಿ ಸ್ಥಾನ ನೀಡಿದರೂ, ಅವರನ್ನು ಆರನೇ ಕ್ರಮಾಂಕದಲ್ಲಿ ಮಾತ್ರ ಆಡಿಸಬೇಕಾಗುತ್ತದೆ. ಹೀಗಾಗಿ ಧ್ರುವ್ ಜುರೇಲ್ ಜತೆ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಕೂಡಾ ರೇಸ್‌ಗೆ ಬಂದಿದ್ದಾರೆ
ಎರಡನೇ ಏಕದಿನ ಪಂದ್ಯದಲ್ಲಿ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅಥವಾ ಆಯುಷ್ ಬದೋನಿಯನ್ನು ಆಡಿಸಬೇಕೆಂಬ ಬೇಡಿಕೆಯೂ ಕೇಳಿಬರುತ್ತಿದೆ. ನಿತೀಶ್ ವೇಗದ ಬೌಲಿಂಗ್ ಆಲ್ರೌಂಡರ್ ಆಗಿದ್ದರೆ, ಬದೋನಿ ಪಾರ್ಟ್-ಟೈಮ್ ಸ್ಪಿನ್ನರ್ ಕೂಡ ಆಗಿದ್ದಾರೆ. ಬ್ಯಾಟಿಂಗ್ ವಿಕೆಟ್‌ನಲ್ಲಿ ಐವರು ಬೌಲರ್‌ಗಳೊಂದಿಗೆ ಆಡುವುದು ರಿಸ್ಕ್ ಆಗಿರುವುದರಿಂದ, ಧ್ರುವ್ ಜುರೆಲ್ ಬದಲಿಗೆ ಆಯುಷ್ ಬದೋನಿ ಅಥವಾ ನಿತೀಶ್ ಕುಮಾರ್‌ಗೆ ಆಡುವ ಬಳಗದಲ್ಲಿ ಅವಕಾಶ ಸಿಗುವ ನಿರೀಕ್ಷೆಯಿದೆ.
ಪ್ರಸಿದ್ದ್ ಕೃಷ್ಣ ಬದಲಿಗೆ ಅರ್ಶದೀಪ್‌ಗೆ ಮಣೆ?
ಸದ್ಯ ಟೀಂ ಇಂಡಿಯಾ, ಕಿವೀಸ್ ಎದುರಿನ ಏಕದಿನ ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿದೆ. ಹೀಗಾಗಿ ಮೊಹಮ್ಮದ್ ಸಿರಾಜ್ ವೇಗದ ಬೌಲಿಂಗ್ ದಾಳಿಯನ್ನು ಮುನ್ನಡೆಸುತ್ತಿದ್ದು, ಪ್ರಸಿದ್ದ್ ಕೃಷ್ಣ ಹಾಗೂ ಹರ್ಷಿತ್ ರಾಣಾ ಮೊದಲ ಪಂದ್ಯದಲ್ಲಿ ವೇಗದ ಬೌಲರ್‌ಗಳಾಗಿ ಸಾಥ್ ನೀಡಿದ್ದರು. ಕಳೆದ ಪಂದ್ಯದಲ್ಲಿ ಪ್ರಸಿದ್ದ್ ಕೃಷ್ಣ ಕೊನೆಯಲ್ಲಿ ಕೊಂಚ ದುಬಾರಿಯಾಗಿದ್ದರು. ಹೀಗಾಗಿ ಎರಡನೇ ಪಂದ್ಯದಲ್ಲಿ ಪ್ರಸಿದ್ದ್‌ಗೆ ವಿಶ್ರಾಂತಿ ನೀಡಿ ಎಡಗೈ ವೇಗಿ ಅರ್ಶದೀಪ್ ಸಿಂಗ್‌ಗೆ ಟೀಮ್ ಮ್ಯಾನೇಜ್‌ಮೆಂಟ್ ಮಣೆ ಹಾಕಿದರೂ ಅಚ್ಚರಿಯೇನಿಲ್ಲ. ಮೊದಲ ಏಕದಿನ ಪಂದ್ಯದಲ್ಲಿ ಪ್ರಸಿದ್ದ್ ಕೃಷ್ಣ 9 ಓವರ್‌ನಲ್ಲಿ 60 ರನ್ ನೀಡಿ 2 ವಿಕೆಟ್ ಕಬಳಿಸಿದ್ದರು.
ಎರಡನೇ ಏಕದಿನ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ:
ರೋಹಿತ್ ಶರ್ಮಾ, ಶುಭ್‌ಮನ್ ಗಿಲ್(ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ಕುಲ್ದೀಪ್ ಯಾದವ್, ಅರ್ಶದೀಪ್ ಸಿಂಗ್, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್.


